ಬೇರೆ ರಾಜ್ಯಗಳಲ್ಲಿ ಇಂಥದ್ದೇ ಪ್ರಕರಣಗಳು ಘಟಿಸಿವೆ ಎಂದು ಮಣಿಪುರದಲ್ಲಿ ನಡೆದಿರುವ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಘಟನೆಯನ್ನು ಸಮರ್ಥಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ಪಶ್ಚಿಮ ಬಂಗಾಳ ಮತ್ತು ಛತ್ತೀಸ್‌ಗಢದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆದಿದ್ದು ಆ ಘಟನೆಗಳ ವಿಚಾರಣೆಯನ್ನು ಕೂಡ ನ್ಯಾಯಾಲಯ ಕೈಗೆತ್ತಿಕೊಳ್ಳಬೇಕು ಎಂಬ ವಕೀಲ ಬಾನ್ಸುರಿ ಸ್ವರಾಜ್ ಅವರ ಮಾತಿಗೆ ಪ್ರತಿಕ್ರಿಯಿಸುತ್ತಾ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಮೇಲಿನಂತೆ ಹೇಳಿತು.
ಮಣಿಪುರದಲ್ಲಿ ಕೋಮು ಮತ್ತು ಮತೀಯ ಹಿಂಸಾಚಾರದ ಸಂದರ್ಭದಲ್ಲಿ ಮಹಿಳೆಯರ ವಿರುದ್ಧ ನಡೆದ ದೌರ್ಜನ್ಯಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಪಶ್ಚಿಮ ಬಂಗಾಳ ಹಾಗೂ ಉಳಿದ ರಾಜ್ಯಗಳ್ಲಲಿ ಮಹಿಳೆಯರ ವಿರುದ್ಧ ಅಪರಾಧಗಳು ನಡೆದಿವೆ ಎಂಬುದನ್ನು ಪೀಠ ಒಪ್ಪಿತಾದರೂ ಮಣಿಪುರದ ಸ್ಥಿತಿ ಭಿನ್ನವಾಗಿದೆ. ಅದನ್ನು ಬೇರೆ ಘಟನೆಗಳಿಗೆ ಹೋಲಿಸುವ ಮೂಲಕ ಸಮರ್ಥಿಸಿಕೊಳ್ಳುವಂತಿಲ್ಲ ಎಂದು ಸಿಜೆಐ ಹೇಳಿದರು.
ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿರುವ ವಕೀಲ ಸ್ವರಾಜ್ ಅವರು ಪ. ಬಂಗಾಳ, ಛತ್ತೀಸ್‌ಗಢ ಹಾಗೂ ರಾಜಸ್ಥಾನದಲ್ಲಿ ಇದೇ ರೀತಿ ಘಟನೆಗಳು ನಡೆದಿದ್ದು ಅವುಗಳನ್ನೂ ಗಣನೆಗೆ ತೆಗೆದುಕೊಳ್ಳುವಂತೆ ವಿಚಾರಣೆ ವೇಳೆ ವಿನಂತಿಸಿದ್ದರು.|
ಕುಕಿ ಬುಡಕಟ್ಟಿಗೆ ಸೇರಿದ ಇಬ್ಬರು ಮಣಿಪುರಿ ಮಹಿಳೆಯರನ್ನು ಪುರುಷರ ಗುಂಪೊಂದು ಬೆತ್ತಲೆಗೊಳಿಸಿ ವೀಡಿಯೋ ಚಿತ್ರೀಕರಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈಚೆಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಕೊಂಡಿತ್ತು.
ಬೆತ್ತಲೆ ಮೆರವಣಿಗೆ ಘಟನೆಯಿಂದ ನ್ಯಾಯಾಲಯ ವಿಚಲಿತಗೊಂಡಿದ್ದು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯವೇ ಕ್ರಮಕ್ಕೆ ಮುಂದಾಗಲಿದೆ ಎಂದು ಸಿಜೆಐ ಚಂದ್ರಚೂಡ್ ಈ ಸಂದರ್ಭದಲ್ಲಿ ಗುಡುಗಿದ್ದರು.
ಸಿಬಿಐ ಪ್ರಕರಣದ ವಿಚಾರಣೆ ನಡೆಸಲಿದೆ ಎಂದು ಜುಲೈ 27ರಂದು ತಿಳಿಸಿದ ಕೇಂದ್ರ ಸರ್ಕಾರ ಮಣಿಪುರದಿಂದ ಹೊರಗೆ ವಿಚಾರಣೆ ನಡೆಸಲು ಅನುಮತಿಸುವಂತೆ ಸುಪ್ರೀಂ ಕೋರ್ಟ್ಅನ್ನು ಕೋರಿತ್ತು.