ಪೆಗಸಸ್‌ ಹಗರಣದ ತನಿಖೆಗೆ ಸುಪ್ರೀಂ ಕೋರ್ಟ್‌ ಸಮಿತಿ ರಚಿಸಿರುವುದು ಸ್ವತಂತ್ರ ನ್ಯಾಯಾಂಗಕ್ಕೆ ಸಾಕ್ಷಿ: ಎ ಪಿ ರಂಗನಾಥ್‌

ಕೆಲ ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಎರಡನೇ ಬಾರಿಗೆ ಹೆಸರುಗಳನ್ನು ಶಿಫಾರಸ್ಸು ಮಾಡಿದರೂ ತಡೆ ಹಿಡಿಯಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಸರ್ಕಾರವನ್ನು ಕೇಳಬಯಸುತ್ತೇನೆ - ಎಎಬಿ ಅಧ್ಯಕ್ಷ ರಂಗನಾಥ್‌.
A P Ranganath, President, Bengaluru Bar Association
A P Ranganath, President, Bengaluru Bar Association
Published on

ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ವಕೀಲರು ಹಾಗೂ ನ್ಯಾಯಮೂರ್ತಿಗಳನ್ನು ಒಳಗೊಂಡಂತೆ ಸಾಂವಿಧಾನಿಕ ಹುದ್ದೆಯಲ್ಲಿರುವ ಹಲವರ ಮೇಲೆ ನಿಗಾ ಇಡಲು ಭಾರತ ಸರ್ಕಾರವು ಪೆಗಸಸ್‌ ಬೇಹುಗಾರಿಕಾ ಸಾಫ್ಟ್‌ವೇರ್‌ ನೆರವು ಪಡೆದಿರುವುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠವು ಈಚೆಗೆ ಸಮಿತಿ ನೇಮಿಸಿ ಆದೇಶಿಸಿದೆ. ಇದು ಭಾರತದಲ್ಲಿ ಸ್ವತಂತ್ರ ನ್ಯಾಯಾಂಗವಿದೆ ಎಂಬುದಕ್ಕೆ ಸಾಕ್ಷಿ ಎಂದು ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷ ಎ ಪಿ ರಂಗನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಹೈಕೋರ್ಟ್‌, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಎಎಬಿ ಸಹಯೋಗದಲ್ಲಿ ಶುಕ್ರವಾರ ಹೈಕೋರ್ಟ್‌ನಲ್ಲಿ ಆಯೋಜಿಸಿದ್ದ ʼಸಂವಿಧಾನ ದಿನಾಚರಣೆʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಗೆ ಕರ್ನಾಟಕದವರಾದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಆರ್‌ ವಿ ರವೀಂದ್ರನ್‌ ಅವರನ್ನು ನೇಮಕ ಮಾಡಿರುವುದನ್ನು ಸ್ವಾಗತಿಸುತ್ತೇನೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

“ರಾಜ್ಯ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಕರ್ನಾಟಕ ಹೈಕೋರ್ಟ್‌ ಸಹ ಮಾಡುತ್ತಿದೆ. ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಮಗ್ರತೆ ಬಿಂಬಿತವಾಗಬೇಕು ಎಂದು ನಾವು ಪ್ರತಿಪಾದಿಸುತ್ತಿದ್ದೇವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ನ್ಯಾಯಮೂರ್ತಿಗಳ ನೇಮಕಾತಿಗೆ ಸಂಬಂಧಿಸಿದಂತೆ ಹೈಕೋರ್ಟ್‌ ಎರಡನೇ ಬಾರಿಗೆ ಅವರ ಹೆಸರುಗಳನ್ನು ಪುನರುಚ್ಚರಿಸಿದೆ. ನ್ಯಾಯಮೂರ್ತಿಗಳ ನೇಮಕಾತಿ ಸಂಬಂಧ ನ್ಯಾಯಾಲಯದ ತೀರ್ಪುಗಳಿದ್ದರೂ ಅವರ ಹೆಸರುಗಳನ್ನು ತಡೆ ಹಿಡಿಯಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಸರ್ಕಾರವನ್ನು ಕೇಳಬಯಸುತ್ತೇನೆ” ಎಂದರು.

“ಸ್ವತಂತ್ರ ನ್ಯಾಯಾಂಗ ಮತ್ತು ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ವಕೀಲರ ಸಂಘ ನಿರಂತರವಾಗಿ ಮಾಡಲಿದೆ” ಎಂದು ರಂಗನಾಥ್‌ ಹೇಳಿದರು.

ಪೆಗಸಸ್‌ ಮೂಲಕ ಆಯ್ದ ಮೊಬೈಲ್‌ ಸಂಖ್ಯೆಗಳ ಮೇಲೆ ನಿರ್ದಿಷ್ಟವಾಗಿ ಗುರಿ ಇರಿಸಲಾಗಿತ್ತು. ಕೆಲವು ನಂಬರ್‌ಗಳಿಗೆ ಪೆಗಸಸ್‌ ದಾಳಿ ಇಟ್ಟಿದ್ದು, ಮತ್ತೆ ಕೆಲವು ನಂಬರ್‌ಗಳ ಮೇಲೆ ದಾಳಿ ಯತ್ನ ನಡೆದಿದೆ ಎಂದು ಪೆಗಸಸ್‌ ವಿಶ್ಲೇಷಣೆ ನಡೆಸಿದ್ದ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ತಂಡ ಹೇಳಿತ್ತು. ಆದರೆ, ಪೆಗಸಸ್‌ ಬಳಕೆಯ ಕುರಿತು ಕೇಂದ್ರ ಸರ್ಕಾರವು ಯಾವುದೇ ಮಾಹಿತಿಯನ್ನು ನ್ಯಾಯಾಲಯದ ಮುಂದೆ ಹಂಚಿಕೊಳ್ಳುವುದರಿಂದ ನುಣುಚಿಕೊಂಡಿತ್ತು. ರಾಷ್ಟ್ರೀಯ ಭದ್ರತೆಯ ಕಾರಣವನ್ನು ಇದಕ್ಕೆ ಮುಂದು ಮಾಡಿತ್ತು.

Also Read
ವಕೀಲರ ಸಂಘ ಆರೋಪಿ ಪ್ರತಿನಿಧಿಸುವುದಿಲ್ಲ ಎಂಬುದನ್ನು ಸಾಂವಿಧಾನಿಕ ಆಡಳಿತ ಎನ್ನಬಹುದೇ? ನಿವೃತ್ತ ನ್ಯಾ. ರವೀಂದ್ರನ್‌

ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯವು “ರಾಷ್ಟ್ರೀಯ ಭದ್ರತೆಯ ಕಳಕಳಿಯನ್ನು ಪ್ರಸ್ತಾಪಿಸಿ ಕೇಂದ್ರ ಸರ್ಕಾರವು ನುಣಿಚಿಕೊಳ್ಳಲಾಗದು. ನ್ಯಾಯಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳಲಾಗದು. ಕೇಂದ್ರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕಿತ್ತು” ಎಂದಿತು. ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ರಮಣ ಅವರ ನೇತೃತ್ವದ ಪೀಠವು ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿತು. ಸುಪ್ರೀಂ ಕೋರ್ಟ್‌ ನಿಗಾವಣೆಯಲ್ಲಿ ನ್ಯಾ. ಆರ್‌ ವಿ ರವೀಂದ್ರನ್‌ ನೇತೃತ್ವದ ತಜ್ಞರ ಸಮಿತಿಯನ್ನು ಪ್ರಕರಣದ ತನಿಖೆಗೆ ನೇಮಿಸಿ ಆದೇಶಿಸಿತ್ತು.

ಇಸ್ರೇಲ್‌ ಮೂಲದ ಬೇಹು ತಂತ್ರಾಂಶ ಸಂಸ್ಥೆ ಎನ್‌ಎಸ್‌ಒ ತನ್ನ ಪೆಗಸಸ್‌ ಸ್ಪೈವೇರ್‌ಗೆ ಹೆಸರುವಾಸಿಯಾಗಿದ್ದು ಪರಿಶೀಲಿಸಿದ ಸರ್ಕಾರಗಳಿಗೆ ಮಾತ್ರ ಇದನ್ನು ಮಾರಾಟ ಮಾಡಲಾಗುತ್ತಿದೆ. ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವುದಿಲ್ಲ ಎಂದು ಹೇಳಿಕೊಂಡಿತ್ತು. ಆದರೂ ಇದು ಯಾವ ಸರ್ಕಾರಗಳಿಗೆ ತನ್ನ ವಿವಾದಿತ ಉತ್ಪನ್ನವನ್ನು ಮಾರಾಟ ಮಾಡಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

Kannada Bar & Bench
kannada.barandbench.com