ಪರಿಸರದ ಉಳಿವಿಗೆ ಎಲ್ಲಾ ಯತ್ನ ಮಾಡುವುದಾಗಿ ತಿಳಿಸಿದ ಸುಪ್ರೀಂ: ಕಂಚ ಗಚ್ಚಿಬೌಲಿಯಲ್ಲಿ ಮರಗಳ ಮಾರಣಹೋಮಕ್ಕೆ ತಡೆ

"ಅಲ್ಲಿ ಒಂದೇ ಒಂದು ಮರವನ್ನು ಕಡಿಯುವಂತಿಲ್ಲ" ಎಂದು ನ್ಯಾಯಾಲಯ ತಾಕೀತು ಮಾಡಿತು.
Trees
Trees
Published on

ಹೈದರಾಬಾದ್‌ನ ಕಂಚ ಗಚ್ಚಿಬೌಲಿಯಲ್ಲಿರುವ 400 ಎಕರೆ ಭೂಮಿಯಲ್ಲಿ ಮರ ಕಡಿಯುವ ಬಗ್ಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್, ಪರಿಸರದ ಉಳಿವಿಗಾಗಿ ಎಲ್ಲಾ ಯತ್ನ ಮಾಡುವುದಾಗಿ ಬುಧವಾರ ತಿಳಸಿದೆ.

ಮರಗಿಡಗಳ ಹಸಿರು ಹೊದಿಕೆಯ ಪ್ರದೇಶವನ್ನು ಹೇಗೆ ವಿಸ್ತರಿಸುವುದು ಎಂಬುದನ್ನು ಪರಿಶೀಲಿಸುವುದಾಗಿಯೂ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್‌ ಅವರಿದ್ದ ಪೀಠ ಹೇಳಿದೆ.

Also Read
ಕಂಚ ಗಚ್ಚಿಬೌಲಿ ವೃಕ್ಷ ಮಾರಣಹೋಮ: ತೆಲಂಗಾಣ ಮುಖ್ಯ ಕಾರ್ಯದರ್ಶಿಯವರನ್ನು ಜೈಲಿಗೆ ಕಳಿಸಬೇಕಾದೀತು ಎಂದು ಸುಪ್ರೀಂ ಗರಂ

“ಬಹುಶಃ ನಾವದನ್ನು ವಿಸ್ತರಿಸುತ್ತೇವೆ. ಮುಂಬೈನ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಂತೆ ನಗರದಲ್ಲಿ ಹಸಿರು ಶ್ವಾಸಕೋಶಗಳು ಇರಲಿ. ಪರಿಸರ ಮತ್ತು ಪರಿಸರ ವಿಜ್ಞಾನದ ರಕ್ಷಣೆಗಾಗಿ ನಾವು ಏನು ಬೇಕಾದರೂ ಮಾಡುತ್ತೇವೆ" ಎಂದು ನ್ಯಾಯಪೀಠ ಹೇಳಿದೆ.

"ಈ ಮಧ್ಯೆ, ಅಲ್ಲಿ ಒಂದೇ ಒಂದು ಮರವನ್ನು ಕಡಿಯಬಾರದು" ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಲ್ಲದೆ ಈ ಪ್ರದೇಶದಲ್ಲಿ ವನ್ಯಜೀವಿಗಳನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಪರಿಶೀಲಿಸುವಂತೆ ಅದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. 100 ಎಕರೆ ಪ್ರದೇಶದಲ್ಲಿ ಅರಣ್ಯನಾಶದಿಂದ ತೊಂದರೆಗೊಳಗಾದ ವನ್ಯಜೀವಿಗಳನ್ನು ರಕ್ಷಿಸಲು ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಾವು ತೆಲಂಗಾಣ ರಾಜ್ಯದ ವನ್ಯಜೀವಿ ಅಧಿಕಾರಿಗೆ ನಿರ್ದೇಶಿಸುತ್ತೇವೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ತೆಲಂಗಾಣ ಸರ್ಕಾರದ ಪರವಾಗಿ ವಾದ ಮಂಡಿಸಿದರು.

ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಅಭಿವೃದ್ಧಿಗಾಗಿ ಕಂಚ ಗಚ್ಚಿಬೌಲಿ ಗ್ರಾಮದ 400 ಎಕರೆ ಜಮೀನನ್ನು ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ ಲಿಮಿಟೆಡ್, ಹೈದರಾಬಾದ್ (ಟಿಜಿಐಐಸಿ) ಮೂಲಕ ಹರಾಜು ಮಾಡುವ ಪ್ರಸ್ತಾವನೆ ಸರ್ಕಾರದ್ದಾಗಿತ್ತು. ಅದಕ್ಕಾಗಿ ವ್ಯಾಪಕ ಪ್ರಮಾಣದಲ್ಲಿ ಅಲ್ಲಿ ಮರಗಳನ್ನು ಕಡಿಯಲಾಗಿತ್ತು.

Also Read
ಕಂಚ ಗಚ್ಚಿಬೌಲಿಯಲ್ಲಿ ಮರಗಳ ಹನನ ನಿಲ್ಲಿಸುವಂತೆ ತೆಲಂಗಾಣಕ್ಕೆ ಸುಪ್ರೀಂ ಸೂಚನೆ

ಯೋಜನೆ ಅರಣ್ಯ ಭೂಮಿಯನ್ನು ಕಬಳಿಸುತ್ತದೆ ಇದು ಪರಿಸರ ಸೂಕ್ಷ್ಮ ವಲಯವಾಗಿದ್ದು ಹೈದರಾಬಾದ್‌ ನಗರಕ್ಕೆ ಶುದ್ಧಗಾಳಿ ಒದಗಿಸುವ ಶ್ವಾಸಕೋಶದಂತೆ ಕೆಲಸ ಮಾಡುತ್ತದೆ ಎಂದು ಯೋಜನೆಯ ವಿರೋಧಿಗಳು ಪ್ರತಿಪಾದಿಸಿದ್ದರು. ವಿರೋಧ ವ್ಯಕ್ತಪಡಿಸಿದವರಲ್ಲಿ ಹತ್ತಿರದ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸೇರಿದ್ದರು, ವರದಿಗಳ ಪ್ರಕಾರ, ವಿವಿಯ ಇಬ್ಬರು ಹಳೆಯ ವಿದ್ಯಾರ್ಥಿಗಳನ್ನು ಸಹ ಬಂಧಿಸಲಾಗಿತ್ತು.

ಏಪ್ರಿಲ್ 3ರಂದು ಸುಪ್ರೀಂ ಕೋರ್ಟ್ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿ , ಮರ ಕಡಿಯುವುದಕ್ಕೆ ತಡೆಯಾಜ್ಞೆ ನೀಡಿತ್ತು.

Kannada Bar & Bench
kannada.barandbench.com