ಅಭಿನಂದನೆಯನ್ನು ತುಸು ಎಚ್ಚರಿಕೆಯಿಂದಲೇ ಸ್ವೀಕರಿಸುತ್ತೇನೆ: ಸುಪ್ರೀಂ ಕೋರ್ಟ್‌ ನಿರ್ಗಮಿತ ನ್ಯಾಯಮೂರ್ತಿ ಜೋಸೆಫ್‌

ನ್ಯಾ. ಜೋಸೆಫ್‌ ಅವರು ಪ್ರಾಮಾಣಿಕತೆ ಮತ್ತು ಉತ್ಸಾಹವನ್ನು ತಮ್ಮ ತಂದೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ ಕೆ ಮ್ಯಾಥ್ಯೂ ಅವರಿಂದ ಪಡೆದಿದ್ದಾರೆ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ಹೇಳಿದರು.
Justice KM Joseph
Justice KM Joseph

ತನ್ನ ಮೇಲೆ ಸುರಿಸಲಾಗಿರುವ ಅಭಿನಂದನೆಯ ಸುರಿಮಳೆಯನ್ನು ಉದಾರವಾಗಿ ತುಸು ಎಚ್ಚರಿಕೆಯಿಂದಲೇ ಸ್ವೀಕರಿಸುತ್ತೇನೆ ಎಂದು ಸುಪ್ರೀಂ ಕೋರ್ಟ್‌ನ ನಿರ್ಗಮಿತ ನ್ಯಾಯಮೂರ್ತಿ ಕೆ ಎಂ ಜೋಸೆಫ್‌ ಹೇಳಿದರು.

ನಿವೃತ್ತಿಯ ಭಾಗವಾಗಿ ಸಿಜೆಐ ಡಿ ವೈ ಚಂದ್ರಚೂಡ್‌ ಅವರ ಜೊತೆ ನ್ಯಾಯಮೂರ್ತಿ ಪಿ ಎಸ್‌ ನರಸಿಂಹ ಅವರನ್ನು ಒಳಗೊಂಡಿದ್ದ ಔಪಚಾರಿಕ ಪೀಠದಲ್ಲಿ ಕುಳಿತು ನ್ಯಾ. ಜೋಸೆಫ್‌ ಅವರು ವಿಚಾರಣೆ ನಡೆಸಿದರು.

“ಇದು ಸಂಪ್ರದಾಯವಾಗಿದ್ದು, ನಿಮ್ಮೆಲ್ಲರ ಅಭಿನಂದನೆಗಳನ್ನು ನಾನು ತುಸು ಎಚ್ಚರಿಕೆಯಿಂದ ಸ್ವೀಕರಿಸುತ್ತೇನೆ. ಅವುಗಳನ್ನು ಯಥಾವತ್ ಆಗಿ ಸ್ವೀಕರಿಸಿದರೆ ನಾನು ಮುಗ್ಧ ಎಂದಾಗುತ್ತದೆ” ಎಂದು ಸಹೋದ್ಯೋಗಿ ನ್ಯಾಯಮೂರ್ತಿಗಳು ಮತ್ತು ವಕೀಲ ವೃಂದಕ್ಕೆ ಅವರು ವಂದಿಸಿದರು.

“ನೀವು ವ್ಯಕ್ತಪಡಿಸಿದ ಮತ್ತು ವ್ಯಕ್ತಪಡಿಸದಿರುವ ಎಲ್ಲ ಭಾವನೆಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ” ಎಂದೂ ನ್ಯಾ. ಜೋಸೆಫ್‌ ಹೇಳಿದರು.

ಸಿಜೆಐ ಚಂದ್ರಚೂಡ್‌ ಅವರು “ನಾನು ಮತ್ತು ನ್ಯಾ. ಜೋಸೆಫ್‌ ಅವರು ಬಾಲ್ಯ ಸ್ನೇಹಿತರು. ದೆಹಲಿಗೆ ನಾನು ಸ್ಥಳಾಂತರಗೊಂಡಾಗ ದೊರೆತ ನನ್ನ ಮೊದಲ ಸ್ನೇಹಿತ. ಕೋವಿಡ್‌ ಸಂದರ್ಭದಲ್ಲಿ ನಾನು ಅವರು ಒಂದೇ ಪೀಠದಲ್ಲಿ ಕುಳಿತು ವಿಚಾರಣೆ ನಡೆಸಿದ್ದೆವು. ಅದೊಂದು ರೀತಿ ಉಭಯರ ಮನಸ್ಸು ಸಂಧಿಸುವ ಸಂದರ್ಭವಾಗಿತ್ತು” ಎಂದು ನೆನಪಿಸಿಕೊಂಡರು.

ನ್ಯಾ. ಜೋಸೆಫ್‌ ಅವರು ಪ್ರಾಮಾಣಿಕತೆ ಮತ್ತು ಉತ್ಸಾಹವನ್ನು ತಮ್ಮ ತಂದೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಕೆ ಕೆ ಮ್ಯಾಥ್ಯೂ ಅವರಿಂದ ಪಡೆದಿದ್ದಾರೆ ಎಂದು ಸಿಜೆಐ ಡಿ ವೈ ಚಂದ್ರಚೂಡ್‌ ಹೇಳಿದರು.

ಅಟಾರ್ನಿ ಜನರಲ್‌ ಆರ್‌ ವೆಂಕಟರಮಣಿ ಅವರು ಸಂಸ್ಥೆ ಮತ್ತು ವಕೀಲ ಸಮುದಾಯ ನ್ಯಾ. ಜೋಸೆಫ್‌ ಅವರಿಗೆ ಋಣಿಯಾಗಿರುತ್ತದೆ ಎಂದರು. “ಹಲವು ಪ್ರಕರಣಗಳಲ್ಲಿ ನಾನು ನಿಮ್ಮ ಮುಂದೆ ವಾದಿಸಿದ್ದೇನೆ. ಹಲವು ನೆನಪುಗಳಿವೆ… ನ್ಯಾಯಮೂರ್ತಿಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ ಬಳಿಕ ಕೆಲವೊಂದು ಗುಣಗಳು ತೀರ್ಮಾನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕೆ ನ್ಯಾ. ಜೋಸೆಫ್‌ ಅವರು ಅತ್ಯುತ್ತಮ ಉದಾಹರಣೆ.. ಇತರೆ ಪ್ರಯತ್ನಗಳಲ್ಲೂ ನೀವು ನಮ್ಮೊಂದಿಗೆ ಇರುತ್ತೀರಿ ಎಂದು ಭಾವಿಸುತ್ತೇನೆ” ಎಂದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಎಜಿ ಏನು ಹೇಳಿದ್ದಾರೋ ಅವೇ ನನ್ನ ಭಾವನೆಗಳಾಗಿವೆ. ನಿಮ್ಮ ನಿವೃತ್ತ ಬದುಕು ಆರೋಗ್ಯಪೂರ್ಣವಾಗಿರಲಿ” ಎಂದರು.

ಹಿರಿಯ ವಕೀಲರಾದ ಅನಿತಾ ಶೆಣೈ ಅವರು “ಸಾಮಾಜಿಕ ನ್ಯಾಯಕ್ಕೆ ನೀವು ವೈಯಕ್ತಿಕವಾಗಿ ಬದ್ಧರಾಗಿದ್ದೀರಿ. ಪ್ರತಿಯೊಂದು ಹಂತದ ಚರ್ಚೆಯನ್ನೂ ನೀವು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದೀರಿ. ನಿವೃತ್ತಿಯ ಬದುಕು ಆರೋಗ್ಯ ಪೂರ್ಣವೂ, ಚೇತೋಹಾರಿಯೂ ಆಗಿರಲಿ” ಎಂದರು.

Also Read
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಇಂದು ನಿವೃತ್ತಿ; ಔಪಚಾರಿಕ ಪೀಠದ ವೇಳೆ ಗದ್ಗದಿತ

ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ನ್ಯಾಯಾಲಯವು ಒಂದು ಅಪೂರ್ವ ಆಸ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ಬಣ್ಣಿಸಿದರು. “ಉತ್ತರಾಖಂಡ ಪ್ರಕರಣವನ್ನು ನಾನು ಬಹುಕಾಲದವರೆಗೆ ನೆನಪಿಸಿಕೊಳ್ಳುತ್ತೇನೆ… ಬೊಮ್ಮಾಯಿ ತೀರ್ಪಿನ ಐದನೇ ಪುಟವನ್ನು ಹೇಗೆ ಅರಿಯಬೇಕು ಎನ್ನುವುದನ್ನು ನ್ಯಾ. ಜೋಸೆಫ್‌ ಅವರು ತೋರಿದರು. ಪ್ರತಿಯೊಂದು ಪ್ರಕರಣವನ್ನೂ ಓದಿ, ಕೇವಲ ಅದರ ಅರ್ಹತೆಯ ಆಧಾರದಲ್ಲಿ ಮಾತ್ರವೇ ಅವುಗಳನ್ನು ನಿರ್ಧರಿಸಿದ್ದಾರೆ. ಇನ್ನಾವುದೂ ಅದಕ್ಕೆ ಅಡ್ಡಿಯಾಗಿಲ್ಲ” ಎಂದು ನೆನಪಿಸಿಕೊಂಡರು.

ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಅಧ್ಯಕ್ಷ ಆದಿಶ್‌ ಸಿ ಅಗರ್ವಾಲ್‌ ಅವರೂ ಸಹ ತಮ್ಮ ಭಾವನೆಗಳನ್ನು ಹಂಚಿಕೊಂಡರು.

Kannada Bar & Bench
kannada.barandbench.com