[ವರ್ಗಾವಣೆ ಬೆದರಿಕೆ] ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿರುವ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಜುಲೈ 7ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಪೀಠವು ಮಾಡಿರುವ ಆಕ್ಷೇಪಾರ್ಹ ಆದೇಶ ಮತ್ತು ಇತರೆ ಪ್ರಕ್ರಿಯೆಗೆ ತಡೆ ವಿಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ.
ACB ADGP Seemanth Kumar Singh, J Manjunath and SC
ACB ADGP Seemanth Kumar Singh, J Manjunath and SC

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಲಂಚ ಪ್ರಕರಣದಲ್ಲಿ ಸಿಲುಕಿ, ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನು ಕೋರಿರುವ ಉಪ ತಹಶೀಲ್ದಾರ್‌ ಮತ್ತು ಜಿಲ್ಲಾಧಿಕಾರಿಯ ಆಪ್ತ ಸಹಾಯಕ ಪಿ ಎಸ್‌ ಮಹೇಶ್‌ ಕುಮಾರ್‌ ಅವರ ಜಾಮೀನು ಕೋರಿಕೆ ಹೊರತುಪಡಿಸಿ ಉಳಿದೆಲ್ಲಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌, ಬೆಂಗಳೂರು ನಗರದ ಹಿಂದಿನ ಜಿಲ್ಲಾಧಿಕಾರಿ ಜೆ ಮಂಜುನಾಥ್‌ ಅವರು ಪ್ರತ್ಯೇಕವಾಗಿ ಸಲ್ಲಿಕೆಸಿರುವ ಮೂರು ವಿಶೇಷ ಮನವಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ನಡೆಸಿತು.

ಇದೇ, ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದಿರುವ ವಿಶೇಷ ಮನವಿಗಳ ಬಗ್ಗೆ ಉಲ್ಲೇಖಿಸಿ ತುರ್ತಾಗಿ ಜಾಮೀನು ಮನವಿ ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ.

ಜಾಮೀನು ಕೋರಿ ಮಹೇಶ್‌ ಅವರು ಸಿಆರ್‌ಪಿಸಿ ಸೆಕ್ಷನ್‌ 439ರ ಅಡಿ ಸಲ್ಲಿಸಿರುವ ಮನವಿಗೆ ಯಾವುದೇ ಅಡ್ಡಿಯಾಗಬಾರದು. ಹೀಗಾಗಿ, ಜಾಮೀನು ಮನವಿಯ ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಕರ್ನಾಟಕ ಹೈಕೋರ್ಟ್‌ ಅನ್ನು ಕೋರುತ್ತೇವೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ, ಮೂರನೇ ಆರೋಪಿಯಾಗಿರುವ ಜೆ ಮಂಜುನಾಥ್‌ ಅವರು ಸಲ್ಲಿಸಿರುವ ಜಾಮೀನು ಮನವಿಯನ್ನು ವಿಚಾರಣೆ ನಡೆಸಬೇಕು. ಇದಕ್ಕೆ ವಿಶೇಷ ಮನವಿ ಇತ್ಯರ್ಥವಾಗಲಿ ಎಂದು ಕಾಯಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಜುಲೈ 7ರಂದು ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಪೀಠವು ಮಾಡಿರುವ ಆಕ್ಷೇಪಾರ್ಹ ಆದೇಶ ಮತ್ತು ಇತರೆ ಪ್ರಕ್ರಿಯೆಗೆ ತಡೆ ವಿಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ.

ಮಹೇಶ್‌ ಅವರು ಸಲ್ಲಿಸಿರುವ ಜಾಮೀನು ಮನವಿಯನ್ನು ಅದರ ಅರ್ಹತೆಯ ಮೇಲೆ ನಿರ್ಧರಿಸುವ ಬದಲು ಹೈಕೋರ್ಟ್‌ ನ್ಯಾಯಮೂರ್ತಿ ಅವರು ಇತರೆ ವಿಚಾರಗಳ ಮೇಲೆ ಗಮನವಿರಿಸಿದ್ದು, ಇವು ಅಪ್ರಸ್ತುತವಾಗಿವೆ. ಇವು ಮೇಲ್ನೋಟಕ್ಕೆ ತನಿಖೆಯ ವ್ಯಾಪ್ತಿ ಮೀರಿವೆ ಎಂದು ನ್ಯಾಯಾಲಯ ಹೇಳಿದೆ.

ಜುಲೈ 7 ಮತ್ತು 11ರಂದು ಹೈಕೋರ್ಟ್‌ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಇದನ್ನು ಪ್ರತ್ಯೇಕವಾಗಿ ಸಲ್ಲಿಸಿರುವ ಮೂರು ವಿಶೇಷ ಮನವಿಗಳಲ್ಲಿ ಪ್ರಶ್ನಿಸಲಾಗಿದೆ. ಹೈಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಜಾಮೀನು ಮನವಿಯ ಪ್ರಕ್ರಿಯೆ ವ್ಯಾಪ್ತಿಗೆ ಒಳಪಟ್ಟಿವೆ ಎನ್ನಲಾಗದು. ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸೀಮಂತ್‌ ಕುಮಾರ್‌ ಸಿಂಗ್‌ ಅವರ ಸೇವಾ ದಾಖಲೆ, 2016ರ ಬಳಿಕ ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್‌ಗಳು, ಲಂಚ ಪ್ರಕರಣದಲ್ಲಿ ಮಂಜುನಾಥ್‌ ಅವರು ಭಾಗಿಯಾಗಿರುವ ಆರೋಪ, ಎಸಿಬಿ ಅಧಿಕಾರಿಗಳ ನಿರುತ್ಸಾಹ ಮುಂತಾದ ವಿಚಾರಗಳು ಅನಗತ್ಯ ಅಥವಾ ಅವು ಹಾಲಿ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಯುತ ವಿಚಾರಣೆಗೆ ಅಡ್ಡಿಯಾಗಲಿವೆ ಎಂದು ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಹೇಳಿದೆ. ಹೀಗಾಗಿ, ಆಕ್ಷೇಪಾರ್ಹ ಆದೇಶಕ್ಕೆ ತಡೆ ನೀಡುತ್ತಿರುವುದಾಗಿ ಪೀಠ ವಿವರಿಸಿದೆ.

Also Read
ಎಸಿಬಿ ಹಾಗೂ ಅದರ ಎಡಿಜಿಪಿ ಕುರಿತು ಕರ್ನಾಟಕ ಹೈಕೋರ್ಟ್‌ ಮಾಡಿದ್ದ ಅವಲೋಕನ ಹಾಗೂ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಎರಡು ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಎಸಿಬಿ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಸೀಮಂತ್‌ ಕುಮಾರ್‌ ಸಿಂಗ್‌ ಅವರ ಪರವಾಗಿ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಮತ್ತು ಮಂಜುನಾಥ್‌ ಅವರ ಪರವಾಗಿ ಹಿರಿಯ ವಕೀಲ ಎಸ್‌ ನಾಗಮುತ್ತು ವಾದಿಸಿದರು.

Related Stories

No stories found.
Kannada Bar & Bench
kannada.barandbench.com