ನ್ಯಾಯವಾದಿ ವರ್ಗ ಬಹುವಾಗಿ ನಿರೀಕ್ಷಿಸಿದ್ದ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕವು ಮಂಡನೆಗೆ ಸೀಮಿತವಾಗಿದ್ದೇಕೆ?

ಕಾಯಿದೆ ಜಾರಿಗೆ ಅಗ್ರಹಿಸಿ 2021ರಲ್ಲಿ ಆರಂಭವಾದ ಹೋರಾಟವು ಸತತ ಎರಡು ವರ್ಷಗಳಿಂದ ನಡೆದಿದ್ದು, ಈ ಬಾರಿಯೂ ಅದಕ್ಕೆ ಮೋಕ್ಷ ಸಿಗದೆ ಇರುವುದು ವಕೀಲ ಸಮುದಾಯದಲ್ಲಿ ಆಕ್ರೋಶ ಮಡುಗಟ್ಟುವಂತೆ ಮಾಡಿದೆ.
CM Basavaraja Bommai and Law Minister J C Madhuswamy
CM Basavaraja Bommai and Law Minister J C Madhuswamy

ಪ್ರಸಕ್ತ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಾದರೂ ಕರ್ನಾಟಕ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ ಜಾರಿಯಾಗಬಹುದೇನೋ ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯದ ವಕೀಲ ಸಮುದಾಯಕ್ಕೆ ಈ ಬಾರಿಯೂ ನಿರಾಸೆಯಾಗಿದೆ. ವಿಧೇಯಕವು ಕೇವಲ ವಿಧಾನಸಭೆಯಲ್ಲಿ ಮಂಡನೆಗೆ ಮಾತ್ರವೇ ಸೀಮಿತವಾಯಿತೇ ವಿನಾ ಅದರ ಮುಂದಿನ ಪ್ರಕ್ರಿಯೆಗಳಾದ ಚರ್ಚೆ, ಅನುಮೋದನೆಗಳಿಂದ ದೂರವೇ ಉಳಿಯಿತು.

ತಮ್ಮದೇ ಸಚಿವ ಸಂಪುಟದ ಕೆಲವರ ವಿರೋಧದ ನಡುವೆಯೂ ಸಾಕಷ್ಟು ಹಗ್ಗಜಗ್ಗಾಟದ ನಂತರ ವಕೀಲರ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದ್ದರು. ಸದರಿ ಮಸೂದೆಯ ಮೇಲಿನ ಚರ್ಚೆಯು ಅಧಿವೇಶನದ ಅಂತಿಮ ದಿನವಾದ ಶುಕ್ರವಾರಕ್ಕೆ ನಿಗದಿಗೊಳಿಸಲಾಗಿತ್ತು. ಆದರೆ, ಅಂದು ಯಾವುದೇ ರೀತಿಯ ಚರ್ಚೆಯಾಗದೆ ವಿಧೇಯಕವು ಮಂಡನೆಗಷ್ಟೇ ಸೀಮಿತವಾಗಿ ಉಳಿಯಿತು.

ರಾಜ್ಯದಲ್ಲಿ ವಕೀಲರ ರಕ್ಷಣಾ ಕಾಯಿದೆಗೆ ಆಗ್ರಹಿಸಿ ಸಾಕಷ್ಟು ವರ್ಷಗಳಿಂದ ಚರ್ಚೆ ನಡೆದಿದ್ದರೂ ಅದು ಹೋರಾಟವಾಗಿ ಬಲಗೊಂಡಿದ್ದು ಕಳೆದ ಎರಡು ವರ್ಷಗಳಲ್ಲಿ ಮಾತ್ರವೇ. ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿನ ಶೂಟೌಟ್‌, ಹೈದಾರಾಬಾದ್‌ನಲ್ಲಿ ವಕೀಲ ದಂಪತಿಯ ಕೊಲೆ ಮತ್ತು ಕರ್ನಾಟಕದಲ್ಲಿ ನಡೆದ ವಕೀಲರೊಬ್ಬರ ಕೊಲೆ ಮುಂತಾದ ಘಟನಾವಳಿಗಳು ಅಲ್ಪ ಅವಧಿಯಲ್ಲಿಯೇ ನಡೆದಿದ್ದು ವಕೀಲ ಸಮುದಾಯದಲ್ಲಿ ಆಘಾತ ಉಂಟು ಮಾಡಿತ್ತು. ಅಲ್ಲದೆ ರಾಜ್ಯದ ವಿವಿಧೆಡೆ ವಕೀಲರ ಮೇಲೆ ಹಲ್ಲೆಗಳ ಪ್ರಕರಣಗಳು ಆಗಾಗ್ಗೆ ನಡೆಯುತ್ತಲೇ ಇರುವುದು ವಕೀಲ ವರ್ಗವನ್ನು ವಿಶೇಷವಾಗಿ ಗಮನದಲ್ಲಿರಿಸಿಕೊಂಡು ಅವರಿಗೆ ರಕ್ಷಣೆ ನೀಡಬೇಕಾದ ಕಾಯಿದೆಯೊಂದನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ನ್ಯಾಯವಾದಿ ಸಮುದಾಯವು ಗಂಭೀರವಾಗಿ ಹೋರಾಟ ರೂಪಿಸುವಂತೆ ಮಾಡಿತು.

ಇದೆಲ್ಲದರ ಫಲವೆನ್ನುವಂತೆ, ಬೆಂಗಳೂರು ವಕೀಲರ ಸಂಘವು (ಎಎಬಿ) ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ವಕೀಲರ ಸ್ಮರಣಾರ್ಥ 2021ರ ಜುಲೈ 20ರಲ್ಲಿ ಏರ್ಪಡಿಸಿದ್ದ ನುಡಿನಮನ ಮತ್ತು ಸಾಂತ್ವನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಂದಿನ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಅವರು ಮುಂದಿನ ಅಧಿವೇಶನದಲ್ಲಿ ವಕೀಲರ ರಕ್ಷಣಾ ಮಸೂದೆ ಮಂಡಿಸಲಾಗುವುದು ಎಂದು ಭರವಸೆ ನೀಡಿದ್ದನ್ನು ಇಲ್ಲಿ ನೆನೆಯಬಹುದು. ಆದರೆ, ಈ ಭರವಸೆ ಕಾರ್ಯಗತಗೊಳ್ಳಲಿಲ್ಲ.

ಮುಂದೆ ಕಾಯಿದೆಗಾಗಿ ಆಗ್ರಹಿಸಿ ಹೋರಾಟ ಮತ್ತಷ್ಟು ಬಲಗೊಂಡು, ಕಳೆದ ವರ್ಷಾಂತ್ಯದಲ್ಲಿ ಬೆಳಗಾವಿ ವಿಧಾನಸಭಾ ಅಧಿವೇಶನದ ವೇಳೆಗೆ ತೀವ್ರ ಸ್ವರೂಪ ಪಡೆಯಿತು. ರಾಜ್ಯದ ವಿವಿಧೆಡೆಗಳಿಂದ ಬೆಳಗಾವಿಯಲ್ಲಿ ನೆರೆದ ವಕೀಲ ಸಮುದಾಯವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿತು. ಈ ವೇಳೆ ವಕೀಲರು ಪೊಲೀಸರೊಂದಿಗೆ ಕೈಕೈ ಮಿಲಾಯಿಸಿದ್ದು, ಧರಣಿ ನಡೆಸಿದ್ದು ದೊಡ್ಡ ಸುದ್ದಿಯಾಯಿತು. ಅಂತಿಮವಾಗಿ ಪ್ರತಿಭಟನಾನಿರತ ವಕೀಲರಿಗೆ ಸರ್ಕಾರದ ಪರವಾಗಿ ಕೆಲ ಸಚಿವರ ಕಡೆಯಿಂದ ದೊರೆತ ಭರವಸೆಗಳು ಅವರು ಪ್ರತಿಭಟನೆಯನ್ನು ಕೈಬಿಟ್ಟು ಈ ವರ್ಷದ ಬಜೆಟ್‌ ಅಧಿವೇಶನಕ್ಕೆ ತವಕದಿಂದ ಎದುರು ನೋಡುವಂತೆ ಮಾಡಿತ್ತು.

ಬಜೆಟ್ ಅಧಿವೇಶನ ಆರಂಭವಾದ ಸಂದರ್ಭದಲ್ಲಿಯೂ ಸರ್ಕಾರಕ್ಕೆ ತಮ್ಮ ಬೇಡಿಕೆಯನ್ನು ಮನಗಾಣಿಸುವ ಹಾಗೂ ತಮಗೆ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ವಕೀಲರು ಕಾಯಿದೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಅಧಿವೇಶನದಲ್ಲಿ ವಿಧೇಯಕವು ಮಂಡನೆಯಾಗುವ ಭರವಸೆ ದೊರೆತ ನಂತರ ನ್ಯಾಯವಾದಿ ಸಮುದಾಯದಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಿತ್ತು.

ಈ ಎಲ್ಲ ಬೆಳವಣಿಗೆಗಳಿಂದ ಒತ್ತಡಕ್ಕೆ ಸಿಲುಕಿದ್ದ ರಾಜ್ಯ ಸರ್ಕಾರವು ಸದನ ವ್ಯವಹಾರ ಸಮಿತಿಯ ಮುಂದೆ ಮಸೂದೆ ಮಂಡನೆ ಬಗ್ಗೆ ಚರ್ಚಿಸಿ, ಸಂಪುಟ ಸಭೆಯಲ್ಲಿಯೂ ಪ್ರಸ್ತಾಪಿಸಿ, ಮಸೂದೆ ಮಂಡನೆಗೆ ನಿರ್ಧರಿಸಿತ್ತು.

ಆದರೆ, ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ವಕೀಲ ಸಮುದಾಯದಿಂದ ಕಾಯಿದೆಗಾಗಿ ಇಷ್ಟೆಲ್ಲಾ ಆಗ್ರಹ, ಹೋರಾಟಗಳು ನಡೆಯುತ್ತಿದ್ದರೂ ಆರಂಭದಿಂದಲೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರು ಮಾತ್ರ ಈ ವಿಚಾರವಾಗಿ ಅಂತರವನ್ನು ಕಾಯ್ದುಕೊಂಡಿದ್ದರು ಎನ್ನುವುದು. ಇದು ವಿಧೇಯಕದ ಮಂಡನೆಯ ವೇಳೆ ಮತ್ತಷ್ಟು ನಿಚ್ಚಳಗೊಂಡಿತು. ತಾವು ಹಿಂದೆ ನೀಡಿದ್ದ ಭರವಸೆಯ ಕಾರಣಕ್ಕೋ, ನ್ಯಾಯವಾದಿ ಸಮುದಾಯದ ಕಣ್ಣೊರೆಸುವ ತಂತ್ರವಾಗಿಯೋ ಅಂತಿಮವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯ ಅಧಿವೇಶನ ಅಂತ್ಯವಾಗುವುದಕ್ಕೂ ಒಂದು ದಿನ ಮುನ್ನ ವಿಧೇಯಕವನ್ನು ಮಂಡಿಸಿದರು. ವಿಪರ್ಯಾಸವೆಂದರೆ, ಅದು ಮಂಡನೆಗೆ ಮಾತ್ರವೇ ಸೀಮಿತವಾಯಿತೇ ಹೊರತು. ಅದರ ಮೇಲೆ ಚರ್ಚೆಯಾಗಲಿ, ಅನುಮೋದನಾ ಪ್ರಕ್ರಿಯೆಗೆ ಚಾಲನೆಯಾಗಲಿ ದೊರೆಯಲಿಲ್ಲ. ಇದು ರಾಜ್ಯದ ವಕೀಲ ಸಮುದಾಯದಲ್ಲಿ ವ್ಯಾಪಕವಾಗಿ ಅಸಮಾಧಾನವನ್ನು ಹುಟ್ಟುಹಾಕಿದೆ.

ಇಡೀ ಘಟನಾವಳಿಗಳ ಬಗ್ಗೆ ಹತ್ತಿರದಿಂದ ಬಲ್ಲ ಅನೇಕರು ಈ ವಿಚಾರವಾಗಿ ತಮ್ಮ ಅನಿಸಿಕೆಗಳನ್ನು 'ಬಾರ್‌ ಅಂಡ್‌ ಬೆಂಚ್‌'ನೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. “ಕಾನೂನು ಸಚಿವ ಮಾಧುಸ್ವಾಮಿ ಅವರಿಗೆ ವಿಧೇಯಕದ ಬಗ್ಗೆ ತಮ್ಮದೇ ಆದ ಕೆಲ ಆಕ್ಷೇಪಗಳಿದ್ದವು. ರೈತ, ಕಾರ್ಮಿಕ ಸಮುದಾಯಗಳಿಗೆ ಪ್ರತ್ಯೇಕವಾಗಿ ರಕ್ಷಣೆ ಒದಗಿಸುವ ಕಾಯಿದೆ ಇಲ್ಲದಿರುವಾಗ ವಕೀಲರಿಗೆ ಮಾತ್ರವೇ ಏಕೆ ಪ್ರತ್ಯೇಕ ರಕ್ಷಣೆ ನೀಡಬೇಕು ಎಂದು ಸಂಪುಟ ಸಭೆಯಲ್ಲಿ ವ್ಯಾಪಕವಾಗಿ ಮಾಧುಸ್ವಾಮಿ ಅವರು ಮಸೂದೆ ವಿರೋಧಿಸಿದ್ದರು. ಆದರೆ, ಅಂತಿಮವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಾನೂನು ಸಚಿವರಾಗಿದ್ದಾಗ ನೀಡಿದ್ದ ಮಾತು ಉಳಿಸಿಕೊಳ್ಳಲು ಸ್ವಯಂಪ್ರೇರಿತವಾಗಿ ಪ್ರತ್ಯೇಕ ಮಸೂದೆಯನ್ನು ಮಂಡಿಸಿದರು. ವಿಪರ್ಯಾಸವೆಂದರೆ, ಅದಕ್ಕೆ ಒಪ್ಪಿಗೆ ಪಡೆಯುವ ಇಚ್ಛಾಶಕ್ತಿಯನ್ನಾಗಲಿ ಅಥವಾ ರಾಜಕೀಯ ಎದೆಗಾರಿಕೆಯನ್ನಾಗಲಿ ಅವರು ಪ್ರದರ್ಶಿಸಲಿಲ್ಲ. ಪರಿಣಾಮ, ವಿಧಾನಸಭೆಯಲ್ಲಿ ಮಸೂದೆ ಮಂಡನೆಯು ನಾಮ್‌ ಕೆ ವಾಸ್ತೆಯಾಗಿ, ಕಣ್ಣೊರೆಸುವ ತಂತ್ರದ ಭಾಗವಾಗಿ ಮಾತ್ರವೇ ಮಂಡನೆಯಾಯಿತು” ಎಂಬುದು ಈ ಎಲ್ಲ ಘಟನಾವಳಿಗಳನ್ನು ಹತ್ತಿರದಿಂದ ಕಂಡವರ ಅಭಿಪ್ರಾಯ.

“ಕಾಯಿದೆ ವಿಚಾರವಾಗಿ ವಕೀಲರು ಕಳೆದ ಕೆಲ ವರ್ಷಗಳಲ್ಲಿ ನಡೆಸಿರುವ ಹೋರಾಟಗಳಿಂದ ಕಾನೂನು ಸಚಿವ ಮಾಧುಸ್ವಾಮಿ ಅವರು ಪ್ರಜ್ಞಾಪೂರ್ವಕವಾಗಿಯೇ ಅಂತರ ಕಾಯ್ದುಕೊಂಡಿದ್ದಾರೆ. ಇದು ವಿಧೇಯಕ ಮಂಡನೆಯಲ್ಲಿಯೂ ಪ್ರತಿಫಲಿತವಾಗಿದೆ. ಕಾನೂನು ಸಚಿವರ ಈ ಧೋರಣೆಯಿಂದಾಗಿ ವಕೀಲ ಸಮುದಾಯದ ಒಂದು ವರ್ಗದಲ್ಲಿ ಸಚಿವರು ನ್ಯಾಯವಾದಿ ವರ್ಗ ವಿರೋಧಿ ಮನಸ್ಥಿತಿಯನ್ನೇನಾದರೂ ಬೆಳೆಸಿಕೊಂಡಿದ್ದಾರೆಯೇ ಎನ್ನುವ ಚರ್ಚೆಗೆ ಕಾರಣವಾಗಿದೆ," ಎನ್ನುತ್ತಾರೆ ಈ ಹೋರಾಟಗಳಲ್ಲಿ ಆರಂಭದಿಂದಲೂ ಸಕ್ರಿಯವಾಗಿ ಪಾಲ್ಗೊಂಡ ವಕೀಲ ಸಂಘಟನೆಯೊಂದರಲ್ಲಿ ಪ್ರಮುಖವಾಗಿ ತೊಡಗಿಕೊಂಡಿರುವ ನ್ಯಾಯವಾದಿಯೊಬ್ಬರ ಅಭಿಪ್ರಾಯ.

ಕಾಯಿದೆ ಜಾರಿಗೊಳ್ಳದೆ ಕೇವಲ ಮಂಡನೆಗೆ ಮಾತ್ರವೇ ಸೀಮಿತವಾದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷ ವಿವೇಕ್‌ ಸುಬ್ಬಾರೆಡ್ಡಿ ಅವರು “ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ವಕೀಲರ ರಕ್ಷಣಾ ಮಸೂದೆ ಜಾರಿಗೆ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಕಾಯಿದೆ ಜಾರಿಗೊಳಿಸಲಾಗುವುದು ಎಂದು ವಕೀಲರ ಸಮುದಾಯಕ್ಕೆ ಸರ್ಕಾರ ಭರವಸೆ ನೀಡಿತ್ತು. ಭರವಸೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ” ಎಂದು ಬೇಸರಿಸಿದರು.

Also Read
ವಕೀಲರಿಗೆ ಒಂದು ತಿಂಗಳೊಳಗೆ ಆರೋಗ್ಯ ವಿಮೆ ಜಾರಿ, ವಕೀಲರ ರಕ್ಷಣಾ ಮಸೂದೆ ಮಂಡನೆ: ಕಾನೂನು ಸಚಿವ ಬಸವರಾಜ್‌ ಬೊಮ್ಮಾಯಿ

ಇನ್ನು ಇಡೀ ಘಟನಾವಳಿಗಳ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ಎಎಬಿ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್‌ ಅವರು “ಎಎಬಿ ಚುನಾವಣೆಗೂ ಮುನ್ನ ಮಸೂದೆ ಕರಡನ್ನು ಸಿದ್ಧಪಡಿಸಲಾಗಿತ್ತು. ಅಂದಿನ ಕಾನೂನು ಸಚಿವ ಬೊಮ್ಮಾಯಿ ಅವರು ಕಾಯಿದೆ ರೂಪಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕಾನೂನು ಸಚಿವ ಮಾಧುಸ್ವಾಮಿ, ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಉನ್ನತ ಶಿಕ್ಷಣ ಸಚಿವ ಸಿ ಎನ್‌ ಅಶ್ವತ್ಥನಾರಾಯಣ್‌ ಅವರು ಇದನ್ನು ತಡೆದರು. ಮಾಧುಸ್ವಾಮಿ ಅವರದ್ದು ವಕೀಲ ವಿರೋಧಿ ಧೋರಣೆಯಾದರೆ, ಜ್ಞಾನೇಂದ್ರ ಅವರು ಪೊಲೀಸ್‌ ಲಾಬಿಗೆ ಮಣಿದಿದ್ದಾರೆ. ಇದಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಬೆಂಬಲ ಸೂಚಿಸಿದ್ದಾರೆ. ಅತ್ತ ಅಶ್ವತ್ಥ ನಾರಾಯಣ್‌ ಅವರು ಬಿಎಂಎಸ್‌ ಟ್ರಸ್ಟ್‌ ಡೀಡ್‌ ಮಸೂದೆಗೆ ಶತಾಯಗತಾಯ ಬೆಂಬಲ ಪಡೆಯಲು ಮಾಧುಸ್ವಾಮಿ ಅವರ ನೆರವು ಪಡೆದರು, ಬದಲಿಗೆ ವಕೀಲರ ರಕ್ಷಣಾ ಕಾಯಿದೆ ವಿರೋಧಿಸಲು ಮಾಧುಸ್ವಾಮಿ ಅವರಿಗೆ ನೆರವಾದರು” ಎಂದು ನೇರವಾಗಿ ಆಪಾದಿಸುತ್ತಾರೆ.

ಮುಂದುವರಿದು, “ಕಾಯಿದೆ ಜಾರಿ ಭರವಸೆ ನೀಡಿ, ಬಿಜೆಪಿ ಸರ್ಕಾರವು ವಕೀಲರಿಗೆ ವಂಚಿಸಿದೆ. ವಕೀಲರ ಸಂಘವು ತಕ್ಷಣ ಸಾಮಾನ್ಯ ಸಭೆ ಕರೆದು, ಸರ್ಕಾರದ ವಿರುದ್ಧ ನಿರ್ಣಯ ಕೈಗೊಳ್ಳಬೇಕು. ಎಎಬಿ ಅಧ್ಯಕ್ಷರಾದ ವಿವೇಕ್‌ ಸುಬ್ಬಾರೆಡ್ಡಿ ಅವರು ತಮ್ಮೆಲ್ಲಾ ರಾಜಕೀಯ ಸಂಬಂಧ ಮೀರಿ ವಕೀಲರ ಹಿತಾಸಕ್ತಿಗೆ ಪೂರಕವಾಗಿ ನಿರ್ಧಾರ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.

Kannada Bar & Bench
kannada.barandbench.com