
ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಪಕ್ಷದ ಸ್ಥಾಪಕ ಮತ್ತು ಚಿದಂಬರಂ ಲೋಕಸಭಾ ಕ್ಷೇತ್ರದ ಸಂಸದ ತೋಲ್ ತಿರುಮಾವಳವನ್ ವಿರುದ್ಧ ಹಿಂದೂ ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳ ಆರೋಪದ ಮೇಲೆ ದಾಖಲಾಗಿದ್ದ ಕ್ರಿಮಿನಲ್ ದೂರನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ .
ಸಂಸದರು ಮನುಸ್ಮೃತಿಯಲ್ಲಿ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಆದ್ದರಿಂದ, ಅವರು ಅದಕ್ಕೆ ಹೊಣೆಗಾರರಾಗುವುದಿಲ್ಲ ಎಂದ ನ್ಯಾಯಮೂರ್ತಿ ಪಿ ವೇಲಮುರುಗನ್ ಅವರಿದ್ದ ಏಕಸದಸ್ಯ ಪೀಠ ಡಿಸೆಂಬರ್ 21, 2024ರಂದು ತೀರ್ಪು ನೀಡಿದೆ.
ಹೀಗಾಗಿ ಪೆರಿಯಾರ್ ಹೆಸರಿನ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾದ ವೀಡಿಯೊ ಆಧರಿಸಿ ಅನುಸರಿಸಿ 2021ರಲ್ಲಿ ತಿರುಮಾವಳವನ್ ಅವರ ವಿರುದ್ಧ ವಿ ವೇದಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ಪೀಠ ರದ್ದುಗೊಳಿಸಿತು.
ತಿರುಮಾವಳವನ್ ಅವರ ವಿರುದ್ಧ ವೇದಾ ಅವರು ಐಪಿಸಿ ಸೆಕ್ಷನ್ 120 ಬಿ, 295 ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ), 298 (ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಪದಗಳನ್ನು ಉಚ್ಚರಿಸುವುದು), 500 (ಮಾನನಷ್ಟ) ಮತ್ತು 509 ಅಡಿ (ಮಹಿಳೆಯರ ಘನತೆಗೆ ಧಕ್ಕೆ ತರುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಿಸಿದ್ದರು.
ಸಂಸದರು ಮಹಿಳೆಯರನ್ನು ಅಪಮಾನಿಸುವ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆ ನೀಡಿದ್ದಾರೆ ಎಂದು ವೇದಾ ಅವರು ಆರೋಪಿಸಿದ್ದರು. ಆದರೆ ವಾದ ನಿರಾಕರಿಸಿದ್ದ ತಿರುಮಾವಳವನ್ ಅವರು ಇದು ತಾನು ನೀಡಿದ ಹೇಳಿಕೆಯಲ್ಲ ಬದಲಿಗೆ ಮನುಸ್ಮೃತಿಯಲ್ಲಿ ಹೇಳಿದ್ದನ್ನು ಪ್ರಸ್ತಾಪಿಸಿರುವೆ ಎಂದಿದ್ದರು.
ಹೇಳಿಕೆಯ ವೀಡಿಯೊ ವೀಕ್ಷಿಸಿದ ನ್ಯಾಯಮೂರ್ತಿಗಳು ತಿರುಮಾವಳವನ್ ಹೇಳಿರುವುದು ಅವರ ಅಭಿಪ್ರಾಯವಲ್ಲ ಬದಲಿಗೆ ಮನಸ್ಮೃತಿಯಲ್ಲಿ ಮಹಿಳೆಯರ ಕುರಿತು ಮಾಡಲಾದ ವ್ಯಾಖ್ಯಾನವನ್ನು ಅವರು ಪ್ರಸ್ತಾಪಿಸಿದ್ದಾರೆ ಎಂದರು.
ವೇದಾ ಅವರು ಆರೋಪಿಸಿರುವಂತೆ ಸಂಸದರಿಗೆ ದ್ವೇಷ ಬಿತ್ತುವ ಉದ್ದೇಶವಿರಲಿಲ್ಲ. ಅಲ್ಲದೆ ಅವರ ಹೇಳಿಕೆ ಯಾರ ಮೇಲೂ ಪರಿಣಾಮ ಬೀರಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.