ಸಿಬಿಐ ನಿರ್ದೇಶಕರ ನೇಮಕಾತಿಗೆ ಸಿಜೆಐ ಅಭಿಪ್ರಾಯ ಏಕೆ ಬೇಕು? ಉಪ ರಾಷ್ಟ್ರಪತಿ ಧನಕರ್ ಅಸಮಾಧಾನ

ʼಕೊಚ್ಚಿಯ ರಾಷ್ಟ್ರೀಯ ಉನ್ನತ ಕಾನೂನು ಅಧ್ಯಯನ ವಿವಿಯ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇದನ್ನು ಸಂವಿಧಾನದ ಪ್ರಕಾರ ಮಾಡಲಾಗುತ್ತಿದೆಯೇ? ಜಗತ್ತಿನಲ್ಲೆಲ್ಲಾದರೂ ಹೀಗೆ ನಡೆಯುತ್ತಿದೆಯೇ?ʼ ಎಂದು ಕೇಳಿದರು.
ಸಿಬಿಐ ನಿರ್ದೇಶಕರ ನೇಮಕಾತಿಗೆ ಸಿಜೆಐ ಅಭಿಪ್ರಾಯ ಏಕೆ ಬೇಕು? ಉಪ ರಾಷ್ಟ್ರಪತಿ ಧನಕರ್ ಅಸಮಾಧಾನ
Published on

ಸಿಬಿಐ ನಿರ್ದೇಶಕರ ನೇಮಕಾತಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಭಾಗಿಯಾಗುವುದನ್ನು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಖಂಡಿಸಿದ್ದಾರೆ.

ಸೋಮವಾರ ಕೊಚ್ಚಿಯ ರಾಷ್ಟ್ರೀಯ ಸುಧಾರಿತ ಕಾನೂನು ಅಧ್ಯಯನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಇದನ್ನು ಸಂವಿಧಾನದ ಪ್ರಕಾರ ಮಾಡಲಾಗುತ್ತಿದೆಯೇ? ಜಗತ್ತಿನ ಬೇರೆಲ್ಲಿಯಾದರೂ ಹೀಗೆ ನಡೆಯುತ್ತಿದೆಯೇ?" ಎಂದು ಕೇಳಿದರು.

Also Read
ತುರ್ತು ಪರಿಸ್ಥಿತಿ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಾಂಗ ಇತಿಹಾಸದಲ್ಲೇ 'ಕರಾಳ' ತೀರ್ಪು ನೀಡಿತು: ಉಪರಾಷ್ಟ್ರಪತಿ ಧನಕರ್

ಇಂತಹ ವ್ಯವಸ್ಥೆ ಅಧಿಕಾರ ಪ್ರತ್ಯೇಕತೆಯ ಸಾಂವಿಧಾನಿಕ ಯೋಜನೆಗೆ ಕುತ್ತು ತರುವುದಲ್ಲದೆ ಚುನಾಯಿತ ಸರ್ಕಾರದ ಅಧಿಕಾರವನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳಿದರು.

ಸಿಬಿಐ ನಿರ್ದೇಶಕರಂತಹ ಕಾರ್ಯಾಂಗ ಅಧಿಕಾರಿಯನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಸಹಭಾಗಿತ್ವದಲ್ಲಿ ನೇಮಕ ಮಾಡಲಾಗುತ್ತದೆ ಎಂದು ತಿಳಿದು ನನಗೆ ಬೇಸರವಾಗಿದೆ. ಕಾರ್ಯಾಂಗಕ್ಕೆ ಸಂಬಂಧಿಸಿದ ನೇಮಕಾತಿಯನ್ನು ಕಾರ್ಯಾಂಗದ ಹೊರತಾಗಿ ಬೇರೆ ಅಂಗ ಏಕೆ ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಮತ್ತೊಂದೆಡೆ ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿ ಯಶವಂತ್‌ ಶರ್ಮಾ ಅವರ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ವಿಚಾರ ಪ್ರಸ್ತಾಪಿಸಿದ ಅವರು ಅಂತಹ ಘಟನೆ ಕುರಿತಂತೆ ಕೂಡಲೇ ಕ್ರಿಮಿನಲ್‌ ತನಿಖೆ ನಡೆಸಬೇಕಿತ್ತು. ಆದರೆ ಈಗಲೂ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

 ಇಂತಹ ಪ್ರಕರಣಗಳಲ್ಲಿ ಕಾರ್ಯಾಂಗ ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 1990 ರ ದಶಕದಲ್ಲಿ ನೀಡಿದ ತೀರ್ಪಿನಿಂದಾಗಿ ಪ್ರಸ್ತುತ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಗಮನ ಸೆಳೆದರು. ಈ ಬಗೆಯ ಘಟನೆಗಳನ್ನು ನಿಯಂತ್ರಿಸದಿದ್ದರೆ, ನ್ಯಾಯಾಂಗದಲ್ಲಿ ಸಾರ್ವಜನಿಕರು ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಉಂಟಾಗುತ್ತದೆ ಎಂದರು.

Also Read
ನ್ಯಾ. ವರ್ಮಾ ಪ್ರಕರಣದ ತನಿಖೆ ನಡೆಸಿದ ಆಂತರಿಕ ಸಮಿತಿಗೆ ಕಾನೂನು ಮಾನ್ಯತೆ ಇಲ್ಲ: ಉಪರಾಷ್ಟ್ರಪತಿ ಧನಕರ್

ನ್ಯಾಯಮೂರ್ತಿಗಳ ಅಧಿಕೃತ ನಿವಾಸದಲ್ಲಿ ಆ ಹಣ ಹೇಗೆ ಬಂತು? ಅದು ಯಾರಿಗೆ ಸೇರಿದ್ದು? ಎಫ್‌ಐಆರ್ ದಾಖಲಾಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂಬುದಾಗಿ ಅವರು ಹೇಳಿದರು.

 ನ್ಯಾಯಮೂರ್ತಿಗಳನ್ನು ನಿವೃತ್ತಿಯ ನಂತರ ಬೇರೆ ಹುದ್ದೆಗಳಿಗೆ ನೇಮಕ ಮಾಡುತ್ತಿರುವ ಪ್ರವೃತ್ತಿಯನ್ನು ಟೀಕಿಸಿದ ಧನಕರ್‌ ಅವರು ಅಂತಹ ನೇಮಕಾತಿಗಳು ಆಯ್ದ ರೀತಿಯಲ್ಲಿ ನಡೆದಾಗ ಪ್ರೋತ್ಸಾಹಕ ಮಾರ್ಗಗಳು ತೆರೆದುಕೊಂದು ನಿಷ್ಪಕ್ಷಪಾತ ನ್ಯಾಯಾಂಗಕ್ಕೆ ಕಾರಣವಾಗುತ್ತದೆ ಎಂದರು.

Kannada Bar & Bench
kannada.barandbench.com