ಮಹಾಭಾರತದ ದ್ರೌಪದಿಯಂತಹ ಕತೆಗಳ ಹೊರತಾಗಿಯೂ ಮಹಿಳೆಯರನ್ನು ಪುರುಷರ ಸ್ವತ್ತಿನಂತೆಯೇ ನೋಡಲಾಗುತ್ತಿದೆ: ದೆಹಲಿ ಹೈಕೋರ್ಟ್

ಐಪಿಸಿ ಸೆಕ್ಷನ್ 497ರ ಅಡಿಯಲ್ಲಿ ವ್ಯಭಿಚಾರದ ಆರೋಪ ಒಳಗೊಂಡ 2010ರ ಕ್ರಿಮಿನಲ್ ದೂರಿನ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.
Delhi High Court
Delhi High Court
Published on

ವ್ಯಭಿಚಾರವನ್ನು ಅಪರಾಧೀಕರಿಸುವ ಐಪಿಸಿ ಸೆಕ್ಷನ್‌ 497 ಅನ್ನು 2018ರಲ್ಲಿ ರದ್ದುಗೊಳಿಸಲಾಗಿದ್ದು ಆ ಸೆಕ್ಷನ್‌ನಡಿ 2010ರಲ್ಲೇ ದಾಖಲಾಗಿದ್ದ ಪ್ರಕರಣವೊಂದರಲ್ಲಿ ವ್ಯಭಿಚಾರ ಆರೋಪ ಹೊತ್ತಿದ್ದ ವ್ಯಕ್ತಿಯನ್ನು ಈಚೆಗೆ ದೆಹಲಿ ಹೈಕೋರ್ಟ್‌ ಖುಲಾಸೆಗೊಳಿಸಿದೆ. ಈ ವೇಳೆ ನ್ಯಾಯಾಲಯವು ಮಹಾಭಾರತದ ದ್ರೌಪದಿಯಂತಹ ನಿದರ್ಶನಗಳ ಹೊರತಾಗಿಯೂ ಮಹಿಳೆಯರನ್ನು ಸ್ತ್ರೀ ದ್ವೇಷಿ ಮನಸ್ಥಿತಿಯು ತಮ್ಮ ಸ್ವತ್ತಿನಂತೆಯೇ ನೋಡುವುದರ ವಿರುದ್ಧ ಎಚ್ಚರಿಕೆ ನೀಡಿತು.

ಮಹಾಭಾರತದಲ್ಲಿ ದ್ರೌಪದಿಯ ದುಃಸ್ಥಿತಿ ಮತ್ತು ನಂತರದ ಪರಿಣಾಮಗಳನ್ನು ಉತ್ತಮವಾಗಿ ದಾಖಲಿಸಲಾಗಿದ್ದರೂ, ಮಹಿಳೆಯರನ್ನು ತಮ್ಮ ಸ್ವತ್ತಿನಂತೆ ಕಾಣುವ ಸ್ತ್ರೀದ್ವೇಷಿ ಮತ್ತು ಪಿತೃಪ್ರಧಾನ ಮನಸ್ಥಿತಿ ನಮ್ಮ ಸಮಾಜದಲ್ಲಿ ಮುಂದುವರೆದಿದೆ ಎಂದು ಏಪ್ರಿಲ್ 17ರಂದು ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ತಿಳಿಸಿದ್ದಾರೆ.

Also Read
ಮಧ್ಯಂತರ ಜೀವನಾಂಶ ನೀಡದಿರಲು ಪತ್ನಿಯ ವ್ಯಭಿಚಾರ ಕುರಿತಾದ ಸಾಮಾಜಿಕ ಮಾಧ್ಯಮ ಸಾಕ್ಷಿ ಅವಲಂಬಿಸಬಹುದು: ಪಂಜಾಬ್ ಹೈಕೋರ್ಟ್

"ಮಹಿಳೆಯನ್ನು ಗಂಡನ ಆಸ್ತಿ ಎಂದು ಪರಿಗಣಿಸಿದರೆ ಆಗುವ ವಿನಾಶಕಾರಿ ಪರಿಣಾಮಗಳನ್ನು ಮಹಾಭಾರತದಲ್ಲಿ ಉತ್ತಮವಾಗಿ ದಾಖಲಿಸಲಾಗಿದೆ. ದ್ರೌಪದಿಯನ್ನು ಸ್ವಂತ ಪತಿ ಯುಧಿಷ್ಠಿರ ಪಣಕ್ಕಿಟ್ಟ. ಅವನ ನಾಲ್ವರು ಸಹೋದರರು ಮೂಕ ಪ್ರೇಕ್ಷಕರಾಗಿದ್ದರು, ತನ್ನ ಘನತೆಗಾಗಿ ಪ್ರತಿಭಟಿಸಲು ದ್ರೌಪದಿಗೆ ಧ್ವನಿ ಇರಲಿಲ್ಲ. ಜೂಜಿನಲ್ಲಿ ಪಾಂಡವರು ಸೋತು ದ್ರೌಪದಿ ಕೌರವರ ತೊತ್ತಾದಳು. ನಂತರ ಮಹಾಭಾರತ ಯುದ್ಧ ನಡೆದು ಸಾಮೂಹಿಕ ಜೀವಹಾನಿ ಉಂಟಾಯಿತು. ಕುಟುಂಬದ ಅನೇಕರು ನಾಶವಾದರು. ಮಹಿಳೆಯನ್ನು ಆಸ್ತಿಯಾಗಿ ಪರಿಗಣಿಸುವ ಅಸಂಬದ್ಧತೆಯ ಪರಿಣಾಮ ಹೇಳುವ ಅಂತಹ ಕತೆ ಇದ್ದರೂ ಜೋಸೆಫ್ ಶೈನ್ ಪ್ರಕರಣದಲ್ಲಿ ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುತ್ತಿದ್ದ ಐಪಿಸಿ ಸೆಕ್ಷನ್‌ 497 ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಘೋಷಿಸಿದ ನಂತರವೇ ನಮ್ಮ ಸಮಾಜದ ಸ್ತ್ರೀ ದ್ವೇಷಿ ಮನಸ್ಥಿತಿಗೆ ಇದು ಅರಿವಾಯಿತು” ಎಂದು ನ್ಯಾಯಾಲಯ ಹೇಳಿದೆ.

ಐಪಿಸಿಯ ಸೆಕ್ಷನ್ 497 ವ್ಯಭಿಚಾರದ ಅಪರಾಧವನ್ನು ಅಪರಾಧೀಕರಿಸುತ್ತಿತ್ತು. ಆದರೆ ವಿವಾಹಿತ ಮಹಿಳೆ ಪುರುಷನೊಂದಿಗೆ ಸಂಬಂಧ ಹೊಂದಿದ್ದರೆ ಮಾತ್ರ ಅದು ವ್ಯಭಿಚಾರವಾಗುತ್ತಿತ್ತು ಅದೇ ಒಬ್ಬ ಪತಿ ಮಹಿಳೆಯೊಂದಿಗೆ ಅಂತಹ ಸಂಬಂಧ ಹೊಂದಿದ್ದರೆ ಅದು ಅಪರಾಧವಾಗುತ್ತಿರಲಿಲ್ಲ. ಮಹಿಳೆಯರನ್ನು ಸ್ವತ್ತು ಇಲ್ಲವೇ ಸರಕು  ಎನ್ನುವುದು ಊಹೆಯನ್ನು ಆಧರಿಸಿರುತ್ತದೆ ಎಂದ ಸುಪ್ರೀಂ ಕೋರ್ಟ್‌ 2018ರಲ್ಲಿ, ಐಪಿಸಿ ಸೆಕ್ಷನ್‌ 497ರ ಅಡಿಯ ಅಪರಾಧವಾದ ವ್ಯಭಿಚಾರ ಅಸಾಂವಿಧಾನಿಕ ಎಂದು ಘೊಷಿಸಿತ್ತು. ಸುಪ್ರೀಂ ಕೋರ್ಟ್‌ ನೀಡಿದ ಆ ತೀರ್ಪು 2010ರಲ್ಲಿ ದಾಖಲಾಗಿರುವ ಪ್ರಸ್ತುತ ಪ್ರಕರಣಕ್ಕೂ ಪೂರ್ವಾನ್ವಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ತೀರ್ಪು ನೀಡಿತು.

Also Read
ಮಗುವನ್ನು ಸುಪರ್ದಿಗೆ ನೀಡದಿರಲು ವ್ಯಭಿಚಾರ ಕಾರಣವಾಗದು: ಬಾಂಬೆ ಹೈಕೋರ್ಟ್

ತನ್ನ ಮುಂದಿದ್ದ ಮೇಲ್ಮನವಿಯ ಕುರಿತು ಆದೇಶ ನೀಡಿದ ಹೈಕೋರ್ಟ್‌, ಪ್ರಸಕ್ತ ಪ್ರಕರಣದಲ್ಲಿ ಲಖನೌನ ಹೋಟೆಲ್‌ನಲ್ಲಿ ಪತ್ನಿಯು ಪರ ಪುರುಷನೊಂದಿಗೆ ಒಂದೇ ಕೋಣೆಯಲ್ಲಿ ರಾತ್ರಿಯಿಡೀ ಉಳಿದುಕೊಂಡಿದ್ದಾಳೆ ಎಂಬ ಕಾರಣಕ್ಕೆ ಲೈಂಗಿಕ ಸಂಭೋಗ ನಡೆದಿದೆ ಎಂಬ ಊಹೆಗೆ ಅವಕಾಶವಿಲ್ಲ ಎಂದು ವಿಚಾರಣಾ ನ್ಯಾಯಾಲಯ ಸರಿಯಾಗಿಯೇ ತೀರ್ಪು ನೀಡಿದೆ ಎಂದಿತು. ಆದ್ದರಿಂದ ಸಮನ್ಸ್‌ ಆದೇಶ ರದ್ದುಗೊಳಿಸಿದ ಅದು ವ್ಯಭಿಚಾರ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಕ್ರಿಮಿನಲ್‌ ಪ್ರಕರಣದಿಂದ ಮುಕ್ತಗೊಳಿಸಿತು.

“ಸೆಕ್ಷನ್ 497ರಡಿ  ಅಪರಾಧ ಎನಿಸಿಕೊಳ್ಳಲು ವ್ಯಭಿಚಾರದ ಕೃತ್ಯದಲ್ಲಿ ಭಾಗಿಯಾಗಿರಬೇಕು ಎಂದರೆ ಅವರು ಲೈಂಗಿಕ ಸಂಭೋಗ ನಡೆಸಿರಬೇಕು. ಅದಕ್ಕೆ ಸಂಬಂಧಿಸಿದಂತೆ ಯಾವುದೇ ಮೌಖಿಕ ಇಲ್ಲವೇ ದಾಖಲು ಸಾಕ್ಷ್ಯಗಳು ಇಲ್ಲದಿದ್ದರೂ ಅರ್ಜಿದಾರರಿಗೆ ಊಹೆಯನ್ನಾಧರಿಸಿ ಸಮನ್ಸ್‌ ನೀಡಲಾಗಿದೆ. ಆದ್ದರಿಂದ ಐಪಿಸಿ ಸೆಕ್ಷನ್‌ 497ರ ಅಡಿ ಅಗತ್ಯ ಅಂಶಗಳು ಸಾಬೀತಾಗಿಲ್ಲ” ಎಂದು ನ್ಯಾಯಾಲಯ ವಿವರಿಸಿತು.

ಅಲ್ಲದೆ, ವ್ಯಭಿಚಾರವನ್ನು ಅಪರಾಧೀಕರಿಸುತ್ತಿದ್ದ ಸೆಕ್ಷನ್‌ 497ಅನ್ನು ಜೋಸೆಫ್‌ ಶೈನ್‌ ಪ್ರಕರಣದ 2018ರ ತೀರ್ಪಿನಲ್ಲಿ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ರದ್ದುಪಡಿಸಿರುವುದು 2010ರಲ್ಲಿ ದಾಖಲಾಗಿರುವ ಪ್ರಸಕ್ತ ಪ್ರಕರಣಕ್ಕೂ ಪೂರ್ವಾನ್ವಯವಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತು. 2018ರ ತೀರ್ಪು ಪೂರ್ವಾನ್ವಯವಾಗುತ್ತದೆ ಎನ್ನುವ ವಿಚಾರವನ್ನು ಅದು ಖಚಿತವಾಗಿ ತಿಳಿಸಿತು

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Attachment
PDF
Adultery_Order__1_
Preview
Kannada Bar & Bench
kannada.barandbench.com