Supreme Court, Rohingya refugees
Supreme Court, Rohingya refugees

'ಅಕ್ರಮ ವಲಸಿಗರಿಗೆ ರತ್ನಗಂಬಳಿ ಹಾಸಬೇಕೆ?' ಕಾಣೆಯಾದ ರೋಹಿಂಗ್ಯಾಗಳ ಕುರಿತ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಅಸಮಾಧಾನ

"ಉತ್ತರ ಭಾರತದ ಸುತ್ತ ಸೂಕ್ಷ್ಮ ಗಡಿ ಇದೆ, ದೇಶದೊಳಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ..." ಎಂದು ಸಿಜೆಐ ಕಾಂತ್ ಹೇಳಿದರು.
Published on

ಅಧಿಕಾರಿಗಳು ಬಂಧಿಸಿದ್ದ ಐವರು ರೋಹಿಂಗ್ಯ ವಲಸಿಗರ ಕಣ್ಮರೆ ಪ್ರಕರಣ ಪ್ರಶ್ನಿಸಿದ್ದ ಅರ್ಜಿಯನ್ನು ಮಂಗಳವಾರ ಆಲಿಸಿದ ಸುಪ್ರೀಂ ಕೋರ್ಟ್‌ ಭಾರತಕ್ಕೆ ಅಕ್ರಮವಾಗಿ ವಲಸೆ ಬರುವವರಿಗೆ ಅವಕಾಶ ಕಲ್ಪಿಸಲು ಕಾನೂನನ್ನು ಎಷ್ಟರ ಮಟ್ಟಿಗೆ ಹಿಗ್ಗಿಸಬೇಕು ಎಂದು ಖಾರವಾಗಿ ಪ್ರಶ್ನಿಸಿತು.

ಭಾರತ  ಸೂಕ್ಷ್ಮ ಗಡಿ ಸಮಸ್ಯೆ ಹೊಂದಿರುವ ದೇಶ ಎಂದು ಸಿಜೆಐ ಸೂರ್ಯಕಾಂತ್‌ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಆತಂಕ ವ್ಯಕ್ತಪಡಿಸಿತು.

Also Read
ರೋಹಿಂಗ್ಯಾ ನಿರಾಶ್ರಿತರನ್ನು ಕೇಂದ್ರ ಸರ್ಕಾರ ಸಮುದ್ರಪಾಲು ಮಾಡಿದ ಆರೋಪ: ಪುರಾವೆ ಕೇಳಿದ ಸುಪ್ರೀಂ

"ಭಾರತೀಯ ಪ್ರಜೆಗಳ ಅಗತ್ಯ ಬಲಿಕೊಟ್ಟು ವಲಸಿಗರಿಗೆ ದೇಶದ ಸಂಪನ್ಮೂಲ ಬಳಸಲು ಅವಕಾಶ ನೀಡಬೇಕೇ ಎಂದು ಸಿಜೆಐ ಕಾಂತ್ ಪ್ರಶ್ನಿಸಿದರು. ಉತ್ತರ ಭಾರತದ ಸುತ್ತ ಸೂಕ್ಷ್ಮ ಗಡಿ ಇದೆ, ದೇಶದೊಳಗೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆ ಎಂದು ಭಾವಿಸುತ್ತೇವೆ. ಹಾಗಿದ್ದರೂ ನೀವು ವಲಸಿಗರಿಗೆ ರತ್ನಗಂಬಳಿ ಹಾಸಲು ಬಯಸುತ್ತೀರಾ? ವಲಸಿಗರು ಸುರಂಗದ ಮೂಲಕ ನುಸುಳಿ ಬಂದು ಆಹಾರ, ವಸತಿ, ಮಕ್ಕಳಿಗೆ ಶಿಕ್ಷಣ ಇತ್ಯಾದಿ ಸೌಲಭ್ಯ ಬಯಸುತ್ತೀರಿ. ನಾವು ಕಾನೂನನ್ನು ಈ ರೀತಿ ಹಿಗ್ಗಿಸಬೇಕೆ? ನಮ್ಮ ಬಡ ಮಕ್ಕಳಿಗೆ ಈ ಸೌಲಭ್ಯ ಪಡೆಯುವ ಹಕ್ಕಿಲ್ಲವೇ? ಬಂಧಿತ ವಲಸಿಗರ ಬಿಡುಗಡೆಗಾಗಿ ಹೇಬಿಯಸ್ ಕಾರ್ಪಸ್ ಆಲಿಸಲು ಕೋರುವುದು, ಇತ್ಯಾದಿಯೆಲ್ಲಾ ಅತಿ ಭ್ರಾಂತಿ ಎನಿಸುತ್ತದೆ," ಎಂದು ಸಿಜೆಐ ಹೇಳಿದರು.

Also Read
ರೋಹಿಂಗ್ಯಾ ಮಕ್ಕಳಿಗೆ ಶಿಕ್ಷಣ: ತಾರತಮ್ಯ ಮಾಡುವಂತಿಲ್ಲ ಎಂದ ಸುಪ್ರೀಂ ಕೋರ್ಟ್

ಈ ಹಂತದಲ್ಲಿ ಅರ್ಜಿದಾರ ತಾನು ಪ್ರಶ್ನಿಸಿರುವುದು ವಲಸಿಗರು ನಾಪತ್ತೆಯಾಗಿರುವ ವಿಚಾರವನ್ನೇ ವಿನಾ ಅವರನ್ನು ದೇಶದಿಂದ ಗಡಿಪಾರು ಮಾಡುವ ಕುರಿತಂತೆ ಅಲ್ಲ ಎಂದರು. ಆಗ ನ್ಯಾಯಾಲಯ ಆ ವ್ಯಕ್ತಿಗಳು ನಿರಾಶ್ರಿತರು ಎನ್ನಲು ಆಧಾರವಿದೆಯೇ ಎಂದು ಕೇಳಿತು. ಯಾರಾದರೂ ನುಸುಳುಕೋರರಿದ್ದರೆ ಅವರನ್ನು ಒಳಗೆ ಇರಿಸಿಕೊಳ್ಳುವುದು ನಮ್ಮ ಹೊಣೆಗಾರಿಕೆಯೇ ಎಂದು ಸಿಜೆಐ ಕೇಳಿದರು.

ಆದರೆ ಅವರನ್ನು ನಾವು ಹೊರಗೆ ಸಾಗಣೆ ಮಾಡಬಾರದು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಈ ಹಂತದಲ್ಲಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅರ್ಜಿ ಸಲ್ಲಿಸಲು ಅರ್ಹತೆ ಇಲ್ಲದವರೊಬ್ಬರು ಮನವಿ ಸಲ್ಲಿಸಿದ್ದಾರೆ ಎಂದರು.

ಅಂತಿಮವಾಗಿ ನ್ಯಾಯಾಲಯ ಡಿಸೆಂಬರ್ 16 ರಂದು ಪ್ರಕರಣವನ್ನು ಮತ್ತಷ್ಟು ಆಲಿಸುವುದಾಗಿ ಹೇಳಿತು.

Kannada Bar & Bench
kannada.barandbench.com