ಬಾಲಿವುಡ್‌ನ ಪ್ರತಿಷ್ಠಿತರ ವಿರುದ್ಧ ಮಾನಹಾನಿಕಾರಕ ಅಂಶಗಳನ್ನು ಪ್ರಸಾರ ಮಾಡುವುದಿಲ್ಲ ಮತ್ತು ಅವುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿ ಪಡಿಸುವಂತೆ ಸುದ್ದಿ ವಾಹಿನಿಗಳಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಬಾಲಿವುಡ್ ವಿರುದ್ಧ ರಿಪಬ್ಲಿಕ್ ಟಿವಿ ಮತ್ತು ಟೈಮ್ಸ್ ನೌ ವರದಿಗಾರರು ಮಾಡುತ್ತಿರುವ ಮಾನಹಾನಿಕರ ಹೇಳಿಕೆಗಳನ್ನು ತಡೆಯುವಂತೆ ಕೋರಿ 38 ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಇದೇ ವೇಳೆ ಕೇಬಲ್ ಟಿವಿ ನೆಟ್‌ವರ್ಕ್ ನಿಯಮಗಳ ಅಡಿ ರೂಪುಗೊಂಡಿರುವ ಕಾರ್ಯಕ್ರಮ ಸಂಹಿತೆಯನ್ನು ಪಾಲಿಸುವುದಾಗಿ ಮಾಧ್ಯಮಗಳು ನೀಡಿದ ಭರವಸೆಯನ್ನು ಕೂಡ ನ್ಯಾಯಾಲಯ ದಾಖಲಿಸಿಕೊಂಡಿದೆ. ಮಾಧ್ಯಮಗಳು ಮಾನಹಾನಿಕಾರಕ ವರದಿ ನೀಡುವುದನ್ನು ತಡೆಯಬೇಕೆಂದು ದೂರುದಾರರು ನ್ಯಾಯಾಲಯದ ಮೊರೆ ಹೋದಾಗ ನ್ಯಾ. ರಾಜೀವ್ ಶಕ್ದೇರ್ ಅವರಿದ್ದ ಪೀಠ ʼಒಬ್ಬ ವ್ಯಕ್ತಿ ಕಾನೂನು ಅನುಸರಿಸುವುದಿಲ್ಲ ಎಂದು ಹೇಳುವಂತಿಲ್ಲʼ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು. ಜೊತೆಗೆ ಮಾಧ್ಯಮಗಳು ತಮ್ಮ (ಸಾಮಾಜಿಕ ಮಾಧ್ಯಮ) ವೇದಿಕೆಗಳಲ್ಲಿ ಯಾವುದೇ ಮಾನಹಾನಿಕಾರಕ ಅಂಶಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಿತು.
ಇದೇ ವೇಳೆ ನ್ಯಾ. ಶಕ್ದೇರ್ ಅವರು ಕಪ್ಪು ಬಿಳುಪಿನ ದೂರದರ್ಶನದ ದಿನಗಳನ್ನು ನೆನೆದರು. ʼದೂರದರ್ಶನ ಬಹಳ ಸಪ್ಪೆ ಎಂದು ನಾವು ತಿಳಿದಿದ್ದೆವು. ಆದರೆ ಆಗ ಉತ್ತಮ ಪ್ರಸಾರಕರು ಇದ್ದರು… ನಾನು ಕಪ್ಪು ಬಿಳುಪಿನ ಬಗ್ಗೆ ಯೋಚಿಸುತ್ತಿದ್ದೆ, ಡಿಡಿ ನಿಜಕ್ಕೂ ಬಹಳ ಉತ್ತಮವಾಗಿತ್ತುʼ ಎಂದು ಅವರು ಹೇಳಿದ್ದಾರೆ.
ʼಟೈಮ್ಸ್ ನೌʼ ಪರ ವಕೀಲ ಸಂದೀಪ್ ಸೇಠಿ ಅವರು ವಾದ ಮಂಡಿಸುತ್ತಿದ್ದ ವೇಳೆ ನ್ಯಾಯಾಲಯ "ವರದಿ ಮಾಡುವ ವಿಧಾನವನ್ನು ಬದಲಿಸಲು ಏನು ಮಾಡಬೇಕು... ಸ್ವಲ್ಪ ಮಟ್ಟಿಗೆ ತಿಳಿಯಾಗಬೇಕಾದ ಅಗತ್ಯವಿದೆ. ಎನ್‌ಡಿಎಸ್‌ಎ ಆದೇಶಗಳಿವೆ. ಆದರೆ ಸುದ್ದಿವಾಹಿನಿಗಳು ಅದನ್ನು ಅನುಸರಿಸುತ್ತಿಲ್ಲ ಎಂದು ತೋರುತ್ತದೆ…" ಎಂದು ಅಭಿಪ್ರಾಯಪಟ್ಟಿತು.
ʼರಾಜಕುಮಾರಿ ಡಯಾನಾ ಸಾವನ್ನಪ್ಪಲು ಕಾರಣ ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಆಕೆ ಓಡಿಹೋದದ್ದು. ನೀವು ಹೀಗೆಯೇ ಮುಂದುವರೆಯಲು ಸಾಧ್ಯವಿಲ್ಲ. ಕೊನೆಗೆ ನ್ಯಾಯಾಲಯಗಳಿಂದಲೇ ನಿಯಂತ್ರಣ ನಡೆಯಬೇಕಿದೆ” ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ರಿಪಬ್ಲಿಕ್ ಟಿವಿ ಪರ ವಾದ ಮಂಡಿಸಿದ ಮಾಳವಿಕಾ ತ್ರಿವೇದಿ ಅವರು ಮಾಧ್ಯಮಗಳ ಕಾರ್ಯಗಳನ್ನು ಸಮರ್ಥಿಸಿಕೊಂಡರು. ಆಗ ನ್ಯಾ. ಶಕ್ದೇರ್ ಅವರು ʼಮಧ್ಯಮಗಳು ಅತ್ಯುನ್ನತ ಕೆಲಸ ಮಾಡಿವೆ. ಅದನ್ನು ಹೇಳುವ ಮೊದಲಿಗ ನಾನು. ನೀವು ವರದಿ ಮಾಡಲು ಸಾಧ್ಯವಿಲ್ಲ ಎಂದು ನಾನು ಹೇಳುತ್ತಿಲ್ಲ ಎಂಬ ನಿಟ್ಟಿನಿಂದ ಆರಂಭಿಸಿ… ನಿರೂಪಣೆಯಲ್ಲಿ ಸದ್ವಿಚಾರ ಕಾಣುತ್ತಿಲ್ಲ. ನೀವು ಪ್ರಸಾರಕರು…ʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಕೀಲ ಜತಿಂದರ್ ಕುಮಾರ್ ಸೇಠಿ ಅವರು ʼಮಾಧ್ಯಮಗಳು ವಾಸ್ತವ ಸಂಗತಿಯನ್ನು ವರದಿ ಮಾಡುತ್ತವೆ ಎಂದು ಹೇಳಿದಾಗ, ನ್ಯಾಯಾಲಯ ʼಅಲ್ಲಿ ಬಳಸುವ ಭಾಷೆ ನಿಮಗೆ ಹೇಗೆ ಕಾಣುತ್ತದೆ… ನೇರಪ್ರಸಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಭಾವಾವೇಶದಲ್ಲಿ ಅವಾಚ್ಯ ಶಬ್ದಗಳನ್ನು ಬಳಸುತ್ತಾರೆ. ನೀವು ಅವುಗಳಿಗೆ ಉತ್ತೇಜನ ನೀಡುತ್ತಿದ್ದರೆ ಇದೇ ಆಗುವುದು...” ಎಂದು ಕಳವಳ ವ್ಯಕ್ತಪಡಿಸಿತು.
ಇದಕ್ಕೂ ಮುನ್ನ ಬಾಲಿವಡ್ ನಿರ್ಮಾಣ ಸಂಸ್ಥೆಗಳ ಪರವಾಗಿ ವಾದ ಮಂಡಿಸಿದ ರಾಜೀವ್ ನಾಯರ್ ಅವರು ಮಾದಕವಸ್ತು ಮಾಫಿಯಾ ಮತ್ತು ಸಿನಿಮಾ ಉದ್ಯಮದೊಂದಿಗೆ ಸಂಬಂಧ ಕಲ್ಪಿಸಿ ಪ್ರಸಾರ ಮಾಡಿದ ಕಾರ್ಯಕ್ರಮಗಳ ವಿವರಗಳನ್ನು ನ್ಯಾಯಾಲಯದ ಮುಂದಿಟ್ಟರು. ಅಲ್ಲದೆ ʼಈಗ ಶಾರೂಖ್ ಖಾನ್ ಅವರಿಗೂ ಪಾಕಿಸ್ತಾನ ಮತ್ತು ಐಎಸ್‌ಐಗೂ ಸಂಬಂಧವಿದೆ ಎಂದು ಆರೋಪಿಸಲಾಗುತ್ತಿದೆ.ʼ ಎಂಬುದನ್ನು ಪೀಠದ ಗಮನಕ್ಕೆ ತಂದರು. ʼಟೈಮ್ಸ್ ನೌ ವಾಹಿನಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಟರ ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸಿ ವಾಟ್ಸಪ್ ಸಂದೇಶಗಳನ್ನು ಬಳಸುತ್ತಿದೆʼ ಎಂದು ಆರೋಪಿಸಿದರು. ಜೊತೆಗೆ ನಟಿ ದೀಪಿಕಾ ಪಡುಕೋಣೆ ಅವರನ್ನು ಬೆನ್ನತ್ತಿದ ರಿಪಬ್ಲಿಕ್ ಕ್ರಮವನ್ನು ಕೂಡ ಪ್ರಸ್ತಾಪಿಸಿದರು.
ಇದೇ ವೇಳೆ ಫಿರ್ಯಾದಿಗಳ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ʼಸುದ್ದಿ ಮಾಧ್ಯಮಗಳ ಒಂದು ನಿರ್ದಿಷ್ಟ ವರ್ಗ ಪತ್ರಿಕೋದ್ಯಮ ತತ್ವಗಳಿಗೆ ತಿಲಾಂಜಲಿ ನೀಡಿದಂತೆ ತೋರುತ್ತದೆʼ ಎಂದ ಅವರು ಮಾಧ್ಯಮ ವಿಚಾರಣೆ ವಿರುದ್ಧ ಎನ್‌ಎಸ್‌ಬಿಎ ಹೊರಡಿಸಿದ ಆದೇಶಗಳನ್ನು ಪ್ರಸ್ತಾಪಿಸಿದರು.
ಹಿರಿಯ ವಕೀಲರಾದ ಅರವಿಂದ್ ನಿಗಮ್, ಸಜನ್ ಪೂವಯ್ಯ ಹಾಗೂ ಕಪಿಲ್ ಸಿಬಲ್ ಅವರು ಕ್ರಮವಾಗಿ ಯೂಟ್ಯೂಬ್, ಟ್ವಿಟರ್ ಹಾಗೂ ಫೇಸ್‌ಬುಕ್‌ಗಳನ್ನು ಪ್ರಕರಣದ ಪಕ್ಷಕಾರರನ್ನಾಗಿ ಮಾಡುವ ಅಗತ್ಯವನ್ನು ಪ್ರಶ್ನಿಸಿದರು. ಪಕ್ಷಕಾರನಾಗಲು ಗೂಗಲ್ ಮುಂದೆ ಬಂದಿರುವುದರಿಂದ ಯೂಟ್ಯೂಬ್ ಪಕ್ಷಕಾರನಾಗಬೇಕಾದ ಅಗತ್ಯವಿಲ್ಲ ಎಂದು ಪೀಠ ಅಭಿಪ್ರಾಯಪಟ್ಟಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಪಕ್ಷಕಾರರಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿದೆ.