Arvind Kejriwal and Delhi High Court  
ಸುದ್ದಿಗಳು

ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ

ಇ ಡಿ ನೀಡಿದ ಸಾಕ್ಷ್ಯಗಳ ಕುರಿತಂತೆ ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಬಳಸಿಲ್ಲ. ಪ್ರಕರಣ ವಾದಿಸಲು ಇ ಡಿಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ನ್ಯಾ. ಸುಧೀರ್ ಕುಮಾರ್ ಜೈನ್ ಹೇಳಿದ್ದಾರೆ.

Bar & Bench

ಜಾರಿ ನಿರ್ದೇಶನಾಲಯ (ಇ ಡಿ) ತನಿಖೆ ನಡೆಸುತ್ತಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ದೆಹಲಿ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.

ಇ ಡಿ ನೀಡಿದ ಸಾಕ್ಷ್ಯಗಳ ಕುರಿತಂತೆ ವಿಚಾರಣಾ ನ್ಯಾಯಾಲಯ ತನ್ನ ವಿವೇಚನೆ ಬಳಸಿಲ್ಲ.  ಪ್ರಕರಣ ವಾದಿಸಲು ಇ ಡಿಗೆ ಸೂಕ್ತ ಅವಕಾಶ ನೀಡಿಲ್ಲ ಎಂದು ನ್ಯಾ. ಸುಧೀರ್ ಕುಮಾರ್ ಜೈನ್ ಹೇಳಿದ್ದಾರೆ. 

ಕೇಜ್ರಿವಾಲ್‌ಗೆ ಜಾಮೀನು ಮಂಜೂರು ಮಾಡಿ ಜೂನ್ 20ರಂದು ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಇ ಡಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.

"ವಿಚಾರಣಾ ನ್ಯಾಯಾಲಯದ ಅವಲೋಕನ ಸಂಪೂರ್ಣವಾಗಿ ನ್ಯಾಯಸಮ್ಮತವಲ್ಲದ ಸಂಗತಿಯಾಗಿದೆ ಮತ್ತು ವಿಚಾರಣಾ ನ್ಯಾಯಾಲಯ ಪ್ರಕರಣ ಕುರಿತಂತೆ ತನ್ನ ವಿವೇಚನೆ ಬಳಸಿಲ್ಲ ಎಂದು ತೋರುತ್ತದೆ. ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ವಾದಿಸಲು ಇ ಡಿಗೆ ರಜಾಕಾಲೀನ (ವಿಚಾರಣಾ) ನ್ಯಾಯಾಲಯ ಸಾಕಷ್ಟು ಅವಕಾಶ ನೀಡಬೇಕು" ಎಂದು ಹೈಕೋರ್ಟ್ ಹೇಳಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 45ರ ಅಡಿಯಲ್ಲಿ ಜಾಮೀನಿಗೆ ಅವಳಿ ಷರತ್ತುಗಳ ಕುರಿತಾದ ವಾದಕ್ಕೆ ವಿಚಾರಣಾ ನ್ಯಾಯಾಲಯ  ಸೂಕ್ತವಾಗಿ ಪ್ರತಿಕ್ರಿಯಿಸಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಇದಲ್ಲದೆ, ಕೇಜ್ರಿವಾಲ್ ಅವರ ಅಂತಹ ಹಕ್ಕನ್ನು ಹೈಕೋರ್ಟ್ ಸ್ವತಃ ಹಿಂದಿನ ಆದೇಶದಲ್ಲಿ ತಿರಸ್ಕರಿಸಿದ್ದರಿಂದ ಇ ಡಿ ಕಡೆಯಿಂದ ಲೋಪ ಉಂಟಾಗಿದೆ ಎನ್ನುವ ವಿಚಾರಣಾ ನ್ಯಾಯಾಲಯದ ತೀರ್ಮಾನ  ತಪ್ಪಾದುದು ಎಂದು ಹೈಕೋರ್ಟ್ ಹೇಳಿದೆ.

ವಿಚಾರಣಾ ನ್ಯಾಯಾಲಯವು ಜೂನ್ 20ರಂದು ಕೇಜ್ರಿವಾಲ್‌ ಅವರಿಗೆ ಜಾಮೀನು ಮಂಜೂರು ಮಾಡಿತ್ತು. ₹ 1 ಲಕ್ಷ ಜಾಮೀನು ಬಾಂಡ್‌ ಪಡೆದು ಅವರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು.

ಕೇಜ್ರಿವಾಲ್‌ ಅವರ ಅಪರಾಧದ ಬಗ್ಗೆ ನೇರ ಸಾಕ್ಷ್ಯ ನೀಡಲು ಇ ಡಿ ವಿಫಲವಾಗಿದ್ದು ಇನ್ನೊಬ್ಬ ಆರೋಪಿ ವಿಜಯ್ ನಾಯರ್ ಕೇಜ್ರಿವಾಲ್ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅದು ಸಾಬೀತುಪಡಿಸಿಲ್ಲ ಎಂಬುದಾಗಿ ವಿಚಾರಣಾ ನ್ಯಾಯಾಲಯವಾದ ರೌಸ್‌ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶೆ  ನಿಯಾಯ್ ಬಿಂದು ಜಾಮೀನು ನೀಡುವ ವೇಳೆ ತಿಳಿಸಿದ್ದರು.  ಇ ಡಿ ಕೇಜ್ರಿವಾಲ್‌ ಅವರ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಅವರು ಹೇಳಿದ್ದರು.

ಜಾಮೀನು ಪ್ರಶ್ನಿಸಿ ಇ ಡಿ ತಕ್ಷಣವೇ ದೆಹಲಿ ಹೈಕೋರ್ಟ್‌ ಮೊರೆ ಹೋಗಿತ್ತು. ಪ್ರಕರಣದ ತುರ್ತು ವಿಚಾರಣೆ ನಡೆದು ಜೂನ್‌  21ರಂದು ನ್ಯಾಯಮೂರ್ತಿ ಜೈನ್ ಅವರಿದ್ದ ಇದೇ ಪೀಠ  ಜಾಮಿನು ಆದೇಶ ಜಾರಿಗೆ ಎರಡು ದಿನಗಳ ಕಾಲ ಮಧ್ಯಂತರ ತಡೆ ನೀಡಿತ್ತು. ಇಂದು ಇದೇ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶ ನೀಡಿದೆ.

ಈ ಮಧ್ಯೆ ಸೋಮವಾರ ʼಅಂತಿಮ ಆದೇಶ ನೀಡದೆ ಕೇಜ್ರಿವಾಲ್ ಅವರ ಜಾಮೀನಿಗೆ ದೆಹಲಿ ಹೈಕೋರ್ಟ್ ತಡೆ ನೀಡಿರುವುದು ವಾಡಿಕೆಯಲ್ಲಿಲ್ಲದ ಸಂಗತಿʼ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಆದರೆ, ಹೈಕೋರ್ಟ್‌ನ ಅಂತಿಮ ಆದೇಶಕ್ಕಾಗಿ ಕಾಯುವುದಾಗಿ ತಿಳಿಸಿದ್ದ ಸುಪ್ರೀಂ ಕೋರ್ಟ್, ಜೂನ್ 26ಕ್ಕೆ ವಿಚಾರಣೆ ಮುಂದೂಡಿತ್ತು.