ಸುದ್ದಿಗಳು

ಅವರು ಸ್ವಾತಂತ್ರ್ಯವನ್ನು ಜೀವಂತವಾಗಿಟ್ಟರು: ಕಾನೂನು ಲೋಕದ ಆರು ಮಂದಿ ಧೀಮಂತರನ್ನು ನೆನೆದ ನ್ಯಾ. ದೀಪಂಕರ್ ದತ್ತ

Bar & Bench

ಸುಪ್ರೀಂ ಕೋರ್ಟ್‌ನ ದಿವಂಗತ ನ್ಯಾಯಮೂರ್ತಿ ಎಚ್‌ ಆರ್ ಖನ್ನಾ ಅವರ ಸ್ಮರಣಾರ್ಥ ಶನಿವಾರ ನಡೆದ ವಿಚಾರ ಸಂಕಿರಣದಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ದೀಪಂಕರ್ ದತ್ತ ಅವರು ಕಾನೂನು ಲೋಕದ ಆರು ಮಂದಿ ದಿಗ್ಗಜರು ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಈ ಪ್ರತಿಭಾವಂತರು ಸ್ವಾತಂತ್ರ್ಯವನ್ನು ಜೀವಂತವಾಗಿರಿಸಿದರು. ಅವರ ತೀರ್ಪುಗಳಿಂದಾಗಿ ನಾವು ಪಾಲಿಸಬೇಕಾದ ನ್ಯಾಯಶಾಸ್ತ್ರ ಜೀವಂತ ಉಳಿದಿದೆ ಎಂದು ನ್ಯಾಯಮೂರ್ತಿ ದತ್ತಾ ಹೆಮ್ಮೆಪಟ್ಟರು.

ಸಿಎಎನ್ ಪ್ರತಿಷ್ಠಾನ ಶನಿವಾರ ಆಯೋಜಿಸಿದ್ದ ನ್ಯಾ. ಎಚ್ ಆರ್ ಖನ್ನಾ ಸ್ಮಾರಕ 3ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು "ಆಧುನಿಕ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಕಾನೂನು ಲೋಕದ ಧೀಮಂತರು ಮತ್ತು ಅವರ ಕೊಡುಗೆಗಳು" ಎಂಬ ವಿಷಯದ ಕುರಿತು ಮಾತನಾಡಿದರು.

ನ್ಯಾ. ಖನ್ನಾ ಅವರನ್ನು ಪ್ರಜಾಪ್ರಭುತ್ವದ ಸಂರಕ್ಷಕ ಎಂದು ಗುಣಗಾನ ಮಾಡಿದ ಅವರು "ಕಳೆದ ಸಹಸ್ರಮಾನದ 70ರ ದಶಕದಲ್ಲಿ ಆಳುವವರೊಂದಿಗೆ ನಿಷ್ಠುರವಾಗಿ ನಡೆದುಕೊಂಡ ಕಾರಣಕ್ಕೆ ಅವರನ್ನು ಸಂರಕ್ಷಕ ಎಂದು ಕರೆಯಲಾಗುತ್ತದೆ. ಎಡಿಎಂ ಜಬಲ್‌ಪುರ್ ಪ್ರಕರಣದಲ್ಲಿ ತಾನು ವ್ಯಕ್ತಪಡಿಸಿದ ಭಿನ್ನಾಭಿಪ್ರಾಯದಿಂದಾಗಿ ಏನನ್ನು ಕಳೆದುಕೊಳ್ಳಲಿದ್ದೇನೆ ಎಂಬ ಅರಿವಿದ್ದ ಅವರು ದೂರದೃಷ್ಟಿಯುಳ್ಳ ನ್ಯಾಯಮೂರ್ತಿಯಾಗಿದ್ದರು ಎಂದರು.

ಇಬ್ಬರು ನ್ಯಾಯಮೂರ್ತಿಗಳ ಹುದ್ದೆಗಳನ್ನು ಸೂಪರ್‌ಸೀಡ್‌ ಮಾಡಿ ನ್ಯಾಯಮೂರ್ತಿ ಬಿಜನ್ ಮುಖರ್ಜಿಯವರನ್ನು ನೇಮಕ ಮಾಡಲು ಹೊರಟ ಅಂದಿನ ಸರ್ಕಾರದ ನಿರ್ಧಾರವನ್ನು ಸ್ವತಃ ಹುದ್ದೆ ಅಲಂಕರಿಸಬೇಕಿದ್ದ ಬಿಜನ್‌ ಅವರೇ ಸಾರಾಸಗಟಾಗಿ ತಿರಸ್ಕರಿಸಿದ್ದನ್ನು ನ್ಯಾ. ದತ್ತಾ ಸ್ಮರಿಸಿದರು.

ಇದೇ ವೇಳೆ ಸಿಜೆಐ ವೈ ವಿ ಚಂದ್ರ ಚೂಡ್‌ ಅವರ ಕಾರ್ಯ ವೈಖರಿಯನ್ನು ನೆನೆಯುತ್ತಾ ನ್ಯಾ. ದತ್ತ ಅವರು “ನಿವೃತ್ತ ಸಿಜೆಐ ವೈ ವಿ ಚಂದ್ರಚೂಡ್‌ (ಸುಪ್ರೀಂ ಕೋರ್ಟ್‌ ಹಾಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ತಂದೆ) ಅವರಿಗಿಂತಲೂ ಹೃದಯಶ್ರೀಮಂತಿಕೆಯುಳ್ಳ ನ್ಯಾಯಮೂರ್ತಿಗಳನ್ನು ನಾವು ಕಾಣುತ್ತೇವೆಯೇ ಎಂಬುದು ನಮಗೆ ತಿಳಿದಿಲ್ಲ” ಎಂದರು. ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಹೋದ್ಯೋಗಿಗಳೊಂದಿಗೆ ನ್ಯಾ. ವೈ ವಿ ಚಂದ್ರಚೂಡ್‌ ಅವರು ಹೃದಯ ಶ್ರೀಮಂತಿಕೆಯೊಂದಿಗೆ ವರ್ತಿಸುತ್ತಿದ್ದುದನ್ನು ನ್ಯಾ. ಸಬ್ಯಸಾಚಿ ಮುಖರ್ಜಿ ಅವರಿಗೆ ಸಂಬಂಧಿಸಿದ ಘಟನೆಯೊಂದನ್ನು ವಿವರಿಸುತ್ತಾ ಹೇಳಿದರು.

ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಸಾಕಾರಗೊಳ್ಳಲು ನ್ಯಾ ಪಿ ಎನ್‌ ಭಗವತಿ ಅವರು ನೀಡಿದ ಕೊಡುಗೆಗಳನ್ನು ನ್ಯಾ. ದತ್ತಾ ಶ್ಲಾಘಿಸಿದರು. ಭಾರತದಲ್ಲಿ ಮರಣದಂಡನೆಯ ಸಿಂಧುತ್ವ ಕುರಿತಾದ ಭಚನ್ ಸಿಂಗ್ ಪ್ರಕರಣದಲ್ಲಿ ಕಾನೂನು ನೆರವು ಮತ್ತು ಭಿನ್ನ ತೀರ್ಪು ಬರೆದುದ್ದಕ್ಕಾಗಿ ನ್ಯಾ. ಭಗವತಿ ಸದಾ ಸ್ಮರಣಾರ್ಹರು ಎಂದು ಅವರು ತಿಳಿಸಿದರು.

ಇದೇ ವೇಳೆ ವಕೀಲ ಲೋಕದ ದಂತಕತೆ ನಾನಿ ಪಾಲ್ಖಿವಾಲಾ ಅವರ ಕಕ್ಷಿದಾರರಾಗಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂಬುದನ್ನು ಕೇಳಿ ಪಾಲ್ಖಿವಾಲಾ ಕೋಪಗೊಂಡದ್ದನ್ನು ನ್ಯಾ ದತ್ತಾ ವಿವರಿಸಿದರು.

ವಿದ್ವಾಂಸರೂ ಮತ್ತು ನ್ಯಾಯಶಾಸ್ತ್ರಜ್ಞರೂ ಆದ ನ್ಯಾ. ಡಾ. ದುರ್ಗಾ ದಾಸ್‌ ಬಸು ಅವರು ಪ್ರಕರಣಗಳ ತೀರ್ಪು ನೀಡಲೆಂದು ಕಾನೂನನ್ನು ಅಧ್ಯಯನ ಮಾಡುತ್ತಿರಲಿಲ್ಲ. ಬದಲಿಗೆ ಕಾನೂನನ್ನೇ ಉಸಿರಾಡುತ್ತಿದ್ದರು ಎಂಬುದನ್ನು ಘಟನೆಯೊಂದನ್ನು ಉದಾಹರಿಸುವ ಮೂಲಕ ನ್ಯಾ. ದತ್ತ ವಿವರಿಸಿದರು. ಅಲ್ಲದೆ ಯಾವುದೇ ನಿರ್ಧಾರಗಳು ಇಲ್ಲದ 1950ರ ದಶಕದಲ್ಲಿ ಸಂವಿಧಾನದ ಬಗ್ಗೆ ವ್ಯಾಖ್ಯಾನ ಮಾಡಲು ಅವರು ಸಮರ್ಥರಾಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.