ಡಿಸೆಂಬರ್ 2024ರಲ್ಲಿ ವಿವಾದಾತ್ಮಕ ಭಾಷಣ ಮಾಡಿದ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ಅವರನ್ನು ಪದಚ್ಯುತಗೊಳಿಸುವಂತೆ ಕೂಗು ಕೇಳಿಬಂದಿದ್ದರೂ ಅವರು ನಿವೃತ್ತರಾಗಲು ಕೇವಲ ಎಂಟು ತಿಂಗಳಿಗೂ ಕಡಿಮೆ ಅವಧಿ ಇರುವಾಗ ಅವರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆಗೆ ಮುಂದಾಗದೆ ಇರುವಂತೆ ತೋರುತ್ತಿದೆ.
ಹಿಂದೂ ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಡಿಸೆಂಬರ್ 8 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಯಾದವ್ ಅವರು ಮಾಡಿದ್ದ ಭಾಷಣ ವಿವಾದ ಸೃಷ್ಟಿಸಿತ್ತು. ಏಕರೂಪ ನಾಗರಿಕ ಸಂಹಿತೆ ಕುರಿತಂತೆ ನೀಡಿದ್ದ ಉಪನ್ಯಾಸದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್ಮುಲ್ಲಾ ಎಂಬ ಪದ ಕೂಡ ಬಳಸಿದ್ದರು.
ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಅವರು ನೀಡಿದ ಹೇಳಿಕೆಗಳು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ನ್ಯಾಯಾಧೀಶರಿಗೆ ತಕ್ಕುದಲ್ಲದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಅನೇಕರು ನ್ಯಾ. ಯಾದವ್ ಅವರನ್ನು ಪದಚ್ಯುತಗೊಳಿಸುವಂತೆ ಕರೆ ನೀಡಿದ್ದರು.
ವಾಗ್ದಂಡನೆ ಗೊತ್ತುವಳಿ ಸ್ಥಗಿತ
ತಮ್ಮ ಹೇಳಿಕೆಗಳಿಗಾಗಿ ನ್ಯಾ. ಯಾದವ್ ಅವರನ್ನು ಹೊಣೆಗಾರರನ್ನಾಗಿ ಮೊದಲ ಒತ್ತಾಯ ಕೇಳಿಬಂದಿದ್ದು 10 ಡಿಸೆಂಬರ್ 2024ರಲ್ಲಿ. ಅವರ ವಿರುದ್ಧ ವಾಗ್ದಂಡನಾ ನಿರ್ಣಯ ಮಂಡಿಸುವುದಾಗಿ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್ ಅಂದು ಘೋಷಿಸಿದರು.
ಅದಾದ ಮೂರು ದಿನಗಳಲ್ಲಿ, ವಾಗ್ದಂಡನಾ ನಿರ್ಣಯ ಮಂಡಿಸಲು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗೆ ಕಪಿಲ್ ಸಿಬಲ್ ನೇತೃತ್ವದಲ್ಲಿ 55 ಸಂಸದರು (ಸಂಸದರು) ಪ್ರಸ್ತಾವನೆಗೆ ಸಹಿ ಹಾಕಿದ್ದು ವರದಿಯಾಗಿತ್ತು.
ನ್ಯಾಯಮೂರ್ತಿ ಯಾದವ್ ಅವರು ತಮ್ಮ ಹೇಳಿಕೆಗಳ ಮೂಲಕ ಅಲ್ಪಸಂಖ್ಯಾತರ ವಿರುದ್ಧ ಪಕ್ಷಪಾತ ಮತ್ತು ಪೂರ್ವಾಗ್ರಹವನ್ನು ಪ್ರದರ್ಶಿಸಿದ್ದಾರೆ, ನಿರ್ದಿಷ್ಟವಾಗಿ ಈ ಸಮುದಾಯಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಗೊತ್ತುವಳಿ ಮಂಡನೆ ಕೋರಿಕೆಯಲ್ಲಿ ಹೇಳಲಾಗಿತ್ತು.
ಶ್ರೀನಗರದ ಲೋಕಸಭಾ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಕೂಡ ನ್ಯಾಯಮೂರ್ತಿ ಯಾದವ್ ಅವರನ್ನು ಪದಚ್ಯುತಗೊಳಿಸಲು ಮಹಾಭಿಯೋಗ ನಿರ್ಣಯ ಮಂಡಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದರು.
ನ್ಯಾಯಾಧೀಶರ ವಿಚಾರಣಾ ಕಾಯಿದೆ- 1968ರ ಅಡಿಯಲ್ಲಿ , ಕನಿಷ್ಠ 100 ಲೋಕಸಭಾ ಸದಸ್ಯರು ಅಥವಾ 50 ರಾಜ್ಯಸಭಾ ಸದಸ್ಯರು ಪದಚ್ಯುತಗೊಳಿಸುವ ನಿರ್ಣಯಕ್ಕೆ ಸಹಿ ಹಾಕಿದ ನಂತರ,ಸೂಕ್ತ ಪರಿಗಣನೆ ಬಳಿಕ ಸ್ಪೀಕರ್ ಅಥವಾ ಅಧ್ಯಕ್ಷರು ಅದನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದಾಗಿದೆ.
ಸುಮಾರು 5 ತಿಂಗಳ ನಂತರ, ಕಳೆದ ಜೂನ್‌ನಲ್ಲಿ, ನ್ಯಾಯಮೂರ್ತಿ ಯಾದವ್ ವಿರುದ್ಧ ಪ್ರತಿಪಕ್ಷಗಳು ಸಲ್ಲಿಸಿದ ಮಹಾಭಿಯೋಗ ಗೊತ್ತುವಳಿ ಕಾರ್ಯವಿಧಾನದ ತಾಂತ್ರಿಕತೆಗಳಿಂದಾಗಿ ಸಂಸತ್ತಿನಲ್ಲಿ ಸ್ಥಗಿತಗೊಂಡಿದೆ ಎಂಬ ವರದಿಗಳು ಪ್ರಕಟವಾದವು.
ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ವರದಿ ಪ್ರಕಾರ , ಜೂನ್ 24ರ ಹೊತ್ತಿಗೆ, ಕೇವಲ 44 ಸಂಸದರು ಮಾತ್ರ ರಾಜ್ಯಸಭಾ ಸಚಿವಾಲಯಕ್ಕೆ ಫೋನ್ ಅಥವಾ ಇಮೇಲ್ ಮೂಲಕ ತಮ್ಮ ಸಹಿಗಳನ್ನು ದೃಢಪಡಿಸಿದ್ದರು.
ನಂತರ, ಅದೇ ತಿಂಗಳು ನಡೆದ ಪತ್ರಿಕಾಗೋಷ್ಠಿಯಲ್ಲಿ, ನ್ಯಾಯಮೂರ್ತಿ ಶೇಖರ್ ಯಾದವ್ ಅವರ ವಿರುದ್ಧದ ಮಹಾಭಿಯೋಗ ನೋಟಿಸ್ ವಿಳಂಬಗೊಳಿಸುವ ಯತ್ನ ನಡೆದಿದ್ದು, ಇದರಿಂದಾಗಿ ಅವರು ಶಿಕ್ಷೆಗೆ ಗುರಿಯಾಗದೆ ನಿವೃತ್ತರಾಗುತ್ತಾರೆ ಎಂದು ಸಿಬಲ್ ಆತಂಕ ವ್ಯಕ್ತಪಡಿಸಿದ್ದರು.
ಮತ್ತೊಂದೆಡೆ, ಸಹಿ ಪರಿಶೀಲನೆ ಈಗಾಗಲೇ ಪೂರ್ಣಗೊಂಡಿದ್ದು ಸಂಸತ್ತಿನಲ್ಲಿ ಸೂಕ್ತ ರೀತಿಯಲ್ಲಿ ಸಲ್ಲಿಸಲಾಗಿತ್ತಾದರೂ ಅಂದಿನಿಂದ, ಪ್ರಕ್ರಿಯೆಯ ಮುಂದಿನ ಹಂತಗಳ ಕುರಿತು ಸಂಸದ ಮೆಹದಿ ಅವರಿಗೆ ಯಾವುದೇ ಪತ್ರ ಬಂದಿಲ್ಲ ಎಂದು ಮೆಹದಿ ಅವರ ಕಚೇರಿ ಬಾರ್ ಅಂಡ್ ಬೆಂಚ್ ಜಾಲತಾಣಕ್ಕೆ ತಿಳಿಸಿತು.
ಉಳಿದ ಸಹಿಗಳನ್ನು ಪರಿಶೀಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಂಸತ್ತು ಈಗಲೂ ದೃಢಪಡಿಸಿಲ್ಲ. ಮತ್ತು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ನಿವೃತ್ತಿಯ ನಂತರ ಪ್ರಸ್ತುತ ರಾಜ್ಯಸಭಾ ಅಧ್ಯಕ್ಷರು ಅಧಿಕಾರದಲ್ಲಿಲ್ಲದ ಕಾರಣ , ಸಹಿಗಳನ್ನು ಪರಿಶೀಲಿಸಿದರೂ ಸಹ, ಪ್ರಕ್ರಿಯೆಯನ್ನು ಮುಂದುವರಿಸಲು ಯಾರೂ ಇಲ್ಲ. ಪರಿಣಾಮ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆ ಸ್ಥಗಿತಗೊಂಡಂತೆ ತೋರುತ್ತಿದೆ.
ಎಂದಿಗೂ ನಡೆಯದ ಆಂತರಿಕ ವಿಚಾರಣೆ
ಸಂಸದರು ದೋಷಾರೋಪಣೆ ಪ್ರಸ್ತಾವನೆಯನ್ನು ಮಂಡಿಸುವ ಪ್ರಕ್ರಿಯೆಯಲ್ಲಿದ್ದಾಗ,ನ್ಯಾಯಮೂರ್ತಿ ಯಾದವ್ ಅವರ ವಿವಾದಾತ್ಮಕ ಹೇಳಿಕೆಗಳನ್ನು ಸುಪ್ರೀಂ ಕೋರ್ಟ್ ಸಹ ಗಮನಿಸಿತು..
ಡಿಸೆಂಬರ್ 15 ರಂದು ಬಾರ್ & ಬೆಂಚ್‌ಗೆ ಮೂಲಗಳು ತಿಳಿಸಿದಂತೆ, ಸುಪ್ರೀಂ ಕೋರ್ಟ್ ತನ್ನ ಆಡಳಿತಾತ್ಮಕ ಕಡೆಯಿಂದ ಈ ನಿಟ್ಟಿನಲ್ಲಿ ಹೈಕೋರ್ಟ್‌ನಿಂದ ವಿವರಗಳನ್ನು ಕೇಳಿತ್ತು.
ನಂತರ ನ್ಯಾಯಮೂರ್ತಿ ಯಾದವ್ ಅವರ ವಿರುದ್ಧ ಎಫ್ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿ ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರಿಗೆ , 13 ಹಿರಿಯ ವಕೀಲರು ಜನವರಿ 2025ರಲ್ಲಿ ಪತ್ರ ಬರೆದರು.
ಪತ್ರಕ್ಕೆ ಹಿರಿಯ ನ್ಯಾಯವಾದಿಗಳಾದ ಇಂದಿರಾ ಜೈಸಿಂಗ್, ಆಸ್ಪಿ ಚಿನೋಯ್, ನವರೋಜ್ ಸೀರ್ವಾಯ್, ಆನಂದ್ ಗ್ರೋವರ್, ಚಂದ್ರ ಉದಯ್ ಸಿಂಗ್, ಜೈದೀಪ್ ಗುಪ್ತಾ, ಮೋಹನ್ ವಿ ಕಾತರಕಿ, ಶೋಯೆಬ್ ಆಲಂ, ಆರ್ ವೈಗೈ, ಮಿಹಿರ್ ದೇಸಾಯಿ ಮತ್ತು ಜಯಂತ್ ಭೂಷಣ್ ಅವರು ಸಹಿ ಮಾಡಿದ್ದರು.
ನ್ಯಾ. ಯಾದವ್ ಅವರು ತಮ್ಮ ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿರುವುದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ನ್ಯಾ. ಯಾದವ್ ವಿರುದ್ಧ ದ್ವೇಷ ಮಾಡಿದ ಆರೋಪದ ಮೇಲೆ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳಾದ 196 ಮತ್ತು 302ರ ಅಡಿ ಪ್ರಕರಣ ದಾಖಲಿಸಿ, ಕ್ರಮಕೈಗೊಳ್ಳಬೇಕು ಎಂದು ಕೋರಲಾಗಿತ್ತು.
ಸಿಜೆಐ ಖನ್ನಾ ಅವರು ನ್ಯಾಯಮೂರ್ತಿ ಯಾದವ್ ಬಗ್ಗೆ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ಫೆಬ್ರವರಿ 1 ರಂದು , ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದ ಒಂದು ದಿನದ ಬಳಿಕ, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮಾಧ್ಯಮಗಳಿಗೆ ತಿಳಿಸಿದರು.
ನ್ಯಾಯಾಂಗ ನೇಮಕಾತಿ ಮಂಡಳಿಯಿಂದ ಸಮನ್ಸ್ ಬಂದ ನಂತರ ನ್ಯಾಯಮೂರ್ತಿ ಯಾದವ್ ಅವರು ನ್ಯಾಯಾಧೀಶರಲ್ಲಿ ಖಾಸಗಿಯಾಗಿ ಕ್ಷಮೆಯಾಚಿಸಲು ಸಿದ್ಧರಿದ್ದಾರೆ ಎಂದು ಆಗ ಸುಪ್ರೀಂ ಕೊಲಿಜಿಯಂನ ಭಾಗವಾಗಿದ್ದ ನ್ಯಾಯಮೂರ್ತಿ ರಾಯ್ ಬಹಿರಂಗಪಡಿಸಿದ್ದರು. ಕ್ಷಮೆಯಾಚನೆಯು ಸಾರ್ವಜನಿಕವಾಗಿರಬೇಕು ಎಂದು ಕೊಲಿಜಿಯಂ ಒತ್ತಾಯಿಸಿತ್ತು. ಅದಕ್ಕೆ ನ್ಯಾಯಾಧೀಶರು ಒಪ್ಪಿಕೊಂಡರು. ಆದರೂ ಮನಸ್ಸು ಬದಲಿಸಿದ ಅವರು ಹಾಗೆ ಮಾಡಲು ನಿರಾಕರಿಸಿದರು. ಕ್ಷಮೆಯಾಚನೆ ಎಂದಿಗೂ ಬಾರದ ಕಾರಣ, ಸಿಜೆಐ ಆಂತರಿಕ ತನಿಖೆಯನ್ನು ಪ್ರಾರಂಭಿಸಿದ್ದರು ಎಂದು ನ್ಯಾಯಮೂರ್ತಿ ರಾಯ್ ಬಹಿರಂಗಪಡಿಸಿದ್ದರು.
ಆದರೆ ಈ ವಿಚಾರ ತನ್ನ ವಿಶೇಷ ವ್ಯಾಪ್ತಿಗೆ ಒಳಪಡುತ್ತದೆ ಎಂದು ರಾಜ್ಯಸಭಾ ಸಚಿವಾಲಯ ಸೂಚಿಸಿದ ನಂತರ ಕಳೆದ ಜೂನ್‌ನಲ್ಲಿ ಸುಪ್ರೀಂ ಕೋರ್ಟ್ ಕ್ರಮಕ್ಕೆ ಮುಂದಾಗಿಲ್ಲ ಎಂದು ವರದಿಯಾಯಿತು.
ಮಾಧ್ಯಮ ವರದಿಗಳ ಪ್ರಕಾರ, ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರು ಪ್ರತಿಕೂಲ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಯಾದವ್ ಅವರ ನಡೆ ಪರಿಶೀಲಿಸುವ ಅಗತ್ಯವಿದೆಯೇ ಎಂದು ಪರಿಶೀಲಿಸಲು ಆಗಿನ ಸಿಜೆಐ ಖನ್ನಾ ಪ್ರಕ್ರಿಯೆ ಪ್ರಾರಂಭಿಸಿದ್ದರು.
ಮಾರ್ಚ್‌ನಲ್ಲಿ ರಾಜ್ಯಸಭಾ ಸಚಿವಾಲಯ ಅಂತಹ ಪ್ರಕ್ರಿಯೆಗಳಿಗೆ ಸಾಂವಿಧಾನಿಕವಾಗಿ ಆದೇಶ ನೀಡುವ ಅಧಿಕಾರ ರಾಜ್ಯಸಭಾ ಅಧ್ಯಕ್ಷರಿಗೆ ಮತ್ತು ಅಂತಿಮವಾಗಿ ಸಂಸತ್ತು ಮತ್ತು ಅಧ್ಯಕ್ಷರಿಗೆ ಮಾತ್ರ ಸೀಮಿತವಾಗಿದೆ ಎಂದು ಸ್ಪಷ್ಟಪಡಿಸಿದ ನಂತರ ಈ ಕ್ರಮವನ್ನು ನಿಲ್ಲಿಸಲಾಯಿತು.
ಅದೇ ಅಲಾಹಾಬಾದ್ ಹೈಕೋರ್ಟ್‌ನ ಮತ್ತೊಬ್ಬ ನ್ಯಾಯಮೂರ್ತಿ, ತಮ್ಮ ದೆಹಲಿ ನಿವಾಸದಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾದ ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಯಶವಂತ್ ವರ್ಮಾ ಅವರ ಪ್ರಕರಣಕ್ಕೆ ನ್ಯಾ. ಯಾದವ್ ಅವರ ಪ್ರಕರಣವನ್ನು ಹೋಲಿಸಿ ನೋಡಿದಾಗ ನ್ಯಾ. ವರ್ಮಾ ಅವರ ವಿರುದ್ಧ ನ್ಯಾಯಾಂಗ ನಡೆದುಕೊಂಡ ರೀತಿ ಹಾಗೂ ಕೋಮು ಮತ್ತು ದ್ವೇಷ ಪ್ರಚೋದನೆಯ ಹೇಳಿಕೆ ನೀಡಿದ ಬಗ್ಗೆ ವೀಡಿಯೊ ಪುರಾವೆಗಳಿದ್ದರೂ ನ್ಯಾ. ಯಾದವ್ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳುವಲ್ಲಿ ತಳೆದಿರುವ ಮೌನ ವಿರೋಧಾಭಾಸದಿಂದ ಕೂಡಿದೆ.
ರೋಸ್ಟರ್ ಪಟ್ಟಿಯಿಂದ ಹೆಸರು ತೆಗೆದದ್ದು ಕೇವಲ ತೋರಿಕೆಗೆ?
ಸಂಸದರು ಮಹಾಭಿಯೋಗ ಪ್ರಸ್ತಾವನೆ ಮಂಡಿಸಿದ ನಂತರ ಮತ್ತು ನಂತರ ಸಿಜೆಐ ಸಂಜೀವ್ ಖನ್ನಾ ಅವರು ನ್ಯಾಯಮೂರ್ತಿ ಯಾದವ್ ಅವರ ಭಾಷಣದ ಕುರಿತು ವರದಿ ಕೇಳಿದ ಕೂಡಲೇ, ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 12, 2024 ರಂದು ರೋಸ್ಟರ್ ಬದಲಾವಣೆಯನ್ನು ಘೋಷಿಸಿತು.
ಡಿಸೆಂಬರ್ 16 ರಿಂದ ಜಾರಿಗೆ ಬರುವಂತೆ, ನ್ಯಾಯಮೂರ್ತಿ ಯಾದವ್ ಅವರು ಜಿಲ್ಲಾ ನ್ಯಾಯಾಲಯದ ಆದೇಶಗಳನ್ನು ಪ್ರಶ್ನಿಸಿದ ಮೊದಲ ಮೇಲ್ಮನವಿಗಳನ್ನು ಮಾತ್ರ ಆಲಿಸಲು ಸೀಮಿಗೊಳಿಸಲಾಗಿತ್ತು. ಅಕ್ಟೋಬರ್ 15, 2024ರಿಂದ, ಲೈಂಗಿಕ ಅಪರಾಧಗಳ ಸೂಕ್ಷ್ಮ ಪ್ರಕರಣಗಳು ಸೇರಿದಂತೆ ಜಾಮೀನು ದಾವೆಗಳನ್ನು ಅವರಿಗೆ ವಹಿಸಲಾಗಿತ್ತು.
ಆದಾಗ್ಯೂ, ಫೆಬ್ರವರಿ 2025ರಲ್ಲಿ ಹೈಕೋರ್ಟ್‌ಜಾಲತಾಣದಲ್ಲಿ ಪ್ರಕಟವಾದ ದತ್ತಾಂಶದ ಪ್ರಕಾರ ಜಾಮೀನುಪ್ರಕರಣಗಳನ್ನು ಮತ್ತೆ ಅವರಿಗೆ ವಹಿಸಿರುವುದು ತಿಳಿದು ಬಂದಿದ್ದು ಈಗಲೂ ಅವರಿಗೆ ಕ್ರಿಮಿನಲ್ ಮೇಲ್ಮನವಿ ಮತ್ತು ಜಾಮೀನು ಪ್ರಕರಣಗಳ ವಿಚಾರಣೆ ವಹಿಸಲಾಗಿದೆ. ಇದು ಅವರ ವಿರುದ್ಧ ನ್ಯಾಯಾಂಗ ಕೈಗೊಂಡ ಆಡಳಿತಾತ್ಮಕ ಕ್ರಮ ಕೇವಲ ತೋರಿಕೆಯದ್ದೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಗುರಾಣಿಯಾದ ಕಾಲ
ನ್ಯಾಯಮೂರ್ತಿ ಯಾದವ್ ಅವರ ಪ್ರಕರಣ ಭಾರತದ ನ್ಯಾಯಾಂಗ ಹೊಣೆಗಾರಿಕೆ ಕಾರ್ಯವಿಧಾನದೊಳಗಿನ ದೌರ್ಬಲ್ಯಗಳನ್ನು ಹೇಳುತ್ತದೆ.
ಕಾರ್ಯವಿಧಾನದ ಅಪಾರದರ್ಶಕತೆ ಮತ್ತು ಅವ್ಯಕ್ತ ವಿಳಂಬದಿಂದಾಗಿ ಸಂಸತ್ತಿನಲ್ಲಿ, ದೋಷಾರೋಪಣೆ ಗೊತ್ತುವಳಿ ಸಹಿ-ಪರಿಶೀಲನಾ ಹಂತದಲ್ಲಿಯೇ ನಿಂತುಹೋಗಿದೆ. ಮತ್ತೊಂದೆಡೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಆಂತರಿಕ ತನಿಖೆ ಆರಂಭಿಸಿತಾದರೂ ಅಸ್ಪಷ್ಟ ಕಾರಣಗಳಿಗಾಗಿ ಅದನ್ನು ಕೈಬಿಡಲಾಗಿದೆ. ಅಲ್ಲದೆ ತನ್ನ ಮೇಲಿನ ವಿಶ್ವಾಸಾರ್ಹತೆಯನ್ನು ಕಡಿಮೆಗೊಳಿಸುವಂತೆ ಅಲಾಹಾಬಾದ್ ಹೈಕೋರ್ಟ್ ಆಡಳಿತಾತ್ಮಕ ಪುನಾರಚನೆಯನ್ನು ವಾರಗಳಲ್ಲಿ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಯಾದವ್ ಅವರ ನಿವೃತ್ತಿಗೆ ಕೇವಲ ಎಂಟು ತಿಂಗಳು ಉಳಿದಿದ್ದು, ಯಾವುದೇ ಸಂಸ್ಥೆ ಕ್ರಮ ಕೈಗೊಳ್ಳುವ ಮುನ್ನವೇ ಅವರ ನಿವೃತ್ತರಾಗುವುದು ಬಹುತೇಕ ಖಚಿತವಾಗಿದೆ. ಸಂದರ್ಭ ಎಂಬುದು ನ್ಯಾಯಮೂರ್ತಿಗಳ ಪರವಾಗಿ ಇದ್ದಾಗ ವಿಳಂಬ, ಅಪಾದರ್ಶಕತೆ ಮತ್ತು ಸಾಂಸ್ಥಿಕ ಹಿಂಜರಿಕೆಯಿಂದಾಗಿ ಲೋಪವೆಸಗಿದ ನ್ಯಾಯಾಧೀಶರನ್ನು ಹೊಣೆಗಾರರನ್ನಾಗಿ ಮಾಡುವ ಕಾರ್ಯವಿಧಾನಗಳು ನಿಷ್ಪರಿಣಾಮಕಾರಿಯಾಗುತ್ತದೆ ಎಂಬ ಕಟು ಸತ್ಯವನ್ನು ನ್ಯಾ. ಯಾದವ್ ಅವರ ಪ್ರಕರಣ ಎತ್ತಿ ತೋರಿಸಿದೆ.