
ಕಳೆದ ತಿಂಗಳು ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಮಾಡಿದ್ದ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಶೇಖರ್ ಯಾದವ್ ಅವರ ವಿರುದ್ಧ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಆಂತರಿಕ ವಿಚಾರಣೆಗೆ ಆದೇಶಿಸಿರುವುದು ತಿಳಿದುಬಂದಿದೆ.
ಜನವರಿ 31 ರಂದು ನಿವೃತ್ತಿಯಾದ; ಸುಪ್ರೀಂ ಕೋರ್ಟ್ ಕೊಲಿಜಿಯಂನ ಭಾಗವಾಗಿದ್ದ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರು ಬಾರ್ ಅಂಡ್ ಬೆಂಚ್‌ಗೆ ನೀಡಿದ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.
ಕೊಲಿಜಿಯಂ ನ್ಯಾಯಮೂರ್ತಿಗಳ ಎದುರು ಖಾಸಗಿಯಾಗಿ ಕ್ಷಮೆಯಾಚಿಸಲು ನ್ಯಾ. ಯಾದವ್ ಸಿದ್ಧರಿದ್ದರು. ಆದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಕೊಲಿಜಿಯಂ ತಾಕೀತು ಮಾಡಿದ್ದು, ಕ್ಷಮೆ ಕೋರುವುದಾಗಿ ಭರವಸೆ ನೀಡಿದ್ದ ನ್ಯಾ. ಯಾದವ್ ಹಾಗೆ ಮಾಡಲಿಲ್ಲ. ಕ್ಷಮೆಯಾಚನೆಗೆ ಮುಂದಾಗದ ಹಿನ್ನೆಲೆಯಲ್ಲಿ ಸಿಜೆಐ ಆಂತರಿಕ ವಿಚಾರಣೆ ಆರಂಭಿಸಿದ್ದಾರೆ ಎಂದು ನ್ಯಾ. ರಾಯ್ ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಬೇರೊಬ್ಬ ನ್ಯಾಯಾಧೀಶರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ನಂತರ ಕ್ಷಮೆ ಯಾಚಿಸಿದ್ದರು. ಈ ಪ್ರಕರಣದಲ್ಲಿ ಕ್ಷಮೆ ಯಾಚಿಸುವುದಾಗಿ ಭರವಸೆ ನೀಡಿದ್ದರೂ ಹಾಗೆ ಮಾಡಿಲ್ಲ. ಹಾಗೆ ಮಾಡದೆ ಇರುವುದರಿಂದ ಆಂತರಿಕ ತನಿಖೆ ನಡೆಸಲು ಸಿಜೆಐ ಮುಂದಾದರು. ಕೊಲಿಜಿಯಂನಲ್ಲಿದ್ದ ಎಲ್ಲಾ ಐವರು ನ್ಯಾಯಮೂರ್ತಿಗಳೆದುರು ಖಾಸಗಿಯಾಗಿ ಕ್ಷಮೆಯಾಚಿಸಲು ಅವರು ಮುಂದಾಗಿದ್ದರು. ಆದರೆ ಖಾಸಗಿಯಾಗಿ ಕ್ಷಮೆಯಾಚಿಸದೆ ಸಾರ್ವಜನಿಕವಾಗಿ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಹಾಗೆ ಮಾಡುವುದಾಗಿ ಭರವಸೆ ನೀಡಿ ಅಲ್ಲಿಂದ ಹೊರಟ ನ್ಯಾ. ಯಾದವ್ ಕ್ಷಮೆ ಕೋರಲಿಲ್ಲ ಎಂದು ನ್ಯಾ. ರಾಯ್ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಆಂತರಿಕ ಕಾರ್ಯವಿಧಾನದ ಪ್ರಕಾರ ಸಿಜೆಐ ಮೊದಲು ಸಂಬಂಧಪಟ್ಟ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮತ್ತು ವಿವಾದಾಸ್ಪದ ನ್ಯಾಯಮೂರ್ತಿಗಳಿಂದ ವರದಿ ಪಡೆದುಕೊಳ್ಳುತ್ತಾರೆ. ಅದರ ಆಧಾರದಲ್ಲಿ ಆರೋಪ ಕುರಿತು ಹೆಚ್ಚಿನ ವಿಚಾರಣೆ ನಡೆಸಲು ಮತ್ತು ಸತ್ಯಶೋಧನಾ ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲು ತ್ರಿಸದಸ್ಯ ಸಮಿತಿಯನ್ನು ಸಿಜೆಐ ರಚಿಸಬಹುದಾಗಿದೆ.
ಸಂಸತ್ ವಿಧಿಸುವ ವಾಗ್ದಂಡನೆ ಬಿಟ್ಟರೆ ಆಂತರಿಕ ತನಿಖೆ ಎಂಬುದು ನ್ಯಾ. ಯಾದವ್ ಅವರ ವಿರುದ್ಧ ಕೈಗೊಳ್ಳಬಹುದಾದ ಮತ್ತೊಂದು ಕ್ರಮವಾಗಿದೆ.
ಹಿಂದೂ ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾನೂನು ಘಟಕ ಡಿಸೆಂಬರ್ 8 ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಯಾದವ್ ಅವರು ಮಾಡಿದ್ದ ಭಾಷಣ ವಿವಾದ ಸೃಷ್ಟಿಸಿತ್ತು.
ಏಕರೂಪ ನಾಗರಿಕ ಸಂಹಿತೆ ಕುರಿತಂತೆ ನೀಡಿದ್ದ ಉಪನ್ಯಾಸದ ವೇಳೆ ಅವರು ಬಹುಸಂಖ್ಯಾತರ ಆಶಯದಂತೆ ಭಾರತ ಕೆಲಸ ಮಾಡಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಮುಸ್ಲಿಮರ ವಿರುದ್ಧ ಅವಹೇಳನಕಾರಿಯಾದ ಕಠ್‌ಮುಲ್ಲಾ ಎಂಬ ಪದ ಕೂಡ ಬಳಸಿದ್ದರು.
ನಂತರ ನ್ಯಾ. ಯಾದವ್ ಅವರಿಗೆ ಕೊಲಿಜಿಯಂ ಸಮನ್ಸ್ ನೀಡಿತ್ತು. ಖಾಸಗಿಯಾಗಿ ಕ್ಷಮೆಯಾಚಿಸಲು ನೀವು ಸಿದ್ಧರಿದ್ದಿರಾ ಎಂದು ಬಾರ್ ಅಂಡ್ ಬೆಂಚ್ ಪ್ರಶ್ನಿಸಿದಾಗ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನ್ಯಾ. ಯಾದವ್ ನಿರಾಕರಿಸಿದರು.
"ಕೊಲಿಜಿಯಂ ಮುಂದೆ ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಈ ಬಗ್ಗೆ ನಾನು ಮಾಧ್ಯಮಗಳೊಂದಿಗೆ ಮಾತನಾಡಲಾರೆ. ಆಂತರಿಕ ವಿಚಾರಣೆ ಏನಾಯಿತು ಎಂದು ನನಗೆ ತಿಳಿದಿಲ್ಲ. ಸಮಯ ಬಂದಾಗ ನಾನು ಮಾತನಾಡುತ್ತೇನೆ" ಎಂದು ನ್ಯಾಯಮೂರ್ತಿ ಯಾದವ್ ಹೇಳಿದರು.
ನಂತರ ಅಲಾಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದ ನ್ಯಾ. ಯಾದವ್ ತಮ್ಮ ಹೇಳಿಕೆಗೆ ಬದ್ಧವಾಗಿದ್ದು ತಾವು ನ್ಯಾಯಾಂಗ ನಡಾವಳಿ ಉಲ್ಲಂಘಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಕಳೆದ ಡಿಸೆಂಬರ್ 17ರಂದು ಕೊಲಿಜಿಯಂ ಜೊತೆಗಿನ ಸಭೆಯ ನಂತರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅರುಣ್ ಬನ್ಸಾಲಿ ಅವರು ನ್ಯಾಯಮೂರ್ತಿ ಯಾದವ್ ಅವರ ಪ್ರತಿಕ್ರಿಯೆ ಕೇಳಿದ್ದರು.
ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣೆಗಳ ಅಭಿಯಾನ (CJAR) ಸಂಘಟನೆ ನ್ಯಾಯಮೂರ್ತಿ ಯಾದವ್ ವಿರುದ್ಧ ಆಂತರಿಕ ತನಿಖೆಗೆ ಒತ್ತಾಯಿಸಿ ಸಿಜೆಐ ಅವರಿಗೆ ಔಪಚಾರಿಕ ದೂರು ಸಲ್ಲಿಸಿತ್ತು. ಮತ್ತೊಂದೆಡೆ ಯಾದವ್ ಅವರಿಗೆ ವಾಗ್ದಂಡನೆ ವಿಧಿಸಬೇಕು ಆಗ್ರಹಿಸಿ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿಗೆ ಅವರಿಗೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಪತ್ರ ಬರೆದಿದ್ದರು. ಇತ್ತ ಅವರ ರೋಸ್ಟರ್‌ನಲ್ಲಿ ಬದಲಾವಣೆ ಮಾಡಿ ಹೈಕೋರ್ಟ್ ಆದೇಶಿಸಿತ್ತು.
ಈ ತಿಂಗಳ ಆರಂಭದಲ್ಲಿ, ಹದಿಮೂರು ಹಿರಿಯ ವಕೀಲರು ಸಿಜೆಐ ಖನ್ನಾ ಅವರಿಗೆ ಪತ್ರ ಬರೆದು , ನ್ಯಾ. ಯಾದವ್ ಅವರ ಭಾಷಣದ ವಿರುದ್ಧ ಎಫ್‌ಐಆರ್ ದಾಖಲಿಸಲು ಸಿಬಿಐಗೆ ನಿರ್ದೇಶಿಸುವಂತೆ ಒತ್ತಾಯಿಸಿದರು. ಪತ್ರಕ್ಕೆ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್, ಆಸ್ಪಿ ಚಿನೋಯ್, ನವ್ರೋಜ್ ಸರ್ವೈ, ಆನಂದ್ ಗ್ರೋವರ್, ಚಂದರ್ ಉದಯ್ ಸಿಂಗ್, ಜೈದೀಪ್ ಗುಪ್ತಾ, ಮೋಹನ್ ವಿ ಕಾತರಕಿ, ಶೋಬ್ ಆಲಂ, ಆರ್ ವೈಗೈ, ಮಿಹಿರ್ ದೇಸಾಯಿ ಹಾಗೂ ಜಯಂತ್ ಭೂಷಣ್ ಸಹಿ ಹಾಕಿದ್ದರು.
ನ್ಯಾಯಮೂರ್ತಿ ರಾಯ್ ತಮ್ಮ ಸಂದರ್ಶನದಲ್ಲಿ, ನ್ಯಾಯಾಧೀಶರು ದಾರಿ ತಪ್ಪುತ್ತಿರುವುದನ್ನು ಎದುರಿಸಲು ಪ್ರಸ್ತುತ ಕಾನೂನುಗಳು ಸಾಲುತ್ತಿಲ್ಲ. ಅಲ್ಲದೆ ಅಂತಹ ಪರಿಸ್ಥಿತಿ ಎದುರಿಸಲು ವಾಗ್ದಂಡನೆ ವಿಧಿಸುವುದು ಪರಿಣಾಮಕಾರಿಯಾದ ವಿಧಾನವೇನೂ ಅಲ್ಲ ಎಂದಿದ್ದಾರೆ.
[ಸಂದರ್ಶನದ ದೃಶ್ಯಾವಳಿ ಇಲ್ಲಿ ಲಭ್ಯ]