ಸುದ್ದಿಗಳು

[ಲಕ್ಷದ್ವೀಪ] ಡೈರಿ ಫಾರಂ, ಶಾಲಾಮಕ್ಕಳಿಗೆ ಮಾಂಸದೂಟ ನಿರ್ಬಂಧ ಪ್ರಶ್ನಿಸಿ ಅರ್ಜಿ: ಮಧ್ಯಂತರ ಪರಿಹಾರ ನೀಡಿದ ಸುಪ್ರೀಂ

Bar & Bench

ಹೈನುಗಾರಿಕೆ ಕೇಂದ್ರಗಳನ್ನು ಮುಚ್ಚುವ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಿಂದ ಮಾಂಸಾಹಾರ ಕೈಬಿಡುವ ಲಕ್ಷದ್ವೀಪ ಆಡಳಿತದ ನಿರ್ಧಾರ ಪ್ರಶ್ನಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ಅಜ್ಮಲ್ ಅಹ್ಮದ್ ಆರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಈ ಸಂಬಂಧ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಜಾಗೊಳಿಸಿ ಕೇರಳ ಹೈಕೋರ್ಟ್‌ ಸೆಪ್ಟೆಂಬರ್ 2021ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಕವರಟ್ಟಿ ದ್ವೀಪದ ನಿವಾಸಿ, ವಕೀಲ ಅಜ್ಮಲ್ ಅಹ್ಮದ್ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠದಲ್ಲಿ ನಡೆಯಿತು.

ಇದೇ ವೇಳೆ ಸುಪ್ರೀಂ ಕೋರ್ಟ್‌ “ಹಿಂದಿನಂತೆ ಮಾಂಸ, ಕೋಳಿ, ಮೀನು ಮತ್ತು ಮೊಟ್ಟೆ ಮತ್ತಿತರ ಪದಾರ್ಥಗಳನ್ನು ಒಳಗೊಂಡ ಆಹಾರ ತಯಾರಿಸಿ ಲಕ್ಷದ್ವೀಪದ ಮಕ್ಕಳಿಗೆ ಬಡಿಸಬೇಕು. ಮುಂದಿನ ಆದೇಶದವರೆಗೂ ಇದನ್ನು ಮುಂದುವರೆಸಬೇಕು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಹಿಂದಿನ ವ್ಯವಸ್ಥೆ ಮುಂದುವರೆಯಬೇಕು" ಎಂದು ಜೂನ್ 22 ರಂದು ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶಕ್ಕೆ ಮರುಜೀವ ನೀಡಿದೆ.

ಶಾಲಾಮಕ್ಕಳಿಗೆ ಮಾಂಸದೂಟ, ಡೈರಿ ಫಾರಂಗಳಿಗೆ ನಿರ್ಬಂಧ ಹೇರಿದ ಕ್ರಮ ಸಂವಿಧಾನದ 19 ಮತ್ತು 300 ಎ ಅಡಿಯಲ್ಲಿ ದ್ವೀಪದ ಜನರಿಗೆ ದೊರೆತಿರುವ ಜನಾಂಗೀಯ ಸಂಸ್ಕೃತಿ, ಪರಂಪರೆ, ಆಹಾರ ಪದ್ದತಿಯ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ ಎಂದು ಮೇಲ್ಮನವಿದಾರರು ವಾದಿಸಿದ್ದರು.

ಆದರೂ, ಕೇರಳ ಹೈಕೋರ್ಟ್‌ ವಿಭಾಗೀಯ ಪೀಠ ಸೆಪ್ಟೆಂಬರ್ 2021ರಲ್ಲಿ ಪಿಐಎಲ್ ವಜಾಗೊಳಿಸಿತು. ದ್ವೀಪದಲ್ಲಿನ ಆಹಾರ ಲಭ್ಯತೆ ಮತ್ತು ತಜ್ಞರ ಶಿಫಾರಸು ಆಧರಿಸಿ ಬಿಸಿಯೂಟದ ಮೆನು ನಿಗದಿಪಡಿಸಲಾಗಿದೆ ಎಂಬ ಕೇಂದ್ರ ಸರ್ಕಾರದ ನಿಲುವಿಗೆ ಸಮ್ಮತಿಸಿ ಹೈಕೋರ್ಟ್‌ ತೀರ್ಪು ನೀಡಿತ್ತು.

ಮಧ್ಯಾಹ್ನದ ಬಿಸಿಯೂಟದ ಆಹಾರದ ವಿಚಾರದಲ್ಲಿ ಪೌಷ್ಟಿಕತೆಗೆ ಮಾತ್ರ ಬದ್ಧವಾಗಿರಬೇಕೆ ಹೊರತು ಖಾದ್ಯಕ್ಕಲ್ಲ ಎಂದಿದ್ದ ಕೇಂದ್ರವು ಈ ಹಿನ್ನೆಲೆಯಲ್ಲ ಕಾನೂನಾತ್ಮಕವಾಗಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿತ್ತು. ಅಲ್ಲದೆ, ಇದು ಆಡಳಿತಾಂಗದ ನೀತಿಯಾಗಿದ್ದು ಇದರಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಅಪೇಕ್ಷಣೀಯವಲ್ಲ ಎಂದು ವಾದಿಸಿತ್ತು. ಹೈನುಗಾರಿಕೆ ಕೇಂದ್ರಗಳ ಮುಚ್ಚುವಿಕೆಯ ನಿರ್ಧಾರಕ್ಕೆ ಅವುಗಳು ನಷ್ಟದಲ್ಲಿರುವುದು ಕಾರಣ ಎಂದು ಹೇಳಿತ್ತು. ಕೇಂದ್ರದ ವಾದವನ್ನು ಪುರಸ್ಕರಿಸಿದ್ದ ನ್ಯಾಯಾಲಯವು ಪಿಐಎಲ್‌ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ತ್ವರಿತ ಮೇಲ್ಮನವಿ ಸಲ್ಲಿಸಿದ್ದರು.

ಆಹಾರದ ಹಕ್ಕು ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕಾಗಿದ್ದು ಅಪ್ರಾಪ್ತ ವಯಸ್ಕರು ಸೇರಿದಂತೆ ಜನರಿಗೆ ತಾವು ಬಯಸುವ ಆಹಾರ ಸೇವನೆ ಮಾಡುವ ಹಕ್ಕಿದೆ ಎಂದು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ.