Debayan Roy and Justice AS Oka 
ಸುದ್ದಿಗಳು

ನನ್ನ ತಂದೆ ಎಂದಿಗೂ ಆರ್‌ಎಸ್‌ಎಸ್‌ ಭಾಗವಾಗಿರಲಿಲ್ಲ: ನ್ಯಾ. ಓಕಾ

'́́ಬಾರ್ ಅಂಡ್ ಬೆಂಚ್' ಜಾಲತಾಣದ ಇಂಗ್ಲಿಷ್ ಆವೃತ್ತಿಗೆ ನ್ಯಾ. ಓಕಾ ಅವರು ನೀಡಿರುವ ಸಂದರ್ಶನದ ಭಾಗ 1ರ ಆಯ್ದ ಭಾಗಗಳ ಸಂಗ್ರಹ ರೂಪ ಇಲ್ಲಿದೆ.

Bar & Bench

ತಮ್ಮ ತಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಭಾಗವಾಗಿದ್ದರು ಎಂಬ ಆರೋಪವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಅಲ್ಲಗಳೆದಿದ್ದಾರೆ.

ʼಬಾರ್ ಅಂಡ್ ಬೆಂಚ್ʼ ಜಾಲತಾಣದ ಇಂಗ್ಲಿಷ್ ಆವೃತ್ತಿಗೆ ನೀಡಿರುವ ಸಂದರ್ಶನದಲ್ಲಿ ಪತ್ರಕರ್ತ ದೇವಯಾನ್ ರಾಯ್ ಅವರೊಂದಿಗೆ ಮಾತನಾಡಿರುವ ಅವರು ತ್ವರಿತ ನ್ಯಾಯಾಂಗ ನೇಮಕಾತಿ, ಜಾಮೀನು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೋದರಳಿಯನಿಗೆ ಬಾಂಬೆ ಹೈಕೋರ್ಟ್‌ ಪದೋನ್ನತಿ ನೀಡಿರುವುದು, ನ್ಯಾಯಾಂಗ ನೇಮಕಾತಿ ಕುರಿತು ಸರ್ಕಾರದ ನಿಷ್ಕ್ರಿಯತೆಯನ್ನು ಕೊಲಿಜಿಯಂ ಹೇಗೆ ಎದುರಿಸಬೇಕು ಎಂಬಂತಹ ವಿಚಾರಗಳ ಜೊತೆಗೆ ತಮ್ಮ ತಂದೆಗೆ ಆರ್‌ಎಸ್‌ಎಸ್‌ ಜೊತೆಗೆ ನಂಟು ಇತ್ತು ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ.

ಸಾಮಾನ್ಯವಾಗಿ ನ್ಯಾಯಮೂರ್ತಿಗಳ ನೇಮಕಾತಿಗೆ 9–10 ತಿಂಗಳು ಹಿಡಿಯುತ್ತದೆಯಾದರೂ ಈಚೆಗೆ ಬಾಂಬೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿ ಹಿಂದೆಂದಿಗಿಂತಲೂ ಅತಿ ವೇಗವಾಗಿ ಪೂರ್ಣಗೊಂಡಿದೆ ಎಂದಿರುವ ಅವರು ಇಂತಹ ಪದ್ದತಿ ಶಾಶ್ವತವಾಗಿ ನೆಲೆಗೊಂಡರೆ ಸ್ವಾಗತಾರ್ಹ. ಆದರೆ ಇದು ಒಮ್ಮೆ ಮಾತ್ರ ನಡೆದು ನಂತರ ನಿಂತು ಹೋದರೆ ಅದು ಕಳವಳಕಾರಿ ಎಂದಿದ್ದಾರೆ. ನ್ಯಾ. ಓಕಾ ಅವರು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಅವರ ಸೋದರಳಿಯ ಆದ ರಾಜ್ ವಕೋಡ್ ಅವರನ್ನು ನೇಮಕ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ಕೊಲಿಜಿಯಂ ಸದಸ್ಯರ ಆಪ್ತ ಸಂಬಂಧಿಕರ ಹೆಸರು ಪರಿಗಣನೆಗೆ ಬಂದರೆ ಸಿಜೆಐ ಸೇರಿದಂತೆ ಕೊಲಿಜಿಯಂನ ಸದಸ್ಯರು ನೇಮಕಾತಿ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಹೇಳಿದ್ದಾರೆ.

"ಒಂದು ವೇಳೆ ನಾನು ಸಿಜೆಐ ಆಗಿದ್ದರೆ ನನ್ನ ಅಳಿಯನ ಪ್ರಮಾಣವಚನವನ್ನು ತಡೆಯುತ್ತಿದ್ದೆ” ಎಂದು ಓಕಾ ಸ್ಪಷ್ಟಪಡಿಸಿದ್ದಾರೆ.

ಈಚೆಗೆ ಕೊಲಿಜಿಯಂನ ನ್ಯಾಯಮೂರ್ತಿಗಳ ನೇಮಕಾತಿ ಶಿಫಾರಸ್ಸುಗಳ ಕುರಿತು ಕೊಲಿಜಿಯಂ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು ಕೊಲಿಜಿಯಂನಲ್ಲಿ ಕೈಗೊಂಡ ನಿರ್ಣಯಗಳನ್ನು ಬಹಿರಂಗಪಡಿಸಬೇಕಿತ್ತು. ಭಿನ್ನಾಭಿಪ್ರಾಯವನ್ನು ವಿವರವಾಗಿ ಚರ್ಚಿಸಬೇಕಾಗಿತ್ತು. ಅಂತಹ ಅಭಿಪ್ರಾಯ ಭೇದದ ಕಾರಣಗಳನ್ನು ಪರಿಶೀಲಿಸಿ ನಂತರ ನಿರ್ಧಾರ ತೆಗೆದುಕೊಳ್ಳಬಹುದಿತ್ತು ಎಂದಿದ್ದಾರೆ.

ನ್ಯಾಯಮೂರ್ತಿ ಅಭ್ಯರ್ಥಿಗಳ ಗೌಪ್ಯತೆಗೆ ಧಕ್ಕೆಯಾಗದಂತೆ ಭಿನ್ನಾಭಿಪ್ರಾಯವನ್ನು ಬಹಿರಂಗಪಡಿಸಬಹುದು. ಯಾರಾದರೂ ಆಕ್ಷೇಪಣೆ ಎತ್ತಿದರೆ ಆ ಆಕ್ಷೇಪಣೆಯನ್ನು ಹೇಗೆ ಪರಿಶೀಲಿಸಿದ್ದೀರಿ ಎಂಬುದೇ ನಿಜವಾದ ಪಾರದರ್ಶಕತೆ ಎಂದರು.

ಇದೇ ವೇಳೆ ಅವರು ತಮ್ಮ ತಂದೆಗೆ ಆರ್‌ಎಸ್‌ಎಸ್‌ ಜೊತೆ ನಂಟು ಇತ್ತು ಎಂಬುದನ್ನು ಅಲ್ಲಗಳೆದಿದ್ದಾರೆ. ನನ್ನ ಬಾಲ್ಯದಿಂದಲೂ ಅವರು ಆರ್‌ಎಸ್‌ಎಸ್ ಶಾಖೆಗೆ ಹಾಜರಾಗಿದ್ದನ್ನು  ನೋಡಿಲ್ಲ. ಹೆಚ್ಚೆಂದರೆ, ಅವರು ಆರ್‌ಎಸ್‌ಎಸ್ ಜೊತೆ ನಂಟು ಹೊಂದಿರುವ ಹೊಂದಿರುವ ಒಂದೆರಡು ಟ್ರಸ್ಟ್‌ಗಳೊಂದಿಗೆ ಸಂಪರ್ಕ ಹೊಂದಿರಬಹುದು ಎಂದರು.

ನ್ಯಾಯಾಧೀಶರ ಕುಟುಂಬದವರು ಯಾವುದೇ ಸಿದ್ಧಾಂತದಿಂದ ಪ್ರಭಾವಿತರಾಗಿದ್ದರೂ ನ್ಯಾಯಾಧೀಶನ ಕರ್ತವ್ಯವು ಸಂವಿಧಾನ ಮತ್ತು ಪ್ರಮಾಣವಚನಕ್ಕೆ ಬದ್ಧವಾಗಿರುತ್ತದೆ. ನ್ಯಾ. ಕೃಷ್ಣ ಅಯ್ಯರ್‌ ಅವರಿಗೆ ರಾಜಕೀಯ ಹಿನ್ನೆಲೆ ಇತ್ತಾದರೂ ಅವರು ನೀಡುವ ತೀರ್ಪುಗಳನ್ನು ಗೌರವಿಸಲಾಗುತ್ತಿತ್ತು. ವೈಯಕ್ತಿಕ ಅಥವಾ ರಾಜಕೀಯ ಅಭಿರುಚಿಗಳು ನ್ಯಾಯಾಂಗ ನಿಸ್ಪಕ್ಷಪಾತತೆಗೂ ನಂಟು ಇರಬಾರದು ಎಂದು ಒತ್ತಿ ಹೇಳಿದರು.

ತೀರ್ಪು ನೀಡುವುದು ಕಾನೂನು ಮತ್ತು ಸಾಂವಿಧಾನಿಕ ತತ್ವಗಳನ್ನು ಆಧರಿಸಿರಬೇಕು. ಅಪರಾಧ ಎಷ್ಟೇ ಘೋರವಾಗಿದ್ದರೂ ಪ್ರಭಾವಕ್ಕೊಳಗಾಗಬಾರದು. ಯುಎಪಿಎ ಪ್ರಕರಣಗಳಲ್ಲಿ ಕೂಡ ದೀರ್ಘಾವಧಿ ಬಂಧನ ಮತ್ತು ವಿಚಾರಣೆ ವಿಳಂಬ ಉಂಟಾಗಿದ್ದರೆ ಜಾಮೀನು ನೀಡಲೇಬೇಕು ಎಂದರು.

ಸಾಮಾನ್ಯವಾಗಿ ನ್ಯಾಯಾಂಗ ನೇಮಕಾತಿ ಪ್ರಕ್ರಿಯೆಯಲ್ಲಿ ಕಾರ್ಯಾಂಗದ ಕಡೆಯಿಂದ ಅನಾವಶ್ಯಕ ವಿಳಂಬವಾಗುತ್ತವೆ ಎಂಬ ಆರೋಪಗಳಿಗೆ ತಲೆದೂಗಿದ ನ್ಯಾಯಮೂರ್ತಿ ಓಕಾ ನ್ಯಾಯಮೂರ್ತಿಗಳ ನೇಮಕಾತಿ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲನೆಯಾಗುತ್ತಿಲ್ಲ ಎಂದು ದೂರಿ ಬೆಂಗಳೂರು ವಕೀಲರ ಸಂಘ ಹೂಡಿರುವ ನ್ಯಾಯಾಂಗ ನಿಂದನೆ ಅರ್ಜಿ ಕುರಿತು ಕೊಲಿಜಿಯಂ ಗಂಭೀರವಾದ ಹೆಜ್ಜೆ ಇರಿಸಬೇಕು ಎಂದು ಸಲಹೆ ನೀಡಿದರು.