ಜಕಾತ್ ಫೌಂಡೇಶನ್ ಆಫ್ ಇಂಡಿಯಾ 
ಸುದ್ದಿಗಳು

ವಿದೇಶದಿಂದ ಪಡೆದ ದೇಣಿಗೆ ರೂ 1.47 ಕೋಟಿ; ತನಗೆ ಬೇಕಾದ ಸಂಗತಿಗಳನ್ನಷ್ಟೇ ಹೆಕ್ಕಿದ ಸುದರ್ಶನ್ ಟಿವಿ: ಜಡ್ಎಫ್ಐ ಆರೋಪ

'ವಿವಿಧ ಹೆಸರುಗಳನ್ನು ಗೂಗಲ್ ಮಾಡಿ ಅದರಿಂದ ಬಂಧ ಫಲಿತಾಂಶವನ್ನು ಆಧರಿಸಿ ವಾಹಿನಿ ಆರೋಪ ಮಾಡುತ್ತಿದೆ. ಇಸ್ಲಾಮ್ ವಿರುದ್ಧದ ಲೇಖನಗಳಿಗೆ ಹೆಸರಾದ ಸ್ಯಾಮ್ ವೆಸ್ಟ್ರಾಪ್ ಅವರ ಲೇಖನವನ್ನು ವಾಹಿನಿ ಆಧರಿಸಿದೆ' ಎಂದು ಜಡ್ಎಫ್ಐ ಆಕ್ಷೇಪಿಸಿದೆ.

Bar & Bench

'ಯುಪಿಎಸ್‌ಸಿ ಜಿಹಾದ್' ಕುರಿತಂತೆ ಸುದರ್ಶನ್ ನ್ಯೂಸ್ ಕಾರ್ಯಕ್ರಮದ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದು ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿರುವ ಜಕಾತ್ ಫೌಂಡೇಶನ್ ಆಫ್ ಇಂಡಿಯಾ (ಜಡ್ಎಫ್ಐ) ವಾಹಿನಿ ಮಾಡಿದ ಆರೋಪಗಳನ್ನು ಅಲ್ಲಗಳೆದಿದೆ.

ಈ ಸಂಬಂಧ ಮಧ್ಯಪ್ರವೇಶ ಅರ್ಜಿ ಸಲ್ಲಿಸಿರುವ ಜಡ್ಎಫ್ಐ “ಅಂತರ್ಜಾಲದಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯಲ್ಲಿ ಅನುಕೂಲಕರ ಅಂಶಗಳನ್ನಷ್ಟೇ ಆಯ್ದುಕೊಳ್ಳಲಾಗಿದೆ. ಆ ಮೂಲಕ ವಾಹಿನಿ ಅಸಮರ್ಥನೀಯ ತೀರ್ಮಾನಗಳಿಗೆ ಬಂದಿದೆ” ಎಂದು ತಿಳಿಸಿದೆ.

ಅಡ್ವೊಕೇಟ್ ಆನ್ ರೆಕಾರ್ಡ್ ಮೃಗಾಂಕ್ ಪ್ರಭಾಕರ್ ಸಲ್ಲಿಸಿದ ಮಧ್ಯಪ್ರವೇಶ ಅರ್ಜಿಯಲ್ಲಿ ಜಿಹಾದ್ ಪರಿಕಲ್ಪನೆಯನ್ನು ಸ್ಪಷ್ಟಪಡಿಸಲಾಗಿದ್ದು ಸುದರ್ಶನ್ ಟಿವಿಯ "ಆಧಾರರಹಿತ ಆರೋಪಗಳನ್ನು" ಖಂಡಿಸಲಾಗಿದೆ. ಅಲ್ಲದೆ ವಾಹಿನಿಯ “ದ್ವೇಷಪೂರಿತ ವರ್ತನೆಗಳನ್ನು" ಎತ್ತಿ ತೋರಿಸಿದೆ.

ತಾನು ಮಾಡಿರುವ ಎಲ್ಲಾ ಆರೋಪಗಳಿಗೆ ಸುದರ್ಶನ್ ನ್ಯೂಸ್ ಕಟ್ಟುನಿಟ್ಟಿನ ದಾಖಲೆಗಳನ್ನು ನೀಡಬೇಕಾಗುತ್ತದೆ. ಜಡ್ಎಫ್ಐ ದಾನಿಗಳು ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಭಾವಿಸಿ ವಾಸ್ತವ ಸಂಗತಿಗಳನ್ನು ವಾಹಿನಿ ಬುಡಮೇಲು ಮಾಡಿದೆ. ಮುಸ್ಲಿಮರ ವಿರುದ್ಧ ಆಳವಾಗಿ ಬೇರೂರಿದ ಅಸ್ವಸ್ಥ ಮನೋಭಾವವನ್ನು ಹೊರತುಪಡಿಸಿ ಅದು ಬೇರೇನನ್ನೂ ಬಹಿರಂಗಪಡಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆಗಸ್ಟ್ 8ರಂದು ವಾಹಿನಿಯು ಕಾರ್ಯಕ್ರಮದ ಪ್ರೋಮೊ ಪ್ರಸಾರ ಮಾಡಿದಾಗ ಅದರಲ್ಲಿ ಜಡ್ಎಫ್ಐ ಹೆಸರು ಇರಲಿಲ್ಲ. ಬದಲಿಗೆ ಅದರಲ್ಲಿ ‘ಜಾಮಿಯಾ ಜಿಹಾದಿಗಳು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಬಂದರೆ ಅಥವಾ ಇಲಾಖೆಗಳ ಕಾರ್ಯದರ್ಶಿಗಳಾದರೆ ಏನಾಗಬಹುದು ಎಂದು ಯೋಚಿಸಿ’ ಎಂದು ಹೇಳುವ ಮೂಲಕ ಜನರನ್ನು ಕೆರಳಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

“ಪ್ರೋಮೋ ವಿಡಿಯೊದಲ್ಲಿ ‘ಜಾಮಿಯಾದ ಜಿಹಾದಿಗಳು ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಅಥವಾ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿದ್ದರೆ ಏನಾಗಬಹುದು ಎಂದು ಯೋಚಿಸಿ’ ಎಂದು ಹೇಳುವ ಮೂಲಕ ಜನರನ್ನು ಕೆರಳಿಸಿತು. ಈ ವರ್ಷ ಯುಪಿಎಸ್‌ಸಿ ಆಯ್ಕೆ ಮಾಡಿದ ಜಾಮಿಯಾದ 30 ವಿದ್ಯಾರ್ಥಿಗಳಲ್ಲಿ 14 ಹಿಂದೂಗಳು ಮತ್ತು 16 ಮುಸ್ಲಿಮರಿದ್ದಾರೆ ಎಂಬ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಉಪಕುಲಪತಿ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತ”
ಜಡ್ಎಫ್ಐ ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿ

ಕಳೆದ ಹನ್ನೊಂದು ವರ್ಷಗಳಿಂದ ಪ್ರತಿವರ್ಷ ಮುಸ್ಲಿಮರು ನೀಡುವ ಕಡ್ಡಾಯ ದಾನವನ್ನು ಬಳಸಿ ಅಗತ್ಯ ಮುಸ್ಲಿಂ ಅಭ್ಯರ್ಥಿಗಳಿಗೆ ಮಾತ್ರವಲ್ಲದೆ, ಎಲ್ಲಾ ಧರ್ಮದ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಅರ್ಜಿಯಲ್ಲಿ ಜಡ್‌ಎಫ್‌ಐ ತಿಳಿಸಿದೆ.

"ಈ ವರ್ಷ ಯುಪಿಎಸ್‌ಸಿ ಅಂತಿಮ ಹಂತಕ್ಕೆ ಆಯ್ಕೆಯಾದ 27 ಅಭ್ಯರ್ಥಿಗಳಲ್ಲಿ 4 ಮಂದಿ ಇತರೆ ಧರ್ಮೀಯರಾಗಿದ್ದಾರೆ. ಹಿಂದಿನ ವರ್ಷಗಳಲ್ಲಿಯೂ ಸಹ, ವಿವಿಧ ಧರ್ಮಗಳ ಹಲವಾರು ಅಭ್ಯರ್ಥಿಗಳು ಜಕಾತ್ ಫೌಂಡೇಶನ್‌ನಿಂದ ಅರ್ಹತೆ ಮತ್ತು ಪ್ರಯೋಜನ ಪಡೆದಿದ್ದಾರೆ" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ವಿವಿಧ ಹೆಸರುಗಳನ್ನು ಗೂಗಲ್ ಮಾಡಿ ಅದರಿಂದ ಬಂಧ ಫಲಿತಾಂಶವನ್ನು ಆಧರಿಸಿ ವಾಹಿನಿ ಆರೋಪ ಮಾಡುತ್ತಿದೆ. ಇಸ್ಲಾಮೋಫೋಬಿಕ್ ಲೇಖನಗಳಿಗೆ ಹೆಸರಾದ ಸ್ಯಾಮ್ ವೆಸ್ಟ್ರಾಪ್ ಅವರ ಲೇಖನವನ್ನು ವಾಹಿನಿ ಆಧರಿಸಿದೆ. ಜಡ್ಎಫ್ಐ ಸಂಘಟಕರಿಂದ ಪ್ರತಿಕ್ರಿಯೆ ಪಡೆಯಲು ಸುದರ್ಶನ್ ನ್ಯೂಸ್ ಮುಂದಾಗಿದ್ದು ಕೇವಲ ‘ಅರೆಮನಸ್ಸಿನ ಯತ್ನ’ವಾಗಿತ್ತು ಎಂದು ಅರ್ಜಿಯಲ್ಲಿ ತಿಳಿಸಲಾಗಿದ್ದು ಸಂದರ್ಶನಕ್ಕೆ ಆಯ್ಕೆ ಮಾಡಿಕೊಂಡ ವಿಧಾನಗಳನ್ನು ಪ್ರಶ್ನಿಸಿದೆ.

ಜಕಾತ್‌ ಫೌಂಡೇಷನ್‌ ದೇಣಿಗೆ ಪಡೆದಿರುವ ರೂ.₹ 29,95,02,038 ಕೋಟಿ ಹಣದಲ್ಲಿ ಕೇವಲ ರೂ.1,47,76,279/ ಕೋಟಿ ಹಣವನ್ನು ಮಾತ್ರ ವಿದೇಶಿ ಮೂಲಗಳಿಂದ ಪಡೆಯಲಾಗಿದ್ದು, ಇದನ್ನು ಸುದರ್ಶನ್‌ ವಾಹಿನಿಯು ಉಲ್ಲೇಖಿಸಿದೆ. ದೇಣಿಗೆ ಸಂಬಂಧಿತ ಎಲ್ಲ ಅಂಶಗಳನ್ನೂ ಪ್ರತಿವರ್ಷವೂ ಕೂಲಂಕಷವಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಎಲ್ಲಾ ಮೂಲಗಳಿಂದ ಪಡೆದ ಒಟ್ಟು ದೇಣಿಗೆಗೆ ಹೋಲಿಸಿದರೆ ಸುದರ್ಶನ್ ನ್ಯೂಸ್ ಅನುಮಾನಾಸ್ಪದ ಎಂದು ಆರೋಪಿಸಿರುವ ನಾಲ್ಕು ಮೂಲಗಳಿಂದ ಜಡ್ಎಫ್ಐ ಪಡೆದ ಒಟ್ಟು ದೇಣಿಗೆ ಮೊತ್ತ ಶೇ 4.93ರಷ್ಟಿದೆ.
ಜಡ್ಎಫ್ಐ ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿ

ನಿಧಿಯ ಮೂಲಗಳ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಿರುವ ಸಂಸ್ಥೆ ಮದೀನಾ ಟ್ರಸ್ಟ್ ಬ್ರಿಟನ್ನಿನಲ್ಲಿ ನೋಂದಾಯಿತವಾದ ಸಣ್ಣ ದತ್ತಿ ಸಂಸ್ಥೆ. ಇದರ ಅಧ್ಯಕ್ಷ ಜಿಯಾ ಉಲ್ ಹಸನ್ ಅಂಬಾಲಾ ಮೂಲದವರು. ಭಾರತದ ಬಡವರಿಗೆ ಮತ್ತು ನಿರ್ಗತಿಕರಿಗೆ ಅವರು ಸಹಾಯ ಮಾಡುತ್ತಿದ್ದಾರೆ. ಅವರ ಸಂಸ್ಥೆ ಎಂದಿಗೂ ರಾಜಕಾರಣದಲ್ಲಿ ಭಾಗಿಯಾಗಿಲ್ಲ ಅಥವಾ ಹಾಗೆ ಮಾಡುವ ಉದ್ದೇಶವೂ ಅದಕ್ಕೆ ಇಲ್ಲ ಎಂದು ಅರ್ಜಿಯಲ್ಲಿ ಸಂಸ್ಥೆ ತಿಳಿಸಿದೆ.

ಸುದರ್ಶನ್‌ ವಾಹಿನಿಯು, ಮದೀನಾ ಟ್ರಸ್ಟಿನ ಧರ್ಮದರ್ಶಿ ಡಾ.ಜಾಹಿದ್ ಅಲಿ ಪರ್ವೇಜ್ ಅವರು ಇಸ್ಲಾಮಿಕ್ ಫೌಂಡೇಶನ್‌ನ ಟ್ರಸ್ಟಿ ಕೂಡ ಆಗಿದ್ದಾರೆ ಎಂದು ತಿಳಿಸಿದೆ. ಈ ಇಬ್ಬರೂ ತಾಲಿಬಾನ್ ಮತ್ತು ಅಲ್ ಖೈದಾಗಳ ಜತೆ ನಂಟು ಹೊಂದಿ ವಿಶ್ವಸಂಸ್ಥೆಯ ನಿರ್ಬಂಧಿತ ವ್ಯಕ್ತಿಗಳ ಪಟ್ಟಿಯಲ್ಲಿದ್ದಾರೆ ಎಂದು ಇಂಗ್ಲೆಂಡಿನ ದ ಟೈಮ್ಸ್ ಪತ್ರಿಕೆ ಈ ಹಿಂದೆ ವರದಿ ಮಾಡಿತ್ತು.

ಮುಸ್ಲಿಂ ಏಡ್ (ಯುಕೆ) ಗೆ ಸಂಬಂಧಿಸಿದಂತೆ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದ್ದು. ಅದು ಹಾಗೆ ಉಗ್ರರ ನಂಟು ಇರುವ ಪ್ರಮುಖ ಸಂಸ್ಥೆಯಾಗಿದ್ದರೆ ಇಂಗ್ಲೆಂಡ್ ನಿಷೇಧ ಹೇರಿರುತ್ತಿತ್ತು ಎಂದು ವಾದಿಸಲಾಗಿದೆ. ಝಾಕಿರ್ ನಾಯಕ್ ಬಗ್ಗೆ ಪ್ರಸ್ತಾಪಿಸುತ್ತ ಜಡ್ಎಫ್ಐ ಇಂಟರ್ನ್ಯಾಷನಲ್ (ZFII) ಬ್ರಿಟಿಷ್ ಕಾನೂನಿನಡಿಯಲ್ಲಿ ನೋಂದಾವಣಿಗೊಂಡ ಪ್ರತ್ಯೇಕವಾದ, ಚಿಕ್ಕ ದತ್ತಿ ಸಂಸ್ಥೆ ಎಂದಿದೆ.

ಜಡ್ಎಫ್ಐ ಇಂಟರ್ ನ್ಯಾಷನಲ್ ಸಂಸ್ಥೆಯ ಇಬ್ಬರು ನಿರ್ದೇಶಕರಲ್ಲಿ ಒಬ್ಬರದಾದ ಭಾರತೀಯ ಮೂಲದ ಡಾ ಜಾಫರ್ ಖುರೇಷಿ 2012ರಿಂದ 16ರವರೆಗೆ ಝಾಕಿರ್ ನಾಯಕ್ ಅವರ ಇಂಗ್ಲೆಂಡ್ ಸಂಸ್ಥೆಗಳ ಸಂಪರ್ಕದಲ್ಲಿದ್ದರು. ಆದರೆ ಭಾರತ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡ ಬಳಿಕ ಆ ಸಂಸ್ಥೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಲಾಗಿದೆ.

ಸುದರ್ಶನ್ ಟಿವಿ ಆರೋಪಿಸಿರುವಂತೆ ತಾನು ಬಳಸಿರುವ ಧ್ವಜಕ್ಕೂ ರಾಷ್ಟ್ರಧ್ವಜಕ್ಕೂ ಯಾವುದೇ ಸಂಬಂಧ ಇಲ್ಲ. ಅದು ವತನ್ ಕಿ ಫಿಕ್ರ್ ಯೋಜನೆಯ ಧ್ವಜ ಎಂದು ಸ್ಪಷ್ಟೀಕರಣ ನೀಡಿದೆ. ಜೊತೆಗೆ ವಾಹಿನಿಯ ಕಾರ್ಯವೈಖರಿ ಕುರಿತು ಆಕ್ಷೇಪ ವ್ಯಕ್ತಪಡಿಸಿದೆ:

“ಸುದ್ದಿ ಚಾನೆಲ್ ನಿರ್ದಿಷ್ಟ ಸಮುದಾಯದ ವಿರುದ್ಧ ಕಾರ್ಯನಿರ್ವಹಿಸುತ್ತಿದೆ. ಮುಸ್ಲಿಮರು ಅಲ್ಲಿ ಅರ್ಜಿ ಸಲ್ಲಿಸುವಂತಿಲ್ಲ ಎಂಬ ಷರತ್ತಿರುವ ಜಾಹೀರಾತನ್ನು ವಾಹಿನಿ ಪ್ರಸಾರ ಮಾಡಿದೆ. ಇಂತಹ ಕ್ರಮಗಳು ಚಾನೆಲ್ ಹೊಂದಿರುವ ದ್ವೇಷದ ಪ್ರಮಾಣ ಮತ್ತು ದೇಶದ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ತನ್ನ ಆಮೂಲಾಗ್ರ ಚಿಂತನೆಯನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮತ್ತು ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತಿದ್ದಕ್ಕಾಗಿ ಸುದರ್ಶನ್ ಟಿವಿ ವಾಹಿನಿಯ ಸಂಪಾದಕ ಸುರೇಶ್ ಚವ್ಹಾಣ್ಕೆ ಅವರನ್ನು 2017 ರಲ್ಲಿ ಲಕ್ನೋ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.