ಆರ್‌ಬಿಐ, ಸುಪ್ರೀಂಕೋರ್ಟ್
ಆರ್‌ಬಿಐ, ಸುಪ್ರೀಂಕೋರ್ಟ್ 
ಸುದ್ದಿಗಳು

ಆರ್‌ಬಿಐ ಮೊರಟೋರಿಯಂ: ಸಣ್ಣ ಸಾಲಗಾರರ ಕೈಹಿಡಿಯಲು ಮುಂದಾದ ಕೇಂದ್ರ, ರೂ.2 ಕೋಟಿಯವರೆಗಿನ ಸಾಲದ ಚಕ್ರಬಡ್ಡಿ ಮನ್ನಾ

Bar & Bench

ಕೋವಿಡ್- 19 ಹಿನ್ನೆಲೆಯಲ್ಲಿ ಪರಿಚಯಿಸಲಾದ ಆರು ತಿಂಗಳ ಮೊರಟೋರಿಯಂ ಅವಧಿಯಲ್ಲಿ ರೂ.2 ಕೋಟಿಯವರೆಗಿನ ವೈಯಕ್ತಿಕ ಮತ್ತು ಸಣ್ಣ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವುದಾಗಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

"ಹೆಚ್ಚು ದುರ್ಬಲ ವರ್ಗದ ಸಾಲಗಾರರಿಗೆ" ಕೇಂದ್ರ ಸರ್ಕಾರ ಚಕ್ರಬಡ್ಡಿ ಮನ್ನಾ ಮಾಡುತ್ತಿದೆ. ಈ ಸಾಲಗಳಲ್ಲಿ ರೂ.2 ಕೋಟಿವರೆಗಿನ ಎಂಎಸ್‌ಎಂಇ ಸಾಲಗಳು, ಶಿಕ್ಷಣ ಸಾಲಗಳು, ಗೃಹ ಸಾಲಗಳು ಮತ್ತು ವೈಯಕ್ತಿಕ ಸಾಲಗಳು ಸೇರಿವೆ.

ಮೊರಟೋರಿಯಂ ಅವಧಿಗೆ ಸಾಲಗಳ ಮೇಲಿನ ಎಲ್ಲಾ ಬಡ್ಡಿ ಮನ್ನಾ ಮಾಡುವುದನ್ನು ಒಪ್ಪುಲು ಸಾಧ್ಯವಿಲ್ಲ ಅಥವಾ ಪ್ರಾಯೋಗಿಕವಲ್ಲ ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ, ಏಕೆಂದರೆ ಇದರಿಂದ ಬ್ಯಾಂಕುಗಳಿಗೆ ಅಂದಾಜು ರೂ. 6 ಲಕ್ಷ ಕೋಟಿಯಷ್ಟು ಹೊರೆ ಉಂಟಾಗಲಿದೆ ಎಂದು ಅಫಿಡವಿಟ್ಟಿನಲ್ಲಿ ತಿಳಿಸಲಾಗಿದೆ.

"ಬ್ಯಾಂಕುಗಳು ಈ ಹೊರೆಯನ್ನು ಹೊರಲು ಸಾಧ್ಯವಾದರೆ, ಅದು ಅಗತ್ಯವಾಗಿ ಅವುಗಳ ನಿವ್ವಳ ಮೌಲ್ಯದ ಗಣನೀಯ ಮತ್ತು ಪ್ರಮುಖ ಭಾಗವನ್ನು ಅಳಿಸಿ ಹಾಕಲಿದ್ದು, ಬಹುತೇಕ ಬ್ಯಾಂಕುಗಳನ್ನು ಅಸಮರ್ಥವಾಗಿಸುತ್ತದೆ ಮತ್ತು ಅವುಗಳ ಉಳಿವಿನ ಬಗ್ಗೆ ಬಹಳ ಗಂಭೀರವಾದ ಪ್ರಶ್ನಾರ್ಥಕ ಚಿಹ್ನೆ ಮೂಡಿಸುತ್ತದೆ."
ಕೇಂದ್ರಸರ್ಕಾರ ಸಲ್ಲಿಸಿದ ಅಫಿಡವಿಟ್

ಒಂದು ನಿರ್ದಿಷ್ಟ ವರ್ಗದ ಸಾಲಗಾರರಿಗೆ ಚಕ್ರಬಡ್ಡಿ ಮನ್ನಾ ಮಾಡುವ ಹೊಣೆಗಾರಿಕೆ ಮಾತ್ರ ಕಾರ್ಯಸಾಧ್ಯವಾಗಬಲ್ಲದು ಎಂದು ಅಫಿಡವಿಟ್ ಹೇಳುತ್ತದೆ. ಬ್ಯಾಂಕುಗಳು ತಮ್ಮ ಠೇವಣಿದಾರರಿಗೆ ಹಣಕಾಸಿನ ಪರಿಣಾಮಗಳನ್ನು ಉಂಟುಮಾಡದೆ ಅಥವಾ ಅವರ ನಿವ್ವಳ ಮೌಲ್ಯದ ಮೇಲೆ ಪರಿಣಾಮ ಬೀರದೆ ಈ ಹೊರೆ ಹೊರಲು ಅಸಾಧ್ಯ ಎಂದೂ ಹೇಳಲಾಗಿದೆ.

ಏಕೈಕ ಪರಿಹಾರ ಎಂದರೆ ಚಕ್ರಬಡ್ಡಿಯಾಗಿದ್ದರೆ ಅದನ್ನು ಮನ್ನಾ ಮಾಡುವುದರಿಂದ ಉಂಟಾಗುವ ಹೊರೆಯನ್ನು ಸರ್ಕಾರ ಭರಿಸುವುದಾಗಿದೆ. ಹೀಗೆ ಹೊರೆ ಹೊರುವುದರಿಂದ ರಾಷ್ಟ್ರ ಎದುರಿಸುತ್ತಿರುವ ಉಳಿದ ಒತ್ತಡ ಪೂರ್ಣ ಬದ್ಧತೆಗಳಾದ ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ನೇರ ವೆಚ್ಚಗಳು ಮತ್ತು ಜೀವನ ನಿರ್ವಹಣೆ ನಷ್ಟದಿಂದ ಉಂಟಾಗುವ ಜನಸಾಮಾನ್ಯರ ಸಮಸ್ಯೆಗಳನ್ನು ತಗ್ಗಿಸುವುದರ ಮೇಲೆ ಸ್ವಾಭಾವಿಕವಾಗಿಯೇ ಪರಿಣಾಮ ಬೀರುತ್ತದೆ ಎಂದು ಮಾನ್ಯ ನ್ಯಾಯಾಲಯಕ್ಕೆ ತಿಳಿಸಲಾಗುತ್ತಿದೆ.
ಕೇಂದ್ರ ಸಲ್ಲಿಸಿದ ಅಫಿಡವಿಟ್

ಆದ್ದರಿಂದ, "ಸಣ್ಣ ಸಾಲಗಾರರ ಕೈಹಿಡಿಯುವ" ಮಾರ್ಗ ಅನುಸರಿಸಿ, ರೂ.2 ಕೋಟಿಗಳ ತನಕ ಸಾಲ ಪಡೆದವರಿಗೆ ಚಕ್ರಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಅಫಿಡವಿಟ್ಟಿನಲ್ಲಿ ತಿಳಿಸಲಾಗಿದೆ.

ಸಾಲದ ದರವನ್ನು ತಗ್ಗಿಸುವುದಕ್ಕೆ ಸಂಬಂಧಿಸಿದಂತೆ ವಿಚಾರಣೆ ಸಮಯದಲ್ಲಿ ವಿವಿಧ ವಲಯಗಳ ಕಂಪೆನಿಗಳ ಪರವಾಗಿ ಅರ್ಜಿದಾರರು ಧ್ವನಿ ಎತ್ತಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರ ಮೊರಟೊರಿಯಂ ಅವಧಿಯಲ್ಲಿ ಕಂಪೆನಿಗಳ ಕ್ರೆಡಿಟ್‌ ರೇಟಿಂಗ್ ಅನ್ನು ಕೆಳಗಿಳಿಸದೆ ಇರಲು ಸಾಧ್ಯವೇ ಎನ್ನುವುದನ್ನು ಸೆಬಿ ಜೊತೆ ಚರ್ಚಸಿ ನಿರ್ಧರಿಸಲು, ಮಾನವೀಯ ಮತ್ತು ಸಮಗ್ರ ವಿಧಾನ ಅನುಸರಿಸಲು ಮುಂದಾಗುವುದಾಗಿ ತಿಳಿಸಿದೆ.

ಅಕ್ಟೋಬರ್ 5ರಂದು ಸುಪ್ರೀಂಕೋರ್ಟಿನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.