ಕೃಷಿ ಮಸೂದೆಗಳ ವಿರುದ್ಧ ಪಂಜಾಬ್‌ ರೈತರ ಪ್ರತಿಭಟನೆ
ಕೃಷಿ ಮಸೂದೆಗಳ ವಿರುದ್ಧ ಪಂಜಾಬ್‌ ರೈತರ ಪ್ರತಿಭಟನೆ  ಸಿಖ್ 24
ಸುದ್ದಿಗಳು

ಸುಪ್ರೀಂಕೋರ್ಟಿನಲ್ಲಿ ಕೃಷಿ ಕಾಯಿದೆ ಪ್ರಶ್ನಿಸಿ ಅರ್ಜಿ: ಈಗ ಆರ್‌ಜೆಡಿ ಸಂಸದ ಮನೋಜ್ ಝಾ ಸರದಿ

Bar & Bench

ಕೃಷಿ ಕಾಯಿದೆಗಳ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಧ್ವನಿ ಎತ್ತಿರುವ ಸಂಸದರ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಸಂಸದ ಮನೋಜ್ ಝಾ ಅವರು ವಿವಾದಾತ್ಮಕ ರೈತ ಕಾಯಿದೆಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.

ಹೊಸದಾಗಿ ಜಾರಿಗೆ ಬಂದ ಮೂರು ಕಾನೂನುಗಳನ್ನು ಸಂಸದ ಝಾ ಪ್ರಶ್ನಿಸಿದ್ದಾರೆ:

  • 2020ರ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯಿದೆ

  • 2020ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದ ಕಾಯಿದೆ

  • 2020ರ ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ

‘ತಾರತಮ್ಯದಿಂದ ಕೂಡಿದ್ದು ಸ್ಪಷ್ಟವಾಗಿ ಅನಿಯಂತ್ರಿತ’ವಾಗಿರುವ ಜೊತೆಗೆ ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಎಂಬ ಆಧಾರದ ಮೇಲೆ ಈ ಕಾನೂನುಗಳನ್ನು ‘ಅಸಂವಿಧಾನಿಕ’ ಎಂದು ಝಾ ಸಲ್ಲಿಸಿರುವ ಅರ್ಜಿ ಬಣ್ಣಿಸಿದೆ.

"ಬಡ ಕೃಷಿಕರ ಜೀವನಾಡಿಯಾಗಿರುವ ಮತ್ತು ದೇಶದ ಕೃಷಿ ವಲಯದ ಉಳಿವಿಗೆ ಅತ್ಯಗತ್ಯವಾದ ಭಾರತೀಯ ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸಲು ಆಕ್ಷೇಪಿತ ಕಾಯ್ದೆಗಳು ಪ್ರೋತ್ಸಾಹಿಸುತ್ತಿವೆ. ಆಕ್ಷೇಪಿತ ಕಾಯಿದೆಗಳು ಮೊಟ್ಟಮೊದಲಿಗೆ ರೈತರ ಹಿತಾಸಕ್ತಿಯನ್ನು ನಾಶ ಮಾಡುತ್ತಿದ್ದು ಯಾವುದೇ ಸೂಕ್ತ ವ್ಯಾಜ್ಯ ಪರಿಹಾರ ವ್ಯವಸ್ಥೆ ಇಲ್ಲಿದಿರುವುದರಿಂದ ಕೃಷಿಕರನ್ನು ಪ್ರಾಯೋಜಕರ ಮರ್ಜಿಗೆ ಒಳಗಾಗುವಂತೆ ಮಾಡುತ್ತವೆ " ಎಂದು ದೂರಲಾಗಿದೆ.
"... ಕನಿಷ್ಠ ಬೆಂಬಲ ಬೆಲೆ ಒದಗಿಸುವ ಬದಲು, ರೈತ ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸಲಾಗಿದೆ ಮತ್ತು ಗ್ರಾಮೀಣ ಕೃಷಿ ಮೇಲೆ ಕಾರ್ಪೊರೇಟ್ ಏಕಸ್ವಾಮ್ಯ ಪಡೆಗಳ ನೇರ ದಾಳಿ ತಡೆಯುವ ಸಲುವಾಗಿ ಅಸ್ತಿತ್ವದಲ್ಲಿರುವ ಕಾನೂನು ರಕ್ಷಾಕವಚವನ್ನು ಧ್ವಂಸ ಮಾಡಲು ಈ ಕಾಯಿದೆಗಳು ಉದ್ದೇಶಿಸಿವೆ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಝಾ ಅವರು ಅರ್ಜಿಯನ್ನು ವಕೀಲ ಫೌಜಿಯಾ ಶಕಿಲ್ ಮೂಲಕ ಸಲ್ಲಿಸಿದ್ದಾರೆ.

ಈ ಹಿಂದೆ ಕೇರಳದ ಕಾಂಗ್ರೆಸ್ ಸಂಸದ ಟಿ ಎನ್ ಪ್ರತಾಪನ್, ತಮಿಳುನಾಡಿನ ಡಿಎಂಕೆ ಸಂಸದ ತಿರುಚ್ಚಿ ಶಿವ ಅವರು ಕಾಯಿದೆಗಳ ಸಿಂಧುತ್ವ ಪ್ರಶ್ನಿಸಿ ಇದೇ ಬಗೆಯ ಅರ್ಜಿ ಸಲ್ಲಿಸಿದ್ದರು.