ಸುದ್ದಿಗಳು

[ರೋಹಿಣಿ ನ್ಯಾಯಾಲಯ ಸ್ಫೋಟ] ಡಿಆರ್‌ಡಿಒ ವಿಜ್ಞಾನಿಯನ್ನು ಬಂಧಿಸಿದ ದೆಹಲಿ ಪೊಲೀಸರು

ತನ್ನನ್ನು ಕಾನೂನು ಸಂಘರ್ಷದಲ್ಲಿ ಸಿಲುಕುವಂತೆ ಮಾಡಿದ್ದ ವಕೀಲರೊಬ್ಬರೊಂದಿಗೆ ವಿಜ್ಞಾನಿಗೆ ಇದ್ದ ವೈಯಕ್ತಿಕ ದ್ವೇಷ ಸ್ಫೋಟಕ್ಕೆ ಕಾರಣ ಎನ್ನಲಾಗಿದೆ.

Bar & Bench

ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಡಿಸೆಂಬರ್ 9 ರಂದು ಸಂಭವಿಸಿದ್ದ ಕಡಿಮೆ ತೀವ್ರತೆಯ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಯೊಬ್ಬರನ್ನು ದೆಹಲಿ ಪೊಲೀಸ್‌ ವಿಶೇಷ ಪಡೆ ಬಂಧಿಸಿದೆ.

ವರದಿಗಳ ಪ್ರಕಾರ ತನ್ನನ್ನು ಕಾನೂನು ಸಂಘರ್ಷದಲ್ಲಿ ಸಿಲುಕುವಂತೆ ಮಾಡಿದ್ದ ವಕೀಲರೊಬ್ಬರೊಂದಿಗೆ ವಿಜ್ಞಾನಿಗೆ ಇದ್ದ ವೈಯಕ್ತಿಕ ದ್ವೇಷ ಸ್ಫೋಟಕ್ಕೆ ಕಾರಣ. ವಿಜ್ಞಾನಿಯ ವಿರುದ್ಧ ವಕೀಲ ಕನಿಷ್ಠ 10 ಪ್ರಕರಣಗಳನ್ನು ದಾಖಲಿಸಿದ್ದರು ಎಂದು ತಿಳಿದು ಬಂದಿದೆ.

“ವಿಜ್ಞಾನಿ ಶಂಕಾಸ್ಪದ ಬ್ಯಾಗ್‌ನೊಂದಿಗೆ ನ್ಯಾಯಾಲಯ ಪ್ರವೇಶಿಸಿದ್ದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ವಿಜ್ಞಾನಿಯ ಗುರಿಯಾಗಿದ್ದ ವಕೀಲರು ಕೂಡ ಅಲ್ಲಿ ಇದ್ದದ್ದು ದೃಶ್ಯಾವಳಿಗಳಿಂದ ದೃಢಪಟ್ಟಿತ್ತು. ಘಟನೆ ನಡೆದ ಸ್ಥಳದಿಂದ ವಶಪಡಿಸಿಕೊಳ್ಳಲಾದ ಬ್ಯಾಗ್‌ನ ಲೋಗೊ ಆರೋಪಿ ವಿಜ್ಞಾನಿಯ ಸೋದರಸಂಬಂಧಿ ಕೆಲಸ ಮಾಡುತ್ತಿರುವ ಕಂಪೆನಿಯ ಲಾಂಛನದೊಂದಿಗೆ ಹೊಂದಿಕೆಯಾಗುತ್ತದೆ. ಎಂದು ವರದಿಯಾಗಿದೆ.

ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದನ್ನು ಅರಿಯಲು ಯತ್ನಿಸುತ್ತಿದ್ದಾರೆ. ಆದರೆ ಭಯೋತ್ಪಾದನೆಯ ನೆಲೆಯಲ್ಲಿ ದಾಳಿ ನಡೆದಿದೆ ಎಂಬದನ್ನು ಅವರು ತಳ್ಳಿಹಾಕಿದ್ದಾರೆ. "ಬಾಂಬ್ ಅನ್ನು ಸ್ಟೀಲ್ ಟಿಫಿನ್‌ ಡಬ್ಬದಲ್ಲಿ ಇರಿಸಲಾಗಿತ್ತು . ಅದು ಅಮೋನಿಯಂ ನೈಟ್ರೇಟ್ ಆಧಾರಿತ ಸ್ಫೋಟಕಗಳನ್ನು ಹೊಂದಿತ್ತು. ಅದರಲ್ಲಿ ಗಮನಾರ್ಹ ಪ್ರಮಾಣದ ಚೂರುಗಳೂ ಇದ್ದವು ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.’’ ಎಂಬುದಾಗಿ ಪೊಲೀಸ್ ಮೂಲಗಳು ಖಚಿತಪಡಿಸಿವೆ.

ಟಿಫಿನ್‌ ಡಬ್ಬದಲ್ಲಿದ್ದ ಬಾಂಬ್‌ನ ಸರ್ಕ್ಯೂಟ್‌ ಅನ್ನು ಸರಿಯಾಗಿ ಜೋಡಿಸಿರಲಿಲ್ಲ. ಇದರಿಂದಾಗಿ ಡೆಟೊನೇಟರ್‌ ಒಂದು ಮಾತ್ರವೇ ಸ್ಫೋಟಿಸಿ ಅಮೋನಿಯಂ ನೈಟ್ರೇಟ್‌ ಉದ್ದೇಶಿಸಿದ್ದಂತೆ ಸ್ಫೋಟಿಸಲಿಲ್ಲ ಎಂದು ವಿಧಿ ವಿಜ್ಞಾನ ತಂಡ ದೆಹಲಿ ಪೊಲೀಸರಿಗೆ ತಿಳಿಸಿದೆ. ನ್ಯಾಯಾಲಯದ ಕೊಠಡಿ ಸಂಖ್ಯೆ 102 ರಲ್ಲಿ ಸ್ಫೋಟ ಸಂಭವಿಸಿದ್ದು, ಒಬ್ಬ ವ್ಯಕ್ತಿ ಗಾಯಗೊಂಡಿದ್ದರು.