ಸುಪ್ರೀಂ ಕೋರ್ಟ್ ಲಿಂಗದ ಪರಿಕಲ್ಪನೆ ಮತ್ತು ವ್ಯಾಖ್ಯಾನವು ವ್ಯಕ್ತಿಯ ಜನನಾಂಗಗಳಿಗಷ್ಟೇ ಸೀಮಿತವಾಗಿಲ್ಲ ಎಂದು ಮಂಗಳವಾರ ತಿಳಿಸಿದೆ [ಸುಪ್ರಿಯೋ ಇನ್ನಿತರರು ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ದೇಶದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿ ಎಸ್ ನರಸಿಂಹ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಮಂಗಳವಾರದಿಂದ ಆರಂಭಿಸಿತು.
ಸಿಜೆಐ ಚಂದ್ರಚೂಡ್ ಅವರು “ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ಕಲ್ಪನೆ ಆತ್ಯಂತಿಕವಲ್ಲ. ಪುರುಷನ ಆತ್ಯಂತಿಕ ಪರಿಕಲ್ಪನೆ ಅಥವಾ ಮಹಿಳೆಯ ಆತ್ಯಂತಿಕ ಪರಿಕಲ್ಪನೆ ಎಂಬುದು ಇಲ್ಲವೇ ಇಲ್ಲ. ತನ್ನ ಜನನಾಂಗಗಳು ಯಾವುವು ಎಂಬುದರ ಮೇಲೆ ಲಿಂಗವನ್ನು ವ್ಯಾಖ್ಯಾನಿಸಲಾಗದು. ಇದು ಹೆಚ್ಚು ಸಂಕೀರ್ಣವಾಗಿದೆ. ಅದುವೇ ಮುಖ್ಯ ಸಂಗತಿ. ಆದ್ದರಿಂದ ವಿಶೇಷ ವಿವಾಹ ಕಾಯಿದೆಯು ಪುರುಷ ಮತ್ತು ಮಹಿಳೆ ಎಂದು ಹೇಳಿದಾಗಲೂ, ಪುರುಷ ಮತ್ತು ಮಹಿಳೆಯ ಕಲ್ಪನೆಯು ನಿಮ್ಮ ಜನನಾಂಗಗಳ ಆಧಾರದ ಮೇಲೆ ಆತ್ಯಂತಿಕವಾಗಿರುವುದಿಲ್ಲ” ಎಂದರು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದನ್ನು ನಿರಾಕರಿಸಿದರು. “ಇದು ಕಲ್ಪನೆ ಅಲ್ಲ. ಇದು ಜನನಾಂಗಗಳಿಗೆ ಸೀಮಿತವಾಗಿದೆ. ನನಗೆ ಇದನ್ನು ಹೇಳಲು ಇಷ್ಟ ಇಲ್ಲ” ಎಂದು ಪ್ರತಿಪಾದಿಸಿದರು.
ಆಗ ಮಾತನಾಡಿದ ನ್ಯಾ. ಕೌಲ್ ಅವರು “ಯಾವುದೇ ವಿಚಾರವನ್ನಾದರೂ ಇಡೀ ಸಮಾಜ ಒಪ್ಪಿಕೊಳ್ಳಬೇಕು ಎಂಬುದು ಕಡ್ಡಾಯವಲ್ಲ . ಬದಲಾವಣೆಗಳು ಸದಾ ನಡೆಯುತ್ತಿರುತ್ತವೆ” ಎಂದು ಹೇಳಿದರು.
ಮಂಗಳವಾರದ ವಿಚಾರಣೆ ಎಸ್ ಜಿ ಮೆಹ್ತಾ ಮತ್ತು ಸಿಜೆಐ ನಡುವಿನ ಬಿರುಸಿನ ಮಾತುಗಳಿಗೂ ಸಾಕ್ಷಿಯಾಯಿತು. ವಿಚಾರಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಯೋಚಿಸುವುದಾಗಿ ಕೇಂದ್ರ ಸರ್ಕಾರ ಹೇಳುವುದರೊಂದಿಗೆ ಕಾವೇರಿದ ಕಲಾಪ ನಡೆಯಿತು. ಅರ್ಜಿಗಳ ನಿರ್ವಹಣೆಗೆ ಯೋಗ್ಯವೇ ಎನ್ನುವುದರ ಕುರಿತಂತೆ ಕೇಂದ್ರ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಅವರ ಮನವಿಯನ್ನು ಸಿಜೆಐ ಚಂದ್ರಚೂಡ್ ತಿರಸ್ಕರಿಸಿದರು.
ವಿಷಯವು ಶಾಸಕಂಗದ ವ್ಯಾಪ್ತಿಗೆ ಬರುವುದರಿಂದ ಅರ್ಜಿಗಳು ನಿರ್ವಹಣೆಗೆ ಯೋಗ್ಯವೇ ಎನ್ನುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಾದವನ್ನು ಮೊದಲು ಆಲಿಸಬೇಕು ಎಂದು ಮೆಹ್ತಾ ವಾದಿಸಿದರು. ಆದರೆ, ಪ್ರಕರಣದ ವಿಸ್ತೃತ ವಿಚಾರಗಳನ್ನು ಅರ್ಥ ಮಾಡಿಕೊಳ್ಳಲು ನ್ಯಾಯಾಲಯ ಕೆಲ ಸಮಯದವರೆಗೆ ಅರ್ಜಿದಾರರ ಅಹವಾಲುಗಳನ್ನು ಆಲಿಸಲಿದೆ ಎಂದು ಸಿಜೆಐ ತಿಳಿಸಿದರು. ಎಸ್ ಜಿ ಮೆಹ್ತಾ ಪಟ್ಟು ಸಡಿಲಿಸದೇ ಇದ್ದಾಗ ಸಿಜೆಐ “ಇಲ್ಲಿ ನಾನು ಉಸ್ತುವಾರಿಯಾಗಿದ್ದೇನೆ, (ಪ್ರಕರಣ ಹೇಗೆ ನಡೆಯಬೇಕು ಎನ್ನುವುದನ್ನು) ನಾನೇ ನಿರ್ಧರಿಸುತ್ತೇನೆ… ನಾವು ಅರ್ಜಿದಾರರನ್ನು ಮೊದಲು ಆಲಿಸೋಣ. ನ್ಯಾಯಾಲಯಲ್ಲಿ ಹೇಗೆ ವಿಚಾರಣೆ ನಡೆಯಬೇಕು ಎಂದು ನಿರ್ದೇಶಿಸುವುದಕ್ಕೆ ನಾನು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ತಿರುಗೇಟು ನೀಡಿದರು.
ವೈಯಕ್ತಿಕ ಕಾನೂನನ್ನೂ ಪರಿಶೀಲಿಸುವ ಬದಲು ವಿಶೇಷ ವಿವಾಹ ಕಾಯಿದೆಯಡಿ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಕುರಿತಂತೆ ಅರ್ಜಿದಾರರ ವಾದದ ವ್ಯಾಪ್ತಿ ಸೀಮಿತಗೊಳಿಸಿ ಎಂದು ನ್ಯಾ ಕೌಲ್ ಪ್ರಸ್ತಾಪಿಸಿದರು.
ಆಗ ಸಿಜೆಐ "ಸದ್ಯಕ್ಕೆ, ನಾವು ವೈಯಕ್ತಿಕ ಕಾನೂನುಗಳತ್ತ ಹೊರಳಲೇಬಾರದು. ವಿಶೇಷ ವಿವಾಹ ಕಾಯಿದೆಗೆ ಲಿಂಗ ತಟಸ್ಥ ವ್ಯಾಖ್ಯಾನ ನೀಡುವ ಮೂಲಕ ನಾಗರಿಕ ಒಕ್ಕೂಟದ ಪರಿಕಲ್ಪನೆಯನ್ನು ವಿಕಸನಗೊಳಿಸಬಹುದೇ? ನವತೇಜ್ ಪ್ರಕರಣದಿಂದ ಇಲ್ಲಿಯವರೆಗೆ, ಸಲಿಂಗ ಕಾಮದ ಸಂಬಂಧಗಳಿಗೆ ಸ್ವೀಕಾರವಿದೆ, ಇದು ಸಾರ್ವತ್ರಿಕವೂ ಆಗಿದೆ. ಈ ವಿಕಸನದ ಒಮ್ಮತದಲ್ಲಿ, ನ್ಯಾಯಾಲಯ ಸಂವಾದಾತ್ಮಕ ಪಾತ್ರ ವಹಿಸಲಿದ್ದು ನಮ್ಮ ಮಿತಿಗಳ ಬಗ್ಗೆ ನಮಗೆ ತಿಳಿದಿದೆ" ಎಂದು ಹೇಳಿದರು.
ವಿಶೇಷ ವಿವಾಹ ಕಾಯಿದೆಯಡಿ ತಮ್ಮ ಕಕ್ಷಿದಾರರನ್ನು ದಂಪತಿ ಎಂದು ಮಾನ್ಯಗೊಳಿಸುವಂತೆ ಹಿರಿಯ ವಕೀಲ ಮುಕುಲ್ ರೋಹಟ್ಗಿ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ “ಕಾನೂನು ಇಲ್ಲದಿದ್ದಲ್ಲಿ, ನ್ಯಾಯಾಲಯ ಹೇಗೆ ನಿರ್ಧರಿಸಬಲ್ಲದು? ನ್ಯಾಯಾಲಯಗಳು ಮಧ್ಯಪ್ರವೇಶಿಸಬಹುದಾದ ಕುರಿತಂತೆ ವಿರೋಧಾಭಾಸವಿದೆಯೇ ಅಥವಾ ನ್ಯಾಯಾಲಯಗಳು ಮಧ್ಯಪ್ರವೇಶಿಸಬಹುದಾದೆಡೆ ಶಾಸಕಾಂಗಕ್ಕೆ ಅವಕಾಶವಿದೆಯೇ?" ಎಂದು ಪ್ರಶ್ನಿಸಿದರು.
ಮದುವೆಯಾಗುವ ಹಕ್ಕನ್ನು ಜಾರಿಗೊಳಿಸುವ ಸಾಮರ್ಥ್ಯ ಏನು ಎಂಬುದನ್ನು ನ್ಯಾಯಾಲಯ ಪರಿಶೀಲಿಸಬೇಕು ಎಂದು ನ್ಯಾಯಮೂರ್ತಿ ಕೌಲ್ ಹೇಳಿದರು.
ಮತ್ತೊಬ್ಬ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ ವಿ ವಿಶ್ವನಾಥನ್, "ನಾವು ಶಾಸಕಾಂಗಕ್ಕಾಗಿ ಕಾಯಬೇಕಾಗಿಲ್ಲ, ಏಕೆಂದರೆ ಜನಮನ್ನಣೆಯು ಮೂಲಭೂತ ಹಕ್ಕುಗಳಿಗೆ ವ್ಯತಿರಿಕ್ತವಾಗಿರುತ್ತದೆ" ಎಂದರು. ಈ ಹಂತದಲ್ಲಿ ಸಿಜೆಐ, ಸಮಾಜದ ವಿಕಾಸಕ್ಕೆ ಪ್ರತಿಕ್ರಿಯೆ ನೀಡಲು ಶಾಸಕಾಂಗಕ್ಕೂ ಅವಕಾಶ ನೀಡಬೇಕು. ಶಾಸಕಾಂಗ ಇಲ್ಲಿ ನಿಜವಾಗಿಯೂ ಪ್ರಸ್ತುತ ಎಂಬ ಅಂಶವನ್ನು ನಾವು ಅಲ್ಲಗಳೆಯುವಂತಿಲ್ಲ ಎಂದು ಎಚ್ಚರಿಸಿದರು.
ಪ್ರಸ್ತುತ ಸಲಿಂಗ ಜೋಡಿ ಬ್ಯಾಂಕ್‌ಗಳಲ್ಲಿ ಹೇಗೆ ತಾರತಮ್ಯ ಎದುರಿಸುತ್ತಿದ್ದಾರೆ ಮತ್ತು ವೈಯಕ್ತಿಕ ಕುಂದುಕೊರತೆಗಳಿಗಾಗಿ ನ್ಯಾಯಾಲಯಕ್ಕೆ ಬರುತ್ತಲೇ ಇರುತ್ತಾರೆ ಎಂದು ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ತಿಳಿಸಿದರು.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಾದ ಮಂಡಿಸಿ “ಇಬ್ಬರು ಒಪ್ಪಿಗೆ ಇರುವ ವಯಸ್ಕರ ನಡುವಿನ ಯಾವುದೇ ವಿವಾಹವನ್ನು ಅನುಮತಿಸಬೇಕು ಮತ್ತು ಮಾನ್ಯತೆ ನೀಡಬೇಕು. ವಿಶೇಷ ವಿವಾಹ ಕಾಯ್ದೆಯಡಿ ಆಕ್ಷೇಪಣೆಗಳ ನೋಟಿಸ್ ನೀಡುವ ಅಗತ್ಯವನ್ನು ತಳ್ಳಿಹಾಕಬೇಕಾಗಿದೆ” ಎಂದು ಹೇಳಿದರು.
ಇದಕ್ಕೆ ತಲೆದೂಗಿದ ಸಿಜೆಐ “ಭಿನ್ನ ಲಿಂಗೀಯ ವಿವಾಹದಲ್ಲಿ ಕೂಡ ಮದುವೆಗೆ ಆಕ್ಷೇಪಣೆಗಳನ್ನು ಆಹ್ವಾನಿಸುವ ಕ್ರಮ ಅಸಾಂವಿಧಾನಿಕವಾದುದು” ಎಂದರು.
ಎಲ್‌ಜಿಬಿಟಿಕ್ಯೂಐಎ+ ಸಮುದಾಯದ ವ್ಯಕ್ತಿಗಳು ಎದುರಿಸುತ್ತಿರುವ ಕಳಂಕವನ್ನು ನ್ಯಾಯವಾದಿ ಮುಕುಲ್ ರೋಹಟ್ಗಿ ಒತ್ತಿ ಹೇಳಿದರು.
ಆಗ ರೋಹಟ್ಗಿ ಅವರನ್ನುದ್ದೇಶಿಸಿ ಸಿಜೆಐ "ಹೌದು, ನಾವೆಲ್ಲರೂ ಸಾಮಾಜಿಕ ಜೀವಿಗಳು ಹೀಗಾಗಿ ಜನರನ್ನು ಒಂಟಿಯಾಗಿಸುತ್ತೇವೆ ಎಂದು ಸರ್ಕಾರ ಹೇಳಲು ಸಾಧ್ಯವಿಲ್ಲ. ಸಾಮಾಜಿಕ ರಚನೆಗಳು ನೀಡುವ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಮತ್ತು ತನ್ನ ಮೇಲೆ ಸಕಾರಾತ್ಮಕ ಹೊಣೆಗಾರಿಕೆ ಇದೆ ಎಂದು ಸರ್ಕಾರ ಹೇಳುವಂತಿಲ್ಲ ಎಂಬುದನ್ನು ನೀವು ಹೇಳುತ್ತಿದ್ದೀರಿ” ಎಂದರು.
ಮುಂದುವರಿದ ಅವರು “ಒಂದೆಡೆ ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ತಮ್ಮದೇ ಆಯ್ಕೆಗಳಿವೆ ಹಾಗೂ ಅವರು ಬಯಸಿದಂತೆ ಬದುಕಬಹುದು ಎಂದು ಹೇಳುವ ಸಮಾಜ ಇನ್ನೊಂದೆಡೆ, ನೀವು ನಿಮ್ಮ ಬದುಕನ್ನು ಮುಂದುವರಿಸಿ ಆದರೆ ನಾವು ನಿಮಗೆ (ವೈವಾಹಿಕ) ಮಾನ್ಯತೆ ನೀಡುವುದಿಲ್ಲ ಮತ್ತು ಸಾಂಪ್ರದಾಯಿಕ ಸಾಮಾಜಿಕ ರಚನೆಗಳ ಸೌಲಭ್ಯ ಕಸಿದುಕೊಳ್ಳಲಾಗುತ್ತದೆ ಎನ್ನಲು ಸಾಧ್ಯವಿಲ್ಲ” ಎಂದರು.
ಎಸ್‌ಜಿ ಮೆಹ್ತಾ ವಾದಿಸುತ್ತಾ “ಎಲ್‌ಜಿಬಿಟಿಕ್ಯೂಐಎ+ ವ್ಯಕ್ತಿಗಳಿಗೆ ಈಗಾಗಲೇ ತೃತೀಯ ಲಿಂಗಿ ವ್ಯಕ್ತಿಗಳ ಕಾಯಿದೆ ಅಡಿಯಲ್ಲಿ ರಕ್ಷಣೆಗಳನ್ನು ನೀಡಲಾಗಿದೆ” ಎಂದರು.
ಮಧ್ಯಪ್ರವೇಶಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ “ಸಲಿಂಗ ವಿವಾಹಕ್ಕೆ ಮನ್ನಣೆ ನೀಡುವುದು ವಿವಿಧ ಕಾನೂನುಗಳ ಮೇಲೆ ಪರಿಣಾಮ ಬೀರುವುದರಿಂದ ವೈಯಕ್ತಿಕ ಕಾನೂನುಗಳಲ್ಲಿ ಕೂಡ ಮಾರ್ಪಾಡು ತರಬೇಕಾಗುತ್ತದೆ” ಎಂದು ವಾದಿಸಿದರು. ಇಂದು (ಬುಧವಾರ) ಪ್ರಕರಣದ ವಿಚಾರಣೆ ಮುಂದುವರೆದಿದೆ.
ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರವು ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪಕ್ಷಕಾರರನ್ನಾಗಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮುಂದೆ ಹೊಸದಾಗಿ ಅಫಿಡವಿಟ್ ಸಲ್ಲಿಸಿದೆ.
ಜಂಟಿ ಕಾರ್ಯದರ್ಶಿ ಮತ್ತು ಶಾಸಕಾಂಗ ಕಾನೂನು ಸಲಹಾಕಾರ ಕೆ ಆರ್ ಸಾಜಿ ಕುಮಾರ್ ಅವರ ಮೂಲಕ ಸಲ್ಲಿಸಲಾಗಿರುವ ಅಫಿಡವಿಟ್‌ನಲ್ಲಿ ಸಲಿಂಗ ವಿವಾಹದ ಕುರಿತಾದ ಪ್ರಶ್ನೆಯು ಸಂವಿಧಾನದ ಏಳನೇ ಶೆಡ್ಯೂಲ್‌ಗೆ ಒಳಪಟ್ಟಿರುವ ರಾಜ್ಯಗಳ ಶಾಸನಾತ್ಮಕ ಹಕ್ಕುಗಳನ್ನು ಸಹ ಒಳಗೊಳ್ಳುವುದರಿಂದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳನ್ನು ಪಕ್ಷಕಾರರನ್ನಾಗಿಸಿಕೊಳ್ಳಲು ನಿರ್ದೇಶಿಸುವಂತೆ ಸುಪ್ರೀಂ ಕೋರ್ಟ್‌ಅನ್ನು ಕೋರಲಾಗಿದೆ.