Supreme Court of India 
ಸುದ್ದಿಗಳು

ಐಪಿಸಿ 498ಎ, ಕೌಟುಂಬಿಕ ಹಿಂಸೆ ಕಾನೂನುಗಳು ಅತಿ ಹೆಚ್ಚು ದುರ್ಬಳಕೆಯಾದ ಸಾಲಿನಲ್ಲಿವೆ: ಸುಪ್ರೀಂ ಕೋರ್ಟ್

ಜೀವನಾಂಶಕ್ಕೆ ಸಂಬಂಧಿಸಿದ ವೈವಾಹಿಕ ದಾವೆಯ ವಿಚಾರಣೆಯ ವೇಳೆ ನ್ಯಾ. ಬಿ ಆರ್ ಗವಾಯಿ ನೇತೃತ್ವದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ (ಪತಿ ಹಾಗೂ ಆತನ ಕುಟುಂಬದವರು ಮಹಿಳೆ ಮೇಲೆ ನಡೆಸುವ ಕ್ರೌರ್ಯ) ಹಾಗೂ ಕೌಟುಂಬಿಕ ದೌರ್ಜನ್ಯ ಕಾಯಿದೆಯ ಸೆಕ್ಷನ್‌ಗಳು ಅತಿ ಹೆಚ್ಚು ದುರುಪಯೋಗವಾದ ಕಾನೂನುಗಳಾಗಿವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ಜೀವನಾಂಶಕ್ಕೆ ಸಂಬಂಧಿಸಿದ ವೈವಾಹಿಕ ವಿವಾದದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

"ಇಂತಹ ಪ್ರಕರಣಗಳಲ್ಲಿ, ಸ್ವಾತಂತ್ರ್ಯ ಪಡೆಯುವುದು ಉತ್ತಮ ಸಂಗತಿ" ಎಂದು ನ್ಯಾಯಮೂರ್ತಿ ಗವಾಯಿ ವಿಚಾರಣೆ ವೇಳೆ ತಿಳಿಸಿದರು.

ವಿವಾಹವಾಗಿ ಒಂದು ದಿನವೂ ಒಟ್ಟಿಗೆ ವಾಸಿಸದಿದ್ದರೂ, ಮದುವೆಯು ಪೂರ್ಣಗೊಳ್ಳದೇ ಇದ್ದರೂ ಹೆಂಡತಿಗೆ  ₹50 ಲಕ್ಷ ಜೀವನಾಂಶ ನೀಡುವಂತೆ ನೀಡಿದ್ದ ಆದೇಶವನ್ನು ತಾನು ಕಂಡಿದ್ದೇನೆ ಎಂದ ನ್ಯಾ. ಗವಾಯಿ ಅವರು ಒಂದು ಹಂತದಲ್ಲಿ ಹೇಳಿದರು. ಐಪಿಸಿ ಸೆಕ್ಷನ್‌ 498ಎ ದೀರ್ಘಾಕಾಲದಿಂದ ಚರ್ಚೆಯ ವಿಚಾರವಾಗಿದ್ದು ಪತಿ ಮತ್ತು ಅತ್ತೆಯನ್ನು ಅಪರಾಧ ಪ್ರಕರಣಗಳಲ್ಲಿ ಸುಳ್ಳೇ ಸಿಲುಕಿಸಲು ಅದನ್ನು ಮಹಿಳೆಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಈ ಸೆಕ್ಷನ್‌ನ ಟೀಕಾಕಾರರು ಹೇಳುತ್ತಾರೆ. ಈ ಟೀಕೆ ಕೆಲವೊಮ್ಮೆ ನ್ಯಾಯಾಲಯಗಳಿಂದಲೂ ವ್ಯಕ್ತವಾಗಿದೆ ಎಂದು ನುಡಿದರು.

ಕಳೆದ ತಿಂಗಳು ಬಾಂಬೆ ಹೈಕೋರ್ಟ್‌ ಕೂಡ ಐಪಿಸಿ ಸೆಕ್ಷನ್ 498ಎ ದುರುಪಯೋಗವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ವೃದ್ಧರು ಮತ್ತು ಹಾಸಿಗೆ ಹಿಡಿದವರನ್ನು ಕೂಡ ಈ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿತ್ತು.

ವೈವಾಹಿಕ ವ್ಯಾಜ್ಯ ಹೂಡಿರುವ ಪತ್ನಿಯಂದಿರು ಪತಿ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಇಂತಹ ಕ್ರಿಮಿನಲ್ ಮೊಕದ್ದಮೆ ಹೂಡುತ್ತಾರೆ ಎಂದು ಕಳೆದ ಮೇನಲ್ಲಿ ಕೇರಳ ಹೈಕೋರ್ಟ್ ಬೆರಳು ಮಾಡಿತ್ತು.

ಕಳೆದ ವರ್ಷ ಆಗಸ್ಟ್‌ನಲ್ಲಿ ನೀಡಲಾದ ಆದೇಶದಲ್ಲಿ ಇದೇ ಬಾಂಬೆ ಹೈಕೋರ್ಟ್‌  ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯಿದೆಯ ಸೆಕ್ಷನ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪತ್ನಿಯರ ಪ್ರವೃತ್ತಿ ಬಗ್ಗೆ ಇದೇ  ಬಾಂಬೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.

ವಿವಾಹಿತ ಮಹಿಳೆಯರ ಮೇಲೆ ಪತಿ ಅಥವಾ ಅವರ ಸಂಬಂಧಿಕರಿಂದ ಕ್ರೌರ್ಯವನ್ನು ಶಿಕ್ಷಿಸುವ ಶ್ಲಾಘನೀಯ ಉದ್ದೇಶದಿಂದ ಕಾಯಿದೆಯನ್ನು ಪರಿಚಯಿಸಲಾಗಿದ್ದರೂ, ಈಗ ಅದನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಜುಲೈ 2023 ರಲ್ಲಿ, ಜಾರ್ಖಂಡ್ ಹೈಕೋರ್ಟ್ ಹೇಳಿತ್ತು. 

ಗಮನಾರ್ಹವೆಂದರೆ, ಐಪಿಸಿ ಬದಲು ಈಗ ಜಾರಿಯಲ್ಲಿರುವ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌  85 ರೂಪದಲ್ಲಿ ಈ ಕಾನೂನು ಮುಂದುವರೆದಿದೆ.