Supreme Court  
ಸುದ್ದಿಗಳು

ಬೇಸಿಗೆ ರಜೆ ಬಳಿಕ ಆರಂಭಗೊಂಡ ಸುಪ್ರೀಂ ಕೋರ್ಟ್: ಇಲ್ಲಿದೆ ಪ್ರಕಟವಾಗಲಿರುವ ಮಹತ್ವದ ತೀರ್ಪುಗಳ ಮಾಹಿತಿ

Bar & Bench

ಒಂದೂವರೆ ತಿಂಗಳ ಸುದೀರ್ಘ ಬೇಸಿಗೆ ರಜೆ ಬಳಿಕ ಸೋಮವಾರದಿಂದ ಸುಪ್ರೀಂ ಕೋರ್ಟ್‌ ಮತ್ತೆ ಕಾರ್ಯಾರಂಭ ಮಾಡಿದ್ದು ಹಲವು ನಿರ್ಣಾಯಕ ತೀರ್ಪುಗಳು ಪ್ರಕಟವಾಗಬೇಕಿದೆ. ಮೇ 20ರಿಂದ ಬೇಸಿಗೆ ರಜೆಯಲ್ಲಿದ್ದ ಸುಪ್ರೀಂ ಕೋರ್ಟ್‌  ಇಂದು (ಜುಲೈ 8 ಸೋಮವಾರ) ಕಾರ್ಯಾರಂಭ ಮಾಡಿದೆ.

 ಮುಂದಿನ ಕೆಲ ದಿನಗಳಲ್ಲಿ ಪ್ರಕಟವಾಗಲಿರುವ ಪ್ರಮುಖ ತೀರ್ಪುಗಳ ಮಾಹಿತಿ ಇಲ್ಲಿದೆ:

ಅರವಿಂದ್ ಕೇಜ್ರಿವಾಲ್ ಬಂಧನದ ಕಾನೂನುಬದ್ಧತೆ

Arvind Kejriwal

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ (ಸಿಎಂ) ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ಅಕ್ರಮ ಹಣ ವರ್ಗಾವಣೆ  ತಡೆ ಕಾಯಿದೆಯ ಸೆಕ್ಷನ್ 19ರ ಅಡಿ ತಮ್ಮ ಬಂಧನವನ್ನು ಅವರು ಪ್ರಶ್ನಿಸಿದ್ದಾರೆ.  ಈ ಸೆಕ್ಷನ್‌ ವ್ಯಕ್ತಿಯೊಬ್ಬ ಹಣ ವರ್ಗಾವಣೆ ಅಪರಾಧ ಎಸಗಿದ್ದಾನೆ ಎಂದು ನಂಬಲು ಕಾರಣಗಳಿದ್ದರೆ ಜಾರಿ ನಿರ್ದೇಶನಾಲಯಕ್ಕೆ ಆತನನ್ನು ಬಂಧಿಸಲು ಅನುಮತಿ ನೀಡುತ್ತದೆ.

ಲೆ. ಗವರ್ನರ್‌ ಪಾಲಿಕೆ ಸದಸ್ಯರ ನಾಮ ನಿರ್ದೇಶನ ಪ್ರಶ್ನಿಸಿದ್ದ ಅರ್ಜಿ

Arvind Kejriwal, Delhi LG VK Saxena and Supreme Court

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರ ಸಚಿವ ಸಂಪುಟದ ಸಹಾಯ, ಸೂಚನೆ ಪಡೆಯದೆ ದೆಹಲಿ ಮಹಾನಗರ ಪಾಲಿಕೆಗೆ (ಎಂಸಿಡಿ) ಹತ್ತು ಮಂದಿ ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಆಮ್‌ ಆದ್ಮಿ ಪಕ್ಷದ ನೇತೃತ್ವದ ಸರ್ಕಾರ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪು ನೀಡಲಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ತೀರ್ಪನ್ನು ಕಾಯ್ದಿರಿಸುವಾಗ ಪೀಠ ಮೌಖಿಕವಾಗಿ ಎಮ್‌ಸಿಡಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಹೊಂದಿರುವ ಲೆ. ಗವರ್ನರ್‌ ಅವರು, ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ದೆಹಲಿ ಪಾಲಿಕೆಯನ್ನು  ಅಸ್ಥಿರಗೊಳಿಸಬಹುದು ಎಂದು ಹೇಳಿತ್ತು.

ಪೌರತ್ವ ಕಾಯಿದೆಯ ಸೆಕ್ಷನ್ 6 ಎ ಸಿಂಧುತ್ವ

1955ರ ಪೌರತ್ವ ಕಾಯಿದೆಯ ಸೆಕ್ಷನ್ 6 ಎ ಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಎಂ ಎಂ ಸುಂದರೇಶ್,  ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ತೀರ್ಪು ನೀಡಲಿದೆ.

ಪೌರತ್ವ ಕಾಯ್ದೆಯ ಸೆಕ್ಷನ್ 6 ಎ ಅಸ್ಸಾಂ ಒಪ್ಪಂದದ ವ್ಯಾಪ್ತಿಗೆ ಬರುವ ವಲಸಿಗರಿಗೆ ಪೌರತ್ವ ನೀಡುವುದಕ್ಕೆ ಸಂಬಂಧಿಸಿದೆ. ಈ ಸೆಕ್ಷನ್‌ ಪ್ರಕಾರ ಜನವರಿ 1, 1966 ಮತ್ತು ಮಾರ್ಚ್ 25, 1971ರ ನಡುವೆ ಭಾರತ ಪ್ರವೇಶಿಸಿ ಅಸ್ಸಾಂನಲ್ಲಿ ವಾಸಿಸುತ್ತಿರುವ ಜನರು ತಮ್ಮನ್ನು ಭಾರತದ ನಾಗರಿಕರು ಎಂದು ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಲಿರುವ ತೀರ್ಪು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಪಟ್ಟಿ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರಲಿದೆ.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ನಂತರ ಪೂರ್ವ ಬಂಗಾಳದ ಜನರ ಮೇಲೆ ನಡೆದ ದೌರ್ಜನ್ಯಗಳಿಗೆ ಪರಿಹಾರ ನೀಡುವುದಕ್ಕಾಗಿ ಈ ನಿಯಮಾವಳಿಯನ್ನು ಭಾಗಶಃ ಜಾರಿಗೆ ತರಲಾಗಿದೆ ಎಂಬ ವಿಚಾರವನ್ನು ಡಿಸೆಂಬರ್‌ನಲ್ಲಿ ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಆದ್ದರಿಂದ, ಇದನ್ನು ಸಾಮಾನ್ಯವಾಗಿ ಅಕ್ರಮ ವಲಸಿಗರಿಗೆ ಕ್ಷಮಾದಾನ ನೀಡುವ ಯೋಜನೆಗೆ ಹೋಲಿಸಲಾಗುವುದಿಲ್ಲ ಎಂದು ನ್ಯಾಯಪೀಠ ಮೌಖಿಕವಾಗಿ ತಿಳಿಸಿತ್ತು ಸೆಕ್ಷನ್ ಜಾರಿಗೆ ಬಂದ ನಂತರ ಉದ್ಭವಿಸಿದ ರಾಜಕೀಯ ಬೆಳವಣಿಗೆಗಳಿಂದ ಅದರ ಸಿಂಧುತ್ವವನ್ನು ನಿರ್ಧರಿಸಲಾಗುವುದಿಲ್ಲ ಎಂದು ಸಿಜೆಐ ಹೇಳಿದ್ದರು.

ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ಸ್ಥಾನಮಾನ ಪ್ರಶ್ನಿಸಿರುವ ಅರ್ಜಿ

AMU

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು 1968ರಲ್ಲಿ ಸುಪ್ರೀಂ ಕೋರ್ಟ್‌ ಐವರು ಸದಸ್ಯರ ಪೀಠ ನೀಡಿದ್ದ ತೀರ್ಪಿನ ಸೂಕ್ತತೆ ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಜೆಐ ಚಂದ್ರಚೂಡ್‌ ನೇತೃತ್ವದ ಪೀಠ ತೀರ್ಪು ನೀಡಲಿದೆ.

ಭಾರತದ ಸಂವಿಧಾನದ 30 ನೇ ವಿಧಿಯ ಅಡಿಯಲ್ಲಿ ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನವನ್ನು ಹೊಂದಿದೆಯೇ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ  ನಿರ್ಧರಿಸಲಿದೆ. ಕೇಂದ್ರೀಯ ವಿವಿಗಳಿಗೆ ಅಲ್ಪಸಂಖ್ಯಾತ ಸ್ಥಾನ ಮಾನ ನೀಡಲಾಗದು ಎಂದು 1968ರಲ್ಲಿ ತೀರ್ಪು ನೀಡಲಾಗಿತ್ತು.

ಪತಂಜಲಿಯ ಹಾದಿ ತಪ್ಪಿಸುವ ಜಾಹೀರಾತು ಪ್ರಕರಣ

ಪತಂಜಲಿ ಆಯುರ್ವೇದ ಕಂಪೆನಿ ಮತ್ತದರ ಮಾಲೀಕರಾದ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡಿದ್ದ ಸಂಬಂಧ ದಾಖಲಿಸಲಾದ ನ್ಯಾಯಾಂಗ ನಿಂದನೆ ಪ್ರಕರಣ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ನೀಡಬೇಕಿದೆ.

ಪತಂಜಲಿ ಸೇರಿದಂತೆ ಮೂವರೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿರುವ ಪತ್ರಿಕೆಗಳ ತುಣುಕುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಪತಂಜಲಿ ಪರ ವಕೀಲರು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರು ತೀರ್ಪು ಕಾಯ್ದಿರಿಸುವ ವೇಳೆ ತಿಳಿಸಿದ್ದರು.

ಸಿಬಿಐಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಪ. ಬಂಗಾಳದ ಮೊಕದ್ದಮೆ

Supreme Court, CBI, and West Bengal Map

ಕೇಂದ್ರೀಯ ತನಿಖಾ ಸಂಸ್ಥೆಯಾದ ಸಿಬಿಐಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಮೂಲ ದಾವೆ ನಿರ್ವಹಣಾ ಯೋಗ್ಯವೇ ಎಂಬ ಕುರಿತು ಸುಪ್ರೀಂ ಕೋರ್ಟ್‌ ನಿರ್ಧರಿಸಲಿದೆ.

ಪ್ರಕರಣಗಳ ತನಿಖೆಗೆ ಸಿಬಿಐಗೆ ನೀಡಿದ್ದ ಸಾಮಾನ್ಯ ಸಮ್ಮತಿಯನ್ನು ತಾನು ಹಿಂಪಡೆದಿದ್ದು ಸಿಬಿಐ ಇನ್ನು ಮುಂದೆ ಪಶ್ಚಿಮ ಬಂಗಾಳದಲ್ಲಿ ತನಿಖೆ ಮುಂದುವರೆಸಲು ಸಾಧ್ಯವಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸರ್ಕಾರ ಸಲ್ಲಿಸಿರುವ ಮೊಕದ್ದಮೆ ಪ್ರತಿಪಾದಿಸಿತ್ತು.

ತನಿಖೆ ನಡೆಸಲೆಂದು ಸಿಬಿಐಗೆ ರಾಜ್ಯ ಪ್ರವೇಶಿಸಲು ಅವಕಾಶವಿತ್ತರೆ ಸಾಮಾನ್ಯವಾಗಿ ಜಾರಿ ನಿರ್ದೇಶನಾಲಯವೂ ಅದನ್ನು ಹಿಂಬಾಲಿಸಿ ಬರುತ್ತದೆ. ಇವೆಲ್ಲವೂ ಭಾರತೀಯ ರಾಜಕೀಯದ ಮೇಲೆ ಅಗಾಧ ಪರಿಣಾಮ ಬೀರುವಂತಹವು ಎಂದು ರಾಜ್ಯ ಸರ್ಕಾರ  ಹಿಂದಿನ ವಿಚಾರಣೆ ವೇಳೆ ವಾದಿಸಿತ್ತು.

ಖಾಸಗಿ ಆಸ್ತಿಯನ್ನು ಸಮುದಾಯದ  ಐಹಿಕ ಸಂಪನ್ಮೂಲ ಎನ್ನಬಹುದೇ?

Nine judges constitution bench of supreme court

ಸಂವಿಧಾನದ 39 (ಬಿ) ವಿಧಿಯ ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು "ಸಮುದಾಯದ ಐಹಿಕ ಸಂಪನ್ಮೂಲಗಳು" ಎಂದು ಪರಿಗಣಿಸಬಹುದೇ ಮತ್ತು "ಸಾಮಾನ್ಯ ಒಳಿತನ್ನು" ಕಾಪಾಡಲು ಪ್ರಭುತ್ವ ಅದನ್ನು ಸ್ವಾಧೀನಪಡಿಸಿಕೊಳ್ಳಬಹುದೇ ಎಂಬುದರ ಕುರಿತು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ತೀರ್ಪು ನೀಡಲಿದೆ.

ಕೈಗಾರಿಕಾ ಮದ್ಯ ನಿಯಂತ್ರಿಸಲು ಪ್ರಭುತ್ವಕ್ಕೆ ಇರುವ ಅಧಿಕಾರ

ಮದ್ಯದ ಉತ್ಪಾದನೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯೊಡ್ಡುವ ಮಾನವ ಕುಡಿಯುವ ಮದ್ಯವನ್ನು ನಿಯಂತ್ರಿಸಲು ರಾಜ್ಯಗಳಿಗೆ ಕೂಡ ಅವಕಾಶ ನೀಡದೆ ಕೇಂದ್ರ ಸರ್ಕಾರವೊಂದೇ ಕೈಗಾರಿಕಾ ಮದ್ಯದ ಮೇಲೆ ವಿಶೇಷ ನಿಯಂತ್ರಣ ಹೊಂದಬಹುದೇ ಎಂಬುದರ ಕುರಿತು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಪೀಠ ತೀರ್ಪು ನೀಡಲಿದೆ.

ಮದ್ಯದ ಮೇಲಿನ ತೆರಿಗೆ, ಮದ್ಯ ಉತ್ಪಾದನೆ ಮತ್ತು ತಯಾರಿಕೆ ಕುರಿತ ಅಧಿಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಘರ್ಷಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಗಣಿ ಗುತ್ತಿಗೆದಾರರು ಪಾವತಿಸುವ ರಾಯಧನ ತೆರಿಗೆಯೇ?

ಕೇಂದ್ರ ಸರ್ಕಾರಕ್ಕೆ ಗಣಿ ಗುತ್ತಿಗೆದಾರರು ಪಾವತಿಸುವ ರಾಯಧನ ತೆರಿಗೆ ಸ್ವರೂಪದ್ದೇ ಎಂಬ ಕುರಿತು ಸುಪ್ರೀಂ ಕೋರ್ಟ್‌ ಒಂಬತ್ತು ನ್ಯಾಯಮೂರ್ತಿಗಳ ಪೀಠ ತೀತ್ಪು ನೀಡಲಿದೆ. ಈ ಪೀಠದೆದುರು ಬಾಕಿ ಇರುವ ಅತ್ಯಂತ ಹಳೆಯ ಪ್ರಕರಣ ಇದಾಗಿದೆ.

 ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ (ಗಣಿ ಕಾಯಿದೆ) ಜಾರಿಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರಗಳಿಗೆ ಗಣಿ ಮತ್ತು ಖನಿಜಗಳ ಮೇಲೆ ತೆರಿಗೆ ವಿಧಿಸುವ ಮತ್ತು ನಿಯಂತ್ರಿಸುವ ಅಧಿಕಾರ  ನಿರಾಕರಿಸಲಾಗಿದೆಯೇ ಎಂಬ ವಿಷಯವನ್ನೂ ಇದು ಒಳಗೊಂಡಿದೆ.

ಎಸ್‌ಸಿ ಎಸ್‌ಟಿ ಉಪ-ವರ್ಗೀಕರಣ

Dr. Babasaheb Ambedkar

ಮೀಸಲಾತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಉಪ ವರ್ಗೀಕರಣ ಮಾಡುವುದರ ಕಾನೂನುಬದ್ಧತೆ ಪ್ರಶ್ನಿಸಿದ್ದ ಪ್ರಕರಣ ಸುಪ್ರೀಂ ಕೋರ್ಟ್‌ ತೀರ್ಪನ್ನು ಎದುರು ನೋಡುತ್ತಿದೆ.

ಪರಿಶಿಷ್ಟ ಸಮುದಾಯಗಳ ಒಳ ವರ್ಗೀಕರಣಕ್ಕಾಗಿ  2006ರಲ್ಲಿ ಪಂಜಾಬ್ ವಿಧಾನಸಭೆ ಪಂಜಾಬ್ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ (ಸೇವೆಗಳಲ್ಲಿ ಮೀಸಲಾತಿ) ಕಾಯಿದೆ ಯನ್ನು ಜಾರಿಗೆ ತಂದಿತ್ತು. ಆದರೆ ಅದನ್ನು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.