Ship (for representation purpose only) 
ಸುದ್ದಿಗಳು

ಎಂಎಸ್‌ಸಿ ಎಲ್ಸಾ-3 ಹಡಗು ಮಾಲೀಕರ ವಿರುದ್ಧ ನೌಕಾ ಮೊಕದ್ದಮೆ ದಾಖಲಿಸಲಾಗುವುದು: ಕೇರಳ ಸರ್ಕಾರ

ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಟಿ ಎನ್ ಪ್ರತಾಪನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

Bar & Bench

ಕೇರಳದ ಕೊಚ್ಚಿ ಬಳಿಯ ಅಲಪ್ಪುಳ ಕರಾವಳಿಯಲ್ಲಿ ಮೇ 24 ರಂದು ಲೈಬೀರಿಯಾದ ಸರಕು ಸಾಗಣೆ ಹಡಗು ಎಂಎಸ್ಸಿ ಎಲ್ಸಾ 3 ಮುಳುಗಿ ಪರಿಸರ ನಾಶ ಮತ್ತು ಆರ್ಥಿಕ ನಷ್ಟ ಉಂಟಾಗಿದ್ದು ಹಡಗಿನ ಒಡೆತನ ಹೊಂದಿರುವ ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ (ಎಂಎಸ್‌ಸಿ) ವಿರುದ್ಧ ನೌಕಾ ಮೊಕದ್ದಮೆ ಹೂಡಲು ನಿರ್ಧರಿಸಿರುವುದಾಗಿ ಕೇರಳ ಸರ್ಕಾರ ಗುರುವಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ [ಟಿ ಎನ್‌ ಪ್ರತಾಪನ್‌ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಂಸದ ಟಿ ಎನ್ ಪ್ರತಾಪನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಿತಿನ್ ಜಾಮ್‌ದಾರ್‌ ಮತ್ತು ನ್ಯಾಯಮೂರ್ತಿ ಬಸಂತ್ ಬಾಲಾಜಿ ಅವರಿದ್ದ ಪೀಠದೆದುರು ಸರ್ಕಾರ ಈ ಕುರಿತಾದ ಅಫಿಡವಿಟ್‌ ಸಲ್ಲಿಸಿತು.

ಮೇ 24 ರಂದು ಕರಾವಳಿ ಜಿಲ್ಲೆಯಾದ ಅಲಪ್ಪುಳದಿಂದ ನೈಋತ್ಯಕ್ಕೆ 25 ಕಿ.ಮೀ ದೂರದಲ್ಲಿ ಲೈಬೀರಿಯಾ ಮೂಲದ ಸರಕು ಹಡಗು ಎಂಎಸ್‌ಸಿ ಎಲ್ಸಾ 3 ಮುಳುಗಿದ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ, ಪರಿಸರ ಶುಚೀಕರಣ ಹಾಗೂ ಸೂಕ್ತ ಕಾನೂನು ಕ್ರಮಕ್ಕಾಗಿ ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಪಿಐಎಲ್‌ ಕೋರಿತ್ತು.

“ವಶಕ್ಕೆ ಪಡೆಯಲಾದ ಹಡಗು ಸೇರಿದಂತೆ ಪ್ರತಿವಾದಿ ಕಂಪನಿಯ ವಿರುದ್ಧ ನೌಕಾ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಶಿಪ್ಪಿಂಗ್ ಮಹಾನಿರ್ದೇಶಕರು ಕೈಗೊಂಡ ಪರಿಹಾರ ಇತ್ಯರ್ಥಕ್ಕೆ ಸಂಬಂಧಿಸಿದಂತೆ ತಾನು ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿರುವುದಾಗಿ ಸರ್ಕಾರ ಹೇಳಿದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ದಾಖಲಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 2ರಂದು ನಡೆಯಲಿದೆ.