
ಹಿಂದೂ-ಮುಸ್ಲಿಂ ಜೋಡಿಯನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಉತ್ತರ ಪ್ರದೇಶ ಪೊಲೀಸರನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಅಲಾಹಾಬಾದ್ ಹೈಕೋರ್ಟ್ ತಮ್ಮ ಆಯ್ಕೆಯ ಸ್ಥಳಕ್ಕೆ ಅವರನ್ನು ಸುರಕ್ಷಿತವಾಗಿ ಕರೆದೊಯ್ಯವಂತೆ ಪೊಲೀಸರಿಗೆ ನಿರ್ದೇಶಿಸಿತು.
ನ್ಯಾಯಮೂರ್ತಿಗಳಾದ ಸಲೀಲ್ ಕುಮಾರ್ ರೈ ಮತ್ತು ದಿವೇಶ್ ಚಂದ್ರ ಸಮಂತ್ ಅವರಿದ್ದ ವಿಭಾಗೀಯ ಪೀಠ ಕಾನೂನುಬಾಹಿರ ಹಸ್ತಕ್ಷೇಪದಿಂದ ಜೋಡಿಯನ್ನು ರಕ್ಷಿಸುವಂತೆ ಮತ್ತು ಅವರಿಗೆ ಭದ್ರತೆ ಒದಗಿಸುವಂತೆ ಪೊಲೀಸ್ ಆಯುಕ್ತರು, ಅಲಿಗಢ ಮತ್ತು ಬರೇಲಿಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (ಎಸ್ಎಸ್‌ಪಿ) ನಿರ್ದೇಶಿಸಿತು.
ಮಹಿಳೆ ಪ್ರಾಪ್ತ ವಯಸ್ಕಳಾಗಿರುವುದರಿಂದ ಪೊಲೀಸರು ಆಕೆಯನ್ನು ವಶಕ್ಕೆ ತೆಗೆದುಕೊಳ್ಳುವಂತಿಲ್ಲ ಎಂದ ನ್ಯಾಯಾಲಯ ಆಕೆಯ ಸಂಗಾತಿಯನ್ನು ವಶಕ್ಕೆ ಪಡೆದದ್ದೂ ಕಾನೂನುಬಾಹಿರವಾಗಿದ್ದು ಆಕೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿತು.
ಆ ಪ್ರದೇಶದಲ್ಲಿ ಸಾಮಾಜಿಕ ಉದ್ವಿಗ್ನತೆ ಉಂಟಾಗಿರುವುದರಿಂದ ಆಕೆಯನ್ನು ಬಾಲಕಿಯನ್ನು 'ಒನ್ ಸ್ಟಾಪ್ ಸೆಂಟರ್' ನಲ್ಲಿ ಇರಿಸಬೇಕು ಹಾಗೂ ಆಕೆಯ ಸಂಗಾತಿಯನ್ನು ಪೊಲೀಸ್ ಠಾಣೆಯಲ್ಲಿ ಬಂಧಿಸಿಡಬೇಕು ಎಂಬ ಮನವಿ ಒಪ್ಪುವಂಥದ್ದಲ್ಲ ಎಂದು ಅದು ನುಡಿಯಿತು.
ಸಾಮಾಜಿಕ ಒತ್ತಡಕ್ಕೊಳಗಾಗಿ ಬಂಧಿಸುವುದು ಕಾನೂನು ಬಾಹಿರವಾಗಿದ್ದು ಜೋಡಿಯ ಬಂಧನಕ್ಕೆ ಕಾರಣರಾದ ಅಧಿಕಾರಿಗಳು ಇಲಾಖಾ ಕ್ರಮಕ್ಕೆ ಹೊಣೆಗಾರರಾಗಿರುತ್ತಾರೆ ಎಂದು ಅದು ಹೇಳಿದೆ.
ಒಬ್ಬ ವ್ಯಕ್ತಿಯನ್ನು ಪೊಲೀಸ್ ಅಥವಾ ಇತರೆ ಸರ್ಕಾರಿ ಅಧಿಕಾರಿಗಳು ಕಾನೂನಿನ ಆಧಾರದ ಮೇಲೆ ಮಾತ್ರ ಬಂಧಿಸಬಹುದು. ಸಾಮಾಜಿಕ ಒತ್ತಡದಡಿಯಲ್ಲಿ ಕಾನೂನಿನ ಅಧಿಕಾರವಿಲ್ಲದೆ ನಡೆಸುವ ಬಂಧನ ಕಾನೂನುಬದ್ಧವಾಗದುಬದಲಿಗೆ ಬಂಧನದ ಕಾನೂನುಬಾಹಿರತೆಯನ್ನು ಹೆಚ್ಚಿಸುತ್ತದೆ. ಕಾನೂನಾತ್ಮಕ ಆಡಳಿತದಿಂದ ನಡೆಯುವ ಪ್ರಜಾಸತ್ತಾತ್ಮಕ ದೇಶದಲ್ಲಿ ರಾಜ್ಯ ಸರ್ಕಾರ ಮತ್ತದರ ಕಾನೂನು ಜಾರಿ ಇಲಾಖೆ ಸಾಮಾಜಿಕ ಒತ್ತಡಗಳಿಗೆ ಮಣಿಯದೆ ಜನರ ಸ್ವಾತಂತ್ರ್ಯ ರಕ್ಷಿಸಲು ತಮ್ಮ ಅಧಿಕಾರ ಬಳಸಬೇಕು ಸಾಮಾಜಿಕ ಒತ್ತಡಕ್ಕೆ ಮಣಿದು ನಾಗರಿಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಬಾರದು. ಇಬ್ಬರನ್ನೂ ರಕ್ಷಿಸುವಲ್ಲಿ ವಿಫಲರಾದ ಅಧಿಕಾರಿಗಳು ಇಲಾಖಾ ಕ್ರಮಕ್ಕೆ ಒಳಗಾಗುತ್ತಾರೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.
ಶನಿವಾರ ನ್ಯಾಯಾಲಯದ ಕಾರ್ಯಕಲಾಪ ನಡೆಯದಿದ್ದರೂ ಪೀಠ ಪ್ರಕರಣದ ವಿಶೇಷ ವಿಚಾರಣೆ ನಡೆಸಿತು. ಶುಕ್ರವಾರ ಸಲ್ಲಿಸಲಾದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಆಲಿಸಿದ್ದ ನ್ಯಾಯಾಲಯ ಜೋಡಿಯನ್ನು ತನ್ನಮುಂದೆ ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಕೆಲ ದಿನಗಳ ಹಿಂದೆ ನ್ಯಾಯಾಲಯಕ್ಕೆ ಹಾಜರಾಗಿದ್ದ ಜೋಡಿ ವಾರದ ಹಿಂದೆ ನಾಪತ್ತೆಯಾಗಿದ್ದರು. ಶನಿವಾರ ಮಹಿಳೆಯನ್ನು ಪೊಲೀಸರು ಪೀಠದೆದುರು ಹಾಜರುಪಡಿಸಿದರು. ಯುವತಿ ಸ್ವಯಂಪ್ರೇರಣೆಯಿಂದ ತಾನು ಮನೆತೊರೆದು ವ್ಯಕ್ತಿಯೊಂದಿಗೆ ಜೀವಿಸಲು ಬಯಸಿರುವುದಾಗಿ ತಿಳಿಸಿದ್ದರೂ ತನಿಖೆ ಮುಂದುವರೆದಿದ್ದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
ಸಾಮಾಜಿಕ ಉದ್ವಿಗ್ನತೆ ಕಾರಣಕ್ಕೆ ಜೋಡಿಯನ್ನು ವಶಕ್ಕೆ ತೆಗೆದುಕೊಳ್ಳಲಾಯಿತು ಎಂಬ ಪೊಲೀಸರ ವಾದವನ್ನು ಒಪ್ಪದ ನ್ಯಾಯಾಲಯ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿರುವ ನವೆಂಬರ್ 28ರಂದು ಅಲಿಗಢದ ಎಸ್‌ಎಸ್‌ಪಿ ಖುದ್ದು ಹಾಜರಿರುವಂತೆ ತಾಕೀತು ಮಾಡಿತು.