
ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಈಚೆಗೆ ಎತ್ತಿಹಿಡಿದಿರುವ ಆಂಧ್ರಪ್ರದೇಶ ಹೈಕೋರ್ಟ್ ಕುಟುಂಬ ಸದಸ್ಯರ ಹಸ್ತಕ್ಷೇಪ ಇಲ್ಲದೆ ಅವರು ಮತ್ತೆ ಒಂದಾಗುವಂತೆ ನೋಡಿಕೊಳ್ಳಬೇಕು ಎಂದು ಪೊಲೀಸರಿಗೆ ನಿರ್ದೇಶಿಸಿದೆ.
ತನ್ನ ಸಂಗಾತಿಯನ್ನು ಆಕೆಯ ಕುಟುಂಬ ತನ್ನಿಂದ ಬಲವಂತವಾಗಿ ದೂರ ಇಟ್ಟಿದೆ ಎಂದು ಆರೋಪಿಸಿ 25 ವರ್ಷದ ಅರ್ಜಿದಾರೆ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಆರ್ ರಘುನಂದನ್ ರಾವ್ ಮತ್ತು ಮಹೇಶ್ವರ ರಾವ್ ಕುಂಚೇಮ್ ಅವರಿದ್ದ ಪೀಠ ಈ ಆದೇಶ ನೀಡಿದೆ.
ಅರ್ಜಿದಾರೆಯೊಂದಿಗೆ ತೆರಳವುದಾಗಿ ಕುಟುಂಬದ ವಶದಲ್ಲಿರುವ ಯುವತಿ ಹೇಳಿದ ಹಿನ್ನೆಲೆಯಲ್ಲಿ ಅರ್ಜಿದಾರೆಯೊಂದಿಗೆ ತೆರಳಲು ಇಲ್ಲವೇ ಕುಟುಂಬದ ವಶದಲ್ಲಿರುವ ಯುವತಿ ತಾನು ಬಯಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಮುಕ್ತಳು ಎಂದು ಅದು ತಿಳಿಸಿತು.
ಕುಟುಂಬದ ವಶದಲ್ಲಿರುವ ಯುವತಿ ಸುರಕ್ಷಿತವಾಗಿ ಅರ್ಜಿದಾರೆಯ ಮನೆಗೆ ತೆರಳುವಂತೆ ಪೊಲೀಸರು ನೋಡಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಆಕೆಯ ನಿರ್ಧಾರದಲ್ಲಿ ಆಕೆಯ ಕುಟುಂಬದವರು ಮಧ್ಯಪ್ರವೇಶಿಸುವಂತೆಯೂ ಇಲ್ಲ ಎಂದು ಅದು ತಿಳಿಸಿದೆ.
ಕುಟುಂಬದ ವಶದಲ್ಲಿರುವ ಯುವತಿಯನ್ನು ತನ್ನ ಮುಂದೆ ಹಾಜರುಪಡಿಸುವಂತೆ ಡಿಸೆಂಬರ್ 12ರಂದು ನ್ಯಾಯಾಲಯ ಆದೇಶಿಸಿತ್ತು. ಅದರಂತೆ ಡಿಸೆಂಬರ್ 17ರಂದು ಆಕೆ ಹಾಜರಾದಾಗ ನ್ಯಾಯಾಲಯ ರಹಸ್ಯ ವಿಚಾರಣೆ ನಡೆಸಿತ್ತು. ಆ ಸಂದರ್ಭದಲ್ಲಿ ಆಕೆ ಸ್ವಇಚ್ಛೆಯಿಂದ ತಾನು ಅರ್ಜಿದಾರೆಯೊಂದಿಗೆ ತೆರಳುವುದಾಗಿ ಸ್ಪಷ್ಟಪಡಿಸಿದ್ದಳು. ಹೀಗಾಗಿ ಆಕೆಯ ನಿರ್ಧಾರದಲ್ಲಿ ಮಧ್ಯಪ್ರವೇಶಿಸದಂತೆ ಆಕೆಯ ಕುಟುಂಬಸ್ಥರಿಗೆ ಪೀಠ ಸೂಚಿಸಿದೆ.
ಈ ಮಧ್ಯೆ ಕುಟುಂಬದ ವಶದಲ್ಲಿದ್ದ ಯುವತಿ ತನ್ನ ಪೋಷಕರ ವಿರುದ್ಧ ಸಲ್ಲಿಸಿದ್ದ ದೂರನ್ನೂ ಇದೇ ವೇಳೆ ನ್ಯಾಯಾಲಯ ಆಲಿಸಿತು. ಆಕೆಯ ತಂದೆ-ತಾಯಿ ಅಥವಾ ಕುಟುಂಬದ ಇತರ ಸದಸ್ಯರನ್ನು ವಿಚಾರಣೆಗೆ ಒಳಪಡಿಸುವ ಇಚ್ಛೆ ಇಲ್ಲ ಎಂಬ ಯುವತಿಯ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ ಕುಟುಂಬದ ವಿರುದ್ಧ ಕ್ರಿಮಿನಲ್ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದಿತು.
ಅರ್ಜಿದಾರರ ಪರ ವಕೀಲ ಜಾಡಾ ಶ್ರವಣ್ ಕುಮಾರ್ ವಾದ ಮಂಡಿಸಿದ್ದರು. ಪ್ರತಿವಾದಿಗಳನ್ನು ವಕೀಲ ವೆಂಕಟ್ ಚಲಸಾನಿ ಪ್ರತಿನಿಧಿಸಿದ್ದರು.