ಜಾಮೀನು ಅರ್ಜಿ ಭಾರೀ ಗಾತ್ರದಲ್ಲಿದೆ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸುವಂತಿಲ್ಲ: ದೆಹಲಿ ಹೈಕೋರ್ಟ್

ಅರ್ಜಿಯ ಸ್ವರೂಪಕ್ಕಿಂತಲೂ ಅದರ ತಾತ್ವಿಕ ಅಂಶ ಆಧರಿಸಿ ಪ್ರಕರಣ ನಿರ್ಧರಿಸಬೇಕು ಎಂದು ಹೈಕೋರ್ಟ್ ಹೇಳಿದೆ.
Judge with case files
Judge with case files
Published on

ಜಾಮೀನು ಅರ್ಜಿ ಭಾರೀ ಗಾತ್ರದಲ್ಲಿ ಅಥವಾ ಬಹಳಷ್ಟು ಪುಟಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ಜಾಮೀನು ತಿರಸ್ಕರಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್‌ ಗುರುವಾರ ತೀರ್ಪು ನೀಡಿದೆ [ವಿಜಯ್‌ ಗುಪ್ತ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಜಾಮೀನು ಅರ್ಜಿಯ ಗಾತ್ರ ದೊಡ್ಡದಿದೆ ಎಂಬ ಕಾರಣಕ್ಕೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) ಪ್ರಕರಣದ ಆರೋಪಿಗೆ ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯವನ್ನು ನ್ಯಾ. ಸ್ವರಣ ಕಾಂತ ಶರ್ಮ ತೀವ್ರವಾಗಿ ಟೀಕಿಸಿದರು.

Also Read
ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ; ಉಳಿದ ಐವರು ನಿರಾಳ

ನ್ಯಾಯಾಂಗ ಶಿಸ್ತಿನ ಪ್ರಕಾರ ಜಾಮೀನು ಅರ್ಜಿಗಳನ್ನು ಅದರ ಸ್ವರೂಪ ಆಧರಿಸಿ ತಿರಸ್ಕರಿಸುವ ಬದಲು ತಾತ್ವಿಕ ಅಂಶಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳಬೇಕು ಎಂದುಪೀಠ ಕಿವಿ ಹಿಂಡಿದೆ.

ನ್ಯಾಯಾಲಯದೆದುರು ಸಲ್ಲಿಸಲಾದ ದಾಖಲೆಗಳ ಗಾತ್ರ ಆಧರಿಸಿ ಆರೋಪಿಯ ಸ್ವಾತಂತ್ರ್ಯ ಅವಲಂಬನೆಯಾಗುವಂತಿಲ್ಲ ಎಂದು ಪೀಠ ಹೇಳಿದೆ.

ಜಾಮೀನು ಅರ್ಜಿ ನೂರಾರು ಪುಟಗಳನ್ನು ಒಳಗೊಂಡಿದ್ದರೂ ಅಥವಾ ಎಷ್ಟೇ ಪುಟಗಳಿಂದ ಕೂಡಿದ್ದರೂ ಆ ಕಾರಣಕ್ಕೆ ಜಾಮೀನು ತಿರಸ್ಕರಿಸುವುದು ಕಾನೂನಾತ್ಮಕವಾಗಿ ಸಮರ್ಥನೀಯವಾಗದು ಎಂದು ಪೀಠ ಹೇಳಿದೆ.

ಆರೋಪಿ ವಿಜಯ್ ಗುಪ್ತಾ ಅವರ ಜಾಮೀನು ಅರ್ಜಿ ಸುಮಾರು 500 ಪುಟಗಳಾಗಿತ್ತು ಎಂಬ ಕಾರಣ ನೀಡಿ ವಿಚಾರಣಾ ನ್ಯಾಯಾಲಯ ಅದರ ತಾತ್ವಿಕ ಅಂಶವನ್ನು ಪರಿಶೀಲಿಸದೆಯೇ ಜಾಮೀನು ನಿರಾಕರಿಸಿತ್ತು. ಇದು ನ್ಯಾಯಸಮ್ಮತ ವಿಚಾರಣೆಯ ನಿರಾಕರಣೆ ಎಂದು ದೂರಿ ಗುಪ್ತಾ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಯೋಗೀಶ್‌ ಗೌಡ ಕೊಲೆ ಪ್ರಕರಣ: ವಿನಯ್‌ ಕುಲಕರ್ಣಿ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಅಂತಿಮ ವಾದಕ್ಕೆಂದು ಪ್ರಕರಣ ಪಟ್ಟಿ ಮಾಡಿದ ಬಳಿಕ ಆರೋಪಿಯ ವಾದ ಆಲಿಸುವುದು ವಿಚಾರಣಾ ನ್ಯಾಯಾಲಯದ ಕರ್ತವ್ಯ ಎಂದ ನ್ಯಾ. ಶರ್ಮಾ ಅರ್ಜಿ ದೊಡ್ಡದಾಗಿದ್ದರೆ, ವಕೀಲರಿಗೆ ವಾದಗಳನ್ನು ಸೀಮಿತಗೊಳಿಸಲು ಅಥವಾ ಲಿಖಿತ ಸಂಕ್ಷಿಪ್ತ ವಾದ ಸಲ್ಲಿಸಲು ಸೂಚಿಸಬಹುದೇ ಹೊರತು, ಅರ್ಜಿಯನ್ನು ತಿರಸ್ಕರಿಸಲು ಅದರ ಗಾತ್ರ ಆಧಾರವಾಗಬಾರದು ಎಂದರು.

ಅಂತೆಯೇ ದಾಖಲೆಗಳ ಗಾತ್ರದ (ಡಾಕೆಟ್‌) ಒತ್ತಡದ ನೆಪ ಹೇಳಿ ಅರ್ಜಿ ಬದಿಗೆ ಸರಿಸಿದ್ದ ವಿಚಾರಣಾ ನ್ಯಾಯಾಲಯದ ತರ್ಕವನ್ನು ತಿರಸ್ಕರಿಸಿದ ಹೈಕೋರ್ಟ್‌ ಆ ಆದೇಶ ರದ್ದುಪಡಿಸಿ ಪ್ರಕರಣವನ್ನು ತಾತ್ವಿಕ ಅಂಶಗಳ ಆಧಾರದಲ್ಲಿ ಮತ್ತೆ ವಿಚಾರಣೆ ನಡೆಸುವಂತೆ ಸೂಚಿಸಿತು.

[ತೀರ್ಪಿನ ಪ್ರತಿ]

Attachment
PDF
Vijay_Gupta_v_State__NCT_of_Delhi_
Preview
Kannada Bar & Bench
kannada.barandbench.com