ಐಪಿಎಲ್ ಟಿ20 ಕ್ರಿಕೆಟ್ ಪಂದ್ಯಗಳಿಗೆ ಒದಗಿಸಿದ್ದ ಪೊಲೀಸ್ ಭದ್ರತೆಗೆ ಪ್ರತಿಯಾಗಿ ಪಾವತಿಸಬೇಕಿದ್ದ ಶುಲ್ಕವನ್ನು ಪೂರ್ವಾನ್ವಯವಾಗುವಂತೆ ಕಡಿಮೆ ಮಾಡಿದ್ದ ಮಹಾರಾಷ್ಟ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಗುರುವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ ಅನಿಲ್ ಗಲಗಲಿ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ]
ನೀರು ಪೂರೈಕೆಯಂತಹ ಮೂಲಭೂತ ಸಾರ್ವಜನಿಕ ಉಪಯುಕ್ತತೆಯಂತಹ ವಿಚಾರಗಳು ಸರ್ಕಾರದ ಅವಕೃಪೆಗೆ ಪಾತ್ರವಾಗುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಅವರು ಟೀಕಿಸಿದರು.
ಕೊಳೆಗೇರಿ ನಿವಾಸಿಗಳೂ ಸೇರಿದಂತೆ ಸಾರ್ವಜನಿಕರಿಗೆ ನೀರಿನ ಶುಲ್ಕ ಹೆಚ್ಚಿಸುತ್ತೀರಿ. ಆದರೆ ಇಂತಹವರಿಗೆ ಶುಲ್ಕ ಕಡಿಮೆ ಮಾಡುತ್ತೀರಿ. ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಜಾಗತಿಕವಾಗಿ ಶ್ರೀಮಂತ ಕ್ರಿಕೆಟ್ ಸಂಸ್ಥೆಗಳಲ್ಲಿ ಒಂದಾಗಿದೆ. ಹೀಗಾಗಿಯೇ ಅದು ಶ್ರೀಮಂತವಾಗಿದೆ ಎಂದು ನ್ಯಾಯಾಲಯ ಹೇಳಿತು.
ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ಅನಿಲ್ ಗಲಗಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಪಾವತಿಸಬೇಕಿದ್ದ ಭದ್ರತಾ ಶುಲ್ಕವನ್ನು ಪೂರ್ವಾನ್ವಯವಾಗುವಂತೆ ₹ 25 ಲಕ್ಷಕ್ಕೆ ಬದಲು ₹ 10 ಲಕ್ಷಕ್ಕೆ ಇಳಿಸಿದ್ದ ಮತ್ತು ಮುಂಬೈ ಕ್ರಿಕೆಟ್ ಸಂಘ ಪಾವತಿಸಬೇಕಿದ್ದ ಬಾಕಿ ಮನ್ನ ಮಾಡಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದರು.
2013 ಮತ್ತು 2018 ರ ನಡುವೆ ವಾಂಖೆಡೆ ಮತ್ತು ಬ್ರಬೋರ್ನ್ ಸ್ಟೇಡಿಯಂಗಳಲ್ಲಿ ನಡೆದ ಐಪಿಎಲ್ ಪಂದ್ಯಗಳಲ್ಲಿ ಪೊಲೀಸ್ ರಕ್ಷಣೆಗಾಗಿ ಮುಂಬೈ ಕ್ರಿಕೆಟ್ ಸಂಸ್ಥೆ (ಎಂಸಿಎ) ಇನ್ನೂ ₹14.82 ಕೋಟಿ ಬಾಕಿ ನೀಡಬೇಕಿದೆ ಎಂದು ಅರ್ಜಿ ಬಹಿರಂಗಪಡಿಸಿದೆ.
ಭದ್ರತಾ ಶುಲ್ಕ ಕಡಿತ ಮತ್ತು ಬಾಕಿ ಮನ್ನಾ ಎರಡನ್ನೂ ಸಮರ್ಥಿಸುವ ವಿವರವಾದ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ನ್ಯಾಯಾಲಯ ಇದೀಗ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಅಕ್ಟೋಬರ್ 7ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.