ಮುರುಘಾ ಶ್ರೀ ಸೇರಿ ಆರೋಪಿಗಳ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟ, ಪ್ರಸಾರ ಮಾಡದಂತೆ 48 ಮಾಧ್ಯಮಗಳಿಗೆ ನಿರ್ಬಂಧ

ಮುಂದಿನ ವಿಚಾರಣೆವರೆಗೆ ಮುರುಘಾ ಮಠ, ಡಾ. ಶಿವಮೂರ್ತಿ ಶರಣರು ಮತ್ತು ಇತರೆ ಆರೋಪಿಗಳು, ಮಠದ ಪದಾಧಿಕಾರಿಗಳ ವಿರುದ್ಧ ಯಾವುದೇ ಮಾನಹಾನಿಕರ, ವಿವಾದಾತ್ಮಕ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡದಂತೆ ಪ್ರತಿವಾದಿ ಮಾಧ್ಯಮಗಳಿಗೆ ಆದೇಶಿಸಿದ ನ್ಯಾಯಾಲಯ.
ಮುರುಘಾ ಶ್ರೀ ಸೇರಿ ಆರೋಪಿಗಳ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟ, ಪ್ರಸಾರ ಮಾಡದಂತೆ 48 ಮಾಧ್ಯಮಗಳಿಗೆ ನಿರ್ಬಂಧ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಮೊದಲ ಆರೋಪಿ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿಗಳಾದ ಡಾ. ಶಿವಮೂರ್ತಿ ಮುರುಘಾ ಶರಣರು, ಇತರೆ ನಾಲ್ವರು ಆರೋಪಿಗಳು, ಅನುಯಾಯಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ವಿಚಾರ ಪ್ರಸಾರ, ಪ್ರಕಟ ಮಾಡದಂತೆ ವಿದ್ಯುನ್ಮಾನ, ಮುದ್ರಣ ಹಾಗೂ ಸಾಮಾಜಿಕ ಮಾಧ್ಯಮಗಳು ಸೇರಿದಂತೆ 48 ಸಂಸ್ಥೆಗಳ ವಿರುದ್ಧ ಬೆಂಗಳೂರು ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಮಧ್ಯಂತರ ಪ್ರತಿಬಂಧಕಾದೇಶ ನೀಡಿದೆ.

ಶ್ರೀಮಾನ್‌ ಚಿನ್ಮೂಲಾದ್ರಿ ಬೃಹನ್‌ ಮಠ ಹಾಗೂ ಮುರುಘಾ ಮಠದ ಅನುಯಾಯಿಗಳು ಹಾಗೂ ಮಠದ ಉದ್ಯೋಗಿಗಳಾಗಿರುವ ಚಿತ್ರದುರ್ಗದ ಬಸವಕುಮಾರ್‌ ಎಂ ಆರ್‌ ಹಾಗೂ ಚೇತನ್‌ ಕುಮಾರ್‌ ಅವರು ಸಲ್ಲಿಸಿರುವ ಮೂಲ ದಾವೆಯ ವಿಚಾರಣೆಯನ್ನು 59ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್‌ ಅವರಿದ್ದ ಪೀಠವು ವಿಚಾರಣೆ ನಡೆಸಿ ಆದೇಶ ಮಾಡಿದೆ. ಮುಂದಿನ ವಿಚಾರಣೆವರೆಗೆ ಮುರುಘಾ ಮಠ, ಡಾ. ಶಿವಮೂರ್ತಿ ಶರಣರು ಮತ್ತು ಇತರೆ ಆರೋಪಿಗಳು, ಮಠದ ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ ಮತ್ತು ವಿವಾದಾತ್ಮಕ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡದಂತೆ 48 ಪ್ರತಿವಾದಿ ಮಾಧ್ಯಮಗಳಿಗೆ ಆದೇಶಿಸಿದೆ. ಅಲ್ಲದೇ, ವಿಚಾರಣೆಯನ್ನು ಅಕ್ಟೋಬರ್‌ 10ಕ್ಕೆ ಮುಂದೂಡಿದೆ.

ಯಾವೆಲ್ಲಾ ಮಾಧ್ಯಮಗಳಿಗೆ ಪ್ರತಿಬಂಧಕಾದೇಶ?

ಕನ್ನಡದ ದೃಶ್ಯ ಮಾಧ್ಯಮಗಳಾದ ಬಿಟಿವಿ, ಟಿವಿ9 ಕನ್ನಡ, ಪಬ್ಲಿಕ್‌ ಟಿವಿ, ಸುವರ್ಣ ನ್ಯೂಸ್‌ 24/7, ಕಸ್ತೂರಿ ನ್ಯೂಸ್‌, ಪವರ್‌ ಟಿವಿ, ಟಿವಿ5, ದಿಗ್ವಿಜಯ ನ್ಯೂಸ್‌, ನ್ಯೂಸ್‌ 18 ಕನ್ನಡ, ನ್ಯೂಸ್‌ ಫಸ್ಟ್‌ ಕನ್ನಡ, ಪ್ರಜಾ ಟಿವಿ, ರಾಜ್‌ ನ್ಯೂಸ್‌, ಸಂಭ್ರಮ ಟಿವಿ ಹಾಗೂ ಪತ್ರಿಕೆಗಳಾದ ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ವಾರ್ತಾ ಭಾರತಿ, ಉದಯವಾಣಿ, ಹೊಸದಿಗಂತ, ವಿಶ್ವವಾಣಿ, ಸಂಜೆವಾಣಿ, ಇ-ಸಂಜೆ, ವಾರ ಪತ್ರಿಕೆಗಳಾದ ಅಗ್ನಿ, ಲಂಕೇಶ್‌ ಪತ್ರಿಕೆ, ಇಂಗ್ಲಿಷ್‌ ಪತ್ರಿಕೆಗಳಾದ ಬೆಂಗಳೂರು ಮಿರರ್‌, ಡೆಕ್ಕನ್‌ ಹೆರಾಲ್ಡ್‌, ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ದಿ ಟೈಮ್ಸ್‌ ಆಫ್‌ ಇಂಡಿಯಾ, ಡೆಕ್ಕನ್‌ ಕ್ರಾನಿಕಲ್‌, ದಿ ಹಿಂದೂ, ವೆಬ್‌ಸೈಟ್‌ಗಳಾದ ಒನ್‌ ಇಂಡಿಯಾ, ಸಮಾಚಾರ್‌.ಕಾಂ, ಇಂಗ್ಲಿಷ್‌ ಸುದ್ದಿ ವಾಹಿನಿಗಳಾದ ಎನ್‌ಡಿ ಟಿವಿ, ಟೈಮ್ಸ್‌ ನೌ, ಇಂಡಿಯಾ ಟುಡೇ, ನ್ಯೂಸ್‌ 9, ನ್ಯೂಸ್‌ 18, ಸಿಎನ್‌ಎನ್‌ ಐಬಿಎನ್‌, ರಿಪಬ್ಲಿಕ್‌ ಟಿವಿ, ಹೆಡ್‌ಲೈನ್ಸ್‌ ಟುಡೇ, ಹಿಂದಿ ವಾಹಿನಿಗಳಾದ ಎನ್‌ಡಿ ಟಿವಿ ಹಿಂದಿ, ಆಜ್‌ ತಕ್‌, ನ್ಯೂಸ್‌ ಎಕ್ಸ್‌, ನ್ಯೂಸ್‌ 24, ಜೀ ನ್ಯೂಸ್‌, ಎಬಿಪಿ ನ್ಯೂಸ್‌, ಇಂಡಿಯಾ ಟಿವಿ.

ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌ ಚಾನೆಲ್‌, ಗೂಗಲ್‌ ಇಂಡಿಯಾ ಪ್ರೈವೇಟ್ ಲಿಮಿಟೆಡ್‌, ಫೇಸ್‌ಬುಕ್‌ ಇಂಡಿಯಾ, ಟ್ವಿಟರ್‌ ಕಮ್ಯುನಿಕೇಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌, ಯಾಹೂ ಇಂಡಿಯಾ, ವಾಟ್ಸಾಪ್‌ ಮೆಸೇಂಜರ್‌ಗಳು ಫಿರ್ಯಾದಿಗಳು ನೀಡುವ ಲಿಂಕ್‌ಗಳನ್ನು ತಮ್ಮ ತಾಣದಿಂದ ಮುಂದಿನ ವಿಚಾರಣೆಯ ಒಳಗೆ ತೆರವುಗೊಳಿಸಬೇಕು ಎಂದು ನ್ಯಾಯಾಲಯವು ಆದೇಶ ಮಾಡಿದೆ.

ಅರ್ಜಿದಾರರ ಆಕ್ಷೇಪವೇನು?

ಮೈಸೂರಿನ ನಜರಾಬಾದ್‌ ಮತ್ತು ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು, ಆರೋಪಿಗಳಾದ ರಶ್ಮಿ, ಬಸವಾದಿತ್ಯ, ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಅವರ ವಿರುದ್ಧ ಪೋಕ್ಸೊ ಕಾಯಿದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಪುನರಾವರ್ತಿತ ಮತ್ತು ಮಾನಹಾನಿಕರ ಸುದ್ದಿಗಳ ಪ್ರಸಾರದಿಂದ ಲಕ್ಷಾಂತರ ಸ್ವಾಮೀಜಿಗಳ ಅನುಯಾಯಿಗಳ ಭಾವನೆಗಳಿಗೆ ಧಕ್ಕೆಯಾಗಿದೆ. ಫಿರ್ಯಾದಿಗಗಳು ಮುರುಘಾ ಶರಣರನ್ನು ಜೀವಂತ ದೈವ ಎಂದು ನಂಬಿದ್ದು, ಪುನರಾವರ್ತಿತ ಮತ್ತು ಮಾನಹಾನಿಕರ ಸುದ್ದಿಗಳ ಪ್ರಸಾರ/ಪ್ರಕಟದಿಂದಾಗಿ ಭಾವನೆಗಳಿಗೆ ಧಕ್ಕೆಯಾಗಿರುವುದರಿಂದ ನ್ಯಾಯಾಲಯದ ಕದತಟ್ಟಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

1991ರ ಜನವರಿ 31ರಂದು ಮಲ್ಲಿಕಾರ್ಜುನ ಸ್ವಾಮೀಜಿ ಐಕ್ಯರಾದ ಬಳಿಕ ಡಾ. ಶಿವಮೂರ್ತಿ ಮುರುಘಾ ಶರಣರು ಪೀಠಾಧಿಪತಿಯಾಗಿದ್ದು, ಹಲವು ಶಾಲೆ, ಸಾರ್ವಜನಿಕ ಸಂಸ್ಥೆಗಳನ್ನು ಆರಂಭಿಸಿದ್ದು, ಉಚಿತ ಮತ್ತು ಕೈಗೆಟುವ ದರದಲ್ಲಿ ಬಡವರು ಮತ್ತು ಅಬಲ ಸಮುದಾಯದವರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ಸಾಮೂಹಿಕ ವಿವಾಹ, ಅನ್ನ ದಾಸೋಹ ನಿರಂತರವಾಗಿದ್ದು, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಡಾ. ಶಿವಮೂರ್ತಿ ಮುರುಘಾ ಶರಣರು ಹಲವು ಸುಧಾರಣಾ ಕ್ರಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿರುವುದನ್ನು ಪರಿಗಣಿಸಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಗಳು ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿವೆ ಎಂದು ವಿವರಿಸಲಾಗಿದೆ.

ಚಿತ್ರದುರ್ಗದ ಪ್ರಿಯದರ್ಶಿನಿ ವಿದ್ಯಾರ್ಥಿನಿಯರ ಶಾಲೆಯಲ್ಲಿ ಕಲಿಯುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಬೇಡಿಹಳ್ಳಿ ಗ್ರಾಮದವರಾಗಿದ್ದು, ಅವರು ಊರಿಗೆ ತೆರಳಬೇಕು ಎಂದು ಕೋರಿದ ಹಿನ್ನೆಲೆಯಲ್ಲಿ ಅನುಮತಿ ಆಧರಿಸಿ ಅವರನ್ನು ಕಳುಹಿಸಿಕೊಡಲಾಗಿದೆ. ಆ ಬಳಿಕ ಅವರು ಜುಲೈ 25ರಿಂದ ಗೈರಾಗಿರುವುದನ್ನು ಆಧರಿಸಿ ಪೋಷಕರಿಗೆ ನೋಟಿಸ್‌ ನೀಡಲಾಗಿದೆ ಎಂದು ವಿವರಿಸಲಾಗಿದೆ.

ಮಾಜಿ ಶಾಸಕ ಎಸ್‌ ಕೆ ಬಸವರಾಜನ್‌ ಅವರನ್ನು 2007ರಲ್ಲಿ ಮಠದ ಕಾರ್ಯದರ್ಶಿ ಹುದ್ದೆಯಿಂದ ವಜಾ ಮಾಡಲಾಗಿತ್ತು. ಮಠ ಮತ್ತು ಎಸ್‌ ಕೆ ಬಸವರಾಜನ್‌ ನಡುವಿನ ಸಂಧಾನದ ಬಳಿಕ ಅವರನ್ನು ಪುನರ್‌ ನೇಮಕ ಮಾಡಲಾಗಿತ್ತು. ಜುಲೈ 2022ರಲ್ಲಿ ಅವರನ್ನು ಪುನರ್‌ ನೇಮಕ ಮಾಡಿದ್ದರೂ ಅವರು ಸೇವೆಗೆ ಹಾಜರಾಗಿರಲಿಲ್ಲ. 2022ರ ಆಗಸ್ಟ್‌ 22ರಂದು ಎಸ್‌ ಕೆ ಬಸವರಾಜನ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 341, 342, 363, 120(ಬಿ), 354(ಎ), 504, 506 ಜೊತೆಗೆ 34ರ ಅಡಿ ಚಿತ್ರದುರ್ಗ ಠಾಣೆಯಲ್ಲಿ ಹಾಸ್ಟೆಲ್‌ ವಾರ್ಡನ್‌ ರಶ್ಮಿ ಅವರು ಎಫ್‌ಐಆರ್‌ ದಾಖಲಿಸಿದ್ದರು. ಇದಾದ ಬಳಿಕ ಮೈಸೂರಿನ ಒಡನಾಡಿ ಸಂಸ್ಥೆಯ ಸಹಕಾರದಿಂದ ಅಕ್ಕಮಹಾದೇವಿ ಹಾಸ್ಟೆಲ್‌ನ 16 ಮತ್ತು 15 ವರ್ಷದ ಇಬ್ಬರು ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಆರೋಪ ಮಾಡಿ ಸ್ವಾಮೀಜಿ ಮತ್ತು ಇತರರ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿದ್ದರು. ಇದರ ಜೊತೆಗೆ ಚಿತ್ರದುರ್ಗದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಘಟನೆಯ ವಿವರವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮೈಸೂರಿನ ಒಡನಾಡಿ ಸಂಸ್ಥೆಯ ಪರಶುರಾಮ್‌ ಮತ್ತು ಸ್ಟ್ಯಾನ್ಲಿ ಅವರ ವಿರುದ್ಧ ಹಲವು ಪ್ರಕರಣ ದಾಖಲಾಗಿವೆ. ಎಸ್‌ ಕೆ ಬಸವರಾಜನ್‌ ಅವರು ಪ್ರಶ್ನಾರ್ಹ ಮತ್ತು ಅನುಮಾನಾಸ್ಪದ ಒಡನಾಡಿ ವ್ಯಕ್ತಿಗಳೊಂದಿಗೆ ಸೇರಿಕೊಂಡು ಪಿತೂರಿ ನಡೆಸಿ ಸ್ವಾಮೀಜಿ, ಇತರರು ಹಾಗೂ ಮಠದ ಹೆಸರಿಗೆ ಕಳಂಕ ತರಲು ಪಿತೂರಿ ನಡೆಸಿದ್ದಾರೆ. ಮಠದ ಶತ್ರುವಾದ ಎಸ್‌ ಕೆ ಬಸವರಾಜನ್‌ ಅವರು ಮಠದ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿ, ವಿಫಲವಾದ ಬಳಿಕ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ಇತರರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರತಿವಾದಿ ಘನತೆಯುತ ಮಾಧ್ಯಮಗಳು ಪರಿಶೀಲಿಸದ ಮತ್ತು ಅಧಿಕೃತತೆ ಖಚಿತಪಡಿಸಿಕೊಳ್ಳದೇ ಮಾಧ್ಯಮ ನೀತಿ ಸಂಹಿತೆಗೆ ವಿರುದ್ಧವಾಗಿ ಆಗಸ್ಟ್‌ 28 ಮತ್ತು ಇತರೆ ದಿನಾಂಕದಂದು ವಿವಾದಾತ್ಮಕ ತಲೆಬರಹಗಳನ್ನು ನೀಡಿ, ಸುದ್ದಿ ಪ್ರಸಾರ ಮಾಡಿರುವುದು ಮಾನಹಾನಿಕರವಾಗಿದೆ. ನ್ಯಾಯ ನಿರ್ಣಯಕ್ಕೆ ಕಾಯದೇ ಮಾಹಿತಿ ಪರಿಶೀಲಿಸದೇ ಸುದ್ದಿ ಪ್ರಸಾರ/ಪ್ರಕಟ ಮಾಡುವ ಮೂಲಕ ಮಠ ಮತ್ತು ಇಡೀ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.

ಮಾಧ್ಯಮಗಳಿಂದಾಗಿ ಶ್ರೀಗಳ ವಿರುದ್ಧ ಪೂರ್ವಗ್ರಹ

ಮಾನಹಾನಿಕರ ಲೇಖನಗಳ ಪ್ರಕಟ ಮಾಡುವುದರಿಂದ ಘನತೆಗೆ ಚ್ಯುತಿ ಉಂಟಾಗಲಿದ್ದು, ಡಾ. ಶಿವಮೂರ್ತಿ ಮುರುಘಾ ಶರಣರು ವಿಚಾರಣೆಗೂ ಮುನ್ನ ತಪ್ಪೆಸಗಿದ್ದಾರೆ ಎಂಬ ತೀರ್ಮಾನಕ್ಕೆ ಸಾರ್ವಜನಿಕರು ಬರಬಹುದಾಗಿದೆ. ಪ್ರಕರಣವು ತನಿಖಾ ಹಂತದಲ್ಲಿರುವಾಗ ಪ್ರತಿವಾದಿ ಮಾಧ್ಯಮಗಳು ಸ್ವಾಮೀಜಿ ಪ್ರಕರಣದಲ್ಲಿ ತಪ್ಪಿತಸ್ಥರೆಂಬ ರೀತಿಯಲ್ಲಿ ಸುದ್ದಿ ಪ್ರಸಾರ ಅಥವಾ ಪ್ರಕಟ ಮಾಡುತ್ತಿದ್ದಾರೆ. ಮಾಧ್ಯಮ ನೀತಿ ಸಂಹಿತೆ ಪಾಲಿಸದೇ ಮಾಧ್ಯಮಗಳು ವ್ಯಾಪಕವಾದ ರೀತಿಯಲ್ಲಿ ಸ್ವಾಮೀಜಿ ಮತ್ತು ಇತರೆ ಆರೋಪಿಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಇದು ವಿಚಾರಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕರ ಮನಸ್ಸಿನಲ್ಲಿ ತಪ್ಪು ಭಾವನೆ ಸೃಷ್ಟಿಸಬಹುದು. ಹೀಗಿರುವಾಗ ಶಿವಮೂರ್ತಿ ಶರಣರು ತಮ್ಮ ವಿರುದ್ಧದ ಆರೋಪಗಳ ವಿರುದ್ಧ ಸಮರ್ಥ ವಾದ ಮಂಡಿಸಲು ಸಾಧ್ಯವಾಗದಿರುವ ಸಾಧ್ಯತೆ ನಿರ್ಮಾಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಮುರುಘಾ ಶರಣರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಯುತ್ತಿದ್ದು, ಅರೆ ನ್ಯಾಯಿಕವಾದ ಪ್ರಕರಣವನ್ನು ಪ್ರತಿವಾದಿ ಮಾಧ್ಯಮಗಳು ಯಾವುದೇ ನಿಯಂತ್ರಣವಿಲ್ಲದೇ ವರದಿ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿವೆ. ನ್ಯಾಯಾಲಯವು ವಾಸ್ತವಿಕ ರೆಕಾರ್ಡ್‌ ಮಾಡುವುದಕ್ಕೂ ಮುನ್ನ ಮಾಧ್ಯಮಗಳು ಸೀಮಿತ ಮತ್ತು ಏಕಮುಖವಾದ ದಾಖಲೆಗಳನ್ನು ಇಟ್ಟುಕೊಂಡು ವಿಚಾರಣೆ ನಡೆಸುತ್ತಿವೆ. ಈ ರೀತಿಯ ವ್ಯಾಪಕ ಸುದ್ದಿ ಪ್ರಸರಣವು ತನಿಖಾಧಿಕಾರಿಗಳು, ಪೊಲೀಸ್‌ ಇಲಾಖೆ, ಮೇಲುಸ್ತುವಾರಿ ಅಧಿಕಾರಿಗಳು ಪೂರ್ವಾಗ್ರಹಕ್ಕೆ ಒಳಗಾಗುವಂತೆ ಮಾಡುತ್ತಿವೆ. ಹೀಗಾಗಿ, ಪ್ರತಿವಾದಿ ಮಾಧ್ಯಮಗಳ ಪೂರ್ವನಿರ್ಧರಿತ ಕ್ರಮದ ಮೇಲೆ ನಿಯಂತ್ರಣ ಹೇರದಿದ್ದರೆ ಫಿರ್ಯಾದಿಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂದು ವಿವರಿಸಲಾಗಿದೆ.

ಮಠದ ಕುರಿತು ವ್ಯಾಪಕ ಅಪಪ್ರಚಾರದಿಂದಾಗಿ ಸೆಪ್ಟೆಂಬರ್‌ 5ರಂದು ನೇಗಿನಹಾಳದ ಮಡಿವಾಳೇಶ್ವರ ಶಿವಯೋಗಿಗಳ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಪ್ರತಿವಾದಿ ಮಾಧ್ಯಮಗಳು ಸಾಂವಿಧಾನಿಕ ಪ್ರಾಧಿಕಾರಗಳ ರೀತಿ ವರ್ತಿಸುತ್ತಿವೆ. ತನಿಖೆ ನಡೆಸಲು ಪೊಲೀಸ್‌ ಅಧಿಕಾರಿಗಳಿಗೆ ಮಾತ್ರ ಅಧಿಕಾರವಿದ್ದು, ಪಕ್ಷಕಾರರ ನಡುವಿನ ವಿವಾದ ಬಗೆಹರಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ. ಇದನ್ನು ಹೊರತುಪಡಿಸಿ ಪ್ರತಿವಾದಿ ಮಾಧ್ಯಮಗಳು ಸೇರಿದಂತೆ ಯಾವುದೇ ಸಂಸ್ಥೆ ತನಿಖಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ವಿವರಿಸಲಾಗಿದೆ.

ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ಪ್ರತಿವಾದಿಗಳು ಸುಳ್ಳು ಮತ್ತು ಸತ್ಯಕ್ಕೆ ದೂರವಾದ ಸಂಗತಿಗಳನ್ನು ಪ್ರಸಾರ ಅಥವಾ ಪ್ರಕಟ ಮಾಡಲಾಗದು. ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಸಂಬಂಧಿಸಿದಂತೆ ಸುಳ್ಳು ಅಥವಾ ಅವಾಸ್ತವಿಕ, ಆಧಾರರಹಿತ ವಿಚಾರಗಳನ್ನು ಪ್ರಸಾರ ಅಥವಾ ಪ್ರಕಟ ಮಾಡದಂತೆ, ತಪ್ಪೆಸಗಿದ್ದಾರೆ ಎಂದು ಬಿಂಬಿಸದಂತೆ ಶಾಶ್ವತ ಪ್ರತಿಬಂಧಕಾದೇಶ ಕೋರುವ ಹಕ್ಕನ್ನು ಮಠದ ಅನುಯಾಯಿಗಳಾದ ತಮಗೆ ಇದೆ ಎಂದು ಫಿರ್ಯಾದಿದಾರರು ವಾದಿಸಿದ್ದಾರೆ.

Also Read
ಪೋಕ್ಸೊ ಪ್ರಕರಣ: ಮುರುಘಾ ಶ್ರೀ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಸಂತ್ರಸ್ತರಿಗೆ ವಿಶೇಷ ನ್ಯಾಯಾಲಯದಿಂದ ನೋಟಿಸ್‌ ಜಾರಿ

ಅರ್ಜಿದಾರರ ಕೋರಿಕೆಗಳೇನು?

ಹೀಗಾಗಿ, ಮೈಸೂರಿನ ನಜರಾಬಾದ್‌ ಮತ್ತು ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಶಿವಮೂರ್ತಿ ಮುರುಘಾ ಶರಣರು, ಇತರೆ ಆರೋಪಿಗಳು, ಮುರುಘಾ ಮಠ ಮತ್ತು ಪದಾಧಿಕಾರಿಗಳ ವಿರುದ್ಧ ಯಾವುದೇ ತೆರನಾದ ಮಾನಹಾನಿಕರ, ವಿವಾದಾತ್ಮಕ ಲೇಖನ ಅಥವಾ ವಿಚಾರ ಪ್ರಸಾರ ಅಥವಾ ಪ್ರಕಟ ಮಾಡದಂತೆ ಪ್ರತಿವಾದಿ ಮಾಧ್ಯಮಗಳನ್ನು ನಿರ್ಬಂಧಿಸಿ ಶಾಶ್ವತ ಪ್ರತಿಬಂಧಕಾದೇಶ ಮಾಡಬೇಕು. ಈ ಕುರಿತು ಯಾವುದೇ ಸುದ್ದಿ ಪ್ರಕಟಿಸದಂತೆ ಪ್ರತಿವಾದಿಗಳನ್ನು ನಿರ್ಬಂಧಿಸಬೇಕು. ಟಿ ವಿಯಲ್ಲಿ ಆಡಿಯೊ ರೂಪದಲ್ಲಿ ಪ್ರಸಾರ, ಸ್ಥಳೀಯ ಕೇಬಲ್‌ ಟಿವಿಗಳು, ಇಂಟರ್‌ನೆಟ್‌, ವೆಬ್‌ಸೈಟ್‌, ರೇಡಿಯೊ, ಚಾನೆಲ್‌, ಸಾಮಾಜಿಕ ಮಾಧ್ಯಮ ವೇದಿಕೆ ಇತ್ಯಾದಿಗಳಲ್ಲಿ ಯಾವುದೇ ವಿಚಾರವನ್ನು ಪ್ರಸಾರ, ಪ್ರಕಟ, ವರ್ಗಾವಣೆ ಮಾಡದಂತೆ ಶಾಶ್ವತವಾಗಿ ಪ್ರತಿವಾದಿಗಳನ್ನು ನಿರ್ಬಂಧಿಸಬೇಕು. ಆಗಸ್ಟ್‌ 26ರ ದೂರಿನ ತನಿಖೆ ಮತ್ತು ನ್ಯಾಯಿಕ ತನಿಖೆಯಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ಬಂಧಿಸಬೇಕು ಎಂದೂ ಕೋರಲಾಗಿದೆ.

ಅರ್ಜಿದಾರರನ್ನು ವಕೀಲ ಬಿ ಎನ್‌ ಅಂಬರೀಷ್‌ ಪ್ರತಿನಿಧಿಸಿದ್ದರು. ವಕೀಲ ಸಂತೋಷ್‌ ನಗರಲೆ ವಾದಿಸಿದರು.

Related Stories

No stories found.
Kannada Bar & Bench
kannada.barandbench.com