ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವಸತಿ ಯೋಜನೆ ಗುತ್ತಿಗೆ ನೀಡುವ ಸಲುವಾಗಿ ರಾಮಲಿಂಗಂ ಕನಸ್ಟ್ರಕ್ಷನ್ ಕಂಪೆನಿಯಿಂದ ಕೋಟ್ಯಂತರ ರೂಪಾಯಿ ನಗದು ಮತ್ತು ಶೆಲ್ ಕಂಪೆನಿಗಳ ಮೂಲಕ ಲಂಚ ಪಡೆದಿರುವ ಆರೋಪದ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಡಾ. ಜಿ ಸಿ ಪ್ರಕಾಶ್ ಅವರಿಗೆ ವಿಶೇಷ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪ್ರಕಾಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಬಿ ಜಯಂತ ಕುಮಾರ್ ಅವರ ನೇತೃತ್ವದ ಪೀಠವು ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪೊಲೀಸರು ಅರ್ಜಿದಾರರನ್ನು ಬಂಧಿಸಿದರೆ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಒಬ್ಬರ ಭದ್ರತೆ ನೀಡಿ ಪಡೆದು ಬಿಡುಗಡೆ ಮಾಡಬೇಕು. ಆದೇಶ ಮಾಡಿದ ಮೂರು ವಾರಗಳಲ್ಲಿ ಅರ್ಜಿದಾರರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರರು ನಾಪತ್ತೆಯಾಗುವಂತಿಲ್ಲ. ಸಾಕ್ಷ್ಯ ನಾಶ ಮಾಡುವಂತಿಲ್ಲ ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತಿಲ್ಲ. ಅಗತ್ಯವೆನಿಸಿದಾಗ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಅರ್ಜಿದಾರರು ತಿಂಗಳಲ್ಲಿ ಒಂದು ಭಾನುವಾರ ತನಿಖಾಧಿಕಾರಿಯ ಮುಂದೆ ಹಾಜರಾಗಿ, ಸಹಿ ಹಾಕಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಆರ್ ನಾಗೇಂದ್ರ ನಾಯ್ಕ್ ಅವರು “2019ರ ಆಗಸ್ಟ್ 6ರಂದು ಪ್ರಕಾಶ್ ಅವರು ಬಿಡಿಎ ಆಯುಕ್ತರಾಗಿ ನೇಮಕವಾಗಿದ್ದು, 2020ರ ಜೂನ್ 3ರವರೆಗೆ 10 ತಿಂಗಳು ಮಾತ್ರ ಹುದ್ದೆಯಲ್ಲಿದ್ದರು. ಬಿಡಿಎ ಆಯುಕ್ತರಾಗಿ ನೇಮಕವಾಗುವುದಕ್ಕೂ ಮುನ್ನ ಐದನೇ ಆರೋಪಿಯಾಗಿರುವ ಚಂದ್ರಕಾಂತ್ ರಾಮಲಿಂಗಂಗೆ ಅವರಿಗೆ ವಸತಿ ಯೋಜನೆಗೆ ಸಂಬಂಧಿಸಿದ ಕಾರ್ಯಾದೇಶ ನೀಡಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಬಿಡಿಎ ಆಯುಕ್ತರಾಗಿದ್ದಾಗ ಯಾವುದೇ ನಿರ್ಧಾರವನ್ನು ಪ್ರಕಾಶ್ ಅವರು ಮಾಡಿಲ್ಲ. ಹೀಗಾಗಿ, ಅಧಿಕೃತ ಸ್ಥಾನದ ದುರ್ಬಳಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಎಫ್‌ಐಆರ್‌ನಲ್ಲಿನ ಆರೋಪಗಳು ಸಾಮಾನ್ಯವಾಗಿವೆ. ಸ್ಥಾನ ದುರ್ಬಳಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕರಣ ನಡೆದಿಲ್ಲ. ಇತರೆ ಆರೋಪಿಗಳ ಜೊತೆ ಸೇರಿ ಪ್ರಕಾಶ್ ಅವರು ಪಿತೂರಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ, ಭ್ರಷ್ಟಾಚಾರ ನಿಗ್ರಹ ದಳ ಕಾಯಿದೆ ಅಡಿಯ ಸೆಕ್ಷನ್ ಮತ್ತು ಐಪಿಸಿ ಸೆಕ್ಷನ್ ಅಡಿ ಆರೋಪಕ್ಕೆ ಸಂಬಂಧಿಸಿದಂತೆ ಮೇಲ್ನೋಟಕ್ಕೆ ಯಾವುದೇ ಪ್ರಕರಣವಿಲ್ಲ” ಎಂದು ವಾದಿಸಿದ್ದರು.
ಬಿಡಿಎ ವಸತಿ ಯೋಜನೆಯ ನಿರ್ಮಾಣ ಕಾಮಗಾರಿ ಪರಿಗಣಿಸುವುದಕ್ಕೆ 12 ಕೋಟಿ ರೂಪಾಯಿ ಲಂಚ ಪಾವತಿಸುವಂತೆ ರಾಮಲಿಂಗಂ ಅವರಿಗೆ ಬಿಡಿಎ ಆಯುಕ್ತರಾಗಿದ್ದ ಪ್ರಕಾಶ್ ಪ್ರಸ್ತಾವ ಇಟ್ಟಿದ್ದರು. ಮೊದಲ ಆರೋಪಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಎರಡನೇ ಆರೋಪಿ ಬಿ ವೈ ವಿಜಯೇಂದ್ರ ಅವರ ಪರವಾಗಿ ಅಕ್ರಮವಾಗಿ ಲಂಚ ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ 2020ರ ಮೇನಲ್ಲಿ ಚಂದ್ರಕಾಂತ್ ರಾಮಲಿಂಗಂ ಅವರು 12 ಕೋಟಿ ರೂಪಾಯಿ ಲಂಚದ ಹಣವನ್ನು ವಿಜಯೇಂದ್ರ ಅವರ ಸೂಚನೆಯಂತೆ 8ನೇ ಆರೋಪಿ ಕ್ರಿಸೆಂಟ್ ಹೋಟೆಲ್ ಮಾಲೀಕ ಕೆ ರವಿ ಅವರಿಗೆ ನಗದಿನ ರೂಪದಲ್ಲಿ ಪಾವತಿಸಿದ್ದರು. ಈ ಹಣವನ್ನು ಪ್ರಕಾಶ್ ಅವರು ರವಿ ಅವರಿಂದ ಸಂಗ್ರಹಿಸಿದ್ದು, ಅದನ್ನು ವಿಜಯೇಂದ್ರ ಮೂಲಕ ಯಡಿಯೂರಪ್ಪ ಅವರಿಗೆ ತಲುಪಿಸಿರಲಿಲ್ಲ. ಈ ಸಂಬಂಧ ಪವರ್ ಟಿವಿ ಮತ್ತು ವಿಜಯೇಂದ್ರ ನಡುವಿನ ಸಂಭಾಷಣೆಯನ್ನು ಪವರ್ ಟಿವಿಯಲ್ಲಿ ಬಿತ್ತರಿಸಲಾಗಿತ್ತು. ಪ್ರಕಾಶ್ ಲಂಚದ ಹಣ ಪಾವತಿಸದಿದ್ದರಿಂದ ಅವರನ್ನು ಬಿಡಿಎ ಆಯುಕ್ತರ ಹುದ್ದೆಯಿಂದ ಮೈಸೂರು ಪ್ರಾದೇಶಿಕ ಆಯುಕ್ತರ ಹುದ್ದೆಗೆ ವರ್ಗಾಯಿಸಲಾಗಿತ್ತು ಎಂಬ ಆರೋಪ ಅರ್ಜಿದಾರರ ಮೇಲಿದೆ.
ತಮ್ಮ ವಿರುದ್ಧದ ತನಿಖೆಗೆ ತಡೆ ನೀಡುವಂತೆ ಪ್ರಕಾಶ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದಕ್ಕೆ ಸರ್ವೋಚ್ಚ ನ್ಯಾಯಾಲಯವು ನಿರಾಕರಿಸಿತ್ತು.