ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಂದಿನ ನಾಲ್ಕರಿಂದ ಆರು ವಾರಗಳವರೆಗೆ ಭೌತಿಕ ವಿಧಾನದ ಮೂಲಕ ಪ್ರಕರಣಗಳನ್ನು ಆಲಿಸದಿರುವ ಸಾಧ್ಯತೆಯ ಬಗ್ಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಗುರುವಾರ ಸುಳಿವು ನೀಡಿದ್ದಾರೆ.
ಅಖಿಲ ಭಾರತ ನ್ಯಾಯಾಧೀಶರ ಸಂಘದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಇದನ್ನು ತಿಳಿಸಲಾಯಿತು. ಈ ಮಧ್ಯೆ, ನ್ಯಾಯಾಲಯ ಮುಂದಿನ ವಾರ ತುರ್ತು ಪ್ರಕರಣಗಳನ್ನು ಮಾತ್ರ ಕೈಗೆತ್ತಿಕೊಳ್ಳಲಿದೆ ಎಂದು ನ್ಯಾ. ಎಲ್ ನಾಗೇಶ್ವರ ರಾವ್ ನೇತೃತ್ವದ ಮತ್ತೊಂದು ಪೀಠ ಹೇಳಿದೆ.
ಕೋವಿಡ್-19 ಪ್ರಕರಣಗಳು ಹೆಚ್ಚಿದರೆ ಕೈಗೊಳ್ಳಬೇಕಾದ ಮುಂದಿನ ಕ್ರಮ ಕುರಿತು ಚರ್ಚಿಸುತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ನ ಐವರು ಅತಿ ಹಿರಿಯ ನ್ಯಾಯಮೂರ್ತಿಗಳು ಇಂದು ಬೆಳಗ್ಗೆ ಅರ್ಧ ಗಂಟೆ ತಡವಾಗಿ 11 ಗಂಟೆಗೆ ವಿಚಾರಣೆ ಆರಂಭಿಸಿದರು.
ಜನವರಿ 3, 2022 ರಿಂದ ಮುಂದಿನ ಎರಡು ವಾರಗಳವರೆಗೆ ವರ್ಚುವಲ್ ವಿಧಾನದಲ್ಲಿ ಪ್ರಕರಣ ಆಲಿಸುವುದಾಗಿ ಕಳೆದ ಭಾನುವಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಸುಪ್ರೀಂಕೋರ್ಟ್ ತಿಳಿಸಿತ್ತು. ಕೋವಿಡ್ ಹೆಚ್ಚಳ ಮತ್ತು ಒಮಿಕ್ರಾನ್ ವೈರಸ್ ಕಾರಣಕ್ಕಾಗಿ ದೇಶದ ಬಹುತೇಕ ನ್ಯಾಯಾಲಯಗಳು ವರ್ಚುವಲ್ ಅಥವಾ ಹೈಬ್ರಿಡ್ ವಿಧಾನದಲ್ಲಿ ವಿಚಾರಣೆ ನಡೆಸುತ್ತಿವೆ.