ಅಬಕಾರಿ ನೀತಿ ಹಗರಣ: ಬಿಆರ್‌ಎಸ್‌ ನಾಯಕಿ ಕೆ ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ದೆಹಲಿ ನ್ಯಾಯಾಲಯ

ಕವಿತಾ ಅವರು ಆಪ್‌ಗೆ ಲಂಚ ಪಾವತಿಸಿದ ಉದ್ಯಮಿಗಳ ದಕ್ಷಿಣ ಭಾರತದ ಸಮೂಹದ ಭಾಗವಾಗಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರನ್ನು ಮಾರ್ಚ್‌ 15ರಂದು ಹೈದರಾಬಾದ್‌ನಲ್ಲಿ ಬಂಧಿಸಲಾಗಿತ್ತು.
K Kavitha and ED
K Kavitha and ED K Kavitha (Facebook)
Published on

ದೆಹಲಿಯ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ಭಾರತ ರಾಷ್ಟ್ರ ಸಮಿತಿ ನಾಯಕಿ ಕೆ ಕವಿತಾ ಅವರಿಗೆ ಸೋಮವಾರ ದೆಹಲಿ ನ್ಯಾಯಾಲಯವು ಮಧ್ಯಂತರ ಜಾಮೀನು ನಿರಾಕರಿಸಿದೆ.

ಏಪ್ರಿಲ್‌ 4ರಂದು ಕಾಯ್ದಿರಿಸಿದ್ದ ಆದೇಶವನ್ನು ರೋಸ್‌ ಅವೆನ್ಯೂ ನ್ಯಾಯಾಲಯಗಳ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಇಂದು ಪ್ರಕಟಿಸಿದರು.

ಕವಿತಾ ಅವರಿಗೆ ಸಂಬಂಧಿಸಿದ ಸ್ಥಳಗಳ್ಲಲಿ ಶೋಧ ನಡೆಸಿದ ಜಾರಿ ನಿರ್ದೇಶನಾಲಯವು ಮಾರ್ಚ್‌ 15ರಂದು ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಿತ್ತು. ಸದ್ಯ ಕವಿತಾ ಅವರು ತಿಹಾರ್‌ ಜೈಲಿನಲ್ಲಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿರುವ ಪ್ರಮುಖ ರಾಜಕಾರಣಿಗಳಲ್ಲಿ ಕವಿತಾ ಸಹ ಒಬ್ಬರಾಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಮಾಜಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ, ಮಾಜಿ ಸಚಿವ ಸತ್ಯೇಂದರ್‌ ಜೈನ್‌ ಮತ್ತಿತರರು ನ್ಯಾಯಾಂಗ ಬಂಧನದಲ್ಲಿದ್ದಾರೆ.

2021-22ರಲ್ಲಿ ರೂಪಿಸಲಾಗಿದ್ದ, ಸದ್ಯ ರದ್ದುಪಡಿಸಲಾಗಿರುವ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಮದ್ಯ ಮಾರಾಟ/ತಯಾರಕ ಲಾಬಿ ಗುಂಪಿನಿಂದ ಮೇಲೆ ಸೂಚಿಸಿದ ರಾಜಕಾರಣಿಗಳು ಲಾಭ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಕವಿತಾ ಅವರು ಅಬಕಾರಿ ನೀತಿಯ ಅಡಿ ಮಹತ್ವದ ಪಾತ್ರ ವಹಿಸಲು ಪ್ರಯತ್ನಿಸಿದ್ದ ದಕ್ಷಿಣ ಭಾರತದ ಮದ್ಯ ತಯಾರಕರು/ಮಾರಾಟ ಗುಂಪಿನ ಭಾಗವಾಗಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಆರೋಪವಾಗಿದೆ.

Also Read
ನ್ಯಾಯಾಂಗ ಬಂಧನದಲ್ಲಿರುವ ಕವಿತಾ ವಿಚಾರಣೆ ನಡೆಸಲು ಸಿಬಿಐಗೆ ಅನುಮತಿಸಿದ ನ್ಯಾಯಾಲಯ

ಪ್ರಕರಣದಲ್ಲಿನ ಆರೋಪಿ ವಿಜಯ್‌ ನಾಯರ್‌ ಎಂಬಾತ ಆಪ್‌ ನಾಯಕರ ಪರವಾಗಿ ₹100 ಕೋಟಿಯನ್ನು ದಕ್ಷಿಣ ಭಾರತದ ಗುಂಪಿನಿಂದ ಪಡೆದಿದ್ದಾರೆ. ಈ ಗುಂಪನ್ನು ಶರತ್‌ ರೆಡ್ಡಿ, ಕೆ ಕವಿತಾ ಮತ್ತು ಮಗುಂಟಾ ಶ್ರೀನಿವಾಸುಲು ರೆಡ್ಡಿ ನಿಯಂತ್ರಿಸುತ್ತಿದ್ದರು ಎನ್ನಲಾಗಿದೆ.

ತಾನು ಮುಗ್ಧೆಯಾಗಿದ್ದು, ತೆಲಂಗಾಣದಲ್ಲಿ ತಳವೂರಲು ಬಿಜೆಪಿಯು ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕವಿತಾ ಆರೋಪಿಸಿದ್ದಾರೆ.

Kannada Bar & Bench
kannada.barandbench.com