

ರಾಷ್ಟ್ರ ರಾಜಧಾನಿಯಿಂದ 2026ರ ಜನವರಿ ತಿಂಗಳ ಮೊದಲ 15 ದಿನಗಳಲ್ಲಿ 800ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ದೆಹೆಲಿ ಪೊಲೀಸರು, ಕೇಂದ್ರ ಸರ್ಕಾರ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೆಹಲಿ ಹೈಕೋರ್ಟ್ ಬುಧವಾರ ಸೂಚಿಸಿದೆ.
ಅರ್ಜಿದಾರರು ನಾಲ್ಕು ವಾರಗಳಲ್ಲಿ ಉತ್ತರ ಸಲ್ಲಿಸಬೇಕು. ಅದಾದ ಎರಡು ವಾರಗಳಲ್ಲಿ ಪ್ರತ್ಯುತ್ತರ ಅರ್ಜಿ ಸಲ್ಲಿಸಬೇಕು ಎಂದು ಸಿಜೆ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠ ನಿರ್ದೇಶಿಸಿತು.
ಜಯೀತಾ ದೇಬ್ ಸರ್ಕಾರ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ಪೀಠವು ಈ ಆದೇಶ ನೀಡಿತು.
ಮಾಧ್ಯಮ ವರದಿಯೊಂದು 2026ರ ಜನವರಿ 1ರಿಂದ ಜನವರಿ 15ರವರೆಗೆ ದೆಹಲಿಯಲ್ಲಿ 807 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು. ಇದು ಜನರಲ್ಲಿ ವ್ಯಾಪಕ ಆತಂಕ ಸೃಷ್ಟಿಸಿತ್ತು. ನಾಪತ್ತೆಯಾದವರ ಸಂಖ್ಯೆಯಲ್ಲಿ ಏರಿಕೆ ಎಂಬ ವಿಷಯದ ಸುತ್ತಲಿನ ಚರ್ಚೆಯು “ಹಣ ಪಡೆದು ಮಾಡಿರುವ ಪ್ರಾಯೋಜಿತ ಪ್ರಸರಣ" ಎಂದು ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದರು. ಹಣದ ಲಾಭಕ್ಕಾಗಿ ಭೀತಿಯನ್ನು ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.
ಈ ವರದಿಗಳನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ ಎರಡು ವಾರಗಳ ಒಳಗೆ ಪ್ರತಿಕ್ರಿಯಿಸಲು ಸೂಚಿಸಿತ್ತು. ನಾಪತ್ತೆಯಾದವರ ಅಂಕಿ ಸಂಖ್ಯೆ ಕುರಿತು ವರದಿಯಲ್ಲಿ ಸತ್ಯಾಂಶ ಇದ್ದರೆ ಅದು ಮಾನವ ಹಕ್ಕುಗಳಿಗೆ ಗಂಡಾಂತರಕಾರಿಯಾಗಲಿದೆ ಎಂದು ಆಯೋಗ ತಿಳಿಸಿತ್ತು.