
ವಿಚ್ಚೇದನ ಎಂಬುದು ಸಂಗಾತಿಗಳ ಪಾಲಿಗೆ ಹಾದಿಯ ಕೊನೆಯಾಗಿದ್ದರೂ ಪೋಷಕರ ಜವಾಬ್ದಾರಿಯಿಂದ ಅವರು ಎಂದಿಗೂ ವಿಮುಖರಾಗುವಂತಿಲ್ಲ ಎಂದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ನವೀನ್ ಸ್ಕಾರಿಯಾ ವಿರುದ್ಧ ಪ್ರಿಯಾ ಅಬ್ರಹಾಂ ನಡುವಣ ಪ್ರಕರಣ]
ತಾವು ವಿಚ್ಛೇದಿತದ್ದರೂ ಇಲ್ಲವೇ ಬೇರ್ಪಟ್ಟಿದ್ದರೂ ಅದನ್ನು ಲೆಕ್ಕಿಸದೆ ಪೋಷಕರು ಮಕ್ಕಳ ಬದುಕಿನಲ್ಲಿ ತೊಡಗಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ದೇವನ್ ರಾಮಚಂದ್ರನ್ ಮತ್ತು ಎಂ.ಬಿ. ಸ್ನೇಹಲತಾ ಅವರಿದ್ದ ಪೀಠ ತಿಳಿಸಿತು.
ಪೋಷಕರು ಗಂಡ ಹೆಂಡತಿಯಾಗಿ ವಿಚ್ಛೇದನ ಪಡೆದಿದ್ದರೂ ಹೆತ್ತವರಾಗಿ ವಿಚ್ಛೇದನ ಪಡೆಯಲು ಎಂದಿಗೂ ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ ಪೋಷಕರು ಪರಸ್ಪರ ಶಾಂತಿಯನ್ನು ಕಂಡುಕೊಳ್ಳಬೇಕು ಮತ್ತು ಪಾಲುದಾರರಾಗಿ ಮಗುವಿನ ಪ್ರಗತಿಯಲ್ಲಿ ಭಾಗಿಯಾಗಬೇಕು ಎಂದು ಕಿವಿಮಾತು ಹೇಳಿದೆ.
ತನ್ನ ಅಪ್ರಾಪ್ತ ವಯಸ್ಕ ಮಗಳೊಂದಿಗೆ ಮಾತನಾಡಲು ಆಕೆಯ ತಾಯಿ ಅನುವು ಮಾಡಿಕೊಡುತ್ತಿಲ್ಲ. ಇದು ನ್ಯಾಯಾಲಯ ಈ ಹಿಂದೆ ನೀಡಿದ್ದ ಆದೇಶದ ಉಲ್ಲಂಘನೆ ಎಂದು ದೂರಿ ಬಾಲಕಿಯ ತಂದೆ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ಪೀಠ ಈ ವಿಚಾರ ತಿಳಿಸಿತು.
ತಾನು ತಾಯಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತಿಲ್ಲ ಬದಲಿಗೆ ತನ್ನ ಪುಟ್ಟ ಮಗಳ ಬದುಕಿನ ಭಾಗವಾಗಲು ಇಷ್ಟಪಡುತ್ತೇನೆ. ಮಗಳ ಶಿಕ್ಷಣ ಮತ್ತು ಚಿಕಿತ್ಸಾ ಅವಧಿಗಳಲ್ಲಿ ತಾನು ಇರಬೇಕು ಎಂದು ತಂದೆ ಕೋರಿದ್ದರು.
ಮತ್ತೊಂದೆಡೆ, ತಾನು ಮಗುವಿನ ಭೇಟಿಯನ್ನು ತಡೆದಿಲ್ಲ ಬದಲಿಗೆ ಮಗಳಿಗೇ ತಂದೆಯನ್ನು ಭೇಟಿಯಾಗುವ ಇಚ್ಛೆ ಇರಲಿಲ್ಲ ಎಂದು ತಾಯಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಪೋಷಕರು ಮತ್ತು ಮಗಳೊಂದಿಗೆ ಸಮಾಲೋಚನೆ ನಡೆಸಿದ ನ್ಯಾಯಾಲಯ ಮಗುವ ಪದೇ ಪದೇ ಪ್ರೋತ್ಸಾಹಿಸಿದರೂ ತಂದೆಯ ಬಳಿಗೆ ಹೋಗಲು ನಿರಾಕರಿಸಿದ್ದನ್ನು ಗಮನಿಸಿತು.
ಅಂತೆಯೇ ಮಗುವಿನ ತಂದೆ ಹೂಡಿದ್ದ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಮುಕ್ತಾಯಗೊಳಿಸಿದ ಅದು ಮಗಳ ಚಿಕಿತ್ಸಾ ಅವಧಿಗಳಲ್ಲಿ ಉಪಸ್ಥಿತರಿರಲು ಹಾಗೂ ಆಕೆಯ ಶೈಕ್ಷಣಿಕ ಮತ್ತು ವೈಯಕ್ತಿಕ ಪ್ರಗತಿಯ ಮೇಲ್ವಿಚಾರಣೆ ನಡೆಸಲು ತಂದೆಗೆ ಸಂಪೂರ್ಣ ಸ್ವಾತಂತ್ರ್ಯ ಇದೆ ಎಂದು ಸ್ಪಷ್ಟಪಡಿಸಿತು. ಇದೇ ವೇಳೆ ಮಗಳಿಗೆ ಯಾವುದೇ ತೊಂದರೆ ಉಂಟುಮಾಡಬಾರದು, ಬೆದರಿಕೆ ಇಲ್ಲದೆ ಆಕೆಯನ್ನು ನೋಡಿಕೊಳ್ಳುವುದು ತನ್ನ ಬಾಧ್ಯತೆ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿತು.
ಅಲ್ಲದೆ ಯಾವುದೇ ಬಗೆಯ ಸಹಾಯಕ್ಕೆ ಮುಂದಾಗುವುದಾಗಿ ತಾಯಿಯ ವಕೀಲರು ಬರೆದುಕೊಟ್ಟ ಮುಚ್ಚಳಿಕೆಯನ್ನು ಅದು ದಾಖಲೆಯಲ್ಲಿ ಪರಿಗಣಿಸಿತು.
[ತೀರ್ಪಿನ ಪ್ರತಿ]