ನ್ಯಾಯಾಂಗ ಮತ್ತು ಕಾರ್ಯಾಂಗದ ಮುಖ್ಯಸ್ಥರ ನಡುವಿನ ಮಾತುಕತೆಗಳು ನ್ಯಾಯಾಧೀಶರ ನ್ಯಾಯಾಂಗ ಕಾರ್ಯಗಳ ಬಗ್ಗೆ ಎಂದಿಗೂ ಚರ್ಚಿಸುವುದಿಲ್ಲ ಬದಲಿಗೆ ಆಡಳಿತ ಅಥವಾ ಸಾಮಾಜಿಕ ಉದ್ದೇಶಗಳಿಗಾಗಿ ಅಂತಹ ಮಾತುಕತೆ ನಡೆದಿರುತ್ತದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ಶನಿವಾರ ಹೇಳಿದರು.
ಮುಂಬೈ ವಿಶ್ವವಿದ್ಯಾಲಯದಲ್ಲಿ ಅಕ್ಟೋಬರ್ 26 ರಂದು (ಶನಿವಾರ) ನಡೆದ ʼಲೋಕಸತ್ತಾʼ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯಾಂಗ ಮತ್ತು ಕಾರ್ಯಾಂಗ ಪರಸ್ಪರ ಮಗ್ನವಾಗಿದ್ದರೆ ಅಲ್ಲೇನೋ ಒಪ್ಪಂದಕ್ಕೆ ಬರಲಾಗುತ್ತಿದೆ ಎಂಬ ಗ್ರಹಿಕೆ ಹುಟ್ಟುತ್ತದೆ. ಆದರೆ ಅದು ನಿಜವಲ್ಲ. ಅದು ಸರ್ಕಾರದ ಭಿನ್ನ ಅಂಗಗಳ ನಡುವಿನ ಮಾತುಕತೆಯ ಭಾಗವಷ್ಟೇ ಆಗಿರುತ್ತದೆ ಎಂದು ಅವರು ಹೇಳಿದರು.
“ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ ಎಂದು ಜನ ಭಾವಿಸುತ್ತಾರೆ. ಆದರೆ ಅದು ನಿಜವಲ್ಲ. ಅಂತಹ ಭೇಟಿ ಸರ್ಕಾರದ ಭಿನ್ನ ಅಂಗಗಳ ನಡುವಿನ ಮಾತುಕತೆಯ ಭಾಗವಷ್ಟೇ ಆಗಿರುತ್ತದೆ. ಎಲ್ಲಾ ಮೂರು ಅಂಗಗಳು ರಾಷ್ಟ್ರದ ಸುಧಾರಣೆಗೆ ಸಮರ್ಪಿತವಾಗಿರುತ್ತವೆ. ಅವು ನ್ಯಾಯಾಧೀಶರು ಮಾಡುವ ನ್ಯಾಯಾಂಗ ಕಾರ್ಯಗಳ ಬಗ್ಗೆ ಎಂದಿಗೂ ಚರ್ಚಿಸುವುದಿಲ್ಲ. ಏಕೆಂದರೆ ನಾವು (ನ್ಯಾಯಾಂಗ) ಇಲ್ಲಿ ಸಂಪೂರ್ಣ ಸ್ವತಂತ್ರವಾಗಿದ್ದೇವೆ. ಆದರೆ ನ್ಯಾಯಾಂಗದ ಆಡಳಿತ ಕಾರ್ಯ ಮತ್ತು ಕಾರ್ಯಾಂಗದ ಆಡಳಿತ ಕಾರ್ಯದ ನಡುವೆ ಗೆರೆ ಇದೆ” ಎಂದರು.
ರಾಜ್ಯಸ ಸರ್ಕಾರ ಅಥವಾ ಒಕ್ಕೂಟ ಸರ್ಕಾರದ (ಕೇಂದ್ರ ಸರ್ಕಾರ) ಮುಖ್ಯಸ್ಥರು ಯಾವಾಗಲೂ ರಾಜ್ಯ ನ್ಯಾಯಾಂಗ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಂಗದ ಮುಖ್ಯಸ್ಥರೊಂದಿಗೆ ಸಮಾಲೋಚನಾ ಪ್ರಕ್ರಿಯೆಯಲ್ಲಿರುವುದು ರೂಢಿಯಿಂದ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.
"ಆದ್ದರಿಂದ ಕಾರ್ಯಾಂಗ ಹಾಗೂ ನ್ಯಾಯಾಂಗ ಏನು ಚರ್ಚಿಸುತ್ತಿದೆ ಎಂದು ಜನರು ಯೋಚಿಸುತ್ತಾರೆ. ಚರ್ಚೆ ನಡೆದಿದ್ದರೆ ಅದು ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಅಲ್ಲ. ರಾಜಕೀಯ ವರ್ಗದಲ್ಲಿಯೂ ನ್ಯಾಯಾಂಗದ ಬಗ್ಗೆ ಹೆಚ್ಚಿನ ಗೌರವವಿದೆ ಎಂಬ ಅಂಶದಲ್ಲಿ ರಾಜಕೀಯ ವ್ಯವಸ್ಥೆಯ ಪ್ರಬುದ್ಧತೆ ಅಡಗಿದೆ" ಎಂದು ಅವರು ಹೇಳಿದರು.
ಅಲಾಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಮತ್ತು ಮಹಾರಾಷ್ಟ್ರದಲ್ಲಿ ಆಡಳಿತ ಸಮಿತಿಯ ಸದಸ್ಯರಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳಾದವರು ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಭೇಟಿ ನೀಡುವುದು ವಾಡಿಕೆಯಾಗಿತ್ತು ಎಂದು ಸಿಜೆಐ ವಿವರಿಸಿದರು.
ನ್ಯಾಯಾಂಗದ ಬಜೆಟ್‌ಗಳನ್ನು ಕಾರ್ಯಾಂಗ ನಿರ್ವಹಿಸುವುದರಿಂದ, ಮುಖ್ಯಮಂತ್ರಿ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಡುವೆ ಸಭೆ ಅಗತ್ಯ ಎಂದು ಅವರು ತಿಳಿಸಿದರು.
ನ್ಯಾಯಾಧೀಶರನ್ನು ನೇಮಿಸುವಾಗ ನಡೆಯುವ ಸಮಾಲೋಚನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಎರಡೂ ಅಂಗಗಳ ಮುಖ್ಯಸ್ಥರ ನಡುವೆ ಒಮ್ಮೊಮ್ಮೆ ಒಮ್ಮತ ಮೂಡಬಹುದು ಇಲ್ಲದಿರಬಹುದು ಎಂದರು.
ಕಾರ್ಯಾಂಗ ಮತ್ತು ನ್ಯಾಯಾಂಗದ ವಿವಿಧ ಹಂತಗಳ ನಡುವೆ ಬಹುತೇಕ ಪರಿಪಕ್ವತೆಯಿಂದ ಇದನ್ನು ನಿಭಾಯಿಸಲಾಗಿದೆ. ಸಿಜೆಐ ಕಾನೂನು ಸಚಿವರೊಂದಿಗೆ ಮಾತುಕತೆ ನಡೆಸಿ (ನ್ಯಾಯಾಧೀಶ) ಅಭ್ಯರ್ಥಿಯ ಬಗೆಗಿನ ಆಕ್ಷೇಪಣೆ ಸಮರ್ಥನೀಯವೇ ಎಂಬುದನ್ನು ನೋಡಬೇಕಾಗುತ್ತದೆ. ನೀವು ಪ್ರತಿಯೊಬ್ಬರೊಂದಿಗೆ ಚರ್ಚಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲೆಲ್ಲಾ ಭಾರೀ ಪ್ರಬುದ್ಧತೆಯನ್ನು ಮೆರೆಯಲಾಗುತ್ತದೆ ಎಂದು ಸಿಜೆಐ ಹೇಳಿದರು.
ಪ್ರಜಾಸತ್ತಾತ್ಮಕ ಸಂಸ್ಥೆಗಳ ಬಗ್ಗೆ ವ್ಯಕ್ತವಾಗುವ ಟೀಕೆಗಳಿಗೆ ಸಂಬಂಧಿಸಿದಂತೆ ಉತ್ತರಿಸಿದ ಸಿಜೆಐ ಸಾಂಸ್ಥಿಕ ಸುಧಾರಣೆಗಳ ವ್ಯಾಪ್ತಿ ಎಂಬುದು ಸಂಸ್ಥೆಯಲ್ಲಿ ಮೂಲಭೂತವಾಗಿ ಏನೋ ತಪ್ಪಾಗಿದೆ ಎಂಬುದನ್ನು ಹೇಳಬಾರದು ಎಂದರು.
"ನಾವು ಉತ್ತಮ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದೇವೆಯೇ ಎಂಬುದು ಪ್ರಶ್ನೆಯಾಗಿದೆ. ಕಳೆದ 75 ವರ್ಷಗಳಲ್ಲಿ ನಾವು ರಚಿಸಿರುವ ಸಂಸ್ಥೆಗಳನ್ನು ಟೀಕಿಸುವುದು ಸುಲಭ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಧನಾತ್ಮಕತೆಯಿಂದ ಕೂಡಿದ್ದು ಸುಧಾರಣೆಯ ಸಾಮರ್ಥ್ಯ ಹೊಂದಿದೆ" ಎಂದು ವಿವರಿಸಿದರು.