
ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದರಿಂದ ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಬಿಜೆಪಿಯ ತೇಜಸ್ವಿ ಸೂರ್ಯ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದತಿ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.
ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ವಜಾಗೊಳಿಸಿತು. ಈ ವೇಳೆ ರಾಜಕೀಯ ವಿಚಾರಗಳನ್ನು ನ್ಯಾಯಾಲಯಕ್ಕೆ ತರದಂತೆ ಎಚ್ಚರಿಕೆ ನೀಡಿತು.
ಪ್ರಕರಣವನ್ನು ರಾಜಕೀಯಗೊಳಿಸಬಾರದು ಎಂದು ತಿಳಿಸಿರುವ ಸಿಜೆಐ ಬಿ ಆರ್ ಗವಾಯಿ ಇಂತಹ ಸಮರ ನ್ಯಾಯಾಲಯದ ಹೊರಗೆ ನಡೆಯಲಿ ಎಂಬುದಾಗಿ ತಿಳಿಸಿದರು.
ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕನ್ನಡ ದುನಿಯಾ ಹಾಗೂ ಕನ್ನಡ ನ್ಯೂಸ್ ಡಿಜಿಟಲ್ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಇದನ್ನು ತೇಜಸ್ವಿ ಸೂರ್ಯ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಸುದ್ದಿಯು ಸುಳ್ಳು ಎಂಬುದು ನಂತರ ತಿಳಿದು ಬಂದಿತ್ತು.
"ತನ್ನ ಭೂಮಿಯನ್ನು ವಕ್ಫ್ ವಶಪಡಿಸಿಕೊಂಡಿದ್ದನ್ನು ಕಂಡು ಹಾವೇರಿಯ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ! ಅಲ್ಪಸಂಖ್ಯಾತರನ್ನು ಓಲೈಸುವ ಆತುರದಲ್ಲಿ, ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ಕರ್ನಾಟಕದಲ್ಲಿ ಭೀಕರ ಪರಿಣಾಮ ಉಂಟು ಮಾಡುತ್ತಿದ್ದು ದಿನೇ ದಿನೇ ಇದನ್ನು ನಿಯಂತ್ರಿಸಲು ಅಸಾಧ್ಯವಾಗುತ್ತಿದೆ" ಎಂದು ಟ್ವೀಟ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯರನ್ನು ಮೊದಲ ಆರೋಪಿಯನ್ನಾಗಿಸಿ, ಕನ್ನಡ ದುನಿಯಾ ಮಾಧ್ಯಮ ಮತ್ತು ಕನ್ನಡ ನ್ಯೂಸ್ ಸಂಪಾದಕರನ್ನು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳನ್ನಾಗಿಸಿ ಹಾವೇರಿಯ ಸೆನ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 353 (2) ಅಡಿ (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಿದ ಆರೋಪ) ಎಫ್‌ಐಆರ್ ದಾಖಲಿಸಲಾಗಿತ್ತು.
ನವೆಂಬರ್ 14, 2024ರಲ್ಲಿ, ಸೂರ್ಯ ಅವರ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿತ್ತು. ಡಿಸೆಂಬರ್ 2024ರಲ್ಲಿ ಪ್ರಕರಣ ರದ್ದುಗೊಳಿಸಿತ್ತು.
ಈ ಮಧ್ಯೆ ಪಶ್ಚಿಮ ಬಂಗಾಳ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಂತೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ವೇಳೆಯೂ ಸುಪ್ರೀಂ ಕೋರ್ಟ್ ಇದೇ ರೀತಿಯ ಅಭಿಪ್ರಾಯ ನೀಡಿದೆ.
"ನಾವು ಅಟಾರ್ನಿ ಜನರಲ್ ಅವರಿಂದ ಒಪ್ಪಿಗೆ ಕೋರಿದ್ದೇವೆ. ಪ್ರಕರಣವನ್ನು ನಂತರ ಮುಂದುವರಿಸಲು ಸಾಧ್ಯವೇ," ಎಂದು ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ಹೇಳಿದರು.
"ನಿಮಗೆ ಒಪ್ಪಿಗೆ ಸಿಗುತ್ತದೆ ಎಂದು ಖಚಿತವಾಗಿದೆಯೇ? ಇದನ್ನು ನಾವು ವಜಾಗೊಳಿಸಬೇಕು. ಇಂತಹ ಪ್ರಕರಣಗಳನ್ನು ರಾಜಕೀಯಗೊಳಿಸಬೇಡಿ. ರಾಜಕೀಯ ಹೋರಾಟಗಳು, ನ್ಯಾಯಾಲಯದ ಹೊರಗೆ ನಡೆಯಲಿ" ಎಂದು ಅದು ಹೇಳಿತು. ನಾಲ್ಕು ವಾರಗಳ ನಂತರ ಪ್ರಕರಣ ಪಟ್ಟಿ ಮಾಡುವಂತೆ ನಿರ್ದೇಶಿಸಿತು.