

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.
ಮಾನ್ವಿ ತಾಲ್ಲೂಕಿಗೆ ಗಡಿಪಾರು ಮಾಡಿ ಸೆಪ್ಟೆಂಬರ್ 18ರಂದು ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಹೊರಡಿಸಿರುವ ಆದೇಶ ಪ್ರಶ್ನಿಸಿ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ.
ಮಹೇಶ್ ಶೆಟ್ಟಿ ತಿಮರೋಡಿ ಅವರ ಗಡಿಪಾರು ಆದೇಶ ರದ್ದುಪಡಿಸಿರುವ ನ್ಯಾಯಾಲಯವು ಪ್ರಕರಣವನ್ನು ಹೊಸದಾಗಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸುವಂತೆ ಎರಡನೇ ಪ್ರತಿವಾದಿಯಾದ ಪುತ್ತೂರು ಉಪವಿಭಾಗಾಧಿಕಾರಿಗೆ ನಿರ್ದೇಶಿಸಿದೆ. ವಿಸ್ತೃತ ತೀರ್ಪಿನ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ವಿಚಾರಣೆ ವೇಳೆ ತಿಮರೋಡಿ ಪರ ಹಿರಿಯ ವಕೀಲ ತಾರಾನಾಥ ಪೂಜಾರಿ ಅವರು “ನಮ್ಮ ಅರ್ಜಿದಾರರ ವಿರುದ್ಧ ಹೊರಡಿಸಲಾಗಿರುವ ಆದೇಶದಲ್ಲಿ ವ್ಯಾಪಕ ಕಾನೂನು ಪ್ರಕ್ರಿಯೆಯ ಲೋಪಗಳಿವೆ. ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ತಿಮರೋಡಿ ವಿರುದ್ಧದ ಭಾವನೆ ಹೊಂದಿದೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಬಾಕಿ ಇವೆ ಎಂಬುದರ ಕುರಿತಾದ ಯಾವುದೇ ವಿವರಗಳನ್ನು ಸಮರ್ಪಕವಾಗಿ ಒದಗಿಸಿಲ್ಲ. ಈಗಾಗಲೇ ಸುಮಾರು 10 ಪ್ರಕರಣಗಳಲ್ಲಿ ಅವರ ವಿರುದ್ಧ ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೊಂಬಿ ಮಾಡಿ ಗಲಾಟೆ ನಡೆಸುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಆದರೆ, ಇದಕ್ಕೆ ಸಾಕ್ಷಿಗಳೇ ಇಲ್ಲ” ಎಂದು ಆಕ್ಷೇಪಿಸಿದ್ದರು.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ ಶೆಟ್ಟಿ “ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ಹೇಳುತ್ತಿರುವ ವಿವರಗಳು ಸರಿಯಲ್ಲ. ಸ್ಥಳೀಯ ನಿವಾಸಿಯಾಗಿರುವ ಮಹೇಶ್ ಶೆಟ್ಟಿ ತಿಮರೋಡಿ ಸೌಜನ್ಯ ಚಳವಳಿ ಹೆಸರಲ್ಲಿ ಏನು ಮಾಡುತ್ತಿದ್ದಾರೆ ಎಂಬುದು ಸಾರ್ವಜನಿಕರಿಗೆ ಗೊತ್ತಿದೆ. ಸರ್ಕಾರ ಸಹಜ ನ್ಯಾಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ” ಎಂದು ವಾದಿಸಿದ್ದರು.