[ಜಾರಕಿಹೊಳಿ ಸಿ ಡಿ ಪ್ರಕರಣ] ಕರ್ನಾಟಕ ಹೈಕೋರ್ಟ್‌ ಮಧ್ಯಂತರ ಆದೇಶಕ್ಕೆ ತಡೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಸಂತ್ರಸ್ತೆ

ವಿಶೇಷ ಕ್ರಿಮಿನಲ್‌ ಮನವಿಯ ಕುರಿತು ಸುಪ್ರೀಂ ಕೋರ್ಟ್‌ ನಿರ್ಧರಿಸುವವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಲಾಗಿದೆ.
Supreme Court and Ramesh Jarakiholi

Supreme Court and Ramesh Jarakiholi

ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ಸಂತ್ರಸ್ತ ಯುವತಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದ ದೂರಿನ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌ನ ಮಧ್ಯಂತರ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸಂತ್ರಸ್ತೆಯು ಈಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ವಿಶೇಷ ಕ್ರಿಮಿನಲ್‌ ಮನವಿಯ ಕುರಿತು ಸುಪ್ರೀಂ ಕೋರ್ಟ್‌ ನಿರ್ಧರಿಸುವವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯ ಮತ್ತು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಎಲ್ಲಾ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಮನವಿಯಲ್ಲಿ ಮಧ್ಯಂತರ ಕೋರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲು ಫೆಬ್ರವರಿ 3ರಂದು ನೀಡಿರುವ ಆದೇಶವನ್ನು ರದ್ದುಪಡಿಸಬೇಕು ಎಂಬ ಪ್ರಮುಖ ಕೋರಿಕೆಯನ್ನು ಮನವಿ ಒಳಗೊಂಡಿದೆ.

“ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು ಸಂತ್ರಸ್ತೆಯನ್ನು ಪ್ರತಿನಿಧಿಸಲಿದ್ದಾರೆ” ಎಂದು ಹೈಕೋರ್ಟ್‌ನಲ್ಲಿ ಸಂತ್ರಸ್ತೆಯ ಪರವಾಗಿ ಮನವಿ ಸಲ್ಲಿಸಿರುವ ವಕೀಲ ಸಂಕೇತ್‌ ಏಣಗಿ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ಖಚಿತಪಡಿಸಿದ್ದಾರೆ.

ಹೈಕೋರ್ಟ್‌ನ ವಿಭಾಗೀಯ ಪೀಠವು “ಆಕ್ಷೇಪಾರ್ಹವಾದ ಆದೇಶಗಳನ್ನು ಆಧರಿಸಿ ಎಸ್‌ಐಟಿ ರಚಿಸಲಾಗಿದ್ದು, ಎಸ್‌ಐಟಿಯ ಸಿಂಧುತ್ವವನ್ನು ನ್ಯಾಯಾಲಯ ನಿರ್ಧರಿಸಲಿದೆ. ಸಂತ್ರಸ್ತೆಯ ದೂರಿಗೆ ಸಂಬಂಧಿಸಿದ ತನಿಖೆ ಪೂರ್ಣಗೊಂಡಿದ್ದು, ಅದನ್ನು ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಅನುಮೋದಿಸಿದ್ದಾರೆ. ಹೀಗಾಗಿ, ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸದಂತೆ ಎಸ್‌ಐಟಿಯನ್ನು ತಡೆಯಲಾಗದು. ತನಿಖಾ ಸಂಸ್ಥೆ ಮತ್ತು ತನಿಖಾಧಿಕಾರಿಯ ಸಮರ್ಥತೆ ಮತ್ತು ವ್ಯಾಪ್ತಿಯ ಕುರಿತಾದ ವಿಚಾರವನ್ನು ವಿಚಾರಣಾಧೀನ ನ್ಯಾಯಾಲಯದ ಮ್ಯಾಜಿಸ್ಟ್ರೇಟ್‌ ನಿರ್ಧರಿಸಲಿದ್ದಾರೆ” ಎಂದು ಆದೇಶದಲ್ಲಿ ಹೇಳಿದ್ದು, ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅನುಮತಿಸಿತ್ತು.

Also Read
[ಜಾರಕಿಹೊಳಿ ವಿರುದ್ಧದ ಅತ್ಯಾಚಾರ ಪ್ರಕರಣ] ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ತನಿಖಾ ವರದಿ ಸಲ್ಲಿಕೆ

ಹೈಕೋರ್ಟ್‌ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಬೆಂಗಳೂರಿನ ಒಂದನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಅವರು ರಜೆಯಿದ್ದ ಹಿನ್ನೆಲೆಯಲ್ಲಿ ಉಸ್ತುವಾರಿ ನ್ಯಾಯಾಧೀಶೆ ರೇಷ್ಮಾ ರೋಡ್ರಿಗ್ಸ್ ಅವರಿಗೆ ಫೆಬ್ರವರಿ 4ರಂದು ಅಂತಿಮ ತನಿಖಾ ವರದಿಯನ್ನು ಪ್ರಕರಣದ ತನಿಖಾಧಿಕಾರಿಯಾದ ಪಶ್ಚಿಮ ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ (ಎಸಿಪಿ) ಎಂ ಸಿ ಕವಿತಾ ಮತ್ತು ಹೈಕೋರ್ಟ್‌ನಲ್ಲಿ ವಿಶೇಷ ತನಿಖಾ ದಳವನ್ನು (ಎಸ್‌ಐಟಿ) ಪ್ರತಿನಿಧಿಸಿರುವ ವಕೀಲ ಪಿ ಪ್ರಸನ್ನ ಕುಮಾರ್‌ ಅವರು ಸಲ್ಲಿಸಿದ್ದರು.

ಕಳೆದ ವರ್ಷದ ಮಾರ್ಚ್‌ನಲ್ಲಿ ಸಂತ್ರಸ್ತೆಯು ರಮೇಶ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ಆಧರಿಸಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 354ಎ (ಲೈಂಗಿಕ ದೌರ್ಜನ್ಯ), 506 (ಕ್ರಿಮಿನಲ್‌ ಬೆದರಿಕೆ), 504 (ಉದ್ದೇಶಪೂರ್ವಕವಾಗಿ ಅವಮಾನ ಮಾಡಿ ಶಾಂತಿಗೆ ಭಂಗ ಉಂಟು ಮಾಡುವುದು), 376ಸಿ (ಅಧಿಕಾರ ದುರ್ಬಳಕೆ ಮಾಡಿಕೊಂಡು ಸಂಭೋಗ ನಡೆಸುವುದು), 417 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 67ಎ (ಆಕ್ಷೇಪಾರ್ಹ ವಿಡಿಯೊ ಮತ್ತು ಮಾಹಿತಿಯ ಪ್ರಸಾರ) ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

Also Read
[ಜಾರಕಿಹೊಳಿ ಪ್ರಕರಣ] ವಿಚಾರಣಾಧೀನ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿಸಿದ ಹೈಕೋರ್ಟ್‌

ಸದರಿ ಪ್ರಕರಣದ ತನಿಖೆ ನಡೆಸಲು ಕವಿತಾ ಅವರನ್ನು ಬೆಂಗಳೂರು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ನೇಮಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕವಿತಾ ಅವರು ಇಡೀ ಪ್ರಕರಣದ ತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ದಳದ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರಿಗೆ ವರದಿ ಸಲ್ಲಿಸಿದ್ದರು. ವರದಿಯನ್ನು ಪರಿಶೀಲಿಸಿದ್ದ ಸೌಮೇಂದು ಮುಖರ್ಜಿ ಅವರು ಅದಕ್ಕೆ ಸಮ್ಮತಿ ನೀಡಿದ ನಂತರ ತನಿಖಾ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

Related Stories

No stories found.
Kannada Bar & Bench
kannada.barandbench.com