ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಅವರ ವರ್ಗಾವಣೆ ಪ್ರಸ್ತಾಪ ವಿರೋಧಿಸಿ ವಕೀಲರು ಎತ್ತಿರುವ ಆಕ್ಷೇಪಗಳನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಪರಿಶೀಲಿಸುತ್ತಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ಅವರು ಗುಜರಾತ್ ಹೈಕೋರ್ಟ್ ವಕೀಲರ ಸಂಘ (ಜಿಎಚ್‌ಸಿಎಎ) ಪ್ರತಿನಿಧಿಸುವ ನಿಯೋಗಕ್ಕೆ ಇಂದು ಭರವಸೆ ನೀಡಿದರು.
ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಆರ್ ಶಾ ಅವರ ಸಮ್ಮುಖದಲ್ಲಿ ಜಿಎಚ್‌ಸಿಎಎಯ ಏಳು ಮಂದಿ ಸದಸ್ಯರ ನಿಯೋಗವನ್ನು ತಮ್ಮ ಕೊಠಡಿಯಲ್ಲಿ ಭೇಟಿಯಾಗಿ 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು.
ಇತ್ತ ಸಂಘ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ "ಪ್ರಸ್ತಾಪಿಸಿದ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಲಾಗುವುದು ಎಂದು ವಕೀಲರ ಪ್ರತಿನಿಧಿಗಳಿಗೆ ತಿಳಿಸಿದ ಸಿಜೆಐ ಭರವಸೆ ನೀಡಿರುವುದರಿಂದ ವಕೀಲರು ಕೆಲಸದಿಂದ ದೂರ ಉಳಿಯಬಾರದು ಎಂದು ಹೇಳಿದ್ದಾರೆ" ಎಂಬುದಾಗಿ ವಿವರಿಸಲಾಗಿದೆ.
ಆದರೂ, ಪ್ರತಿಭಟನೆ ಅಂತ್ಯಗೊಳಿಸಲು ಸಂಘ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. “ನಾವು ಸದ್ಯಕ್ಕೆ ನಮ್ಮ ಮುಷ್ಕರವನ್ನು ಹಿಂತೆಗೆದುಕೊಳ್ಳುತ್ತಿಲ್ಲ. ನಾಳೆ (ಮಂಗಳವಾರ) ಗುಜರಾತ್ ವಕೀಲ ಸಮುದಾಯದ ಸಾಮಾನ್ಯ ಸಭೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಕೊಲಿಜಿಯಂ ನಿರ್ಧಾರವನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಸಂಘದ ಕಾರ್ಯದರ್ಶಿ ವಕೀಲ ಹಾರ್ದಿಕ್ ಬ್ರಹ್ಮಭಟ್ ಹೇಳಿದ್ದಾರೆ.
ನ್ಯಾಯಮೂರ್ತಿ ನಿಖಿಲ್ ಕರಿಯೆಲ್ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಸಂಘ ಕಳೆದ ಗುರುವಾರದಿಂದ ಪ್ರತಿಭಟನೆ ನಡೆಸುತ್ತಿದೆ. ನ್ಯಾಯಮೂರ್ತಿ ಎ ಅಭಿಷೇಕ್ ರೆಡ್ಡಿ ಅವರನ್ನು ಪಾಟ್ನಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಿರುವುದನ್ನು ವಿರೋಧಿಸುತ್ತಿರುವ ತೆಲಂಗಾಣ ವಕೀಲರ ಪ್ರತಿನಿಧಿಗಳೊಂದಿಗೆ ಸಿಜೆಐ ಅವರು ಇಂದು ಸಂಜೆ ಇದೇ ರೀತಿಯ ಸಭೆ ಏರ್ಪಡಿಸಿದ್ದಾರೆ.