ಸುಪ್ರೀಂ ನ್ಯಾಯಮೂರ್ತಿಗಳು, ವಕೀಲರಿಗೆ ಕೊಲೆ ಬೆದರಿಕೆ: ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ನಿಂದನೆ ಕೈಬಿಟ್ಟ ಹೈಕೋರ್ಟ್‌

ಸುಪ್ರೀಂ ಮತ್ತು ಹೈಕೋರ್ಟ್‌ನ 28 ಭ್ರಷ್ಟ ನ್ಯಾಯಮೂರ್ತಿಗಳ ಪೈಕಿ ತಪ್ಪೆಸಗಿರುವ ಇಬ್ಬರು ನ್ಯಾಯಮೂರ್ತಿಗಳು ಮತ್ತು ಇಬ್ಬರು ಭ್ರಷ್ಟ ವಕೀಲರನ್ನು ಕೊಲೆ ಮಾಡುವುದಾಗಿ ಹೈಕೋರ್ಟ್‌ ರಿಜಿಸ್ಟ್ರಿಗೆ ಆರೋಪಿ ಶ್ರೀನಿವಾಸ್‌ ರಾವ್‌ ಪತ್ರ ಬರೆದಿದ್ದರು.
ಸುಪ್ರೀಂ ನ್ಯಾಯಮೂರ್ತಿಗಳು, ವಕೀಲರಿಗೆ ಕೊಲೆ ಬೆದರಿಕೆ: ವ್ಯಕ್ತಿಯ ವಿರುದ್ಧದ ಕ್ರಿಮಿನಲ್‌ ನಿಂದನೆ ಕೈಬಿಟ್ಟ ಹೈಕೋರ್ಟ್‌
Karnataka High Court

“ನಿಮ್ಮ ವಿರುದ್ಧದ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ಇಲ್ಲಿಗೆ ಕೈಬಿಟ್ಟಿದ್ದೇವೆ. ಆದರೆ, ಎಚ್ಚರಿಕೆಯಿಂದ ಇರಿ. ನಿಮ್ಮ ಇಳಿ ವಯಸ್ಸನ್ನು ಹಾಳು ಮಾಡಿಕೊಳ್ಳಬೇಡಿ. ಮುಂದೆ (ಇದು ಮರುಕಳಿಸಿದರೆ) ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಶುಕ್ರವಾರ 72 ವರ್ಷದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್‌ ಎಚ್ಚರಿಕೆ ನೀಡಿ ಪ್ರಕರಣವನ್ನು ವಿಲೇವಾರಿ ಮಾಡಿದೆ.

ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ 28 ಭ್ರಷ್ಟ ನ್ಯಾಯಮೂರ್ತಿಗಳ ಪೈಕಿ ತಪ್ಪೆಸಗಿರುವ ಇಬ್ಬರು ನ್ಯಾಯಮೂರ್ತಿಗಳು ಮತ್ತು ಇಬ್ಬರು ಭ್ರಷ್ಟ ವಕೀಲರನ್ನು ಕೊಲೆ ಮಾಡುವುದಾಗಿ ಹೈಕೋರ್ಟ್‌ ರಿಜಿಸ್ಟ್ರಿಗೆ ಬರೆದಿದ್ದ ಪತ್ರವನ್ನು ಆಧರಿಸಿ ಆರೋಪಿ ಎಸ್‌ ವಿ ಶ್ರೀನಿವಾಸ್‌ ರಾವ್‌ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಮನವಿಯ ವಿಚಾರಣೆ ನಡೆಸಿ, ಅದನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ವಿಲೇವಾರಿ ಮಾಡಿತು.

“ಜೂನ್‌ 23ರ ಬಳಿಕ ಆರೋಪಿ ಶ್ರೀನಿವಾಸ್‌ ರಾವ್‌ ಅವರ ನಡತೆಯನ್ನು ಪರಿಶೀಲಿಸಲು ಹಲವು ದಿನಾಂಕಗಳನ್ನು ಪೀಠ ನಿಗದಿಪಡಿಸಲಾಗಿತ್ತು ಎಂಬ ವಿಚಾರವನ್ನು ನಾವು ಪರಿಗಣಿಸಿದ್ದೇವೆ. ಜೂನ್‌ 29, ಆಗಸ್ಟ್‌ 11 ಮತ್ತು ಸೆಪ್ಟೆಂಬರ್‌ 13ರ ದಿನಾಂಕಗಳು ಅದರಲ್ಲಿ ಸೇರಿವೆ. ಇಲ್ಲಿ ಆರೋಪಿಯ ವಿರುದ್ಧ ಪ್ರಕ್ರಿಯೆ ಮುಂದುವರಿಸಬಹುದಾದಂಥ ಯಾವುದೇ ವಿಚಾರಗಳು ಕಂಡು ಬಂದಿಲ್ಲ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

“ಪ್ರಕರಣದ ಇಡೀ ಅಂಶಗಳನ್ನು ಪರಿಗಣಿಸಿ, ವಿಶೇಷವಾಗಿ ಆರೋಪಿಯ ಇಳಿವಯಸ್ಸನ್ನು ಆಧರಿಸಿ, ಅವರು ತಮ್ಮನ್ನು ಅರ್ಥೈಸಿಕೊಂಡು ಕ್ಷಮೆ ಕೋರಿರುವುದರಿಂದ ಈ ಹಂತದಲ್ಲಿ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನು ಕೈಬಿಡುತ್ತಿದ್ದೇವೆ” ಎಂದು ಪೀಠ ಹೇಳಿದೆ.

“ಆರೋಪಿ ತಮ್ಮ ಬೇಷರತ್‌ ಕ್ಷಮೆಯನ್ನು ಅಫಿಡವಿಟ್‌ನಲ್ಲಿ ಸಲ್ಲಿಸಿದ್ದಾರೆ. ಹತಾಶೆ ಮತ್ತು ವೇದನೆಯಿಂದ ಮಾನಸಿಕ ಸ್ತಿಮಿತ ಕಳೆದುಕೊಂಡು ಈ ರೀತಿಯ ಅವಮಾನಕರ ಹೇಳಿಕೆ ನೀಡಿದ್ದಾಗಿ ಹೇಳಿದ್ದಾರೆ. ಇದರ ಬಗ್ಗೆ ಪಶ್ಚಾತಾಪವನ್ನು ವ್ಯಕ್ತಪಡಿಸಿದ್ದಾರೆ” ಎಂಬುದನ್ನು ಆದೇಶದಲ್ಲಿ ಪೀಠವು ದಾಖಲಿಸಿಕೊಂಡಿದೆ.

ಜೂನ್‌ 23ರಂದು ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಬೇಷರತ್‌ ಕ್ಷಮೆ ಕೋರಿರುವ ಆರೋಪಿಯು ಮುಂದೆ ಇಂಥ ಯಾವುದೇ ಹೇಳಿಕೆ ನೀಡುವುದಿಲ್ಲ. ಮುಂದೆ ಎಚ್ಚರಿಕೆಯಿಂದ ಇರುವುದಾಗಿ ಹೇಳಿದ್ದಾರೆ.

ಜನವರಿ 29ರಂದು ರಿಜಿಸ್ಟ್ರಿಗೆ ಕಳುಹಿಸಿದ್ದ ಪತ್ರದಲ್ಲಿ ಹಿರಿಯ ನ್ಯಾಯಮೂರ್ತಿಯ ವಿರುದ್ಧ ಅವಮಾನಕರ ಹೇಳಿಕೆಗಳನ್ನು ನೀಡಿದ್ದು, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಪ್ರಭಾವಕ್ಕೆ ಒಳಗಾಗಿ ಹಾಲಿ ನ್ಯಾಯಮೂರ್ತಿ ನಡೆದುಕೊಳ್ಳುತ್ತಿದ್ದಾರೆ ಎಂದು ಶ್ರೀನಿವಾಸ್‌ ರಾವ್‌ ಆರೋಪಿಸಿದ್ದರು.

Also Read
ಜನಸಾಮಾನ್ಯರ ನ್ಯಾಯಮೂರ್ತಿ ಮೋಹನ್‌ ಶಾಂತನಗೌಡರ್: ಸಿಜೆಐ ಎನ್ ವಿ ರಮಣ

“ಅವಮಾನಕಾರಿ, ಅನಗತ್ಯ ಮತ್ತು ಆಧಾರರಹಿತ ಹೇಳಿಕೆಗಳ ಮೂಲಕ ನ್ಯಾಯಮೂರ್ತಿಗಳಿಗೆ ಬೆದರಿಕೆ ಅಥವಾ ಅವರನ್ನು ಅತಿಮಾನುಷವಾಗಿ ಬಿಂಬಿಸುವುದಕ್ಕೆ ಯಾರಿಗೂ ಅವಕಾಶ ನೀಡಲಾಗದು” ಎಂದು ಹೈಕೋರ್ಟ್‌ ಹೇಳಿದೆ.

“ನ್ಯಾಯಾಲಯವನ್ನು ಅವಮಾನಗೊಳಿಸುವ ರೀತಿಯಲ್ಲಿ ಆರೋಪಗಳಿವೆ. ಇಂಥ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಿಕ ಪ್ರಕ್ರಿಯೆಯ ಮೂಲಕ ಮಧ್ಯಪ್ರವೇಶ ಮಾಡಬೇಕಾಗುತ್ತದೆ. ನ್ಯಾಯದಾನಕ್ಕೆ ಅಡ್ಡಿಪಡಿಸುವುದು ಆರೋಪಗಳ ಉದ್ದೇಶವಾಗಿದೆ. ವಕೀಲರ ಪರಿಷತ್‌ನ ಸದಸ್ಯರೂ ನ್ಯಾಯಿಕ ವ್ಯವಸ್ಥೆಯ ಅತಿಮುಖ್ಯ ಭಾಗವಾಗಿದ್ದಾರೆ. ಅವರ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ಅವರು ಪ್ರಕರಣದ ಹಿಂದೆ ಸರಿಯುವಂತೆ ಮಾಡುವುದು ನ್ಯಾಯದಾನ ವ್ಯವಸ್ಥೆಗೆ ಅಡ್ಡಿಪಡಿಸುವುದಾಗಿದೆ” ಎಂದು ನ್ಯಾಯಾಲಯ ಹೇಳಿದೆ.

Related Stories

No stories found.
Kannada Bar & Bench
kannada.barandbench.com