

-
ಕೊಚ್ಚಿಯಲ್ಲಿರುವ ಲುಲು ಅಂತರರಾಷ್ಟ್ರೀಯ ಶಾಪಿಂಗ್ ಮಾಲ್ ವಾಹನ ನಿಲುಗಡೆ ಶುಲ್ಕ ಸಂಗ್ರಹಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ಕೇರಳ ಹೈಕೋರ್ಟ್ ಶನಿವಾರ ವಜಾಗೊಳಿಸಿದೆ. [ಬಾಸ್ಕೊ ಲೂಯಿಸ್ ವಿರುದ್ಧ ಕೇರಳ ರಾಜ್ಯ & ಅದರ್ಸ್]
ಮಾಲ್ ಮಾಲೀಕರು ಪುರಸಭೆಯ ಪರವಾನಗಿ ಹೊಂದಿದ್ದರೆ, ಸಂದರ್ಶಕರಿಂದ ವಾಹನ ನಿಲುಗಡೆ ಶುಲ್ಕವನ್ನು ವಿಧಿಸುವುದು ಮಾಲ್ ಮಾಲೀಕರ ವಿಶೇಷ ಅಧಿಕಾರಕ್ಕೆ ಸಂಬಂಧಿಸಿದ ವಿಚಾರ ಎಂದು ಈ ಹಿಂದೆ ನೀಡಲಾಗಿದ್ದ ಏಕಸದಸ್ಯ ಪೀಠದ ತೀರ್ಪನ್ನು ನ್ಯಾಯಮೂರ್ತಿಗಳಾದ ಎಸ್ಎ ಧರ್ಮಾಧಿಕಾರಿ ಮತ್ತು ಸ್ಯಾಮ್ ಕುಮಾರ್ ವಿಎಂ ಅವರನ್ನೊಳಗೊಂಡ ವಿಭಾಗೀಯ ಪೀಠ ಎತ್ತಿಹಿಡಿದಿದೆ.
ಹೈಕೋರ್ಟ್ನ ಏಕಸದಸ್ಯ ಪೀಠ ಲೂಲು ಮಾಲ್ನ ಎರಡು ಪಾರ್ಕಿಂಗ್ ಪ್ರದೇಶಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಿತ್ತು. ನೆಲಮಾಳಿಗೆ ಪಾರ್ಕಿಂಗ್ಗೆ ಸಂಬಂಧಿಸಿದ ಶುಲ್ಕ ಸಂಗ್ರಹ ಕಾನೂನುಬದ್ಧವಾಗಿದೆ. ಆದರೆ ಕೇರಳ ಪುರಸಭೆ ಕಾಯಿದೆಯ ಸೆಕ್ಷನ್ 475 ರ ಅಡಿಯಲ್ಲಿ ಮಲ್ಟಿಲೆವೆಲ್ ವಾಹನ ನಿಲುಗಡೆ ಶುಲ್ಕ ಸಂಗ್ರಹ ಕಾನೂನುಬಾಹಿರ ಎಂದು ತೀರ್ಮಾನಿಸಿತ್ತು.
ತಮ್ಮಿಂದ ವಾಹನ ನಿಲುಗಡೆ ಶುಲ್ಕವಾಗಿ ₹20 ಪಡೆಯಲಾಗಿದೆ ಎಂದು ದೂರಿ ಚಲನಚಿತ್ರ ನಿರ್ದೇಶಕ ಪೌಲಿ ವಡಕ್ಕನ್ ಮತ್ತು ಬಾಸ್ಕೋ ಲೂಯಿಸ್ ಅವರು ಅರ್ಜಿ ಸಲ್ಲಿಸಿದ್ದರು. ವಾಣಿಜ್ಯ ಸಂಕೀರ್ಣಗಳು ಸಂದರ್ಶಕರಿಗೆ ಉಚಿತ ವಾಹನ ನಿಲುಗಡೆ ಒದಗಿಸಲು ಬದ್ಧವಾಗಿರಬೇಕು ಎಂದು ವಾದಿಸಿದ್ದ ಅವರು ಈ ಶುಲ್ಕ ಕೇರಳ ಪುರಸಭೆ ಕಾಯಿದೆ ಮತ್ತು ಕಟ್ಟಡ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದಿದ್ದರು.
ಆದರೆ ಸಾಕಷ್ಟು ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆ ಕೈಗೊಳ್ಳಲು ಭಾರಿ ಮೊತ್ತದ ಹಣ ಖರ್ಚು ಮಾಡಲಾಗಿದ್ದು ಶುಲ್ಕ ವಿಧಿಸುವುದಕ್ಕೆ ಕಾನೂನು ನಿಷೇಧ ಇಲ್ಲ ಎಂದು ಲುಲು ವಾದಿಸಿತ್ತು.
ನ್ಯಾಯಾಲಯವು ಮೇಲ್ಮನವಿ ವಜಾಗೊಳಿಸಿರುವುದರಿಂದ, ಪುರಸಭೆ ಕಾಯಿದೆಯಡಿ ಚಟುವಟಿಕೆಗೆ ಸೂಕ್ತ ಪರವಾನಗಿ ಪಡೆದಿದ್ದರೆ, ಲುಲು ಮಾಲ್ ವಾಹನ ನಿಲುಗಡೆ ಶುಲ್ಕ ಸಂಗ್ರಹಿಸುವುದನ್ನು ಮುಂದುವರಿಸಬಹುದಾಗಿದೆ.