ಕೊರೊನಾ ಸೋಂಕಿಗೆ ಒಳಗಾದ 391 ವಕೀಲರಿಗೆ ಕೆಎಸ್‌ಬಿಸಿಯಿಂದ ₹54 ಲಕ್ಷ ಧನ ಸಹಾಯ

ಪ್ರತ್ಯೇಕವಾಸದಲ್ಲಿದ್ದ ವಕೀಲರ ಚಿಕಿತ್ಸೆ ಮತ್ತು ಉಪಚಾರಕ್ಕಾಗಿ ತಲಾ 10 ಸಾವಿರ ರೂಪಾಯಿ ಹಾಗೂ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಆಸ್ಪತ್ರೆಗೆ ದಾಖಲಾದವರಿಗೆ ತಲಾ 25 ಸಾವಿರ ರೂಪಾಯಿ ನೀಡುವುದಾಗಿ ಕೆಎಸ್‌ಬಿಎಸ್‌ ಘೋಷಿಸಿತ್ತು.
KSBC
KSBC

ಕೊರೊನಾ ಸೋಂಕಿಗೆ ತುತ್ತಾಗಿ ಏಪ್ರಿಲ್‌ 1ರಿಂದ ಮೇ 20ರವರೆಗೆ ಗೃಹ ಪ್ರತ್ಯೇಕವಾಸ (ಕ್ವಾರಂಟೈನ್‌) ಮತ್ತು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ರಾಜ್ಯದ ಒಟ್ಟು 391 ವಕೀಲರಿಗೆ 54.25 ಲಕ್ಷ ರೂಪಾಯಿ ಪರಿಹಾರವನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ವಿತರಿಸಿದೆ. ಇದರಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಹಾಕಿದ್ದ ವಕೀಲರಿಗೆ ಮಾತ್ರ ನೆರವಿನ ಹಣ ಬಿಡುಗಡೆ ಮಾಡಿದ್ದು, ಭೌತಿಕವಾಗಿ ಅರ್ಜಿ ಸಲ್ಲಿಸಿದ್ದವರಿಗೆ ಇನ್ನಷ್ಟೇ ನೆರವು ಬಿಡುಗಡೆಯಾಗಬೇಕಿದೆ.

“ರಾಜ್ಯದಾದ್ಯಂತ ಮನೆಯಲ್ಲಿಯೇ ಪ್ರತ್ಯೇಕವಾಸಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಸುಮಾರು 290 ವಕೀಲರು ಆನ್‌ಲೈನ್‌ ಮೂಲಕ ನೆರವು ಕೋರಿ ಅರ್ಜಿ ಸಲ್ಲಿಸಿದ್ದು 29 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಬೆಂಗಳೂರಿನ ವಕೀಲರ ಸಂಖ್ಯೆ ಹೆಚ್ಚಿದೆ. ರಾಜ್ಯದ ವಿವಿಧೆಡೆ ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ 101 ಮಂದಿಗೆ ತಲಾ 25 ಸಾವಿರ ರೂಪಾಯಿಂತೆ 25.25 ಲಕ್ಷ ರೂಪಾಯಿಯನ್ನು ಕೆಎಸ್‌ಬಿಎಸ್‌ ಬಿಡುಗಡೆ ಮಾಡಿದೆ. ಈ ನೆರವು ಪಡೆದ ಪಟ್ಟಿಯಲ್ಲೂ ಬೆಂಗಳೂರಿನ ವಕೀಲರ ಸಂಖ್ಯೆ ಹೆಚ್ಚಿದೆ” ಎಂದು ಕೆಎಸ್‌ಬಿಸಿ ಅಧ್ಯಕ್ಷ ಎಲ್‌ ಶ್ರೀನಿವಾಸ್‌ ಬಾಬುಬಾರ್‌ ಅಂಡ್‌ ಬೆಂಚ್‌”ಗೆ ತಿಳಿಸಿದ್ದಾರೆ.

“ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಿಬ್ಬಂದಿ ಕಚೇರಿಗೆ ಬರುತ್ತಿಲ್ಲ. ಇದರಿಂದ ಪದಾಧಿಕಾರಿಗಳೇ ಕುಳಿತು ದಾಖಲೆಗಳನ್ನು ಪರಿಶೀಲಿಸಿ ಹಣ ವರ್ಗಾವಣೆ ಮಾಡಿದ್ದೇವೆ. ಸಿಬ್ಬಂದಿ ಕೊರತೆಯಿಂದ ಕಾರ್ಯದ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸಿರುವವರಿಗೆ ಹಣ ಬಿಡುಗಡೆ ಮಾಡಲಾಗಿಲ್ಲ. ಶೀಘ್ರದಲ್ಲೇ ಅವರಿಗೂ ನೆರವಿನ ಹಣ ಬಿಡುಗಡೆ ಮಾಡಲಾಗುವುದು” ಎಂದು ಶ್ರೀನಿವಾಸ್‌ ಬಾಬು ತಿಳಿಸಿದ್ದಾರೆ.

ಕೊರೊನಾ ಎರಡನೇ ಅಲೆ ಆರಂಭವಾದಾಗ ಅನಾರೋಗ್ಯ ಪೀಡಿತರಾದವರು ಮತ್ತು ಆಸ್ಪತ್ರೆಗೆ ದಾಖಲಾದವರಿಗೆ ಆರ್ಥಿಕ ಸಹಾಯ ಮಾಡಬೇಕು ಎಂಬ ವ್ಯಾಪಕ ಕೂಗು ವಕೀಲರ ಸಮುದಾಯದಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಸದಲ್ಲಿದ್ದ ವಕೀಲರ ಚಿಕಿತ್ಸೆ ಮತ್ತು ಉಪಚಾರಕ್ಕಾಗಿ ತಲಾ 10 ಸಾವಿರ ರೂಪಾಯಿ ಹಾಗೂ ಹೆಚ್ಚಿನ ವೈದ್ಯಕೀಯ ನೆರವಿಗಾಗಿ ಆಸ್ಪತ್ರೆಗೆ ದಾಖಲಾದವರಿಗೆ ತಲಾ 25 ಸಾವಿರ ರೂಪಾಯಿ ನೀಡುವುದಾಗಿ ಕೆಎಸ್‌ಬಿಎಸ್‌ ಘೋಷಿಸಿತ್ತು.

Also Read
ಪಿಎಂ ಕೇರ್ಸ್‌ಗೆ ನಮ್ಮ ವಕೀಲರೂ ದೇಣಿಗೆ ನೀಡಿದ್ದಾರೆ, ಸಂಕಷ್ಟದಲ್ಲಿ ನಮ್ಮ ನೆರವಿಗೆ ಯಾರೂ ಬರಲಿಲ್ಲ: ಎಂ ಎಚ್ ಖಾಸನೀಸ

ಕಳೆದ ವರ್ಷದ ಮಾರ್ಚ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಲಾಕ್‌ಡೌನ್‌ ಘೋಷಣೆಯಾದ ನಂತರ ನ್ಯಾಯಾಲಯ ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೆ ಅಡ್ಡಿಯಾಗಿತ್ತು. ಆನಂತರ ನ್ಯಾಯಾಲಯದ ಚಟುವಟಿಕೆಗಳು ಆರಂಭವಾದರೂ ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಕಕ್ಷಿದಾರರು ನ್ಯಾಯಾಲಯದತ್ತ ಮುಖ ಮಾಡುವುದು ವಿರಳವಾದ್ದರಿಂದ ವಕೀಲರ ಆದಾಯಕ್ಕೂ ಹೊಡೆತ ಬಿದ್ದಿತ್ತು. ಇದರಿಂದ ಬಹುತೇಕರ ಅದರಲ್ಲೂ ಯುವ ವಕೀಲರ ಬದುಕು ತತ್ತರಿಸಿದೆ. ಸಾಕಷ್ಟು ಮಂದಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಲಕ್ಷಾಂತರ ರೂಪಾಯಿ ಆರೋಗ್ಯ ವೆಚ್ಚ ಭರಿಸಿದ್ದರಿಂದ ಸಾಲದ ಸುಳಿಗೆ ಸಿಲುಕಿದ ಉದಾಹರಣೆಗಳಿವೆ.

ಈ ಮಧ್ಯೆ, ಏಪ್ರಿಲ್‌ 1ರಿಂದ ಮೇ ತಿಂಗಳ ಎರಡನೇ ವಾರದ ಅಂತ್ಯದ ವೇಳೆಗೆ ರಾಜ್ಯದಾದ್ಯಂತ ಸುಮಾರು 175ಕ್ಕೂ ಹೆಚ್ಚು ವಕೀಲರು ಕೊರೊನಾ ಸೋಂಕಿಗೆ ತುತ್ತಾಗಿದ್ದ ಆಘಾತಕಾರಿ ಅಂಶವು ಬೆಳಕಿಗೆ ಬಂದಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Related Stories

No stories found.
Kannada Bar & Bench
kannada.barandbench.com