[ಲಖೀಂಪುರ್ ಖೇರಿ] ಸಾಕ್ಷಿಗಳಿಗೆ ರಕ್ಷಣೆ ನೀಡಿ, ಹೇಳಿಕೆಗಳನ್ನು ತ್ವರಿತವಾಗಿ ದಾಖಲಿಸಿಕೊಳ್ಳಿ: ಸುಪ್ರೀಂಕೋರ್ಟ್ ತಾಕೀತು

ದಾರಿಹೋಕ ಪ್ರೇಕ್ಷಕನಿಗಿಂತಲೂ ಪ್ರತ್ಯಕ್ಷದರ್ಶಿ ನೋಡಿದ್ದು ಹೆಚ್ಚು ವಿಶ್ವಾಸಾರ್ಹವಾಗಿದ್ದರೆ ಅಂತಹ ಪ್ರಥಮ ಮಾಹಿತಿ ಪಡೆಯುವುದು ಉತ್ತಮ ಎಂದು ನ್ಯಾಯಾಲಯ ಸಲಹೆ ನೀಡಿತು.
Lakhimpur Kheri, Supreme Court
Lakhimpur Kheri, Supreme Court

ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಟೇನಿ ಅವರ ಪುತ್ರ ಆಶಿಶ್‌ ಮಿಶ್ರಾ ಅವರ ನಾಲ್ಕು ಚಕ್ರದ ವಾಹನ ಹರಿದು ರೈತರು ಸೇರಿದಂತೆ ಎಂಟು ಮಂದಿ ಮೃತಪಟ್ಟ ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದ ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ಸುಪ್ರೀಂ ಕೋರ್ಟ್ ಇಂದು ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಅಲ್ಲದೆ ಪ್ರಕರಣದಲ್ಲಿ ಸಾಕ್ಷಿಗಳಾಗಿರುವವರ ಹೇಳಿಕೆಗಳನ್ನು ತ್ವರಿತವಾಗಿ ದಾಖಲಿಸಿಕೊಳ್ಳುವಂತೆಯೂ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿದೆ.

Also Read
[ಲಖಿಂಪುರ್ ಖೇರಿ ಪ್ರಕರಣ] ಮಂದಗತಿ ತನಿಖೆಯ ಬಗ್ಗೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ತಪರಾಕಿ

ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಪ್ರಕರಣದ ಸ್ಥಿತಿಗತಿ ವರದಿ ಪರಿಶೀಲಿಸಿದ ನಂತರ ಸಿಜೆಐ ರಮಣ "ಒಬ್ಬ ಆರೋಪಿಯನ್ನು ಬಿಟ್ಟು ಉಳಿದೆಲ್ಲ ಆರೋಪಿಗಳನ್ನು ಏಕೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಿದ್ದೀರಿ? ಯಾವ ಉದ್ದೇಶಕ್ಕಾಗಿ?" ಎಂದು ಕಠಿಣವಾಗಿ ಪ್ರಶ್ನಿಸಿದರು.

ಸಾಕ್ಷಿಗಳ ಹೇಳಿಕೆಗಳನ್ನು ಇನ್ನೂ ದಾಖಲಿಸಲಾಗುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಪೀಠಕ್ಕೆ ತಿಳಿಸಿದರು. 68 ಮಂದಿಯಲ್ಲಿ 30 ಸಾಕ್ಷಿಗಳ ಹೇಳಿಕೆಗಳನ್ನು ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ದಾಖಲಿಸಲಾಗಿದೆ . ಇವರಲ್ಲಿ 23 ಮಂದಿ ಪ್ರತ್ಯಕ್ಷ ಸಾಕ್ಷಿಗಳಾಗಿದ್ದಾರೆ ಎಂದು ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ಆಗ ನ್ಯಾಯಾಲಯ ಪ್ರತಿಭಟನಾ ಮೆರವಣಿಗೆಯಲ್ಲಿ ನೂರಾರು ರೈತರು ಇದ್ದರೂ ಕೇವಲ 23 ಜನರ ಸಾಕ್ಷ್ಯ ಪಡೆಯಲಾಗಿದೆಯೇ ಎಂದು ಪ್ರಶ್ನಿಸಿತು. ಆಗ ಸಾಳ್ವೆ ಅವರು "ನಾವು ಜಾಹೀರಾತು ನೀಡಿದ್ದೇವೆ. ಕಾರಿನಲ್ಲಿದ್ದವರನ್ನು ನೋಡಿದವರು ಈಗಾಗಲೇ ಅಲ್ಲಿದ್ದಾರೆ. ದೊಡ್ಡ ಪ್ರಮಾಣದ ಡಿಜಿಟಲ್ ಮಾಧ್ಯಮ (ಮಾಹಿತಿಯನ್ನು) ಸಂಗ್ರಹಿಸಲಾಗಿದೆ. ಓವರ್‌ಲ್ಯಾಪಿಂಗ್‌ ವೀಡಿಯೊಗಳಿವೆ "ಎಂದರು. ಈ ವಾದಕ್ಕೆ ತೃಪ್ತರಾಗದ ನ್ಯಾ. ಕಾಂತ್ "4,000 ಅಥವಾ 5,000 ಜನರಿದ್ದಾರೆ ಎಂದು ನೀವು ಹೇಳಿದ್ದೀರಿ. ಬಹುತೇಕ ಅವರು ಸ್ಥಳೀಯರು. ಘಟನೆಯ ನಂತರ, ಅವರಲ್ಲಿ ಹೆಚ್ಚಿನವರು ವಿಚಾರಣೆಗಾಗಿ ಹೋರಾಟ ನಡೆಸುತ್ತಿದ್ದಾರೆ. ವಾಹನದಲ್ಲಿದ್ದ ವ್ಯಕ್ತಿಗಳ ಸಂಪರ್ಕ ಸಾಧಿಸುವುದು ಮತ್ತು ಅವರನ್ನು ಗುರುತಿಸುವುದು ದೊಡ್ಡ ಸಮಸ್ಯೆಯಾಗಲಾರದು" ಎಂದರು.

Also Read
ಲಖಿಂಪುರ್ ಖೇರಿ ಹಿಂಸಾಚಾರ: ಆರೊಪಿಗಳ ಸೆರೆ, ಎಫ್ಐಆರ್ ಬಗ್ಗೆ ಸ್ಥಿತಿಗತಿ ವರದಿ ಕೇಳಿದ ಸುಪ್ರೀಂ

ಆರೋಪಿಗಳನ್ನು ಪತ್ತೆಹಚ್ಚುವುದರ ಬಗೆಗಿನ ಮಹತ್ವವನ್ನು ಪೀಠ ಒತ್ತಿ ಹೇಳಿತು. “ದಾರಿಹೋಕ ಪ್ರೇಕ್ಷಕರಿಗಿಂತಲೂ ಪ್ರತ್ಯಕ್ಷದರ್ಶಿ ನೋಡಿದ್ದು ಹೆಚ್ಚು ವಿಶ್ವಾಸಾರ್ಹವಾಗಿದ್ದರೆ ಅಂತಹ ಪ್ರಥಮ ಮಾಹಿತಿ ಪಡೆಯುವುದು ಉತ್ತಮ… ಈ ಗುಂಪಿನಲ್ಲಿ ಕೆಲವರು ಕೇವಲ ನಿರ್ಲಿಪ್ತವಾಗಿರುತ್ತಾರೆ ಎಂಬುದನ್ನು ನಾವು ಮರೆಯಬಾರದು. ಕೆಲವರು ಮಾತ್ರ ಕಟಿಬದ್ಧರಾಗಿ ಸಾಕ್ಷ್ಯ ನುಡಿಯಬಹುದು” ಎಂದರು.

ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ 164 ಸಾಕ್ಷಿಗಳು ಹೇಳಿಕೆಗಳನ್ನು ಸಾಳ್ವೆ ಬಹಿರಂಗಪಡಿಸಿದರು. ಎಲ್ಲಾ ಹದಿನಾರು ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದರು.

Also Read
[ಲಖಿಂಪುರ್ ಖೇರಿ ಪ್ರಕರಣ] ಪ್ರಿಯಾಂಕಾ ಗಾಂಧಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲದ ಬಗ್ಗೆ ವಕೀಲರ ಆಕ್ಷೇಪ

ಸಾಕ್ಷಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಸಾಳ್ವೆ ಅವರು ಪೀಠಕ್ಕೆ ತಿಳಿಸಿದಾಗ. ಸಾಕ್ಷಿಗಳಿಗೆ ಸಿಸಿಟಿವಿ ಮತ್ತು ಗೃಹರಕ್ಷಕರನ್ನು ಒದಗಿಸಬೇಕು ಎಂದಿತು. ಜೊತೆಗೆ "... ಎಷ್ಟು ಸಾಧ್ಯವೋ ಅಷ್ಟು ಬೇಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ಪಡೆಯುತ್ತಿರುವುದು ಆತಂಕಕಾರಿಯಾಗಿದೆ. ಸರ್ಕಾರ ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ ನಾವು ನಿರ್ದೇಶಿಸುತ್ತೇವೆ. 164 ಸಾಕ್ಷಿಗಳ ಹೇಳಿಕೆ ಮತ್ತು ಸಂಬಂಧಪಟ್ಟ ಪುರಾವೆಗಳನ್ನು ತ್ವರಿತವಾಗಿ ದಾಖಲಿಸುವಂತೆ ನಾವು ನಿರ್ದೇಶಿಸುತ್ತೇವೆ. ನ್ಯಾಯಾಂಗ ಅಧಿಕಾರಿ ಲಭ್ಯವಿಲ್ಲದಿದ್ದರೆ, ಜಿಲ್ಲಾ ನ್ಯಾಯಾಧೀಶರು 164 ಹೇಳಿಕೆಗಳನ್ನು ಆಲಿಸಲು ಸಮೀಪದ ಮ್ಯಾಜಿಸ್ಟ್ರೇಟ್ ಅವರನ್ನು ನಿಯೋಜಿಸಬಹುದು” ಎಂದು ಸರ್ವೋಚ್ಛ ನ್ಯಾಯಾಲಯ ಸಲಹೆ ನೀಡಿತು.

ಮೃತರೊಬ್ಬರ ಪತ್ನಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅರುಣ್ ಭಾರದ್ವಾಜ್, "ನಾನು ರೂಬಿ ದೇವಿ ಪರ ಹಾಜರಾಗಿದ್ದೇನೆ. ನನ್ನ (ಕಕ್ಷೀದಾರರ) ಪತಿಯನ್ನು ಕೊಲ್ಲಲಾಗಿದೆ. ನನಗೆ ನ್ಯಾಯ ಬೇಕು. ಹಂತಕರು ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ ಮತ್ತು ನನಗೆ ಬೆದರಿಕೆ ಹಾಕುತ್ತಿದ್ದಾರೆ." ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ಸಾಳ್ವೆ “ಈ ಕುರಿತು ತನಿಖೆ ನಡೆಸಲಾಗುತ್ತಿದೆ, ಕಾರಿನಲ್ಲಿದ್ದ ಪತ್ರಕರ್ತನನ್ನೂ ಹತ್ಯೆ ಮಾಡಲಾಗಿದೆ” ಎಂದರು. ಆ ಬಳಿಕ ನ್ಯಾಯಾಲಯ ಈ ವಿಚಾರವಾಗಿ ಪ್ರತ್ಯೇಕ ಉತ್ತರ ಬಯಸಿತು.

"ನನ್ನ ಮುಂದೆ ಇಬ್ಬರು ದೂರುದಾರರಿದ್ದಾರೆ. ಒಬ್ಬರು ರೂಬಿದೇವಿ ಮತ್ತೊಬ್ಬರು ಸಾವಿಗೀಡಾದ ಪತ್ರಕರ್ತ. ಪ್ರಕರಣದಲ್ಲಿ ಪ್ರತ್ಯೇಕ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಲಾಗಿದೆ" ಎಂದು ಸಿಜೆಐ ರಮಣ ಹೇಳಿದರು. ಅಂತಿಮವಾಗಿ ನ್ಯಾಯಾಲಯ ನವೆಂಬರ್ 8ಕ್ಕೆ ಪ್ರಕರಣವನ್ನು ಮುಂದೂಡಿತು. ಪ್ರಕರಣದ ಈ ಹಿಂದಿನ ವಿಚಾರಣೆಗಳ ವೇಳೆಯೂ ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡದ್ದನ್ನು ಇಲ್ಲಿ ಸ್ಮರಿಸಬಹುದು.

Related Stories

No stories found.
Kannada Bar & Bench
kannada.barandbench.com