ನಿವೃತ್ತ ಸಿಜೆಐ ಮೇಲೆ ಶೂ ಎಸೆಯಲು ಮುಂದಾಗಿದ್ದ ಪದಚ್ಯುತ ವಕೀಲ ರಾಕೇಶ್ ಕಿಶೋರ್‌ಗೆ ಚಪ್ಪಲಿ ಏಟು

ದೆಹಲಿಯ ಕಡ್‌ಕಡ್‌ಡೂಮ ನ್ಯಾಯಾಲಯದ ಸಂಕೀರ್ಣದಲ್ಲಿ ವಕೀಲ ರಾಕೇಶ್ ಕಿಶೋರ್ ಅವರ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.
Advocate Rakesh Kishore
Advocate Rakesh Kishore
Published on

ಸುಪ್ರೀಂ ಕೋರ್ಟ್‌ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ ಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ್ದ ಪದಚ್ಯುತ ವಕೀಲ ರಾಕೇಶ್ ಕಿಶೋರ್‌ ಮೇಲೆ ಮಂಗಳವಾರ ದೆಹಲಿಯ ಕಡ್‌ಕಡ್‌ಡೂಮ ನ್ಯಾಯಾಲಯದ ಸಂಕೀರ್ಣದಲ್ಲಿ ಅಪರಿಚಿತ ವ್ಯಕ್ತಿಗಳು ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಹಲವು ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

Also Read
ಶೂ ಎಸೆತದಂತಹ ಘಟನೆಗಳಿಗೆ ಕಡಿವಾಣ: ಮಾರ್ಗಸೂಚಿ ರೂಪಿಸಲು ಸುಪ್ರೀಂ ಇಂಗಿತ, ವಕೀಲನ ವಿರುದ್ಧ ಸದ್ಯಕ್ಕಿಲ್ಲ ಕ್ರಮ

ದೃಶ್ಯಾವಳಿಯಲ್ಲಿ ಕಿಶೋರ್‌ಗೆ ಚಪ್ಪಲಿಯಿಂದ ಹೊಡೆಯಲು ಕೆಲವರು ಯತ್ನಿಸುತ್ತಿದ್ದರೆ ಮತ್ತೆ ಕೆಲವರು ಮಧ್ಯಪ್ರವೇಶಿಸಿ ಹಲ್ಲೆ ನಡೆಸದಂತೆ ತಡೆಯುತ್ತಿದ್ದಾರೆ. ಹಲ್ಲೆ ನಡೆಸಿದವರ ಚಹರೆ ದೃಶ್ಯಗಳಲ್ಲಿ ಕಂಡುಬರುವುದಿಲ್ಲ. ಅವರ ಗುರುತು ಕೂಡ ಪತ್ತೆಯಾಗಿಲ್ಲ.

ಘಟನೆ ನಡೆದ ವೇಳೆ ಭದ್ರತಾ ಸಿಬ್ಬಂದಿ ಇದ್ದರೂ ಘಟನೆ ಹೇಗೆ ನಡೆಯಿತು ಎಂಬ ಕುರಿತು ವಿವರಗಳು ತಿಳಿದುಬಂದಿಲ್ಲ. ದಾಳಿಯ ಉದ್ದೇಶವೂ ಸ್ಪಷ್ಟವಾಗಿಲ್ಲ. ಯಾವುದೇ ವ್ಯಕ್ತಿ ಅಥವಾ ಗುಂಪು ಈವರೆಗೆ ಘಟನೆಯ ಹೊಣೆ ಹೊತ್ತಿಲ್ಲ. ಅಧಿಕಾರಿಗಳು ಕೂಡ ಅಧಿಕೃತ ವಿವರಣೆ ನೀಡಿಲ್ಲ.

ಅಕ್ಟೋಬರ್ 6 ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಅಂದಿನ ಸಿಜೆಐ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಕಿಶೋರ್ ಸುದ್ದಿಯಾಗಿದ್ದರು. ಆದರೆ, ನ್ಯಾಯಾಲಯದ ಭದ್ರತಾ ಸಿಬ್ಬಂದಿ ಸಕಾಲಕ್ಕೆ ಮಧ್ಯಪ್ರವೇಶಿಸಿ ವಕೀಲನನ್ನು ಹೊರಗೆ ಕರೆದೊಯ್ದರು. ಹಾಗೆ ಕರೆದೊಯ್ಯುವ ವೇಳೆ ಆತ "ಸನಾತನ್‌ ಕಾ ಅಪಮಾನ್‌ ನಹೀ ಸಹೇಂಗೆ" (ಸನಾತನಕ್ಕೆ ಮಾಡುವ ಅಪಮಾನವನ್ನು ಸಹಿಸುವುದಿಲ್ಲ) ಎಂದು ಘೋಷಣೆ ಕೂಗಿದ್ದರು.

Also Read
ಸಿಜೆಐ ಮೇಲೆ ಶೂ ಎಸೆಯಲೆತ್ನಿಸಿದ ಪ್ರಕರಣ ಮರೆಯುವಂಥದ್ದಲ್ಲ: ನ್ಯಾ. ಭುಯಾನ್

ಮಧ್ಯಪ್ರದೇಶದ ಖಜುರಾಹೊ ಸ್ಮಾರಕ ಸಮುಚ್ಛಯದಲ್ಲಿರುವ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ಪ್ರಾಚೀನ ವಿಗ್ರಹವನ್ನು ಸರಿಪಡಿಸಲು ಕೋರಿದ್ದ ಅರ್ಜಿ ವಿಚಾರಣೆಗೆ ನಿರಾಕರಿಸಿದ್ದ ವೇಳೆ ಸಿಜೆಐ ಅವರು ಪರಿಹಾರಕ್ಕಾಗಿ ದೇವರಲ್ಲಿಯೇ ಪ್ರಾರ್ಥಿಸಿ ಎಂದು ಹೇಳಿದ್ದರು. ಇದಲ್ಲದೆ, ಸಿಜೆಐ ಗವಾಯಿ ಅವರು ಮಾರಿಷಸ್ ಪ್ರವಾಸ ಮಾಡುವಾಗ,  ಭಾರತದಲ್ಲಿ ಬುಲ್ಡೋಜರ್ ತೆರವು ಕಾರ್ಯಾಚರಣೆ ವಿರುದ್ಧ ಹೇಳಿಕೆ ನೀಡಿದ್ದರು. ಈ ವಿಚಾರವಾಗಿಯೂ ರಾಕೇಶ್‌ ಅವರನ್ನು ಟೀಕಿಸಿದ್ದ. ಈ ಕಾರಣಗಳಿಗೆ ಆತ ಸಿಜೆಐ ಅವರ ಮೇಲೆ ಶೂ ಎಸೆಯಲು ಮುಂದಾಗಿದ್ದ ಎನ್ನಲಾಗಿದೆ.

Also Read
ಸಿಜೆಐ ಮೇಲೆ ಶೂ ಎಸೆತ ಪ್ರಕರಣ: ರಾಕೇಶ್‌ ಕಿಶೋರ್‌ ವಿರುದ್ಧ ವಿಧಾನ ಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲು

ಘಟನೆ ಹಿನ್ನೆಲೆಯಲ್ಲಿ ಭಾರತೀಯ ವಕೀಲರ ಪರಿಷತ್ತು ಕಿಶೋರ್‌ನ ವೃತ್ತಿ ಪರವಾನಗಿಯನ್ನು ಅಮಾನತುಗೊಳಿಸಿತ್ತು. ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸಿತ್ತು. ಸುಪ್ರೀಂ ಕೋರ್ಟ್ ವಕೀಲರ ಸಂಘ ​​(ಎಸ್‌ಸಿಬಿಎ) ಕೂಡ ಆತನ ಸದಸ್ಯತ್ವ ರದ್ದುಗೊಳಿಸಿತ್ತು.

ತರುವಾಯ, ಭಾರತದ ಅಟಾರ್ನಿ ಜನರಲ್ ಅವರು ಕಿಶೋರ್‌ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಒಪ್ಪಿಗೆ ನೀಡಿದ್ದರು.

ಆದರೆ ಆತನ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಮುಂದಾಗಲು ತನಗೆ ಒಲವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಆದರೆ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸುರಕ್ಷತಾ ಕ್ರಮ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿತ್ತು.

ಮಂಗಳವಾರ ಕಿಶೋರ್‌ ಮೇಲೆ ಹಲ್ಲೆ ನಡೆದ ಘಟನೆಯ ಬಗ್ಗೆ ಜಿಲ್ಲಾ ವಕೀಲರ ಸಂಘವಾಗಲೀ ಅಥವಾ ಭಾರತೀಯ ವಕೀಲರ ಪರಿಷತ್ತಾಗಲೀ ಇದುವರೆಗೆ ಸಾರ್ವಜನಿಕ ಹೇಳಿಕೆ ನೀಡಿಲ್ಲ.

ಘಟನೆಗೆ ಸಂಬಂಧಿಸಿದಂತೆ ಕಿಶೋರ್ ಪೊಲೀಸ್ ದೂರು ದಾಖಲಿಸಲು ಅಥವಾ ಯಾವುದೇ ಔಪಚಾರಿಕ ಕ್ರಮ ಕೈಗೊಳ್ಳಲು ಉದ್ದೇಶಿಸಿದ್ದಾರೆಯೇ ಎಂಬುದು ತಿಳಿದಿಲ್ಲ.

Kannada Bar & Bench
kannada.barandbench.com