ಯೂಟ್ಯೂಬ್‌ನಲ್ಲಿ ಹಿಜಾಬ್ ಕಲಾಪ: ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಕರ್ನಾಟಕ ಹೈಕೋರ್ಟ್‌

ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ 11 ದಿನಗಳ‌ ಒಟ್ಟು 23.5 ಗಂಟೆ ಕಲಾಪವನ್ನು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಚಂದಾದಾರರ ಸಂಖ್ಯೆ ಒಂದು ಲಕ್ಷ ದಾಟಿದೆ.
ಯೂಟ್ಯೂಬ್‌ನಲ್ಲಿ ಹಿಜಾಬ್ ಕಲಾಪ: ಭಾರತದ ನ್ಯಾಯಾಂಗ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಕರ್ನಾಟಕ ಹೈಕೋರ್ಟ್‌

ಹೊಸ ವರ್ಷದ ಮೊದಲ ದಿನದಿಂದಲೇ ನ್ಯಾಯಾಲಯದ ಕಲಾಪಗಳನ್ನು ಯೂಟ್ಯೂಬ್‌ ಮೂಲಕ ಲೈವ್‌ ಸ್ಟ್ರೀಮ್‌ ಮಾಡುವುದನ್ನು ಕಡ್ಡಾಯಗೊಳಿಸಿರುವ ಕರ್ನಾಟಕ ಹೈಕೋರ್ಟ್‌ಗೆ ಹಿಜಾಬ್‌ ಕುರಿತಾದ ಪ್ರಕರಣದ ವಿಚಾರಣೆಯು ಅಪಾರ ನೋಡುಗರು ಮತ್ತು ಚಂದಾದಾರನ್ನು ತಂದುಕೊಟ್ಟಿದ್ದು, ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಕರ್ನಾಟಕ ಹೈಕೋರ್ಟ್‌ ವಿಶಿಷ್ಟ ಮೈಲುಗಲ್ಲು ಸಾಧಿಸಿದೆ.

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದ 11 ದಿನಗಳ‌ ಕಲಾಪವನ್ನು ಕರ್ನಾಟಕ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಶ್ವದ ವಿವಿಧೆಡೆಯಿಂದ ಬರೋಬ್ಬರಿ 33.5 ಲಕ್ಷ ಮಂದಿ ವೀಕ್ಷಿಸಿದ್ದು, ಚಂದಾದಾರರ ಸಂಖ್ಯೆ ಒಂದು ಲಕ್ಷ ದಾಟಿದೆ. ಬೇರಾವ ಹೈಕೋರ್ಟ್‌ನ ಚಂದಾದಾರರ ಸಂಖ್ಯೆಯೂ ಒಂದು ಲಕ್ಷ ದಾಟಿಲ್ಲ. ಬಹುತೇಕ ಹೈಕೋರ್ಟ್‌ಗಳಲ್ಲಿ ಯೂಟ್ಯೂಬ್‌ ಲೈವ್‌ಸ್ಟ್ರೀಮ್‌ ಇನ್ನಷ್ಟೇ ಆರಂಭವಾಗಬೇಕಿದೆ.

ತರಗತಿಯಲ್ಲಿ ಹಿಜಾಬ್‌ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರ ನೇತೃತ್ವದ ಪೀಠವು ಫೆಬ್ರವರಿ 10ರಿಂದ ಫೆಬ್ರವರಿ 25ರ ನಡುವೆ 11 ದಿನ ಕಾಲ ಪ್ರತಿದಿನ ಸರಾಸರಿ ಎರಡು ತಾಸಿನಂತೆ ಒಟ್ಟಾರೆ 23.5 ತಾಸು ವಿಚಾರಣೆ ನಡೆಸಿದೆ. ಶುಕ್ರವಾರ ಪೀಠವು ತೀರ್ಪು ಕಾಯ್ದಿರಿಸಿದ್ದು, ಈಗ ಎಲ್ಲರ ಚಿತ್ತ ಅತ್ತ ನೆಟ್ಟಿದೆ.

ವಿಶ್ವದಾದ್ಯಂತ ಭಾರಿ ಚರ್ಚೆ ಹುಟ್ಟಿಹಾಕಿರುವ ಕರ್ನಾಟಕದ ಉಡುಪಿಯಲ್ಲಿ ಆರಂಭವಾದ ಹಿಜಾಬ್‌ ವಿವಾದವು ಮೊದಲಿಗೆ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿತ್ತು. ಸರ್ಕಾರದ ಕ್ರಮ ಪ್ರಶ್ನಿಸಿ ಹಲವು ಮನವಿ ಸಲ್ಲಿಕೆಯಾಗಿದ್ದು, ಸಾಂವಿಧಾನಿಕ ಅಂಶಗಳು ಅಡಕವಾಗಿರುವುದರಿಂದ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವಹಿಸುವಂತೆ ನ್ಯಾ. ದೀಕ್ಷಿತ್‌ ಅವರು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರಿಗೆ ಕೋರಿದ್ದರು. ಇದರ ಬೆನ್ನಿಗೇ ಫೆಬ್ರವರಿ 9ರಂದು ಪೂರ್ಣ ಪೀಠ ರಚಿಸಿದ ಮುಖ್ಯ ನ್ಯಾಯಮೂರ್ತಿಗಳು ಫೆ.10ರಿಂದಲೇ ವಿಚಾರಣೆ ಆರಂಭಿಸಿದ್ದರು.

ಇಡೀ ಕಲಾಪವನ್ನು ಪಕ್ಷಕಾರರ ಒಪ್ಪಿಗೆಯೊಂದಿಗೆ ಯೂಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲು ಪೀಠವು ನಿರ್ಧರಿಸಿತು. ವರ್ಚುವಲ್‌ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಜೂಮ್‌ ಮೀಟ್‌ ಸಾಫ್ಟ್‌ವೇರ್‌ ಬಳಸಲಾಗುತ್ತಿದ್ದು, ಇಲ್ಲಿ ಗರಿಷ್ಠ 500 ಮಂದಿ ಮಾತ್ರ ಕಲಾಪದಲ್ಲಿ ಭಾಗವಹಿಸಬಹುದು ಅಥವಾ ವೀಕ್ಷಿಸಬಹುದು. ಇಷ್ಟು ಜನರು ಏಕೈಕ ಬಾರಿಗೆ ಲಾಗಿನ್‌ ಆದರೆ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿ, ಕಲಾಪದಲ್ಲಿ ತಾಳಮೇಳ ತಪ್ಪಿದ್ದೂ ಉಂಟು. ಇದರಿಂದ ವಕೀಲರು ಮತ್ತು ಆಯ್ದ ಮಾಧ್ಯಮದವರಿಗೆ ಜೂಮ್‌ ಮೀಟ್‌ನಲ್ಲಿ ಅವಕಾಶ ಕಲ್ಪಿಸಿದ್ದ ಹೈಕೋರ್ಟ್‌ನ ಕಂಪ್ಯೂಟರ್‌ ವಿಭಾಗವು ಆಸಕ್ತರಿಗೆ ಕಲಾಪವನ್ನು ಯೂಟ್ಯೂಬ್‌ನಲ್ಲಿ ವೀಕ್ಷಿಸುವಂತೆ ಸೂಚಿಸಿತ್ತು. ಹಿಜಾಬ್‌ ಪ್ರಕರಣ ದೇಶವಲ್ಲದೇ ಹೊರ ದೇಶಗಳಲ್ಲೂ ಭಾರಿ ಕುತೂಹಲ ಸೃಷ್ಟಿಸಿದ್ದರಿಂದ ಅಪಾರ ಮಂದಿ ಕರ್ನಾಟಕ ಹೈಕೋರ್ಟ್‌ನ ಯೂಟ್ಯೂಬ್‌ ಚಾನೆಲ್‌ ಮೂಲಕ ಕಲಾಪವನ್ನು ವೀಕ್ಷಿಸಿದ್ದಾರೆ.

ಒಂದು ಹಂತದಲ್ಲಿ ಹಿಜಾಬ್‌ ಪ್ರಕರಣದ ಲೈವ್‌ ಸ್ಟ್ರೀಮಿಂಗ್‌ ಅನ್ನೇ ಗರಿಷ್ಠ 25 ಸಾವಿರ ಮಂದಿ ವೀಕ್ಷಿಸಿದ್ದಾರೆ. ಇದು ಭಾರತದ ನ್ಯಾಯಾಂಗ ಇತಿಹಾಸದಲ್ಲೇ ವಿನೂತನ ಸಾಧನೆ ಎಂಬುದು ಹೆಚ್ಚುಗಾರಿಕೆ.

ನ್ಯಾಯಾಂಗದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಇ-ಸಮಿತಿಯು ಎಲ್ಲಾ ನ್ಯಾಯಾಲಯಗಳ ಕಲಾಪಗಳನ್ನು‌ ಯೂಟ್ಯೂಬ್‌ನಲ್ಲಿ ಲೈವ್‌ ಸ್ಟ್ರೀಮ್ ಮಾಡಲು ಆದೇಶ ಮಾಡಿದೆ. ಇದರ ಭಾಗವಾಗಿ ದೇಶದಲ್ಲೇ ಮೊದಲ ಬಾರಿಗೆ ಗುಜರಾತ್‌ ಹೈಕೋರ್ಟ್‌ ಯೂಟ್ಯೂಬ್‌ ಲೈವ್‌ ಸ್ಟ್ರೀಮಿಂಗ್‌ ಆರಂಭಿಸಿತ್ತು. ಇದರ ಬೆನ್ನಿಗೇ ಕರ್ನಾಟಕ ಹೈಕೋರ್ಟ್‌ ಸಹ ಹಿಂದಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರ ಸೂಚನೆಯ ಮೇರೆಗೆ ಪ್ರಾಯೋಗಿಕವಾಗಿ ಕಲಾಪವನ್ನು ಲೈವ್‌ ಸ್ಟ್ರೀಮ್‌ ಮಾಡುವ ಪ್ರಕ್ರಿಯೆ ಆರಂಭಿಸಿತ್ತು.

ನ್ಯಾ. ಓಕ್‌ ಅವರ ಬಳಿಕ ಮುಖ್ಯ ನ್ಯಾಯಮೂರ್ತಿಯಾಗಿ ಬಂದಿರುವ ರಿತುರಾಜ್‌ ಅವಸ್ಥಿ ಅವರು ಕಲಾಪ ಲೈವ್‌ಸ್ಟ್ರೀಮ್‌ ಕಡ್ಡಾಯ ಮಾಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಗಳ ಹಿನ್ನೆಲೆಯಲ್ಲಿ “ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು 2021” ಅನ್ನು ಜಾರಿ ಮಾಡಿ, ಜನವರಿ 1ರಿಂದಲೇ ನಿಯಮಗಳು ಅಸ್ತಿತ್ವಕ್ಕೆ ಬರುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದರು. ಆ ಬಳಿಕ ಪ್ರತಿದಿನ ಕರ್ನಾಟಕ ಹೈಕೋರ್ಟ್‌ನ ಕೆಲವು ಪೀಠಗಳ ವಿಚಾರಣೆಯನ್ನು ಹೈಕೋರ್ಟ್‌ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಲಾಗುತ್ತಿದೆ. ಈ ಬೆನ್ನಿಗೇ, ಹಿಜಾಬ್‌ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಇದು ಜನಸಮುದಾಯದಲ್ಲಿ ಸೃಷ್ಟಿಸಿದ ಭಾರಿ ಕುತೂಹಲದಿಂದಾಗಿ ಕಲಾಪ ವೀಕ್ಷಣೆ ಮತ್ತು ಚಂದಾದಾರರ ಸಂಖ್ಯೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಯೂಟ್ಯೂಬ್‌ ಚಾನೆಲ್ ಗಣನೀಯ ಏರಿಕೆ ದಾಖಲಿಸಿತು.

Also Read
ಕರ್ನಾಟಕ ನ್ಯಾಯಾಲಯ ಕಲಾಪಗಳ ಲೈವ್‌ಸ್ಟ್ರೀಮಿಂಗ್‌ ಮತ್ತು ರೆಕಾರ್ಡಿಂಗ್‌ ನಿಯಮಾವಳಿ ಪ್ರಕಟ; ನಾಳೆಯಿಂದಲೇ ಜಾರಿ

11 ದಿನದಲ್ಲಿ ಅರ್ಧಪಟ್ಟು ವೀಕ್ಷಣೆ ಹೆಚ್ಚಳ

ಕರ್ನಾಟಕ ಹೈಕೋರ್ಟ್‌ನ ಯೂಟ್ಯೂಬ್‌ ಚಾನೆಲ್‌ ಅನ್ನು 2020ರ ಮೇ 16ರಂದು ಆರಂಭಿಸಲಾಗಿದ್ದು, ಒಟ್ಟಾರೆ 206 ವಿಡಿಯೊಗಳು ಈವರೆಗೆ ಅಡಕಗೊಂಡಿವೆ. ಎಲ್ಲಾ ವಿಡಿಯೊಗಳಿಂದ ಸುಮಾರು 63.18 ಲಕ್ಷ ವೀಕ್ಷಣೆ ದಾಖಲಾಗಿದೆ. ಈ ಪೈಕಿ ಹಿಜಾಬ್‌ಗೆ ಸಂಬಂಧಿಸಿದ 11 ವಿಡಿಯೊಗಳನ್ನು 33.5 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದರರ್ಥ ಅರ್ಧಕ್ಕೂ ಹೆಚ್ಚು ವೀಕ್ಷಣೆ ಹಿಜಾಬ್‌ ಪ್ರಕರಣದ ಕಲಾಪದ ವಿಡಿಯೊಗಳಿಂದ ಅತಿ ಕ್ಷಿಪ್ರ ಅವಧಿಯಲ್ಲಿ ದಾಖಲಾಗಿದೆ. ಇದೇ ವೇಳೆ, ಕರ್ನಾಟಕ ಹೈಕೋರ್ಟ್‌ನ ಯೂಟ್ಯೂಬ್‌ ಚಾನೆಲ್‌ ಚಂದಾದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದ್ದು, 1 ಲಕ್ಷ ದಾಟಿದೆ. ಇನ್ನು ಕೆಲವು ವೀಕ್ಷಕರು ಅಸಭ್ಯ ಪದಗಳ ಮೂಲಕ ಪ್ರತಿಕ್ರಿಯಿಸಿದ್ದ ಹಿನ್ನೆಲೆಯಲ್ಲಿ ಚಾಟ್‌ ವಿಭಾವನ್ನು ಸ್ಥಗಿತಗೊಳಿಸಲಾಗಿದೆ.

ಕಳೆದ ವರ್ಷ ದೇಶದಲ್ಲೇ ಮೊದಲಿಗೆ ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ಆರಂಭಿಸಿದ ಹಿರಿಮೆ ಪಾತ್ರವಾಗಿರುವ ಗುಜರಾತ್‌ ಹೈಕೋರ್ಟ್‌ ಯೂಟ್ಯೂಬ್‌ ಚಾನೆಲ್‌ ಅನ್ನು 2020ರ ಏಪ್ರಿಲ್‌ 21ರಲ್ಲಿ ಆರಂಭಿಸಲಾಗಿದ್ದು, 2,900 ವಿಡಿಯೊ ಅಡಕಗೊಳಿಸಲಾಗಿದ್ದು, 89,500 ಮಂದಿ ಚಂದಾದಾರರಿದ್ದಾರೆ. ಒಟ್ಟಾರೆ ಅಲ್ಲಿನ ಹೈಕೋರ್ಟ್‌ನ ಯೂಟ್ಯೂಬ್‌ ವಿಡಿಯೊಗಳನ್ನು 98.79 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಉಳಿದ ಹೈಕೋರ್ಟ್‌ಗಳಲ್ಲಿ ಯೂಟ್ಯೂಬ್‌ ಲೈವ್‌ಸ್ಟ್ರೀಮ್‌ ವ್ಯವಸ್ಥೆ ಪ್ರಾಥಮಿಕ ಹಂತದಲ್ಲಿದ್ದರೆ ಕೆಲವು ಕಡೆ ಯಾವುದೇ ಬೆಳವಣಿಗೆಯಾಗಿಲ್ಲ.

Also Read
ಬ್ರೇಕಿಂಗ್:‌ ಮುಖ್ಯ ನ್ಯಾಯಮೂರ್ತಿ ಕೊಠಡಿಯಿಂದ ಕಲಾಪಗಳ ಲೈವ್‌ ಸ್ಟ್ರೀಮಿಂಗ್ ಆರಂಭಿಸಿದ ಗುಜರಾತ್‌ ಹೈಕೋರ್ಟ್

ಯೂಟ್ಯೂಬ್‌ ಲೈವ್‌ಸ್ಟ್ರೀಮ್‌ಗೆ ತಡೆ ನೀಡಲು ನಕಾರ

ಆರಂಭದಲ್ಲಿ ಪಕ್ಷಕಾರರು ಕಲಾಪವನ್ನು ಲೈವ್‌ ಸ್ಟ್ರೀಮ್‌ಗೆ ಒಪ್ಪಿಗೆ ಸೂಚಿಸಿದ್ದರು. ಈ ಮಧ್ಯೆ, ಅರ್ಜಿದಾರರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಕಲಾಪ ಲೈವ್‌ಸ್ಟ್ರೀಮ್‌ನಿಂದ ಮಕ್ಕಳ ಮೇಲೆ ನಾನಾ ರೀತಿಯ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ, ಅದನ್ನು ನಿರ್ಬಂಧಿಸಬೇಕು ಎಂದು ಕೋರಿದ್ದರು. ಇದಕ್ಕೆ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಆಕ್ಷೇಪಿಸಿದ್ದರು. ಅಂತಿಮವಾಗಿ ಪೀಠವು “ಪ್ರತಿವಾದಿ ಸರ್ಕಾರ ಮತ್ತು ಇತರರ ವಾದವನ್ನು ಜನರು ನೋಡಲಿ ಬಿಡಿ” ಎಂದಿತ್ತು.

Related Stories

No stories found.
Kannada Bar & Bench
kannada.barandbench.com