
ಅತಿವೇಗ ಹಾಗೂ ಕುಡಿದು ವಾಹನ ಚಲಾಯಿಸಿದ್ದಕ್ಕೆ ದಂಡ ಪಾವತಿಸಿರುವ ಚಾಲಕರನ್ನು ಶಾಲೆಗಳಿಗೆ ನೇಮಿಸಿಕೊಳ್ಳದಂತೆ ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ರಾಜ್ಯದಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿದೆ [ಪರ್ಮೋದ್ ಕುಮಾರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಶಿಕ್ಷಣ ಸಂಸ್ಥೆಗಳು, ಕೋಚಿಂಗ್ ಕೇಂದ್ರಗಳು, ಕ್ರೀಡಾ ಅಕಾಡೆಮಿಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಬಸ್‌ಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆಗಾಗಿ ಹೊರಡಿಸಿದ ಮಾರ್ಗಸೂಚಿಗಳ ಭಾಗವಾಗಿ ನ್ಯಾಯಮೂರ್ತಿ ವಿವೇಕ್ ರುಸಿಯಾ ಮತ್ತು ನ್ಯಾಯಮೂರ್ತಿ ಬಿನೋದ್ ಕುಮಾರ್ ದ್ವಿವೇದಿ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಶಾಶ್ವತ ಚಾಲನಾ ಪರವಾನಗಿ ಪಡೆದಿರುವ ಮತ್ತು ಭಾರೀ ವಾಹನ ಚಲಾಯಿಸುವಲ್ಲಿ ಕನಿಷ್ಠ ಐದು ವರ್ಷ ಅನುಭವವುಳ್ಳ ಚಾಲಕರೇ ಶಾಲಾ ಬಸ್‌ಗಳನ್ನು ಚಲಾಯಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ಸಿಗ್ನಲ್‌ಗಳ ಉಲ್ಲಂಘನೆ, ಲೇನ್ ಜಂಪ್ ಮಾಡಿರುವುದು, ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿದ ಅಪರಾಧಗಳಿಗಾಗಿ ವರ್ಷದಲ್ಲಿ ಎರಡು ಬಾರಿ ದಂಡ ಪಾವತಿಸಿರುವಂತಹ ಚಾಲಕರನ್ನುಸಹ ನೇಮಿಸಿಕೊಳ್ಳುವಂತಿಲ್ಲ. ಅತಿವೇಗ, ಕುಡಿದು ವಾಹನ ಚಾಲನೆ ಮಾಡಿರುವ ಮತ್ತು ಅಪಾಯಕಾರಿ ಚಾಲನೆಯ ಅಪರಾಧಕ್ಕಾಗಿ ಒಮ್ಮೆ ದಂಡ ಪಾವತಿಸಿದ್ದರೂ ಅಂತಹವರನ್ನು ನೇಮಿಸಿಕೊಳ್ಳುವಂತಿಲ್ಲ.ಈ ಕುರಿತು ಶಿಕ್ಷಣ ಸಂಸ್ಥೆ ವಾಹನ ಚಾಲಕರಿಂದ ಅಫಿಡವಿಟ್ ಪಡೆದಿರಬೇಕು ಎಂದು ನ್ಯಾಯಾಲಯ ಹೇಳಿದೆ.
ಆರಂಭದ ನಿಲ್ದಾಣದಿಂದ ಕೊನೆಯ ನಿಲ್ದಾಣದವರೆಗೆ ವಿದ್ಯಾರ್ಥಿಗಳೊಂದಿಗೆ ಪ್ರಯಾಣಿಸಲು ಪುರುಷ ಇಲ್ಲವೇ ಮಹಿಳಾ ಶಿಕ್ಷಕರನ್ನು ನಿಯೋಜಿಸುವಂತೆಯೂ ಎಲ್ಲಾ ಶಾಲಾ ಆಡಳಿತ ಮಂಡಳಿಗಳಿಗೆ ನ್ಯಾಯಾಲಯ ಸೂಚಿಸಿದೆ.
ಇಂದೋರ್‌ನಲ್ಲಿ ದೆಹಲಿ ಪಬ್ಲಿಕ್ ಶಾಲೆಯ ಬಸ್ಸೊಂದು 2018 ರಲ್ಲಿ ಅಪಘಾತಕ್ಕೀಡಾಗಿ ನಾಲ್ವರು ವಿದ್ಯಾರ್ಥಿಗಳು ಹಾಗೂ ಚಾಲಕ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅನೇಕ ಪೋಷಕರು ಸುರಕ್ಷತಾ ಕ್ರಮಗಳನ್ನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಖಾಸಗಿ ಶಾಲೆಗಳಿಗೆ ಸಂಬಂಧಿಸಿದಂತೆ ಶುಲ್ಕ ವಿಧಿಸುವಿಕೆ ಮತ್ತಿತರ ಸಂಗತಿಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರ 2017ರಲ್ಲಿ ಕಾಯಿದೆ ಜಾರಿಗೆ ತಂದಿದ್ದರೂ, ಶಾಲಾ ಬಸ್‌ಗಳ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ನಿಬಂಧನೆಗಳಿಲ್ಲ ಎಂಬುದನ್ನು ಪೀಠ ಗಮನಿಸಿತು.
ಛತ್ತೀಸ್‌ಗಡದಲ್ಲಿ ಶಾಲಾ ಬಸ್ ಪರವಾನಗಿ ಷರತ್ತಿಗಾಗಿ ಛತ್ತೀಸ್‌ಗಡ ಮೋಟಾರು ವಾಹನ ನಿಯಮಾವಳಿ 1994ಕ್ಕೆ ಅಲ್ಲಿನ ಸರ್ಕಾರ ತಿದ್ದಪಡಿ ಮಾಡಿದ್ದು ಅಲ್ಲಿಯಂತೆಯೇ ಇಲ್ಲಿಯೂ ನಿಯಮಗಳು ರೂಪುಗೊಳ್ಳುವವರೆಗೆ ಸಂವಿಧಾನದ 226 ನೇ ವಿಧಿಯ ಅಡಿಯಲ್ಲಿ ಮಾರ್ಗಸೂಚಿ ನೀಡುತ್ತಿರುವುದಾಗಿ ಪೀಠ ತಿಳಿಸಿತು.