ತಮಿಳುನಾಡು ಸರ್ಕಾರದ ವಿರೋಧದ ನಡುವೆಯೂ ಸ್ಟ್ಯಾನ್ ಸ್ವಾಮಿ ಪ್ರತಿಮೆ ಸ್ಥಾಪನೆಗೆ ಮದ್ರಾಸ್ ಹೈಕೋರ್ಟ್ ಅನುಮತಿ

ರಾಜ್ಯ ಸರ್ಕಾರ ಮತ್ತು ಧರ್ಮಪುರಿ ಜಿಲ್ಲಾಧಿಕಾರಿಗಳು ಅರ್ಜಿಗೆ ವಿರೋಧ ವ್ಯಕ್ತಪಡಿಸುತ್ತಾ, ನಕ್ಸಲರು ಮತ್ತು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯ ಕೆಲಸ ಸ್ಮರಿಸಲೆಂದು ಈ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.
Stan Swamy
Stan Swamy
Published on

ಒಬ್ಬ ವ್ಯಕ್ತಿ ತನ್ನ ಖಾಸಗಿ ಭೂಮಿಯಲ್ಲಿ ಸ್ಮಾರಕ ಅಥವಾ ಪ್ರತಿಮೆ ಸ್ಥಾಪಿಸುವುದನ್ನು ತಡೆಯಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಈಚೆಗೆ ತಿಳಿಸಿರುವ ಮದ್ರಾಸ್‌ ಹೈಕೋರ್ಟ್‌, ಸೇಲಂ ಮೂಲದ ಕಾರ್ಯಕರ್ತರೊಬ್ಬರು ಪಾದ್ರಿ ಮತ್ತು ಬುಡಕಟ್ಟು ಹಕ್ಕುಗಳ ಹೋರಾಟಗಾರ ದಿವಂಗತ ಸ್ಟ್ಯಾನ್‌ ಸ್ವಾಮಿ ಅವರ ಗೌರವಾರ್ಥ ಸ್ಮಾರಕ ನಿರ್ಮಿಸಲು ಅನುಮತಿ ನೀಡಿತು.

ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ತಮ್ಮ ಖಾಸಗಿ ಜಾಗದಲ್ಲಿ ಸ್ವಾಮಿಯ ಚಿತ್ರವಿರುವ ಕಲ್ಲಿನ ಕಂಬದ ಸ್ಮಾರಕವನ್ನು ನಿರ್ಮಿಸಲು ಪಿಯೂಷ್ ಸೇಥಿಯಾ ಅವರಿಗೆ ನ್ಯಾಯಮೂರ್ತಿ ಎಂ.ದಂಡಪಾಣಿ ಅನುಮತಿ ನೀಡಿದರು.

Also Read
ಸ್ಟ್ಯಾನ್‌ ಸ್ವಾಮಿ ಅವರ ಸಮಾಜ ಸೇವೆಯ ಬಗ್ಗೆ ಅಪಾರ ಗೌರವವಿದೆ, ಅವರ ಸಾವು ನಿರೀಕ್ಷಿಸಿರಲಿಲ್ಲ: ಬಾಂಬೆ ಹೈಕೋರ್ಟ್‌

ಸ್ಮಾರಕ ನಿರ್ಮಿಸದಂತೆ ಸೇಥಿಯಾ ಅವರಿಗೆ ನಿರ್ಬಂಧ ವಿಧಿಸಿ  ಸ್ಥಳೀಯ ತಹಶೀಲ್ದಾರ್ ಅವರು 16 ಜುಲೈ 2021ರಲ್ಲಿ ನೀಡಿದ್ದ ಆದೇಶವನ್ನು ನ್ಯಾಯಾಲಯ ರದ್ದುಗೊಳಿಸಿತು.

“ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಫಾದರ್‌ ಸ್ಟ್ಯಾನ್‌ ಸ್ವಾಮಿ ಅವರು ಆದಿವಾಸಿಗಳ ಕಲ್ಯಾಣಕ್ಕಾಗಿ ಅವಿರತ ಶ್ರಮಿಸಿದ್ದು ಅರ್ಜಿದಾರರ ಖಾಸಗಿ ಭೂಮಿಯಲ್ಲಿ ಪ್ರತಿಮೆ ಇಲ್ಲವೇ ಕಲ್ಲಿನ ಕಂಬ ಸ್ಥಾಪಿಸುವ ಸಂಬಂಧ ವಿವಾದವೆದ್ದಿದೆ. ಸಾಮಾನ್ಯ ತತ್ವದ ಅನ್ವಯ ತಮ್ಮ ಖಾಸಗಿ ಜಮೀನಿನಲ್ಲಿ ಪ್ರತಿಮೆ ಸ್ಥಾಪಿಸುವ ಹಕ್ಕು ನಾಗರಿಕರಿಗೆ ಇದೆ. ಪ್ರತಿಮೆಯ ಸ್ಥಾಪನೆಯಿಂದ ಯಾವುದೇ ಎರಡು ಸಮುದಾಯಗಳ ನಡುವೆ ಸಂಘರ್ಷ ಉಂಟಾಗಬಾರದು ಅಥವಾ ನಿರ್ದಿಷ್ಟ ಸಮಾಜದ ಭಾವನೆಗಳಿಗೆ ಧಕ್ಕೆ ತರಬಾರದು ಎಂಬುದು ಒಂದೇ ನಿರ್ಬಂಧ. ಖಾಸಗಿ ಪಟ್ಟಾ ಭೂಮಿಯಲ್ಲಿ ಪ್ರತಿಮೆ ಸ್ಥಾಪನೆಗೆ ಅನುಮತಿ ನೀಡಿದರೆ ಯಾವುದೇ ಕಾನೂನು ಅಡ್ಡಿ ಇರದು” ಎಂದು ಅದು ಹೇಳಿದೆ.  ಸೇಥಿಯಾ ಅವರೇ ಎಲ್ಲಾ ವೆಚ್ಚ ಭರಿಸಿ ಸ್ಮಾರಕ ನಿರ್ಮಿಸುತ್ತಿದ್ದಾರೆ ಎಂಬ ವಿಚಾರವನ್ನೂ ನ್ಯಾಯಾಲಯ ಗಮನಿಸಿತು.

Also Read
ನಾವು ಮನುಷ್ಯತ್ವದ ಎಲ್ಲಾ ಸ್ಪರ್ಶ ಕಳೆದುಕೊಂಡಿದ್ದೇವೆಯೇ? ಸ್ಟ್ಯಾನ್ ಸ್ವಾಮಿ ಸಾವು ಕುರಿತಂತೆ ನ್ಯಾ. ದೀಪಕ್ ಗುಪ್ತಾ

ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಬರೆದ ಪತ್ರ ತಿರಸ್ಕೃತವಾಗಿದ್ದ ಹಿನ್ನೆಲೆಯಲ್ಲಿ ಸೇಥಿಯಾ ಅವರು ವಕೀಲ ವಿ ಸುರೇಶ್ ಅವರ ಮೂಲಕ ಅರ್ಜಿ ಸಲ್ಲಿಸಿದ್ದರು.

ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದಂತೆ ಸ್ಟ್ಯಾನ್‌ ಸ್ವಾಮಿ ಅವರ ಕಾರ್ಯದಿಂದ ತಾನು ಸ್ಫೂರ್ತಿ ಪಡೆದಿದ್ದೇನೆ. ದಿವಂಗತ ಹೋರಾಟಗಾರ ನನ್ನ ಆರಾಧ್ಯ ದೈವ ಮತ್ತು ಮಾರ್ಗದರ್ಶಕರಾಗಿದ್ದಾರೆ. ಆದ್ದರಿಂದ ಸ್ವಂತ ಖಾಸಗಿ ಜಮೀನಿನಲ್ಲಿ ಸ್ಮಾರಕ ನಿರ್ಮಿಸುವ ಮೂಲಕ ಸ್ವಾಮಿ ಅವರ ಪರಂಪರೆ ಮುಂದುವರೆಸಲು ಬಯಸುತ್ತೇನೆ ಎಂದು ಸೇಥಿಯಾ ಮನವಿ ಮಾಡಿದ್ದರು.

Also Read
ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಫಾದರ್ ಸ್ಟ್ಯಾನ್ ಸ್ವಾಮಿ ನಿಧನ

ಆದರೆ ರಾಜ್ಯ ಸರ್ಕಾರ ಮತ್ತು ಧರ್ಮಪುರಿ ಜಿಲ್ಲಾಧಿಕಾರಿಗಳು, ಅರ್ಜಿಗೆ ವಿರೋಧ ವ್ಯಕ್ತಪಡಿಸುತ್ತಾ, ನಕ್ಸಲರು ಮತ್ತು ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದ ವ್ಯಕ್ತಿಯ ಕೆಲಸ ಸ್ಮರಿಸಲೆಂದು ಈ ಸ್ಮಾರಕ ನಿರ್ಮಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಸ್ಮಾರಕ ನಿರ್ಮಾಣದಿಂದ ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗುತ್ತದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿತು. 

ವಾದ ಆಲಿಸಿದ ನ್ಯಾಯಾಲಯವು ಸ್ಮಾರಕ ನಿರ್ಮಿಸುವಾಗ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂದು ಸೂಚಿಸಿ ಪ್ರತಿಮೆ ನಿರ್ಮಿಸಲು ಅವಕಾಶ ನೀಡಿತು.

Also Read
ಜೈಲಿನಲ್ಲೇ ಸಾಯುವೆ, ಆಸ್ಪತ್ರೆಗೆ ದಾಖಲಾಗುವುದಿಲ್ಲ: ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್‌ಗೆ ಸ್ಟ್ಯಾನ್‌ ಸ್ವಾಮಿ ಹೇಳಿಕೆ

ಎಲ್ಗಾರ್‌ ಪರಿಷದ್‌ ಭೀಮಾ ಕೋರೆಗಾಂವ್‌ ಪ್ರಕರಣದಲ್ಲಿ ವಿಚಾರಣಾಧೀನ ಆರೋಪಿಯಾಗಿದ್ದ ಸ್ಟ್ಯಾನ್‌ ಸ್ವಾಮಿ ಅವರು ವೈದ್ಯಕೀಯ ಜಾಮೀನಿನ ನಿರೀಕ್ಷೆಯಲ್ಲೇ  ಜುಲೈ 5, 2021 ರಂದು ನಿಧನರಾಗಿದ್ದರು.

Kannada Bar & Bench
kannada.barandbench.com