ಪೊತ್ತೂರ್‌ನಲ್ಲಿ ತಮಿಳುನಾಡು ಬಿಎಸ್‌ಪಿ ಅಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಅಂತ್ಯಕ್ರಿಯೆ: ಮದ್ರಾಸ್ ಹೈಕೋರ್ಟ್ ಅನುಮತಿ

ಆರ್ಮ್‌ಸ್ಟ್ರಾಂಗ್‌ ಅವರ ಪತ್ನಿ ಎ ಪೊರ್ಕೋಡಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ವಕೀಲರ ಗುಂಪೊಂದು ಶನಿವಾರ ಸಂಜೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
Madras High Court
Madras High Court

ತಮಿಳುನಾಡು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥ ಕೆ ಆರ್ಮ್‌ಸ್ಟ್ರಾಂಗ್ ಅವರ ಅಂತ್ಯಕ್ರಿಯೆಯನ್ನು ಪೊತ್ತೂರ್‌ ಗ್ರಾಮದ ಖಾಸಗಿ  ಜಾಗದಲ್ಲಿ ನಡೆಸಲು ಮದ್ರಾಸ್ ಹೈಕೋರ್ಟ್ ಭಾನುವಾರ ಅನುಮತಿ ನೀಡಿದೆ [ಪೊರ್ಕೋಡಿ ಮತ್ತು ತಮಿಳುನಾಡು ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಭಾನುವಾರ ಅರ್ಜಿ ಆಲಿಸಿದ ನ್ಯಾಯಮೂರ್ತಿ ವಿ ಭವಾನಿ ಸುಬ್ಬರಾಯನ್ ಅವರು ತಿರುವಳ್ಳೂರು ಜಿಲ್ಲೆಯ ಗ್ರಾಮ ಪಂಚಾಯತ್‌ ನೀಡಿದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲು ರಾಜ್ಯ ಸರ್ಕಾರ  ಇಚ್ಛೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಿದರು.

ತಮ್ಮ ಪತಿಯ ಪಾರ್ಥಿವ ಶರೀರವನ್ನು ಚೆನ್ನೈನ ಪೆರಂಬೂರ್ ಪ್ರದೇಶದಲ್ಲಿರುವ ಪಕ್ಷದ ಕಚೇರಿ ಆವರಣದಲ್ಲೇ ಅಂತ್ಯ ಸಂಸ್ಕಾರ ನಡೆಸಬೇಕೆಂದು  ಆರ್ಮ್‌ಸ್ಟ್ರಾಂಗ್‌ ಅವರ ಪತ್ನಿ ಕೋರಿದ್ದರು.

Also Read
ನಗದು ಪತ್ತೆ: ಬಿಎಸ್‌ಪಿ ನಾಯಕಿ ಮಾಯಾವತಿ, ಸತೀಶ್‌ ಮಿಶ್ರಾ ವಿರುದ್ಧದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿದ ಹೈಕೋರ್ಟ್‌

ಆದರೆ ಆರ್ಮ್‌ಸ್ಟ್ರಾಂಗ್‌ ಸಾವಿಗೆ ಸಂತಾಪ ವ್ಯಕ್ತಪಡಿಸಿದ ತಮಿಳುನಾಡು ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಜೆ ರವೀಂದ್ರನ್ ಬಿಎಸ್‌ಪಿ ಕಚೇರಿ ಇರುವ ಪ್ರದೇಶ ವಸತಿ ಪ್ರದೇಶ ಎಂಬ ಕಾರಣಕ್ಕಾಗಿ ಆರ್ಮ್‌ಸ್ಟ್ರಾಂಗ್‌ ಅವರ ಪತ್ನಿಯ ಮನವಿಯನ್ನು ವಿರೋಧಿಸುತ್ತಿರುವುದಾಗಿ ತಿಳಿಸಿದರು.

ಪ್ರಸ್ತಾವಿತ ಪ್ರದೇಶ ಜನನಿಬಿಡ ಸ್ಥಳವಾಗಿದ್ದು, ಮಾರ್ಗಗಳು ಸರಿ ಇಲ್ಲ ಅಲ್ಲದೆ ಕಟ್ಟಡಕ್ಕೆ ಅಗತ್ಯವಾದ ಅನುಮತಿಯ ಕೊರತೆಯಿದೆ ಎಂದರು.

ಇದಲ್ಲದೆ,  ಸಮಾಧಿ ಅಥವಾ ಸ್ಮಾರಕಕ್ಕಾಗಿ ಬಳಸಲು ಅನುವಾಗುವಂತೆ ಪ್ರತಿಯೊಂದು ಕಡೆಯೂ 2000 ಚದರ ಅಡಿ ವಿಸ್ತೀರ್ಣ ಇರುವ ಮೂರು ಸ್ಥಳಗಳನ್ನು ಸರ್ಕಾರ ಗುರುತಿಸಿದೆ ಎಂದು ವಿವರಿಸಿದರು.

ಬಿಎಸ್‌ಪಿ ಕಚೇರಿ ಇರುವ ಸ್ಥಳದ ಫೋಟೊಗಳನ್ನು ಪರಿಶೀಲಿಸಿದ ನ್ಯಾಯಾಲಯ ಅರ್ಜಿದಾರರ ಭಾವನೆಗಳಿಗೆ ತಾನು ಸ್ಪಂದಿಸುವೆನಾದರೂ ಬಿಎಸ್‌ಪಿ ಕಚೇರಿ ಇರುವ ಜಾಗ ಇಕ್ಕಟ್ಟಾಗಿದ್ದು ವಸತಿ ಪ್ರದೇಶದಲ್ಲಿ ಅಂತ್ಯ ಸಂಸ್ಕಾರ ನಡೆಸುವುದು ತೊಂದರೆ ದಾಯಕ ಎಂದು ತಿಳಿಸಿತು. ಇತ್ತೀಚೆಗೆ ಉತ್ತರಪ್ರದೇಶದ ಹಾಥ್‌ರಸ್‌ನಲ್ಲಿ ನಡೆದ ಕಾಲ್ತುಳಿತ ದುರಂತವನ್ನು ಅದು ಪ್ರಸ್ತಾಪಿಸಿತು.

Also Read
ಮಣಿಪುರ ಹಿಂಸಾಚಾರ: ಅನಾಥ ಶವಗಳ ಗೌರವಯುತ ಅಂತ್ಯ ಸಂಸ್ಕಾರ ಹಾಗೂ ಡಿಎನ್ಎ ಸಂಗ್ರಹಕ್ಕೆ ಸುಪ್ರೀಂ ಆದೇಶ

ಹೀಗಾಗಿ ಸರ್ಕಾರ ಪ್ರಸ್ತಾಪಿಸಿದ ಪರ್ಯಾಯ ಸ್ಥಳಗಳನ್ನು ಪರಿಗಣಿಸುವಂತೆ ಅರ್ಜಿದಾರರಿಗೆ ಸಲಹೆ ನೀಡಿದ ಅದು ಸೂಕ್ತ ಸ್ಥಳ ಕುರಿತು ನಿರ್ಧರಿಸಲು ಎಲ್ಲಾ ಪಕ್ಷಕಾರರಿಗೆ ಮಧ್ಯಾಹ್ನ 12 ರವರೆಗೆ ಸಮಯಾವಕಾಶ ನೀಡಿತು.

ಮಧ್ಯಾಹ್ನ 12 ಗಂಟೆಗೆ ಕಕ್ಷಿದಾರರು ಇನ್ನೂ ಒಮ್ಮತಕ್ಕೆ ಬಂದಿಲ್ಲದೇ ಇರುವುದನ್ನು ಹಾಗೂ ಆರ್ಮ್‌ಸ್ಟ್ರಾಂಗ್‌ ಅವರ ಮೃತದೇಹವನ್ನು ಸ್ಥಳೀಯ ಶಾಲಾ ಆವರಣದಲ್ಲಿ ಇರಿಸುವುದನ್ನು ಗಮನಿಸಿದ ನ್ಯಾಯಾಲಯ ಸೋಮವಾರ ಶಾಲೆ ಆರಂಭವಾಗುವುದರೊಳಗಾಗಿ ನಿರ್ಧಾರಕ್ಕೆ ಬರುವಂತೆ ಸೂಚಿಸಿತು. ಅಲ್ಲದೆ ಆರ್ಮ್‌ಸ್ಟ್ರಾಂಗ್‌ ಅವರ ಪತ್ನಿಗೆ ಮಗು ಆರೈಕೆ ಮಾಡಲಿಕ್ಕಿದೆ ಎಂಬುದನ್ನು ನೆನಪಿಸಿತು.

ಆದರೂ ಪಕ್ಷದ ಕಚೇರಿಯಲ್ಲೇ ಸಮಾಧಿ ನಡೆಸುವಂತೆ ಆರ್ಮ್‌ಸ್ಟ್ರಾಂಗ್‌ ಪತ್ನಿ ಪರ ವಕೀಲರು ಒತ್ತಾಯಿಸಿದಾಗ ನ್ಯಾಯಾಲಯ ಅದಕ್ಕೆ ಸಮ್ಮತಿಸಲಿಲ್ಲ. ಬೇಕಿದ್ದರೆ ಸರ್ಕಾರಕ್ಕೇ ಮನವಿ ಮಾಡಿ, ತಾನು ಸ್ವಲ್ಪ ಸಮಯಾವಕಾಶವನ್ನಷ್ಟೇ ನೀಡಲು ಸಾಧ್ಯ ಎಂದಿತು.

ಶ್ರೀ ಪೆರಂಬದೂರಿನ ರಾಜೀವ್ ಗಾಂಧಿ ಸ್ಮಾರಕದ ಉದಾಹರಣೆಯನ್ನೂ ನೀಡಿದ ಅದು ಅರ್ಜಿದಾರರು ಕೋರಿದ್ದನ್ನು ನೀಡುವ ಅಧಿಕಾರ ತನಗಿಲ್ಲ ಎಂದು ತಿಳಿಸಿತು. ಅರ್ಜಿದಾರರು ಕೊನೆಯ ಬಾರಿಗೆ ನಿರ್ಧಾರ ಕೈಗೊಂಡು ಮಧ್ಯಾಹ್ನ 2:15 ಕ್ಕೆ ತನ್ನೆದುರು ಹಾಜರಾಗುವಂತೆ ಸೂಚಿಸಿತು.

Also Read
ಕಿರುಕುಳ ಆರೋಪ: ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ ವಿರುದ್ಧದ ಎಫ್‌ಐಆರ್‌ ರದ್ದತಿಗೆ ಗುವಾಹಟಿ ಹೈಕೋರ್ಟ್‌ ನಕಾರ

ಮಧ್ಯಾಹ್ನ2:15 ಕ್ಕೆ ವಾದ ಮಂಡಿಸಿದ ರಾಜ್ಯ ಸರ್ಕಾರ  ತಿರುವಳ್ಳೂರು ಜಿಲ್ಲೆಯ ಪೊತ್ತೂರ್‌ ಗ್ರಾಮ ಪಂಚಾಯತ್ ನೀಡಿದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಬಯಸುವುದಾಗಿ ತಿಳಿಸಿತು.  ಅದರಂತೆ, ಸೂಚಿತ ಸ್ಥಳದಲ್ಲಿ  ಶಾಂತಿಯುತವಾಗಿ ಅಂತ್ಯಕ್ರಿಯೆ ನಡೆಸುವಂತೆ ನ್ಯಾಯಾಲಯ ಅರ್ಜಿದಾರರಿಗೆ ಸೂಚಿಸಿತು.

"ನಿಮಗೆ ಆಗಿರುವುದು ತುಂಬಲಾರದ ನಷ್ಟ ಎಂದು ನಮಗೆ ತಿಳಿದಿದೆ. ಆದರೆ ಸರ್ಕಾರ ನಿಮಗೆ ಸಹಾಯ ಮಾಡಿದೆ ಎಂದು ತಿಳಿಯಿರಿ. ಒಂದು ಗಂಟೆಯೊಳಗೆ ಸರ್ಕಾರ ನಿಮ್ಮ ವಿನಂತಿಯನ್ನು ಸ್ವೀಕರಿಸಿ ಅನುಮೋದಿಸಿದೆ" ಎಂದು ಅದು ನುಡಿಯಿತು.

ಅರ್ಜಿದಾರರು ಆರ್ಮ್‌ಸ್ಟ್ರಾಂಗ್ ಅವರ ಸ್ಮಾರಕದಲ್ಲಿ ಆಸ್ಪತ್ರೆ ಅಥವಾ ಇನ್ನೇನಾದರೂ ನಿರ್ಮಿಸಲು ಬಯಸಿದರೆ, ಕಾನೂನಿನ ಪ್ರಕಾರ ಅನುಮತಿ ಪಡೆಯಲು ಅವರು ರಾಜ್ಯ ಸರ್ಕಾರವನ್ನು ಸಂಪರ್ಕಿಸಬಹುದು ಎಂದು ಅದು ಇದೇ ವೇಳೆ ನುಡಿಯಿತು.

ಜುಲೈ 5ರಂದು ಶುಕ್ರವಾರ,  ಸುಮಾರು ಆರು ಜನರಿದ್ದ ಗುಂಪು ಆರ್ಮ್‌ಸ್ಟ್ರಾಂಗ್ ಅವರನ್ನು ಕೊಂದಿತ್ತು. ಘಟನೆ ದೇಶದ ಗಮನ ಸೆಳೆದಿತ್ತು. ವಿವಿಧ ರಾಜಕೀಯ ಪಕ್ಷಗಳು ಆರ್ಮ್‌ಸ್ಟ್ರಾಂಗ್‌ ಅವರ ಸಾವಿಗೆ ಸಂತಾಪ ಸೂಚಿಸಿದ್ದವು. ತನಿಖೆಗೆ ಒತ್ತಾಯಿಸಿದ್ದವು.  ಹತ್ಯೆ ನಡೆಸಿದ್ದಾರೆನ್ನಲಾದ ಎಂಟು ಜನರನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. 

Kannada Bar & Bench
kannada.barandbench.com