[ಚುನಾವಣಾ ಅಕ್ರಮ ಪ್ರಕರಣ] ಮುನಿರತ್ನರಿಂದ ಸೀರೆ ಹಂಚಿ, ಮತದಾರರ ಚೀಟಿ ಸಂಗ್ರಹ: ಮುನಿರಾಜು ಗೌಡ ಸಾಕ್ಷ್ಯ ದಾಖಲು

ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿರುವ ಕಾರಣ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯಿದೆ–1951ರ ಕಲಂ 123ರ ಅನುಸಾರ ಅನೂರ್ಜಿತಗೊಳಿಸಬೇಕು ಎಂದು ಎಂಎಲ್‌ಸಿ ಮುನಿರಾಜು ಗೌಡ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.
Minister Muniratna
Minister MuniratnaFacebook

ತೋಟಗಾರಿಕಾ ಸಚಿವ ಮುನಿರತ್ನ ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆಗಳನ್ನು ಹಂಚಿ ಅವರ ಅಸಲಿ ಮತದಾರ ಚೀಟಿಗಳನ್ನು ಸಂಗ್ರಹಿಸಿ ಇಟ್ಟುಕೊಂಡ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ನನಗೆ ತಿಳಿಸಿದ್ದಾರೆ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ ಎಂ ಮುನಿರಾಜು ಗೌಡ ಅವರು ಕರ್ನಾಟಕ ಹೈಕೋರ್ಟ್‌ ಮುಂದೆ ಮಂಗಳವಾರ ಸಾಕ್ಷ್ಯ ನುಡಿದರು.

ಮುನಿರತ್ನ 15ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸುವಲ್ಲಿ ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿರುವ ಕಾರಣ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯಿದೆ–1951ರ ಕಲಂ 123ರ ಅನುಸಾರ ಅನೂರ್ಜಿತಗೊಳಿಸಬೇಕು ಎಂದು ಕೋರಿ ಹಾಲಿ ವಿಧಾನ ಪರಿಷತ್‌ ಸದಸ್ಯ ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಎರಡನೇ ದಿನದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಮುಂದುವರೆಸಿತು.

ಮುಖ್ಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ ಶಿವಪ್ರಕಾಶ್‌ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಮುನಿರಾಜು ಗೌಡ ಅವರು ಮುನಿರತ್ನ ಸೀರೆ ಹಂಚುತ್ತಿರುವ ಭಾವಚಿತ್ರಗಳನ್ನು ಅವರದೇ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿರುವುದನ್ನು ನಾನಿಲ್ಲಿ ಹಾಜರುಪಡಿಸುತ್ತಿದ್ದೇನೆ ಎಂದು ದೃಢೀಕೃತ ದಾಖಲೆಗಳನ್ನು ಸಲ್ಲಿಸಿದರು.

ಶಿವರಾತ್ರಿ ಸಂದರ್ಭದಲ್ಲಿ ಮುನಿರತ್ನ ಅವರು ಸೀರೆಯನ್ನು ಹಂಚಿರುವ ಘಟನೆಗೆ ಸಾಕ್ಷಿಯಾಗಿ ಪಿ.ಪುರುಷೋತ್ತಮ್‌, ಆನಂದಕುಮಾರ್, ಜಿ ಸಂತೋಷ್‌ಕುಮಾರ್ ಮತ್ತು ಮಂಜುನಾಥ್‌ ಪ್ರತ್ಯಕ್ಷವಾಗಿ ಕಂಡಿರುತ್ತಾರೆ ಹಾಗೂ ಈ ಸಂಗತಿಯನ್ನು ಅವರು ನನಗೆ ತಿಳಿಸಿರುತ್ತಾರೆ ಎಂದು ಮುನಿರಾಜುಗೌಡ ತಿಳಿಸಿದರು.

Also Read
ಅಧಿಕಾರಿಯಿಂದ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ವಿರುದ್ದ ಪ್ರತಿಬಂಧಕಾದೇಶ ಪಡೆದಿರುವ ಸಚಿವ ಮುನಿರತ್ನ

ಮುನಿರತ್ನ ಅವರು ಜೆ ಪಿ ಪಾರ್ಕ್‌ ಗ್ರೌಂಡ್‌, ಕೊಟ್ಟಿಗೆಪಾಳ್ಯ ದೇವಸ್ಥಾನ, ಜಾಲಹಳ್ಳಿ ಸರ್ಕಾರಿ ಶಾಲೆ ಮೈದಾನ, ಲಗ್ಗೆರೆ ಸ್ಕೂಲ್‌ ಗ್ರೌಂಡ್‌ ಮತ್ತು ಮಂಜುಶ್ರೀ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತದಾರರಿಗೆ ಸೀರೆಗಳನ್ನು ಹಂಚಿದರು. ಸೀರೆಗಳನ್ನು ಹಂಚುವಾಗ ಮುನಿರತ್ನ ಮತ್ತು ಅವರ ಸಹಚರರು ಮತದಾರರಿಂದ ಅಸಲಿ ಮತದಾರರ ಚೀಟಿಗಳನ್ನು ಪಡೆದುಕೊಂಡರು. ಇದನ್ನು ಪಡೆದುಕೊಳ್ಳುವಾಗ ಆದಷ್ಟು ಬೇಗ ವಾಟರ್‌ ಕ್ಯಾನ್‌, ಕುಕ್ಕರ್‌ ಮತ್ತು ಕಿಚನ್‌ ತವಾಗಳನ್ನು ನೀಡುವುದಾಗಿ ಭರವಸೆ ನೀಡಿದರು. ಈ ಕಾರಣಕ್ಕಾಗಿ ಮತದಾರರ ಚೀಟಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವುದಾಗಿಯೂ ಮಹಿಳಾ ಮತದಾರರಿಗೆ ತಿಳಿಸಿದರು ಎಂದು ಮುನಿರಾಜು ಗೌಡ ಸಾಕ್ಷ್ಯ ನುಡಿದರು.

ವಿಚಾರಣೆಯನ್ನು ಏಪ್ರಿಲ್‌ 11ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com